September 20, 2024

ಪೋಷಕರೇ ಹದಿಹರೆಯದವರ ಈ ವರ್ತನೆಗಳನ್ನು ಗಮನಿಸದಿದ್ದರೆ ಡೇಂಜರ್‌!

ಹದಿಹರೆಯಕ್ಕೆ ಬಂದ ಮಕ್ಕಳನ್ನು ನೋಡಿಕೊಳ್ಳುವುದೆಂದರೆ ಪೋಷಕರಿಗೆ ದೊಡ್ಡ ಸವಾಲು. ಸಣ್ಣ ಮಕ್ಕಳಿಗಾದರೂ ಬೆದರಿಸಿ, ಜೋರು ಮಾತಿನಿಂದ ಬುದ್ಧಿ ಹೇಳಬಹುದು. ಆದರೆ ಎದೆಮಟ್ಟಕ್ಕೆ ಬೆಳೆದು ನಿಂತ ಮಗಳು/ ಮಗನನ್ನು ನೋಡಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಪೋಷಕರಿಗೆ ಗೊಂದಲವಾಗುತ್ತದೆ. ಈಗಂತೂ ಕಾಲ ಬದಲಾಗಿದೆ ದಿನದ ಇಪ್ಪತನಾಲ್ಕು ಗಂಟೆಯೂ ಫೋನ್‌ಗೆ ಅಂಟಿಕೊಂಡಿರುವ ಮಗ/ಮಗಳನ್ನು ಕಂಡರೆ, ಕತ್ತಲಾದರೂ ಮಗ/ಮಗಳು ಮನೆಯ ಡೋರ್‌ಬೆಲ್‌ ರಿಂಗಣಿಸದಿದ್ದರೆ ಹೆತ್ತವರಿಗೆ ಢವಢವ ಶುರುವಾಗುತ್ತದೆ. ಎಷ್ಟೋ ಬಾರಿ ಇದು ಪೋಷಕರ ಮತ್ತು ಮಕ್ಕಳ ವಾಗ್ಯುದ್ಧಕ್ಕೂ ಕಾರಣವಾಗುತ್ತದೆ. ಆದರೆ ಪೋಷಕರೆ ಹದಿಹರೆಯದ ಮಕ್ಕಳೊಂದಿಗೆ ವ್ಯವಹರಿಸುವಾಗ ಈ ಸಣ್ಣ ಸಂಗತಿಗಳು ನೆನಪಿರಲಿ.

ಎದೆಮಟ್ಟಕ್ಕೆ ಬೆಳೆದು ನಿಂತರೂ ಅವರಿನ್ನೂ ನಿಮಗೆ ಪುಟ್ಟ ಕಂದಮ್ಮಗಳಗಾಗಿರಬಹುದು. ಆದರೆ ಅವರ ದೇಹದಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಅದರಲ್ಲೂ ಹಾರ್ಮೋನ್‌ ಬದಲಾವಣೆಗಳಿಂದಾಗಿ ಅವರ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಾಣಬಹುದು. ಈ ಬದಲಾವಣೆಗಳೇ ನಿಮ್ಮ ಮುಖದಲ್ಲಿ ಆತಂಕ ಮೂಡಿಸುವುದು. ಇಷ್ಟೇ ಅಲ್ಲ ಅವರ ದೇಹ ಮಾತ್ರವಲ್ಲ ನರನಾಡಿಗಳಲ್ಲಿಯೂ, ಅವರ ಮೆದುಳಿನಲ್ಲಿಯೂ ಬದಲಾವಣೆಗಳಾಗುತ್ತಿರುತ್ತದೆ. ಇದು ಅವರ ನಡವಳಿಕೆಯ ಮೇಲೂ ಚೇಂಜಸ್‌ ಉಂಟು ಮಾಡುತ್ತೆ. ಅದರಿಂದಾಗಿಯೇ ಹದಿಹರೆಯದವರು ಬೇಗನೆ ದಣಿಯುವುದು.

