ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಪದಾಧಿಕಾರಿಗಳು ಮತ್ತು ವಲಯದ ಘಟಕಗಳ ಪದಾಧಿಕಾರಿಗಳ ನಡುವಿನ ಸಮಾಲೋಚನಾ ಸಭೆಯು ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀ ಸೀತಾರಾಮ ಕಲ್ಯಾಣ ಮಂದಿರದ ಸಭಾಭವನದಲ್ಲಿ ಏಪ್ರಿಲ್ 10 ರ ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ ಜರಗಿತು.
ಸಾಗರ ಘಟಕದ ಅಧ್ಯಕ್ಷರಾದ ಕೃಷ್ಣಮೂರ್ತಿ ಭಂಡಾರಿಯವರು ಸರ್ವರನ್ನು ಸ್ವಾಗತಿಸಿದರು.
ನಂತರ ಭ ಸ ಸ ಬೆಂಗಳೂರು ವಲಯದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಕುಶಲ್ ಭಂಡಾರಿಯವರು ಸಭೆ ಆಯೋಜಿಸಿರುವ ಉದ್ಧೇಶವನ್ನು ಸಭೆಗೆ ತಿಳಿಸುತ್ತಾ ವಲಯದ ಪದಾಧಿಕಾರಿಗಳು ಮತ್ತು ಘಟಕದ ಪದಾಧಿಕಾರಿಗಳ ಜೊತೆ ನಿರಂತರ ಸಮಾಲೋಚನೆ ಮಾಡುವ ಮೂಲಕ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ ,ಇಂದು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರ ಮದುವೆಯ ನಿಮಿತ್ತ ನಾವು ಒಂದು ಕಡೆ ಸೇರಿಕೊಂಡು ಸಮಾಲೋಚನೆ ಮಾಡುವ ಪೂರಕ ವಾತಾವರಣ ಸೃಷ್ಟಿಯಾಗಿದೆ, ಅದರ ಜೊತೆಗೆ ನಮ್ಮ ಸಂಘದ ಮಹತ್ವದ ಯೋಜನೆಯಾದ ವಿದ್ಯಾನಿಧಿಯ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಕೂಡ ಘಟಕಗಳಿಂದ ಚಾಲನೆ ದೊರೆಯಲಿದೆ ಎಂದರು.
ಕಳೆದ 23 ವರ್ಷಗಳಿಂದ ಸಂಘವು ವಿದ್ಯಾ ಪ್ರೋತ್ಸಾಹ ಧನ ವಿತರಿಸುತ್ತಿದ್ದು ಘಟಕಗಳಿಂದ ಬಂದಿರುವ ಅರ್ಜಿಗಳಿಗೆಯೇ ಅತೀ ಹೆಚ್ಚು ವಿತರಿಸಲಾಗಿದೆ. ಸಂಘದ ನಿರಖು ಠೇವಣಿಯ ಬಡ್ಡಿಯ ಮೂಲಕ ಮಾತ್ರ ವಿದ್ಯಾ ಪ್ರೋತ್ಸಾಹ ಧನ ವಿತರಿಸಲು ಸಾಧ್ಯ.
ಕಳೆದ 5 ವರ್ಷಗಳಿಂದ ಸತತವಾಗಿ ನಿರಖು ಠೇವಣಿಯ ಮೇಲಿನ ಬಡ್ಡಿ ದರ ಇಳಿಯುತ್ತಿದ್ದು ಪ್ರತೀ ವರ್ಷ ವಿದ್ಯಾರ್ಥಿ ವೇತನ ವಿತರಿಸಲು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಈ ನಡುವೆ ದೇಣಿಗೆ ನೀಡುವವರ ಸಂಖ್ಯೆ ಕೂಡಾ ಕಡಿಮೆಯಿದೆ. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನ ನೀಡಲು ಖಂಡಿತವಾಗಿಯೂ ಕಷ್ಟವಾಗಬಹುದು ಒಂದು ವೇಳೆ ವಿತರಿಸಿದರೂ ಮೊತ್ತವು ಕಡಿಮೆಯಾಗಬಹುದು ಎಂದರು.
