September 20, 2024

ಪುರಾತನ ನಾಣ್ಯ, ನೋಟು ಮತ್ತು ಅಂಚೆ ಚೀಟಿಗಳ ಸಂಗ್ರಾಹಕ ಸೊರಬದ ಬಾಬು ಭಂಡಾರಿ.

           ಜೀವನ ನಿರ್ವಹಣೆಗಾಗಿ ನಾವು ಕೆಲವೊಮ್ಮೆ ಯಾಂತ್ರಿಕವಾಗಿ ಕೆಲವು ಉದ್ಯೋಗಗಳನ್ನು ಮಾಡುತ್ತಿರುತ್ತೇವೆ. ಬಹಳಷ್ಟು ಜನರಿಗೆ ತಾವು ಮಾಡುವ ಉದ್ಯೋಗ ಆತ್ಮತೃಪ್ತಿಯನ್ನು ನೀಡುವುದಿಲ್ಲ. ಹೀಗೆ ಕೆಲವು ಕಟ್ಟುಪಾಡುಗಳಿಗೆ ಒಳಗಾಗಿ ನಾವು ಮಾಡುವ ಉದ್ಯೋಗಗಳು ಕೆಲವೊಮ್ಮೆ ನಮ್ಮನ್ನು ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ನೂಕುತ್ತವೆ. ಇಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವುದು ನಮ್ಮ ಕೆಲವು ಉತ್ತಮ ಹವ್ಯಾಸಗಳು. ನಮ್ಮ ಮನಸ್ಸಿಗೆ ಸಂತೋಷ ನೀಡಿ ನಮ್ಮಲ್ಲಿ ನವಚೈತನ್ಯ ತುಂಬುವ ಉತ್ತಮ ಹವ್ಯಾಸಗಳು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತವೆ. ಉತ್ತಮ ಹವ್ಯಾಸಗಳು ನಮ್ಮ ಕೆಲಸದ ಒತ್ತಡವನ್ನು ದೂರ ಮಾಡಿ ಮನಸ್ಸಿಗೆ ಮತ್ತು ದೇಹಕ್ಕೆ ಹಿತ ನೀಡುತ್ತವೆ. ಮನೋಚೈತನ್ಯ ಮತ್ತು ಮನೋವಿಕಾಸಕ್ಕೆ ದಾರಿ ಮಾಡಿಕೊಡುವ ಉತ್ತಮ ಹವ್ಯಾಸಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ನಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗಿರುತ್ತವೆ. ಸಂಗೀತ ಕಲಿಯುವುದು, ಹಾಡುವುದು, ಸಂಗೀತ ವಾದ್ಯಗಳನ್ನು ನುಡಿಸುವುದು, ಗಿಡ ಬೆಳೆಸುವುದು, ಫೋಟೊ ತೆಗೆಯುವುದು, ಚಿತ್ರ ಬಿಡಿಸುವುದು, ಹೊಲಿಗೆ, ಎಂಬ್ರಾಯಡರಿ, ವಸ್ತ್ರ ವಿನ್ಯಾಸ, ಈಜುವುದು, ಪಕ್ಷಿ ವೀಕ್ಷಣೆ, ಚಾರಣ, ಪ್ರವಾಸ ಇವೇ ಮೊದಲಾದವು ಹೆಚ್ಚಿನವರು ರೂಡಿಸಿಕೊಂಡಿರುವ ಕೆಲವು ಉತ್ತಮ ಹವ್ಯಾಸಗಳು.