ಮಕ್ಕಳ ಅಸ್ತವ್ಯಸ್ತವಾಗಿರುವ ರೂಮ್‌ ಕಂಡು ನಿಮ್ಮ ಕೋಪ ನೆತ್ತಿಗೇರಬಹುದು, ನಿಮ್ಮ ರೂಲ್ಸ್‌ಗಳನ್ನು ಧಿಕ್ಕರಿಸಬಹುದು, ನಿಮ್ಮ ಕಿವಿಮಾತುಗಳನ್ನು, ಅವರು ಏನೂ ಕೇಳಿಸಿಕೊಳ್ಳದವರಂತೆಯೇ ಆಡಬಹುದು… ಕೂಲ್‌.. ಇದು ಹದಿಹರೆಯದ ಮಕ್ಕಳ ಸಹಜ ನಡವಳಿಕೆ. ನಿಮಗೆ ಮಾತ್ರ ಅಸಜಹವಾಗಿ ಕಾಣಿಸಬಹುದು, ಅವರ ನಡವಳಿಕೆಯ ಬಗ್ಗೆ ಒತ್ತಡಕ್ಕೆ ಕಾರಣವಾಗಬಹುದು. ಕೆಲವೊಂದು ನಡವಳಿಕೆಗಳು ಹದಿಹರೆಯದವರಲ್ಲಿ ಸಾಮಾನ್ಯ, ಆದರೆ ಸ್ವಯಂ ಹಾನಿ, ದೈಹಿಕ ಮಾನಸಿಕ ಹಾನಿಗೆ ಕಾರಣವಾಗುವ ನಡವಳಿಕೆಗಳು ಅಪಾಯಕಾರಿ. ಮಕ್ಕಳ ಸ್ವಭಾವದ ಮೇಲೊಂದು ಕಣ್ಣಿಟ್ಟರೆ ಸಮಸ್ಯೆಗೆ ಸಿಲುಕಿಹಾಕಿಕೊಳ್ಳುವುದದನ್ನು ತಪ್ಪಿಸಬಹುದು. ಹದಿಹರೆಯದವರಲ್ಲಿ ಕಂಡುಬರುವ ಅಪಾಯಕಾರಿ ನಡವಳಿಕೆಗಳೆಂದರೆ..

1. ಸೆಕ್ಸ್‌, ಆಲ್ಕೋಹಾಲ್‌ ಮತ್ತು ಡ್ರಗ್ಸ್‌
ಇತ್ತೀಚೆಗೆ ಮಾದಕ ವ್ಯಸನದಲ್ಲಿ ಯುವಜನರು ಬೀಳುವವುದು ಹೆಚ್ಚಾಗುತ್ತಿದೆ. 18ವರ್ಷ ತುಂಬುವ ಮುಂಚೆಯೇ ಡ್ರಗ್ಸ್‌, ಸೆಕ್ಸ್‌, ಮಾದಕದ್ರವ್ಯ ಸೇವನೆಯಲ್ಲಿ ತೊಡಗಿಕೊಳ್ಳುತ್ತಾರೆ. ನಿಮ್ಮ ಮಕ್ಕಳು ಹದಿನೈದು ಹದಿನಾರನೇ ವಯಸ್ಸಿನಲ್ಲೇ ಕುಡಿತ, ಲೈಂಗಿಕತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರೆ ಅದಕ್ಕೆ ಕಾರಣ ಅವರೊಂದಿಗಿನ ಸ್ನೇಹಿತರೂ ಕಾರಣವಾಗಬಹುದು. ಸ್ನೇಹಿತರೊಂದಿಗೆ ತಿರುಗಾಡುವುದು, ಸುತ್ತಾಡುವುದು ಸಾಮಾನ್ಯ. ಅದು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯಲ್ಲ. ಆದರೆ ಈ ಮೂರು ದುರ್ಗುಣಗಳಿಗೆ ಅಂಟಿಕೊಂಡರೆ ಅದರ ದಾಸರಾಗಿಬಿಡುತ್ತಾರೆ. ಎಳೆಯ ವಯಸ್ಸಿನಲ್ಲೇ ಕುಡಿತ ಯಕೃತ್ತಿನ ಸಮಸ್ಯೆ ಇತರ ಅನಾರೋಗ್ಯಕ್ಕೆ ಕಾರಣವಾಗಬಹುದು. ಮದ್ಯ, ಡ್ರಗ್ಸ್‌ ಚಟವನ್ನು ಬಿಡಿಸುವುದು ಕಷ್ಟವಾಗಬಹುದು. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ.