ನಮ್ಮ ಮೂಲಕ ಪ್ರಯೋಜನ ಪಡೆದಿರುವ ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈಗ ಉದ್ಯೋಗದಲ್ಲಿ ಇರಬಹುದು. ಅವರೆಲ್ಲ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ತಮಗೆ ಸಾಧ್ಯ ಇರುವಷ್ಟು ದೇಣಿಗೆಯನ್ನು ನೀಡುವ ಮೂಲಕ ಮುಂದಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲು ದಾರಿ ದೀಪವಾಗಬೇಕು ಎಂದರು.
ನಂತರ ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲುರವರು ಮಾತನಾಡುತ್ತಾ ಸಮಾಜದ ಸಂಘಟನೆಯ ಮತ್ತು ಅಭಿವೃದ್ಧಿಗೆ ವಿಶೇಷವಾಗಿ ವಿದ್ಯಾನಿಧಿ ಯೋಜನೆಯ ಬಗ್ಗೆ ತಿಳಿಸುತ್ತಾ ಅಂದಿನಿಂದ ಇಂದಿನವರೆಗೆ ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದಿಂದ ವಿದ್ಯಾರ್ಥಿ ವೇತನ ಪಡೆದು ಈಗ ಸರ್ಕಾರಿ, ಅರೆ ಸರ್ಕಾರಿ ನೌಕರಿ ಮಾಡುತ್ತಿರುವ ಆರ್ಥಿಕವಾಗಿ ಸದೃಢರಾಗಿರುವ ಭಂಡಾರಿ ಬಂಧುಗಳು ಮುಂದಿನ ಬಡಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸಂಘದ ವಿದ್ಯಾನಿಧಿ ಖಾತೆಗೆ ತಮ್ಮ ಕೈಲಾದಷ್ಟು ಗರಿಷ್ಠ ಹಣವನ್ನು ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡರು.
ಸಭೆಯಲ್ಲಿ ಹಾಜರಿದ್ದ ಸಂಘದ ಮಾಜೀ ಉಪಾಧ್ಯಕ್ಷ ಮತ್ತು ಸಕ್ರಿಯ ಕಾರ್ಯಕರ್ತ , ಪ್ರಕಾಶ್ ಕುತ್ತೆತ್ತೂರು ಕೂಡಾ ಈ ಬಗ್ಗೆ ಹಲವು ಉತ್ತಮ ಸಲಹೆಗಳನ್ನು ನೀಡಿದರು .
ಸಂಘದ ಗೌರವಾಧ್ಯಕ್ಷರಾದ ಲಕ್ಷ್ಮಣ್ ಕರಾವಳಿಯವರು ಕೂಡಾ ಎಲ್ಲ ಘಟಕದ ಪದಾಧಿಕಾರಿಗಳಿಗೆ ಮನವಿ ಮಾಡಿ ದೇಣಿಗೆ ಸಂಗ್ರಹಿಸುವ ಮೂಲಕ ಸಂಘದ ಜೊತೆಗೆ ಕೈ ಜೋಡಿಸುವಂತೆ ಕೇಳಿಕೊಂಡರು.