                ಹಾಗೆ ನೋಡಿದರೆ ನಮ್ಮ ಸಮಾಜ ಬಾಂಧವರು ಮಾಡುವ ಕ್ಷೌರಿಕ ವೃತ್ತಿ ತುಂಬಾ ಸಂಯಮವನ್ನು ಬೇಡುವ ಮತ್ತು ನಮ್ಮನ್ನು ಒತ್ತಡಕ್ಕೆ ಒಳಗಾಗಿಸುವ ವೃತ್ತಿಯೇ ಸರಿ. ಇಂತಹ ಒತ್ತಡದ ಉದ್ಯೋಗದ ಮಧ್ಯೆ ಮತ್ತು ಜೀವನದ ಜಂಜಾಟಗಳ ನಡುವೆಯೂ ಒಂದು ಉತ್ತಮ ಹವ್ಯಾಸವನ್ನು ರೂಢಿಸಿಕೊಂಡ ನಮ್ಮ ಸಮಾಜದ ಬಂಧುವೊಬ್ಬರು ಈಗ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಬೇರಾರು ಅಲ್ಲ ನಮ್ಮ ಶಿವಮೊಗ್ಗ ಜಿಲ್ಲೆಯ ಸೊರಬದ ಶ್ರೀಯುತ ಬಾಬು ಭಂಡಾರಿಯವರು. ಇವರು ಹಳೆಯ, ಪುರಾತನ ಮತ್ತು ಪ್ರಸ್ತುತ ಬಳಕೆಯಲ್ಲಿರುವ ಸಾವಿರಾರು ನಾಣ್ಯಗಳನ್ನು, ನೋಟುಗಳನ್ನು ಮತ್ತು ಅಂಚೆ ಚೀಟಿಗಳನ್ನು ಸಂಗ್ರಹಿಸಿ ಹಲವಾರು ವೃತ್ತಿನಿರತ ಸಂಗ್ರಾಹಕರ ನೋಟವನ್ನು ತಮ್ಮೆಡೆಗೆ ಸೆಳೆದು, ಇವರ ಸಂಗ್ರಹದ ಅಗಾಧತೆಗೆ ಬೆರಗಾಗಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಅವರು ನಮ್ಮ ಭಂಡಾರಿವಾರ್ತೆಯ ಈ ಸಂಚಿಕೆಯ “ಚಿಪ್ಪಿನೊಳಗಿನ ಭಂಡಾರಿ ಮುತ್ತು” ಅಂಕಣದ ಅತಿಥಿಯಾಗಿ ಬಂದಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡುತ್ತಾ ಅವರ ಹವ್ಯಾಸದ ಬಗ್ಗೆ ತಿಳಿದುಕೊಳ್ಳೋಣ…

ಭಂ : ನಮಸ್ಕಾರ ಬಾಬು ಭಂಡಾರಿಯವರಿಗೆ.
ಬಾ : ನಮಸ್ಕಾರ ಬನ್ನಿ ಬನ್ನಿ…

ಭಂ : ನಿಮ್ಮ ಬಾಲ್ಯ ಹೇಗಿತ್ತು?
ಬಾ : ನಮ್ಮ ತಂದೆ ದಿವಂಗತ ದುಗ್ಗ ಭಂಡಾರಿ, ತಾಯಿ ದಿವಂಗತ ಸೀತಮ್ಮ. ನಾನು ಹುಟ್ಟಿದ್ದು ಕುಂದಾಪುರ ತಾಲೂಕಿನ ಅಸೋಡು ಗ್ರಾಮದಲ್ಲಿ. ಒಟ್ಟು ಆರು ಜನ ಮಕ್ಕಳ ತುಂಬು ಕುಟುಂಬ ನಮ್ಮದು. ನಾನು ಅವರಲ್ಲಿ ಎರಡನೆಯವನು. ಶಾಲೆಗೆ ಹೋಗಿ ಕಲಿತದ್ದು ಕೇವಲ ಏಳನೇ ತರಗತಿವರೆಗೆ ಮಾತ್ರ. ಅದರ ನಂತರ ಜೀವನ ಕಲಿಸಿದ ಪಾಠ ಅಪಾರ.

ಭಂ : ನಿಮ್ಮ ಕುಟುಂಬದ ಬಗ್ಗೆ ಹೇಳಿ…
ಬಾ : ನನ್ನ ಪತ್ನಿ ಶಶಿಕಲಾ, ಕುಂದಾಪುರದ ಹಿಲಿಯಾಣದವರು. ನನ್ನ ಹಿರಿಯ ಮಗಳು ತೇಜಸ್ವಿನಿ ಬಿಎಸ್ಸಿ ಪದವಿ ಪಡೆದು ಪ್ರಸ್ತುತ ಬಿಎಡ್ ಮಾಡುತ್ತಿದ್ದಾಳೆ ಮತ್ತು ಕಿರಿಯ ಮಗಳು ಚೈತ್ರಾ. ಅವಳು ಈಗ ಬಿಕಾಂ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.