ಪೋಷಕರಾಗಿ ಮಕ್ಕಳಲ್ಲಿ ಈ ಚಟುವಟಿಕೆಗಳನ್ನು ನೋಡಿಯೂ ಸುಮ್ಮನಿರಬೇಡಿ. ಆದರೆ ತಕ್ಷಣವೇ ಪ್ರತಿಕ್ರಿಯಿಸಲು ಹೋಗಬೇಡಿ. ಕೆಲವೊಮ್ಮೆ ಮನೆಯಲ್ಲಿನ ಸಮಸ್ಯೆಗಳೂ ಮಕ್ಕಳಲ್ಲಿ ಈ ಚಟ ಹೆಚ್ಚಾಗಲು ಕಾರಣವಾಗಬಹುದು. ಕೆಲವೊಮ್ಮೆ ಸ್ನೇಹಿತರ ಒತ್ತಾಯದಿಂದಲೂ ಮಕ್ಕಳು ಮದ್ಯಪಾನ ಮಾಡಿರಬಹುದು. ಈ ಮದ್ಯಪಾನ, ಮಾದಕ ವ್ಯಸನದಲ್ಲಿ ಮಕ್ಕಳು ತೊಡಗಿಕೊಳ್ಳದಂತೆ ನೋಡಿಕೊಳ್ಳಲು ಪರಿಣಾಮಕಾರಿ ಮಾರ್ಗವೆಂದರೆ ಅದರ ಬಗ್ಗೆಯೇ ಮಾತನಾಡುವುದು. ಮಾತನಾಡುವುದೆಂದರೆ ಜೋರು ಧ್ವನಿಯಲ್ಲಿ ಅಲ್ಲ. ಆದಷ್ಟು ಶಾಂತವಾಗಿ ಮಾತನಾಡಿ. ಹದಿಹರೆಯದಲ್ಲಿ ಯಾಕೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು, ಲೈಂಗಿಕತೆಯಲ್ಲಿ ಯಾಕೆ ತೊಡಗಿಸಿಕೊಳ್ಳಬಾರದು, ಭವಿಷ್ಯದಲ್ಲಿ ಆಗುವ ತೊಂದರೆಗಳ ಬಗ್ಗೆಯೂ ವಿವರಿಸಿ. ಆದಷ್ಟು ಸ್ನೇಹಿತರಂತೆ ಮಕ್ಕಳೊಂದಿಗೆ ಮಾತನಾಡಿ. ಆದಷ್ಟು ಮಕ್ಕಳೊಂದಿಗೆ ಸಮಯವನ್ನು ಕಳೆಯಿರಿ, ಹೀಗಾದಾಗ ಹೊರಗೆ ಸ್ನೇಹಿತರೊಂದಿಗೆ ತಿರುಗಾಡುವುದು ತಪ್ಪುತ್ತದೆ.

2. ಮೊಬೈಲ್‌ ಮತ್ತು ಸಾಮಾಜಿಕ ಮಾಧ್ಯಮಗಳ ಹೆಚ್ಚು ಬಳಕೆ

ಸಂವಹನ ಸಾಧನಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸೋಷಿಯಲೈಜ್‌ ಆಗಲು ಬೇಕೆ ಬೇಕು. ಹದಿಹರೆಯದಲ್ಲಿ ಫೋನ್‌ ಇಟ್ಟುಕೊಳ್ಳುವುದು ತಪ್ಪೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಶಿಕ್ಷಣಕ್ಕೂ ಪೂರಕ. ಆದರೆ ಮೊಬೈಲ್‌ ಆಗಲಿ, ಲ್ಯಾಪ್‌ಟಾಪ್‌ ಆಗಲಿ ಮಕ್ಕಳ ಕೈಗೆ ಕೊಟ್ಟು ಸುಮ್ಮನಿದ್ದು ಬಿಡುವುದಲ್ಲ. ಅವರ ಮೇಲೊಂದು ನಿಗಾ ಇಡಿ. ಈ ಸಾಧನಗಳ ಅತಿಯಾದ ಬಳಕೆ ಚಟವಾಗಿ ಬದಲಾಗಬಹುದು. ಇದು ಜೀವನಶೈಲಿಯ ಮೇಲೂ ಪರಿಣಾಮ ಬೀರಬಹುದು. ಸಾಮಾಜಿಕ ಮಾಧ್ಯಮದ ಮೂಲಕ ಇತ್ತೀಚಿಗೆ ಅತೀ ಹೆಚ್ಚು ಫ್ರಾಡ್‌ ಕೇಸ್‌ಗಳಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಇದು ಗೊತ್ತಾಗದಂತೆ ಅಪಾಯವನ್ನು ಸ್ವೀಕರಿಸುವ ದಾರಿಯೂ ಆಗಬಹುದು.