ಸಭೆಯಲ್ಲಿ ರಿಪ್ಪನ್ ಪೇಟೆ ಭಂಡಾರಿ ಜನಾಂಗದ ಸೊಸೈಟಿಯ ಕಾರ್ಯದರ್ಶಿ ಮಂಜುನಾಥ್ ಮುದ್ದು ಭಂಡಾರಿ ಮಾತನಾಡುತ್ತಾ ಕರ್ನಾಟಕ ಸರ್ಕಾರವು ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುತ್ತಿರುವ ಹಿನ್ನೆಲೆಯಲ್ಲಿ, ಮತ್ತು ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಸಮಾಜದ ಸಂಘಟನೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿರುವ ಹಿನ್ನಲೆಯಲ್ಲಿ ನಾವು ಅಂದರೆ ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದಿಂದ ಕೊಡ ಮಾಡುತ್ತಿರುವ ವಿದ್ಯಾರ್ಥಿವೇತನವನ್ನು ಸಾಮೂಹಿಕವಾಗಿ ವಿತರಿಸದೆ, ಸಮಾಜದ ಕಡುಬಡ ವಿದ್ಯಾರ್ಥಿಗಳಿಗೆ ಮಾತ್ರ ನೀಡಿ, ಉಳಿದಂತೆ ಯಾವುದೇ ರೀತಿಯ ಆರ್ಥಿಕ ಸಹಾಯ ಪಡೆಯದ ಪದವಿ ಶಿಕ್ಷಣ ಪಡೆಯುತ್ತಿರುವ ಸಮಾಜದ ಸದಸ್ಯತ್ವ ಪಡೆದಿರುವ ಕಡು ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಆರ್ಥಿಕ ಸಹಾಯ ನೀಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಕಾರ್ಯದರ್ಶಿ ಶ್ರೀಧರ್ ಭಂಡಾರಿ ಬಿರ್ತಿ , ಕೋಶಾಧಿಕಾರಿ ಸಂಜೀವ ಭಂಡಾರಿ ಬನ್ನಂಜೆ ,ಭಂಡಾರಿ ಮಹಾಮಂಡಲದ ಕೋಶಾಧಿಕಾರಿ ರಾಮ ಭಂಡಾರಿ ಬ್ರಹ್ಮಾವರ ಚರ್ಚೆಯಲ್ಲಿ ಭಾಗವಹಿಸಿ ಅತ್ಯಮೂಲ್ಯ ಸಲಹೆಗಳನ್ನು ನೀಡಿದರು.
ಕಳೆದ ಡಿಸೆಂಬರ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಉಳಿಕೆಯಾದ ಮೊತ್ತವನ್ನು ವಿದ್ಯಾನಿಧಿ ಯ ನಿರಖು ಠೇವಣಿಯಾಗಿ ಕಚ್ಚೂರು ಸೊಸೈಟಿ ಯಲ್ಲಿ ಇಡಲು ಸಭೆಯು ನಿರ್ಣಯಿಸಿತು.
ಹಾಗೆಯೇ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮೇ 8 ರಂದು ಉಡುಪಿ ವಲಯದ ಉಸ್ತುವಾರಿಯಲ್ಲಿ ನಡೆಯುವ ಉತ್ಸವಕ್ಕೆ ಶುಭಾಶಯ ಕೋರುವ ಸಲುವಾಗಿ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದಿಂದ ಕಚ್ಚೂರು ವಾಣಿಯಲ್ಲಿ ಒಂದು ಪುಟದ ಜಾಹಿರಾತು ನೀಡಲು ಕೂಡ ಸಭೆ ನಿರ್ಣಯ ಕೈಗೊಂಡಿತು .
ಸಾಗರ ಘಟಕದ ಕೃಷ್ಣಮೂರ್ತಿ ಭಂಡಾರಿ ,ರಿಪ್ಪನ್ ಪೇಟೆ ಘಟಕದ ಮಂಜುನಾಥ್ ಮುದ್ದು ಭಂಡಾರಿ , ಕೆ ಎನ್ ಮಂಜುನಾಥ್ ಭಂಡಾರಿ, ಆರ್ ಟಿ ಗೋಪಾಲ ಭಂಡಾರಿ ರಿಪ್ಪನ್ ಪೇಟೆ ,ಕೊಪ್ಪ ಘಟಕದ ಹರೀಶ್ ಭಂಡಾರಿ ಕೊಪ್ಪ , ಹೊಸನಗರದ ಸವಿತಾ ಸಮಾಜದ ಮುಖಂಡ ಬಾಬು ರಾವ್ ,ರಾಘವ ಭಂಡಾರಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು .
ವಲಯದ ಅಧ್ಯಕ್ಷರಾದ ಪ್ರಸಾದ್ ಭಂಡಾರಿ ಮುನಿಯಾಲ್ ರವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು