
ದಿನಾಂಕ 31.1.2018 ನೇ ಬುಧವಾರ ಸಂಜೆ 5:17 ಕ್ಕೆ ಚಂದ್ರನಿಗೆ ರಾಹುಗ್ರಹಣ ಆರಂಭ. 4:20 ಕ್ಕೆ ಆರಂಭವಾಗಿ 6:21 ಕ್ಕೆ ಸಮ್ಮೀಲನವಾಗಲಿದೆ. 6:27 ಕ್ಕೆ ಚಂದ್ರೋದಯ ಕಾಲದಲ್ಲಿ ಗ್ರಹಣ ಕಾಣಲಿದೆ 7:00 ಗಂಟೆ ಗ್ರಹಣ ಮಧ್ಯ 8:43 ಕ್ಕೆ ಗ್ರಹಣ ಮೋಕ್ಷ. ಗ್ರಹಣ ಮೋಕ್ಷವು ಭಾರತದಲ್ಲಿ ಕಾಣುತ್ತಿದ್ದು ಕರ್ಕರಾಶಿಯವರಿಗೆ, ಪುಷ್ಯಾ ಆಶ್ಲೇಷಾ ನಕ್ಷತ್ರದವರಿಗಲ್ಲದೆ 2 ನೇ ರಾಶಿ ಸಿಂಹ 6 ನೇ ರಾಶಿ ಧನು, 8 ನೇ ರಾಶಿ ಕುಂಭಕ್ಕೆ ಅರಿಷ್ಠ ಪ್ರದವಾಗಲಿದೆ. ಈ ರಾಶಿ ಮತ್ತು ನಕ್ಷತ್ರದವರು ಹೆಚ್ಚಾಗಿ ಆಚರಿಸಬೇಕು. ಬೆಳಗ್ಗೆ 8:19 ರಿಂದ ಭೋಜನ ನಿಷಿದ್ಧ ನಂತರ ರಾತ್ರಿ 9 ರ ನಂತರ ಅಡುಗೆ ಮಾಡಿ ಊಟ ಮಾಡಬಹುದು. ಗರ್ಭಿಣಿಯರು ಬಾಲ ವೃದ್ಧ ರೋಗಿಗಳು ಮಧ್ಯಾಹ್ನ 2 ಗಂಟೆ 19 ನಿಮಿಷದವರೆಗೆ ಊಟ ಮಾಡಬಹುದು.
ಗ್ರಹಣದಿಂದಾಗುವ ಪರಿಣಾಮ 

ಉತ್ತರ ಪೂರ್ವ ದೇಶಗಳಿಗೆ ಗಂಡಾಂತರ. ಅಮೇರಿಕಾ ಉತ್ತರ ಕೊರಿಯ ದೇಶದಲ್ಲಿ ಯುದ್ಧದಸ್ಥಿತಿ, ಶುಕ್ರ ಮೌಡ್ಯನಾಗಿದ್ದು ರವಿಯೊಡನೆ ಗ್ರಹಣ ವೀಕ್ಷಣೆ ಮಾಡುತ್ತಿರುವುದರಿಂದ ಸ್ತ್ರೀ ಯರಿಗೆ ತೊಂದರೆ ಇದೆ. ಗುರು ವೈರಿರಾಶಿಯಲ್ಲಿ ಇರುವುದರಿಂದ ಉಚ್ಛ ವರ್ಗಕ್ಕೆ ತೊಂದರೆ ಇದೆ. ರಾಜಕೀಯ ಸ್ಥಿತ್ಯಾಂತ್ರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಪೂರ್ಣ ಮತಗಳು ಬರುವ ಸಾಧ್ಯತೆ ಇಲ್ಲ. ಅವರು ಬೇರೊಂದು ಪಕ್ಷದ ಸಹಕಾರ ಪಡೆಯಬೇಕು. ಬಿಜೆಪಿಯವರು ಕೂಡಾ ನಿಚ್ಚಳ ಬಹುಮತ ಪಡೆಯುವುದಿಲ್ಲ ಇವರಿಗೆ ಅನ್ಯರ ಸಹಕಾರ ಬೇಕು ಅತಂತ್ರ ವಿಧಾನ ಸಭೆಯಾಗಿ ಇರುವ ಸ್ಥಿತಿ ಕರ್ನಾಟಕದ ವಿಧಾನಸಭೆಯಲ್ಲಿ ಬರಲಿದೆ. ಚುನಾವಣಾ ಸಮಯದಲ್ಲಿ ಕೆಲವು ಕಡೆ ಕಲಹ ಹೆಚ್ಚಾಗಿ ರಕ್ತ ಪಾತವಾಗುತ್ತದೆ. ಗ್ರಹಣದ ಗ್ರಹಸ್ಥಿತಿಯಿಂದ ಈ ಎಲ್ಲಾ ಸೂಚನೆ ಇದೆ.
ಈ ಗ್ರಹಣದಿಂದ ಕೇಂದ್ರದಲ್ಲಿ ಪ್ರಧಾನಿಗೆ ತೊಂದರೆಗಳು ಬರುತ್ತದೆ. ಮತೀಯ ಗಲಭೆಗಳು ಜಾಸ್ತಿ ಒದಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಮುಖಂಡನಿಗೆ ತೊಂದರೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಉಗ್ರ ಸಂಘಟನೆಗಳಿಂದ ತೊಂದರೆ ಇದೆ. ಉಸ್ತುವಾರಿ ಸಚಿವರಿಗೆ ಸೋಲಾಗುವ ಭೀತಿ ಇದೆ. ಕರಾವಳಿಯಲ್ಲಿ ಹೆಚ್ಚಿನ ಸ್ಥಾನಗಳು ಬಿಜೆಪಿಗೆ ದೊರಕಿ ಕಾಂಗ್ರೆಸ್ಸಿಗೆ ಮುಖಭಂಗವಾಗಲಿದೆ. ಜೆಡಿಎಸ್ ಕರ್ನಾಟಕದಲ್ಲಿ ಮೆರೆಯಲಿದೆ. ರೋಗ ರುಜಿನ ಅಧಿಕವಾಗುವ ಸನ್ನಿವೇಶವಿದೆ. ಈ ಗ್ರಹಣ ನಂತರ 6 ತಿಂಗಳು ಅಶುಭ.
✍🏻: ಕೆ. ಅನಂತರಾಮ ಬಂಗಾಡಿ
ಜ್ಯೋತಿಷ್ಯರು ಮತ್ತು ಸಾಹಿತಿ