ಮಕ್ಕಳ ಅತಿಯಾದ ಮೊಬೈಲ್‌ ಬಳಕೆಯನ್ನು ನೋಡಿ ಅವರ ಮೇಲೆ ರೇಗಾಡುವುದು, ಹೊಡೆಯುವುದು, ಮೊಬೈಲ್‌ ಗೊತ್ತಾಗದಂತೆ ಎತ್ತಿಡುವುದು ಮಾಡಿದಲ್ಲಿ, ಮಕ್ಕಳು ಮುಂದೆ ಸುಳ್ಳು ಹೇಳಲು, ಕದಿಯಲು ಪ್ರಾರಂಭಿಸಬಹುದು. ಹದಿಹರೆಯದವರಲ್ಲಿ ಫೋನ್‌ ಇರುವುದು ಸಾಮಾನ್ಯ. ಅದನ್ನು ಯಾವುದಕ್ಕೆ ಬಳಸುತ್ತಾರೆ ಎನ್ನುವ ಬಗ್ಗೆ ಗಮನವಿರಲಿ. ಓದಲು ಹಾಗೂ ಮೊಬೈಲ್‌ ಬಳಸಲು ಕಟ್ಟುನಿಟ್ಟಾದ ನಿಯಮವನ್ನು ಹಾಕಿ. ಈ ಟೈಮ್‌ನಲ್ಲಿ ಓದು, ಈ ಟೈಮ್‌ನಲ್ಲಿ ಮೊಬೈಲ್‌ ಎನ್ನುವ ದಿನಚರಿಯನ್ನು ಪಾಲಿಸುವಂತೆ ಮಾಡಿ.

ಇನ್ನು ಲ್ಯಾಪ್‌ಟಾಪ್‌ ಬಗ್ಗೆ ಹೇಳುವುದಾದರೆ ಅವರ ಬ್ರೌಸಿಂಗ್‌ ಹಿಸ್ಟರಿಯ ಬಗ್ಗೆ ನೀವೂ ಆಗಾಗ ಕಣ್ಣಿಡಿ. ಹಾಗಂತ ಪತ್ತೇದಾರಿ ಕೆಲಸ ಮಾಡಬೇಡಿ. ಅವರೊಂದಿಗೆ ಸ್ನೇಹಿತರಂತೆ ಮಾತನಾಡಿ ಅವರ ಆಸಕ್ತಿಗಳು, ಇಂಟರ್ನೆಟ್‌ನಲ್ಲಿ ಏನು ಸರ್ಚ್‌ ಮಾಡುತ್ತಾರೆ ಎನ್ನುವುದರ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಳ್ಳಿ. ಸಾಧ್ಯವಾದಷ್ಟು ಸಾಮಾಜಿಕ ಮಾಧ್ಯಮಗಳ ಬಳಕೆಯ ಮೇಲೆ ಕೆಲವೊಂದು ನಿರ್ಬಂಧಗಳನ್ನು ಮಾಡಿ, ಅಂದರೆ ಅವರ ಅಕೌಂಟ್‌ಗಳನ್ನು ಡಿಲೀಟ್‌ ಮಾಡಿಸುವುದಲ್ಲ. ಅವರ ಸಾಮಾಜಿಕ ಮಾಧ್ಯಮದ ಅಪ್‌ಡೇಟ್‌ಗಳ ಮೇಲೆ ನೀವೂ ಒಂದು ಕಣ್ಣಿಡಿ.

3. ಮೂಡ್‌ಸ್ವಿಂಗ್ಸ್

ಹದಿಹರೆಯದವರಲ್ಲಿ ಮೂಡ್‌ಸ್ವಿಂಗ್ಸ್‌ ಸಾಮಾನ್ಯ. ಯಾಕೆಂದರೆ ಅವರ ದೇಹದಲ್ಲಿ ಆಗುತ್ತಿರುವ ಹಾರ್ಮೋನ್‌ಗಳ ಏರುಪೇರು. ಕೆಲವೊಂದು ಸಮಯದಲ್ಲಿ ಸಂತೋಷವಾಗಿದ್ದರೆ ಕೆಲವೊಂಸು ಸಮಯದಲ್ಲಿ ಏನೋ ಕಳೆದುಕೊಂಡವರಂತೆ ಕೂರಬಹುದು. ಕೆಲವೊಮ್ಮೆ ಮೂಡ್‌ಸ್ವಿಂಗ್ಸ್‌ ಖಿನ್ನತೆಯಾಗಿಯೂ ಬದಲಾಗಬಹುದು. ಈ ಬಗ್ಗೆ ಪೋಷಕರು ಗಮನ ಹರಿಸಿ. ಅವರ ಕೋಪ, ಮನೋಸ್ಥಿತಿಯಲ್ಲಿನ ಬದಲಾವಣೆ ಮತ್ತು ಖಿನ್ನತೆಯ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಿ. ಅವರ ಈ ಮೂಡ್‌ಸ್ವಿಂಗ್‌ಗಳಿಗೆ ಪ್ರಭಾವ ಬೀರುವ ಅಂಶವನ್ನು ಗುರುತಿಸಿ.