ಭಂ : ನಿಮ್ಮ ವೃತ್ತಿ, ಪ್ರವೃತ್ತಿ ಬಗ್ಗೆ ಹೇಳಿ.
ಬಾ : ನಮ್ಮ ತಂದೆ ತಾಯಿ ಜೀವನೋಪಾಯಕ್ಕಾಗಿ ಕುಂದಾಪುರದಿಂದ ಸೊರಬಕ್ಕೆ ಬಂದು ನೆಲೆಸಿದರು. ನಾನು ಇಲ್ಲಿಯೇ ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಓದಿಸಲು ನಮ್ಮ ಹೆತ್ತವರು ಅಶಕ್ತರಾಗಿದ್ದ ಕಾರಣ ಅನಿವಾರ್ಯವಾಗಿ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಕಲಿತು ಕಳೆದ ನಲವತ್ತು ವರ್ಷಗಳಿಂದ ಇಲ್ಲಿಯೇ ವೃತ್ತಿಯನ್ನು ಮಾಡಿಕೊಂಡಿದ್ದೇನೆ. ನಾಣ್ಯಗಳ ಸಂಗ್ರಹ, ನೋಟುಗಳ ಸಂಗ್ರಹ, ಅಂಚೆ ಚೀಟಿಗಳ ಸಂಗ್ರಹ ನನ್ನ ಪ್ರವೃತ್ತಿ ಅಷ್ಟೇ.

ಭಂ : ನಿಮ್ಮ ಈ ಹಳೆಯ ನಾಣ್ಯಗಳ ಸಂಗ್ರಹದ ಅಭಿರುಚಿ ಆರಂಭಗೊಂಡಿದ್ದು ಹೇಗೆ?
ಬಾ : ಮನೆಯಲ್ಲಿ ಕೆಲವು ಹಳೆಯ ನಾಣ್ಯಗಳು ಇದ್ದವು. ನಮ್ಮ ತಂದೆಯವರ ಟ್ರಂಕಿನಲ್ಲಿ ದೊರೆತ ಕೆಲವು ನಾಣ್ಯಗಳು ನನಗೆ ಸ್ಫೂರ್ತಿ ನೀಡಿದವು. ಹೀಗೆ ಚಿಗುರೊಡೆದ ಹವ್ಯಾಸ ಸ್ನೇಹಿತರ ಹಾಗೂ ಕೆಲವು ಸದಭಿರುಚಿಯ ಗ್ರಾಹಕರ ಉತ್ತೇಜನ ಮತ್ತು ಸಹಕಾರದಿಂದ ಈ ಹವ್ಯಾಸ ಹೆಮ್ಮರವಾಗಿ ಬೆಳೆಯಿತು.

ಭಂ : ನಿಮ್ಮ ಬಳಿ ಈಗ ಎಷ್ಟು ನಾಣ್ಯ,ನೋಟು ಮತ್ತು ಅಂಚೆ ಚೀಟಿಗಳ ಸಂಗ್ರಹವಿದೆ?
ಬಾ : ಸಾವಿರಾರು ಪುರಾತನ, ಹಳೆಯ ಕಾಲದ ಮತ್ತು ಬಳಕೆಯಲ್ಲಿರುವ, ಬಳಕೆಯಲ್ಲಿಲ್ಲದ ನಾಣ್ಯಗಳು, ನೂರಾರು ನೋಟುಗಳು ಮತ್ತು ಐದು ನೂರಕ್ಕೂ ಹೆಚ್ಚು ಅಂಚೆ ಚೀಟಿಗಳ ಸಂಗ್ರಹ ನನ್ನಲ್ಲಿದೆ.

