January 18, 2025
Pearl copy

ಈ ಸಂಚಿಕೆಯಲ್ಲಿ ಭಂಡಾರಿವಾರ್ತೆಯೆಂಬ ಚಿಪ್ಪಿನೊಳಗಡೆಯಿಂದ ಹೊರಬರುತ್ತಿರುವ ಮುತ್ತು ಅಂತಿಂಥ ಸಾಧಾರಣ ಮುತ್ತಲ್ಲ.ಜೀವನದಲ್ಲಿ ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿ,ಪ್ರತೀ ಸೋಲಿನಲ್ಲೂ ಒಂದೊಂದು ಹೊಸ ಹೊಸ ಪಾಠ ಕಲಿತು ಪಕ್ವವಾಗಿರುವ ಮುತ್ತು ಇದು. ಇಷ್ಟವಿಲ್ಲವೆಂದು ಕಡೆಗಣಿಸಿದ್ದ ವೃತ್ತಿಯಲ್ಲಿಯೇ ಇಂದು ಸಾಧಿಸಿ,ದೂರದ ಮುಂಬಯಿಯಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಭಂಡಾರಿ ಕುಟುಂಬದ ರಾಘವೇಂದ್ರ. ಜೆ . ಭಂಡಾರಿ(ರಾಘವ್ ). ಇವರ ಬದುಕಿನ ಪುಟಗಳನ್ನು ತಿರುವಿ ಹಾಕಿದ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವುದರಲ್ಲಿ ಅನುಮಾನವಿಲ್ಲ. ಕುಂದಾಪುರ ಮೂಲದವರಾದ ಜಗನ್ನಾಥ ಭಂಡಾರಿ ಮತ್ತು ಶಾಂತಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಇವರು ಕೊನೆಯವರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ.
       ಅವರ ಬಾಲ್ಯ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ತಂದೆಯ ದುಡಿಮೆಯಿಂದ ಜೀವನ ನಿರ್ವಹಣೆ ಸಾದ್ಯವಾಗದೇ ತಾಯಿಯೂ ಮನೆನಿರ್ಮಾಣ ಕೆಲಸಕ್ಕೆ ದಿನಗೂಲಿಯಾಗಿ ದುಡಿದು ಜೀವನ ನಿರ್ವಹಿಸುವಂತಹ ಬಡತನವಿತ್ತು. ಹಾಗಾಗಿ ಚಿಕ್ಕವಯಸ್ಸಿನಲ್ಲಿಯೇ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಸಗುಡಿಸುವುದು,ನೀರು ತಂದು ಹಾಕುವ ಕೆಲಸದೊಂದಿಗೆ ಅವರ ದುಡಿಮೆ ಆರಂಭಗೊಂಡಿತು. ಮುಂದೆ ಮನೆಮನೆಗೆ ಹಾಲು ಸರಬರಾಜು ಮಾಡುವ ಕೆಲಸವನ್ನೂ ಮಾಡಿದರು. ಹತ್ತನೆಯ ತರಗತಿ ಪರೀಕ್ಷೆ ಬರೆದವರು ಫಲಿತಾಂಶಕ್ಕೂ ಕಾಯದೇ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಕಲಿಯುವ ಉದ್ದೇಶದಿಂದ ಮಾವನ ಮನೆಯಾದ ಕಮ್ಮರಡಿಗೆ ಬಂದರು. ಮೊದಲಿನಿಂದಲೂ ಎಡಗೈ ಹೆಚ್ಚಾಗಿ ಬಳಸುತ್ತಿದ್ದದ್ದರಿಂದ ಕತ್ತಿ,ಕತ್ತರಿ ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೇ ಮಾವನ ತಮ್ಮನ ಜೊತೆ ಸೇರಿ ತೋಟದಲ್ಲಿ ವೀಳ್ಯದೆಲೆ ಕೊಯ್ಯುವುದು ಮತ್ತು ಹತ್ತಿರದ ತೀರ್ಥಹಳ್ಳಿ, ಬೆಜ್ಜವಳ್ಳಿ, ಕೋಣಂದೂರು ಮಾರುಕಟ್ಟೆಗೆ ಸಾಗಿಸುವ ಕೆಲಸವನ್ನು ಮಾಡಿದರು. ಆ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತಿದ್ದರೆಂದರೆ ಕೆಲವೇ ದಿನಗಳಲ್ಲಿ ಸುತ್ತಮುತ್ತಲ ಊರುಗಳಲ್ಲಿ ಎಲೆರಾಘು ಎಂದೇ ಜನಪ್ರಿಯರಾದರು.ಎರಡು ಕೈಗಳಿಂದ ದಿನವೂ ಸಾವಿರಾರು ಎಲೆಗಳನ್ನು ಕೊಯ್ದ ಪರಿಣಾಮ ಕ್ಷೌರಿಕ ವೃತ್ತಿ ಕಲಿಯಲು ಅವರ ಕೈಗಳು ಸಹಕರಿಸಿದವು. ಸ್ವಲ್ಪ ಮಟ್ಟಿಗೆ ಕೆಲಸವನ್ನು ಕಲಿತರು.