ಮಕ್ಕಳ ಮನೋಸ್ಥಿತಿ ಸರಿಯಿಲ್ಲದಿದ್ದಾಗ ನಾವು ಕೂಡಾ ಅವರಂತೆಯೇ ವರ್ತಿಸುವುದು ಅವರ ಮೇಲೆ ಕೂಗಾಡುವುದರಿಂದ ಅವರ ಮನೋಸ್ಥಿತಿ ಇನ್ನಷ್ಟು ಕೆಡಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಮಗ/ ಮಗಳು ಅತಿಯಾಗಿ ಆಡುತ್ತಿದ್ದಾರೆ ಎಂದು ನೀವಂದುಕೊಂಡರೆ ಅದು ತಪ್ಪು. ಅವರಿಗೆ ಸಲಹೆ ನೀಡುವುದಾಗಲಿ, ಅಥವಾ ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವನ್ನು ಮಾಡಬೇಡಿ. ಅವರ ಮಾತುಗಳನ್ನು ತಳ್ಳಿ ಹಾಕುವ ಬದಲು, ತಾಳ್ಮೆಯಿಂದ ಅವರ ಮಾತುಗಳನ್ನು ಆಲಿಸಿ, ಸಹಾನುಭೂತಿ ವ್ಯಕ್ತಪಡಿಸಿ. ಅವರಿಗೆ ಮುಕ್ತವಾಗಿ ನಿಮ್ಮೊಂದಿಗೆ ಮಾತನಾಡಲು ಅವಕಾಶ ನೀಡಿ. ಹೆಚ್ಚಿನ ಪೋಷಕರು ಮಕ್ಕಳು ಅತಿಯಾಗಿ ಆಡುತ್ತಿದ್ದಾರೆ ಎಂದಾಗ ಅವರ ಸಮಸ್ಯೆಗಳನ್ನು ಕೇಳದೇ ಒಂದೇ ಸಮನೆ ಮಾತನಾಡುತ್ತಾರೆ. ಆದರೆ ಈ ರೀತಿ ಮಾಡಬೇಡಿ. ಮಕ್ಕಳಿಗೆ ಮಾನಸಿಕ ಸಾಂತ್ವಾನದ ಅಗತ್ಯವಿದೆ ಎನಿಸಿದಾಗ ಕೌನ್ಸಿಲಿಂಗ್‌ ಮಾಡಿಸಿ ಅಥವಾ ನೀವೆ ಅವರ ಮಾತುಗಳನ್ನು ಆಲಿಸಿ ಪರಿಹಾರ ನೀಡಿ.

4. ಆಕ್ರಮಣಶೀಲತೆ

ಹದಿಹರೆಯದ ಮಕ್ಕಳು ಆಗಾಗ ಕಾರಣವಿಲ್ಲದೇ ಕೋಪಗೊಳ್ಳಬಹುದು. ರೇಗಾಡಬಹುದು. ಚಿಕ್ಕವರಿದ್ದಾಗ ಮಾಡಿದ ಹಠಕ್ಕಿಂತ ಹೆಚ್ಚಾಗಿ ವಯಸ್ಸಿಗೆ ಬಂದಾಗ ಹೆಚ್ಚು ನಿಮ್ಮೊಂದಿಗೆ ವಾಗ್ವಾದಕ್ಕಿಳಿಯಬಹುದು. ಕೋಪವು ಮನುಷ್ಯನ ಸಹಜ ಗುಣ ಎನ್ನುವುದನ್ನು ತಿಳಿದುಕೊಳ್ಳಿ. ಅವರು ತಮ್ಮ ಕೋಪವನ್ನು ನಿಯಂತ್ರಿಸದಿದ್ದರೆ ಆಕ್ರಮಣಕಾರಿಯಾಗಿ ಬದಲಾಗಬಹುದು. ಹಿಂಸೆಗೂ ಕಾರಣವಾಗಬಹುದ. ಇದು ಅವರಿಗೆ ಮಾತ್ರವಲ್ಲ ಇತರರಿಗೂ ಅಪಾಯ. ಇತ್ತೀಚೆಗೆ ಹೆಚ್ಚು ಹದಿಹರೆಯದವರೇ ಕೋಪದಿಂದ ಇತರರಿಗೆ ಹಿಂಸೆ ಮಾಡುವುದೋ, ಅಥವಾ ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ.