ಭಂ : ನಿಮ್ಮ ಬಳಿ ಇರುವ ನಾಣ್ಯಗಳ ವಿಶೇಷತೆಗಳನ್ನು ತಿಳಿಸಿ ಕೊಡುವಿರಾ?
ಬಾ :  ನನಗೆ ಎಲ್ಲ ನಾಣ್ಯಗಳು ವಿಶೇಷವೇ. ಅವುಗಳಲ್ಲಿ ಶಾತವಾಹನರ ಕಾಲದ ಸೀಸದ ನಾಣ್ಯ ಅತಿ ಪುರಾತನ ನಾಣ್ಯ. ಕೆಳದಿ ಅರಸರ ಕಾಲದ ನಾಣ್ಯಗಳು ತಾಮ್ರದಿಂದ ಮಾಡಲ್ಪಟ್ಟಿದ್ದು ಟಂಕಸಾಲೆಯಲ್ಲಿ ಮುದ್ರಿಸಿದ ಚಿನ್ಹೆಗಳನ್ನು ಅವುಗಳಲ್ಲಿ ಕಾಣಬಹುದು. ಬ್ರಿಟಿಷರ ಕಾಲದ ಗವರ್ನರ್ ಗಳ ಭಾವಚಿತ್ರವಿರುವ ರಟ್ಟಿನಿಂದ ತಯಾರಾದ ನಾಣ್ಯಗಳು ಬಹಳ ವಿಶೇಷವೆನ್ನಬಹುದು. ಹೈದರಾಬಾದ್ ನಿಜಾಮ್ ಷಾಹಿ ಕಾಲದ ನಾಣ್ಯಗಳು ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯನ್ನು ಸಾರುವ ನಾಣ್ಯಗಳು ಬಹಳ ವಿಶೇಷತೆಯನ್ನು ಹೊಂದಿವೆ. ಕೆಳದಿ ಅರಸರ ಕಾಲದ 5 ಮಿಲೀ ಮೀಟರ್ ಗಿಂತಲೂ ಚಿಕ್ಕ ಸುತ್ತಳತೆಯ ನಾಣ್ಯ, ಬಿಜಾಪುರ ಸುಲ್ತಾನರ ಕಾಲದ ಬೆಳ್ಳಿ ನಾಣ್ಯಗಳು, ಬಂಗಾರ ಮಿಶ್ರಿತ ನಾಣ್ಯಗಳು ಅಪರೂಪದ್ದಾಗಿವೆ. 1979 ರಲ್ಲಿ ಮದರ್ ಥೆರೇಸಾರಿಗೆ ಶಾಂತಿ ನೊಬೆಲ್ ಪಾರಿತೋಷಕ ದೊರೆತಾಗ ಬಿಡುಗಡೆಯಾದ ಅವರ ಮುಖವಿರುವ ಇರಾನ್ ದೇಶದ ನಾಣ್ಯ, 1914 ರಲ್ಲಿ ಮೈಸೂರು ಅರಸರ ಕಾಲದ ನಾಣ್ಯಗಳಲ್ಲಿ “ಕೃಷ್ಣಾ” ಮತ್ತು “ಚಾಮುಂಡಿ” ಎಂದು ಕನ್ನಡದಲ್ಲಿ ಮುದ್ರಿತ ಅಕ್ಷರಗಳನ್ನು ಕಾಣಬಹುದು. 1950 ರ ಕಾಲದ ನಾಣ್ಯಗಳಲ್ಲಿ ಕುದುರೆ ಮತ್ತು ಬಸವನ ಗುರುತುಗಳನ್ನು ಕಾಣಬಹುದು. ಕಮಲದ ಹೂವಿನ ಗುರುತಿರುವ ಇಪ್ಪತ್ತು ಪೈಸೆಯ ನಾಣ್ಯವೂ ವಿಶೇಷವಾಗಿ ಗಮನ ಸೆಳೆಯುತ್ತವೆ. ಮಹಾರಾಷ್ಟ್ರದ ಶಿವಾಜಿರಾವ್ ಹೋಳ್ಕರ್ ಆಡಳಿತದ ಅವದಿಯ ಅರ್ಧ ಆಣೆ ಮತ್ತು ಕಾಲು ಆಣೆಯ ನಾಣ್ಯಗಳಲ್ಲಿ 1943 ಮತ್ತು 1946 ಎಂಬ ಇಸವಿಗಳನ್ನು ಕಾಣಬಹುದು. ಬೇರೆ ಬೇರೆ ದೇಶಗಳ ನಾಣ್ಯಗಳ ಜೊತೆಗೆ ಭಾರತದ ಒಂದು ಪೈಸೆ, ಎರಡು ಪೈಸೆ, ಐದು ಪೈಸೆ, ಹತ್ತು ಪೈಸೆ, ಇಪ್ಪತ್ತು ಪೈಸೆ, ಇಪ್ಪತ್ತೈದು ಪೈಸೆ, ಐವತ್ತು ಪೈಸೆ, ಒಂದು ರೂಪಾಯಿ, ಒಂದಾಣೆ, ಎರಡಾಣೆ, ನಾಲ್ಕಾಣೆ, ಎಂಟಾಣೆಯ ನೂರಾರು ವಿಧದ ನಾಣ್ಯಗಳ ಸಂಗ್ರಹ ಇದೆ.

ಭಂ : ನಿಮ್ಮಲ್ಲಿರುವ ನೋಟುಗಳ ವಿಶೇಷತೆಗಳನ್ನು ತಿಳಿಸಿಕೊಡುವಿರಾ?
ಬಾ : ನೂರಾ ಐವತ್ತಕ್ಕೂ ಹೆಚ್ಚು ದೇಶಗಳ ಕರೆನ್ಸಿ ನೋಟುಗಳ ಸಂಗ್ರಹ ಈಗ ನನ್ನಲ್ಲಿದೆ. ಕಾಂಬೋಡಿಯಾ ದೇಶದ ಜಗತ್ತಿನ ಬೃಹತ್ ಹಿಂದೂ ದೇವಾಲಯದ ಚಿತ್ರವಿರುವ ನೋಟು, ಸೂಡಾನ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಂಭಿಸುವ ಒಂಟಿ ಕೋಣದೊಂದಿಗೆ ಬೇಸಾಯ ಮಾಡುವ ಚಿತ್ರವಿರುವ ನೋಟು, ಬ್ರಿಟೀಷರ ಕಾಲದಲ್ಲಿ ಬಿಡುಗಡೆಗೊಂಡ ಎರಡೂವರೆ ರೂಪಾಯಿ ಮುಖಬೆಲೆಯ ನೋಟು, ಕುವೈತ್ ನ ಅಧ್ಯಕ್ಷ ಸದ್ಧಾಂ ಹುಸೇನ್ ರ ಭಾವಚಿತ್ರವಿರುವ ನೋಟು, 1957 ರಲ್ಲಿ ಬಿಡುಗಡೆಯಾದ ಒಂದು ರೂಪಾಯಿ ನೋಟಿನಲ್ಲಿ ಕೇವಲ ಎಂಟು ಭಾರತೀಯ ಭಾಷೆಗಳಲ್ಲಿ ಮೌಲ್ಯವನ್ನು ಮುದ್ರಿಸಿರುವುದು ಇವೆಲ್ಲವೂ ನನ್ನ ಸಂಗ್ರಹದಲ್ಲಿರುವ ವಿಶೇಷ ನೋಟುಗಳು. ಚೀನಾ, ನೇಪಾಳ, ಓಮನ್, ಸೌದಿ ಅರೇಬಿಯಾ, ಸಿಂಗಪುರ್, ಅಮೆರಿಕ, ಮಲೇಷಿಯಾ, ಪಾಕಿಸ್ತಾನ, ಮಯನ್ಮಾರ್, ಇಟಲಿ, ಬ್ರೆಜಿಲ್, ಯುಎಇ, ಇಂಡೋನೇಷಿಯಾ, ವಿಯೆಟ್ನಾಂ, ಯಮನ್, ಕೊರಿಯಾ, ಶ್ರೀಲಂಕಾ, ಇರಾಕ್, ಭೂತಾನ್, ಈಜಿಪ್ಟ್ ಮುಂತಾದ ದೇಶಗಳ ಕರೆನ್ಸಿ ನೋಟುಗಳ ಸಂಗ್ರಹ ನನ್ನಲ್ಲಿದೆ.