ಸಹೋದರ ಫಿನಿಷಿಂಗ್ ಟಚ್ ನವೀನ್ ಭಂಡಾರಿಯವರ ಒತ್ತಾಸೆಯ ಮೇಲೆ 1998 ರಲ್ಲಿ ಮುಂಬಯಿಗೆ ಬಂದರು. ಕೆಲಕಾಲ ಲ್ಯಾಂಡ್ರಿಯಲ್ಲಿ ಕೆಲಸ ಮಾಡಿದರು. ಬಟ್ಟೆಗಳಿಗೆ ಸ್ವತಃ ಇವರೇ ಇಸ್ತ್ರಿ ಕೂಡ ಮಾಡುತ್ತಿದ್ದರು. ಕೀ ಚೈನ್ ಮಾರಿದರು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಸಂಜೆ ಅಂಗಡಿ ಅಂಗಡಿ ತಿರುಗಿ ಹಣ ಸಂಗ್ರಹಿಸುವ ಪಿಗ್ಮೀ ಕಲೆಕ್ಟರ್ ಕೆಲಸ ಮಾಡಿದರು. ಸೇಲ್ಸ್ ಮ್ಯಾನ್ ಆಗಿ ದುಡಿದರು.ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳಲ್ಲಿ ವೇಟರ್ ಆಗಿ ರಾತ್ರಿ ಒಂದೆರಡು ಗಂಟೆಗಳವರೆಗೆ ದುಡಿದರು. ಬೇಕರಿಯಲ್ಲಿ ಕೆಲಸ ಮಾಡಿ, ಪಾಲುದಾರಿಕೆಯಲ್ಲಿ ಬೇಕರಿ ಮಾಡಿ ಸ್ವಲ್ಪ ಹಣ ಕಳೆದುಕೊಂಡರು. ಇದೆಲ್ಲದರೊಟ್ಟಿಗೆ ಕುಲಕಸುಬು ಕಲೀತಾ ಇದ್ದರು.
           ಕೊನೆಗೆ ಅಣ್ಣನ ಮಾತಿಗೆ ಬೆಲೆಕೊಟ್ಟು ಪ್ರತಿಷ್ಠಿತ ಸ್ಟೈಲೋ ಸಂಸ್ಥೆಯಲ್ಲಿ ಹೇರ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿ ಸುಮಾರು ವರ್ಷ ವೃತ್ತಿ ಮಾಡಿದ ಮೇಲೆ ಅನಿವಾರ್ಯವಾಗಿ ಆ ಸಂಸ್ಥೆಯಿಂದ ಹೊರಬಂದರು‌. 2009 ರಲ್ಲಿ ಮುಂಬಯಿಯ ವರ್ಲಿಯಲ್ಲಿ ನೆಲೆಸಿರುವ, ಮೂಲತಃ ಮಂಗಳೂರು ಧಂಬೆಯವರಾದ ಆನಂದಭಂಡಾರಿ ಮತ್ತು ಸುಮತಿ ಆನಂದಭಂಡಾರಿ ಯವರ ಎರಡನೇ ಪುತ್ರಿ ಸ್ಮಿತಾ ಅವರನ್ನು ಮದುವೆಯಾದರು. ಅವರು ಮದುವೆಯಾದ ನಂತರವೂ ಪತ್ನಿಯ ಓದಿಗೆ ಸಹಕಾರ ನೀಡಿದ ಪರಿಣಾಮ 2011ರಲ್ಲಿ ಪತ್ನಿ ಸ್ಮಿತಾ ಅವರು ಕೇಂದ್ರ ಸರಕಾರಿ ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದರು. ಇವರಿಗೆ 6 ವರ್ಷದ ಸ್ಮಿರಾಗ್ ಮತ್ತು ಒಂದು ವರ್ಷದ ಸ್ವರಾಗ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಪತ್ನಿಯ ಸಹಕಾರದಿಂದ ಹತ್ತನೇ ತರಗತಿಗೆ ಬಿಟ್ಟಿದ್ದ ಓದನ್ನು ಮುಂದುವರೆಸಿ Maharashtra State certificate in information technology (MSCIT) ಮತ್ತು ಪುಣೆ ವಿದ್ಯಾಪೀಠದಲ್ಲಿ ಕಂಪ್ಯೂಟರ್ ಕೋರ್ಸ್ ಮಾಡಿದರು. ರಾತ್ರಿ ಶಾಲೆಯಲ್ಲಿ ಓದಿ ಪರೀಕ್ಷೆಗಳನ್ನೆಲ್ಲಾ ಪ್ರಥಮ ದರ್ಜೆಯಲ್ಲಿ ಪಾಸಾದರು.
ಕ್ಷೌರಿಕ ವೃತ್ತಿಯನ್ನು ಕಲಿಯುವುದೇ ಬೇಡವೆಂದುಕೊಂಡಿದ್ದ ಇವರು 2013ರಲ್ಲಿ ಸಲೂನ್ ಅ್ಯಂಡ್ ಬ್ಯೂಟಿಪಾರ್ಲರ್ ಅಸೋಸಿಯೇಷನ್(ಮುಂಬಯಿ) ಯವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಮುಂತಾದ ಕಡೆಗಳಿಂದ ಬಂದಿದ್ದ 750ಕ್ಕೂ ಹೆಚ್ಚಿನ ಸ್ಪರ್ಧಿಗಳಲ್ಲಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಅವರ ವೃತ್ತಿ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿದೆ.
       ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ಅಮೀರ್ ಖಾನ್ ರ Look Designer ಆಗಿ ಕೆಲಸ ಮಾಡಿದ ಅವರ ಅನುಭವ ಅದ್ಬುತ.

      ಬಂಧುಗಳೇ ನೋಡಿದಿರಾ? ಪ್ರತೀ ಹಂತದಲ್ಲೂ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಲು ಅವರು ಬಡಿದಾಡಿದ ರೀತಿಯನ್ನು. ಇದು ನಮ್ಮ ಸಮುದಾಯದ ಯುವಕರಿಗೆ ಸ್ಪೂರ್ತಿಯಾಗಲಿ. ಇವರ ಸಾಧನೆ ಸಣ್ಣ ಸಣ್ಣ ಸೋಲಿಗೆ ಎದೆಗುಂದುವ ಯುವಕರಿಗೆ ಹೊಸ ಚೈತನ್ಯ ನೀಡಲಿ ಎಂಬುದು ಭಂಡಾರಿವಾರ್ತೆಯ ಹಾರೈಕೆ.
ರಾಘವ್ ಭಂಡಾರಿ, ಸ್ಮಿತಾ ರಾಘವ್ ಭಂಡಾರಿ ಮತ್ತು ಸ್ಮಿರಾಗ್. ಸ್ವರಾಗ್ ಎಲ್ಲರಿಗೂ ಭಗವಂತನು ಆಯುರಾರೋಗ್ಯ ಭಾಗ್ಯ ಕರುಣಿಸಲಿ. ಅವರಿಗೆ ಜೀವನದಲ್ಲಿ ಇನ್ನಷ್ಟು ಗೆಲುವು ಸಿಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

✍ : ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ

2 thoughts on “ಚಿಪ್ಪಿನೊಳಗಿನ ಭಂಡಾರಿ ಮುತ್ತು – ರಾಘವೇಂದ್ರ. ಜೆ . ಭಂಡಾರಿ(ರಾಘವ್ )

Leave a Reply

Your email address will not be published. Required fields are marked *