ಮಕ್ಕಳು ರೇಗಾಡುತ್ತಿದ್ದಾರೆ ಎಂದು ನೀವೂ ಅವರ ಮೇಲೆ ಕೂಗಾಡಲು ಹೋಗಬೇಡಿ. ಅವರನ್ನು ಗೆಲ್ಲುವ ಮನೋಭಾವ ಬಿಡಿ. ಯಾಕೆಂದರೆ ಅದರಿಂದ ಏನೂ ಉಪಯೋಗವಾಗದು. ನೀವು ಅವರ ಮಾತುಗಳನ್ನು ಪರಿಗಣಿಸದೇ ಮೂಲೆಗೆ ತಳ್ಳಿದಾಗ ಅವರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದಾಗ ಅವರಿನ್ನೂ ಅಪಾಯಕಾರಿಯಾಗಿ ಬದಲಾಗಬಲ್ಲರು.

5. ಸುಳ್ಳು ಹೇಳುವುದು, ಸತ್ಯವನ್ನು ಮರೆಮಾಚುವುದು

ಕೆಲವು ಹದಿಹರೆಯಕ್ಕೆ ಬಂದ ಮಕ್ಕಳಲ್ಲಿ ತಾವೇಕೆ ತಂದೆ ತಾಯಿಯಲ್ಲಿ ಎಲ್ಲವನ್ನೂ ಹೇಳಬೇಕು ಎನ್ನುವ ಮನೋಭಾವವಿರುತ್ತದೆ. ತಾವು ತಪ್ಪು ಮಾಡಿದ್ದು ಹೇಳಿದರೆ ಎಲ್ಲಿ ಬೈಯುತ್ತಾರೋ ಹೊಡೆದುಬಿಡುತ್ತಾರೋ ಎನ್ನುವ ಭಯವಿರುತ್ತೆ. ಇದೇ ಅವರಿಗೆ ಸುಳ್ಳು ಹೇಳಲು ಕಾರಣವಾಗುತ್ತದೆ. ನಿಮ್ಮ ಪ್ರತಿಕ್ರಿಯೆಯ ಭಯವು ಮಕ್ಕಳಲ್ಲಿ ತಪ್ಪನ್ನು ಮರೆಮಾಡುವ ಬುದ್ಧಿಯನ್ನು ಬೆಳೆಸಬಹುದು. ಇದನ್ನು ತಪ್ಪಿಸಬೇಕೆಂದರೆ ಮಕ್ಕಳೊಂದಿಗೆ ಸ್ನೇಹಿತರಂತಿರಿ.

ಮಕ್ಕಳ ಪ್ರಾಮಾಣಿಕತೆಯನ್ನು ಪ್ರಶಂಸುವುದನ್ನು ಕಲಿಯಿರಿ. ತಪ್ಪು ಮಾಡಿದಾಗ ಬೈಯುವುದನ್ನು ಬಿಟ್ಟು, ಮೃದುವಾಗಿಯೇ ತಿಳಿ ಹೇಳಿ. ಎಲ್ಲವನ್ನೂ ಮಕ್ಕಳು ಹಿಂಜರಿಕೆಯಿಲ್ಲದೇ ಹೇಳಬೇಕೆಂದರೆ ನೀವೂ ಅವರಂತೆಯೇ ಇರಿ. ಅಂದರೆ ನೀವು ಮಕ್ಕಳೊಂದಿಗೆ ಪ್ರಾಮಾಣಿಕವಾಗಿರಿ. ಅವರ ನ್ಯೂನ್ಯತೆಗಳನ್ನು ಎತ್ತಿ ತೋರಿಸಿ ಅವಮಾನ ಮಾಡಬೇಡಿ. ಮಕ್ಕಳು ಇನ್ನಷ್ಟು ಕುಗ್ಗಬಹುದು. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲೂ ಭಯಪಡಬಹುದು.