ಭಂ :  ನಿಮ್ಮಲ್ಲಿ ಅಂಚೆ ಚೀಟಿಗಳ ಸಂಗ್ರಹ ಎಷ್ಟಿದೆ?
ಬಾ : ನನ್ನ ಬಳಿ ನೂರಾರು ಭಾರತದ ಮತ್ತು ಬೇರೆ ಬೇರೆ ದೇಶಗಳ ಅಂಚೆ ಚೀಟಿಗಳ ಸಂಗ್ರಹವೂ ಇದೆ. ಈಗ ಚಾಲ್ತಿಯಲ್ಲಿರುವ, ಬಳಕೆಯಲ್ಲಿಲ್ಲದ ಹಲವಾರು ಅಂಚೆ ಚೀಟಿಗಳು, ವಿಶೇಷ ಸಂದರ್ಭಗಳಲ್ಲಿ ಮುದ್ರಿಸಲ್ಪಟ್ಟ ಅಂಚೆ ಚೀಟಿಗಳ ಸಂಗ್ರಹವೂ ನನ್ನಲ್ಲಿದೆ.

ಭಂ : ನಿಮ್ಮ ಈ ಪುರಾತನ ನಾಣ್ಯ ನೋಟು ಮತ್ತು ಅಂಚೆ ಚೀಟಿಗಳ ಸಂಗ್ರಹದ ಪ್ರದರ್ಶನಗಳು ಏರ್ಪಟ್ಟಿದೆಯೇ?
ಬಾ : ಹೌದು ಈಗಾಗಲೇ ನಾನು ನೂರಾರು ಪ್ರದರ್ಶನಗಳನ್ನು ನೀಡಿದ್ದೇನೆ.

ಭಂ : ನೀವು ನೀಡಿದ ಪ್ರದರ್ಶನಗಳ ಕೆಲವು ನಿದರ್ಶನಗಳನ್ನು ನೀಡಬಹುದೇ?
ಬಾ : ಹೌದು ಕಚ್ಚೂರು ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಒಮ್ಮೆ ಪ್ರದರ್ಶನ ನೀಡಿದ್ದೇನೆ. ಕೋಣಂದೂರಿನಲ್ಲಿ ನಡೆದ ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದ ವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ ಸಹ ನನ್ನ ಸಂಗ್ರಹದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು‌. ಸೊರಬದ ಎಲ್ಲ ಶಾಲಾ ಕಾಲೇಜುಗಳಲ್ಲಿ ಹಲವಾರು ಬಾರಿ ನನ್ನ ಸಂಗ್ರಹದ ಪ್ರದರ್ಶನ ಏರ್ಪಡಿಸಲಾಗಿತ್ತು. ಹಲವಾರು ಮಕ್ಕಳು ಕೇಳುವ ಆಸಕ್ತಿಕರ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಹಾಗೆಯೇ ಹಲವಾರು ನಾಣ್ಯ ಸಂಗ್ರಾಹಕರು, ಕರೆನ್ಸಿ ನೋಟುಗಳ ಸಂಗ್ರಾಹಕರು, ಅಂಚೆ ಚೀಟಿ ಸಂಗ್ರಾಹಕರು ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ.

ಭಂ : ನಿಮ್ಮ ಪ್ರದರ್ಶನದ ಕೆಲವು ಪ್ರಮುಖ ಘಟ್ಟಗಳನ್ನು ಹೇಳುವಿರಾ?
ಬಾ : ಹೌದು ನನ್ನ ಸಂಗ್ರಹದ ಪ್ರದರ್ಶನದ ವೇಳೆ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಉಪಾನ್ಯಾಸಕರು, ಆಸಕ್ತರು ಮಾಹಿತಿಯನ್ನು ಕೇಳಿ ಪಡೆದಿದ್ದಾರೆ. ಅವರ ಆಸಕ್ತಿಗಳಿಗೆ ಸರಿಯಾಗಿ ಸ್ಪಂದಿಸಿದ್ದೇನೆ ಎಂಬ ವಿಶ್ವಾಸ ನನಗಿದೆ.
ಹಾಗೆ ನನ್ನ ಪ್ರತಿಭೆಯನ್ನು ಗುರುತಿಸಿ ಪ್ರದರ್ಶನ ಏರ್ಪಡಿಸಿರುವ ಸ್ಥಳಗಳಿಗೆ ಸೊರಬದ ಮಾಜಿ ಶಾಸಕರಾದ ಹರತಾಳು ಹಾಲಪ್ಪನವರು, ಮಧು ಬಂಗಾರಪ್ಪನವರು, ಹಾಲಿ ಶಾಸಕರಾದ ಶ್ರೀ ಕುಮಾರ್ ಬಂಗಾರಪ್ಪನವರು, ಕೋಣಂದೂರಿನಲ್ಲಿ ವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ ಏರ್ಪಡಿಸಿದ್ದ ಪ್ರದರ್ಶನದಲ್ಲಿ ತೀರ್ಥಹಳ್ಳಿಯ ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್ ರವರು, ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಮಾಹಿತಿಯನ್ನು ಪಡೆದು ನನ್ನ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ.

ಭಂ : ನಿಮ್ಮ ಪ್ರತಿಭೆಯನ್ನು ಪ್ರವೃತ್ತಿಯನ್ನು ಗುರುತಿಸಿ ನಿಮಗೆ ಸನ್ಮಾನಗಳು ನಡೆದ ಉದಾಹರಣೆಗಳು ಇವೆಯೇ?
ಬಾ : ಹೌದು ನನ್ನ ಪ್ರತಿಭೆಯನ್ನು ಪ್ರವೃತ್ತಿಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ನನ್ನನ್ನು ಸನ್ಮಾನಿಸಿ ಗೌರವಿಸಿವೆ. ಸೊರಬದ ಸರ್ಕಾರಿ ಪ್ರೌಢಶಾಲೆ, ಸೊರಬದ ಪದವಿ ಕಾಲೇಜು, ಲಯನ್ಸ್ ಕ್ಲಬ್ ಸೊರಬ, ಜೇಸಿಐ ವೈಜಯಂತಿ ಸೊರಬ ಘಟಕ, ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಸಂಘ ಸಂಸ್ಥೆಗಳು ನನ್ನನ್ನು ಗೌರವಿಸಿವೆ.
2004 ರಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಉತ್ಸವ ಸಂದರ್ಭದಲ್ಲಿ ಒಮ್ಮೆ, 2011 ರಲ್ಲಿ ಭಂಡಾರಿ ಮಹಾಮಂಡಲದ ವತಿಯಿಂದ ಒಮ್ಮೆ ಸನ್ಮಾನವನ್ನು ಸ್ವೀಕರಿಸಿದ್ದೇನೆ.

ಭಂ : ಬಾಬು ಭಂಡಾರಿಯವರೇ…ಮಾಮೂಲಿನಂತೆ ಇದು ನಮ್ಮ ಕಡೆಯ ಪ್ರಶ್ನೆ, ಈಗಿನ ಕಾಲಘಟ್ಟದಲ್ಲಿ ಭಂಡಾರಿ ಸಮಾಜದ ಯುವಕರಿಗೆ ನಿಮ್ಮ ಕಿವಿ ಮಾತೇನು ?
ಬಾ : ಈಗಿನ ಯುವಕರು ಬುದ್ಧಿವಂತರಿದ್ದಾರೆ. ಅವರಿಗೆ ಯಾವುದೇ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಆದರೂ ನಾನು ಅವರಿಗೆ ನೀಡುವ ಸಲಹೆ ಏನೆಂದರೆ ದುರಭ್ಯಾಸಗಳಿಗೆ ಬಲಿಯಾಗದೆ ಸೃಜನಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ನಿಮ್ಮ ಬಿಡುವಿನ ಸಮಯವನ್ನು ಸೂಕ್ತವಾಗಿ ಬಳಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಒತ್ತು ಕೊಟ್ಟು ಸಮಾಜದ ಸತ್ಪ್ರಜೆಗಳಾಗಿ ಬೆಳೆಯಿರಿ ಎಂಬುದಷ್ಟೆ ನನ್ನ ಸಲಹೆ.

ಭಂ : ಧನ್ಯವಾದಗಳು ಬಾಬು ಭಂಡಾರಿಯವರಿಗೆ, ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮೊಂದಿಗೆ ಕಳೆದಿದ್ದೀರಿ.
ಬಾ : ಧನ್ಯವಾದಗಳು.

               ಬಂಧುಗಳೇ ನೋಡಿದಿರಲ್ಲ  ಇದುವರೆಗೆ ಬಾಬು ಭಂಡಾರಿಯವರು ಆಡಿದ ಮಾತುಗಳನ್ನು, ನಮ್ಮ ವೃತ್ತಿ ಬದುಕಿನಲ್ಲಿ ಸಮಯಾವಕಾಶ ಸಿಗುವುದೇ ವಿರಳ, ಹಾಗೆ ದೊರೆತ ಕಡಿಮೆ ಸಮಯವನ್ನು ಸದಭಿರುಚಿಯ, ಉತ್ತಮ ಹವ್ಯಾಸಗಳಿಗೆ ಮೀಸಲಿಟ್ಟು, ನಮ್ಮ ಪರಿಶ್ರಮದ ದುಡಿಮೆಯ ಒಂದು ಭಾಗ ಖರ್ಚಾಗುವುದೇ ಆದರೇ ಇಂಥಹ ಒಂದು ಉತ್ತಮ ಪ್ರವೃತ್ತಿಗೆ, ಹವ್ಯಾಸಕ್ಕೆ ಸದ್ವಿನಿಯೋಗ ಆಗಲಿ. ಅದರಿಂದ ನಮ್ಮ ವ್ಯಕ್ತಿತ್ವ ವಿಕಸನವಾಗಲಿ ಎಂದು ಹೇಳಿದ ಬಾಬು ಭಂಡಾರಿಯವರ ಮಾತು ಎಷ್ಟು ಸಮಂಜಸವಲ್ಲವೇ?

               ಶ್ರೀ ಬಾಬು ಭಂಡಾರಿಯವರಿಗೆ ಶ್ರೀ ದೇವರು ಇನ್ನಷ್ಟು ಚೈತನ್ಯವನ್ನು ಶಕ್ತಿಯನ್ನು ನೀಡಲಿ, ಅವರು ಇನ್ನಷ್ಟು ಸಾಧನೆಗಳನ್ನು ಮಾಡಲು ಅವರಿಗೆ ಭಗವಂತನು ಪ್ರೇರೇಪಣೆ ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”  ಮನಃಪೂರ್ವಕವಾಗಿ ಹಾರೈಸುತ್ತದೆ.
            ನಮ್ಮ ಭಂಡಾರಿ ವಾರ್ತೆಯ ಈ “ಚಿಪ್ಪಿನೊಳಗಿನ ಭಂಡಾರಿ ಮುತ್ತು” ಕೆಲವೇ ಕೆಲವು ಯುವಕರಿಗಾದರೂ ಸ್ಫೂರ್ತಿ ತುಂಬಿದರೆ, ದಾರಿ ದೀಪವಾದರೆ ನಮ್ಮ ಈ ಅಂಕಣದ ಉದ್ದೇಶ ಸಾರ್ಥಕವೆಂದು ಭಾವಿಸುತ್ತೇವೆ. ಧನ್ಯವಾದಗಳು.

.

ಬಾಬು ಭಂಡಾರಿಯವರನ್ನು ಸಂಪರ್ಕಿಸಲು…

ಬಾಬು ಭಂಡಾರಿ.
ರಾಘವೇಂದ್ರ ಬಡಾವಣೆ.
ಕಾನಿಕೇರಿ ರಸ್ತೆ.
ಸೊರಬ.-577 429
ಮೊಬೈಲ್ : 9535312095

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಚಿಪ್ಪಿನೊಳಗಿನ ಭಂಡಾರಿ ಮುತ್ತು -7

  1. ಉತ್ತಮ‌ಮಾಹಿತಿ ಹೊಂದಿದ ಲೇಖನ, ಇಂತಾ ಹವ್ಯಾಸಗಳು ನಮ್ಮ‌ ಯುವ ಪೀಳಿಗೆಗೆ ಮಾದರಿಯಾಗಲಿ.

Leave a Reply

Your email address will not be published. Required fields are marked *