6. ನಿಯಮಗಳನ್ನು ಧಿಕ್ಕರಿಸುವುದು ವಾದ ಮಾಡುವುದು

ಹದಿಹರೆಯವೆಂದರೆ ಬಿಸಿರಕ್ತದ ವಯಸ್ಸು. ನೀವು ಹೇಳಿದ್ದನ್ನೇ ಅವರು ಮಾಡಲಾರರು. ನೀವು ಹೇಳಿದಂತೆ ಯಾಕೆ ಕೇಳಬೇಕು ಎಂದು ಅವರ ಒಳಮನಸ್ಸು ಪ್ರಶ್ನೆ ಮಾಡುತ್ತದೆ. ನಿಮ್ಮ ಮಾತುಗಳನ್ನು ಕೇಳದಿದ್ದಾಗ, ವಾದ ಮಾಡಿದಾಗ ನೀವು ಹಿಟ್ಲರ್ ಆಗಬೇಡಿ. ಮಕ್ಕಳೊಂದಿಗಿನ ವಾದ ವ್ಯರ್ಥವಾದುದು. ಅದು ಅವರಲ್ಲಿ ಇನ್ನಷ್ಟು ಹೆಚ್ಚು ಹಠಮಾರಿತನವನ್ನು ಬೆಳೆಸಬಹುದು. ನಿಮ್ಮ ಮಾತುಗಳನ್ನು ಕೇಳಲು ನಿರಾಕರಿಸಬಹುದು. ಬೇಕಾಬಿಟ್ಟಿ ವರ್ತನೆ ಅವರ ಗೊಂದಲಯುಕ್ತ ಮನಸ್ಸಿನ ಅಭಿವ್ಯಕ್ತಿ ಆಗಿರಬಹುದು. ಈ ರೀತಿ ಆದಾಗ ಅವರಿಗೆ ಮುನ್ನಡೆಸುವ ಮಾರ್ಗದರ್ಶಕರ ಅಗತ್ಯವಿರುತ್ತದೆ

ಅವರ ಮಾತುಗಳನ್ನು ನಿಯಂತ್ರಿಸಲು ಅವರಿಗೆ ಮಿತಿಗಳ ಅಗತ್ಯವಿರುತ್ತದೆ. ಮಕ್ಕಳ ವರ್ತನೆಗೆ ಕಡಿವಾಣ ಹಾಕಲು ನೀವು ನಿಯಮಗಳನ್ನು ಹೇರಬಹುದು. ಆದರೆ ಆ ನಿಯಮಗಳ ಬಗ್ಗೆ ಸ್ಪಷ್ಟವಾಗಿರಿ. ಅವರು ನಿಯಮಗಳನ್ನು ಉಲ್ಲಂಘಿಸಿದರೆ ಅದರ ಪರಿಣಾಮಗಳನ್ನು ವಿವರಿಸಿ. ನಿಮ್ಮ ನಿಮಯಗಳ ಬಗ್ಗೆ ನೀವು ಗಂಭೀರವಾಗಿರುತ್ತೀರಿ ಎನ್ನುವುದು ಅವರಿಗೂ ತಿಳಿಯುತ್ತದೆ. ಮತ್ತು ಅವರಲ್ಲಿ ಶಿಸ್ತನ್ನೂ ಮೂಡಿಸುತ್ತದೆ. ಹದಿಹರೆಯದಲ್ಲಿ ಹೆಚ್ಚಾಗಿ ಮಕ್ಕಳು ಸ್ವತಂತ್ರವಾಗಿರಲು ಬಯಸುತ್ತಾರೆ, ನಿಮ್ಮ ನಿರ್ಬಂಧಗಳು ಅವರನ್ನು ಕಟ್ಟಿಹಾಕಿದಂತೆ ಆಗಬಹುದು. ಆದರೆ ಅವರು ಮಿತಿಯನ್ನು ಮೀರಿ ಹೋದರೆ ಮುಂದಿನ ಪರಿಣಾಮವೇನಾಗಬಹುದೆಂದು ಅವರೇ ಊಹಿಸುತ್ತಾರೆ. ಆದಷ್ಟು ಅವರ ಮಾತುಗಳನ್ನು ವೈಕ್ತಿಕವಾಗಿ ಮನಸ್ಸಿಗೆ ಹಚ್ಚಿಕೊಳ್ಳಲು ಹೋಗಬೆಡಿ ಹಾಗೂ ಅವರಾಡಿದ ಮಾತುಗಳನ್ನು ಪದೇ ಪದೇ ಹೇಳಿ ಮುಜುಗರವಾಗುವಂತೆ ಮಾಡಬೇಡಿ.

7. ಕಡಿಮೆಯಾದ ಮಾತು

ಚಿಕ್ಕವರಿದ್ದಾಗ ನಿಮ್ಮ ಸೆರಗಿನಲ್ಲಿಯೇ ಜೋತಾಡುತ್ತಿದ್ದ ಮಗ/ಮಗಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮಾತು ಕಡಿಮೆ ಮಾಡಬಹುದು. ಮೊದಲಿನಷ್ಟು ನಿಮ್ಮೊಂದಿಗೆ ಮಾತನಾಡದೇ ಇರಬಹುದು, ನಿಮ್ಮೊಂದಿಗೆ ಏನೂ ಶೇರ್‌ ಮಾಡದೆಯೂ ಇರಬಹುದು. ನಿಮ್ಮ ಮಕ್ಕಳ ದಿನದ ಅಪ್ಡೇಟ್‌ ನೀವು ಕೇಳಲು ಬಯಸಬಹುದು. ಆದರೆ ಅವರಿಗೆ ಹೇಳಲು ಇಷ್ಟವಿಲ್ಲದಿರಬಹುದು. ನೀವು ಬಲವಂತವಾಗಿ ಕೇಳಿದರೆ ಏನೋ ಸುಮ್ಮನೆ ಕಥೆ ಕಟ್ಟಬಹುದು.

ಮಕ್ಕಳು ದೊಡ್ಡವರಾದಂತೆ ನಿಮ್ಮೊಂದಿಗೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಹಾಗೂ ಹೇಳಬೇಕೆಂದರೆ ಮೊದಲೇ ಹೇಳಿದಂತೆ ಅವರೊಮದಿಗೆ ಸ್ನೇಹಿತರಂತಿರಿ. ಅವರ ಜೀವನದಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆಅವರು ನಿಮಗೆ ತಿಳಿಸುವಂತೆ ಮಾಡಿ. ನೀವೂ ನಿಮ್ಮ ದಿನದ ಬಗ್ಗೆ, ನಿಮ್ಮ ಅನುಭವಗಳನ್ನು ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಅವರ ಜೀವನದಲ್ಲಿ ಸಂತೋಷವಾಗಿದ್ದಾರೆಯೇ ಎನ್ನುವುದನ್ನು ನೀವು ಅವರಿಂದ ತಿಳಿದುಕೊಳ್ಳಲು ಬಯಸುತ್ತೀರಿ ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಂಡಾಗ ನಿಮ್ಮೊಂದಿಗೆ ಮಾತನಾಡಬಹುದು.
ಮಕ್ಕಳು ಖಿನ್ನತೆಗೆ ಒಳಗಾಗಿದ್ದರೆ, ಏನಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವರಿಗೆ ಮಾನಸಿಕ ಬೆಂಬಲವನ್ನು ನೀಡಿ. ಅವರಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಕಾರಣವೇನು ಎನ್ನುವುದನ್ನು ಅವರಿಗೆ ತಿಳಿಸಲು ಕಷ್ಟವಾಗುತ್ತಿದ್ದಲ್ಲಿ ನೀವೇ ಅವರೊಂದಿಗೆ ಮಾತನ್ನು ಆರಂಭಿಸಿ, ಅವರು ಸಲೀಸಾಗಿ, ಮುಜುಗರ ಬಿಟ್ಟು ಮಾತನಾಡುವ ವಾತಾವರಣ ಸೃಷ್ಟಿಸಿ.

8. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದು

ಮಕ್ಕಳು ಹದಿಹರೆಯಕ್ಕೆ ಬರುತ್ತಿದ್ದಂತೆ ಸ್ನೇಹಿತರ ಸಂಖ್ಯೆಯೂ ಹೆಚ್ಚಾಗಬಹುದು. ಹೆಚ್ಚಿನ ಮಕ್ಕಳು ಮನೆಯಲ್ಲಿ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ಸ್ನೇಹಿತರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ, ಅವರೊಂದಿಗೆ ಹೊಂದಿಕೊಳ್ಳಲು ಬಯಸುತ್ತಾರೆ. ಆದರೆ ಗಮನಿಸಬೇಕಾದ್ದು ಅವರು ಎಂತಹ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾರೆ ಎನ್ನುವುದು. ಕೆಟ್ಟ ಸ್ನೇಹಿತರ ಸಹವಾಸ ಅವರ ಮೇಲೂ ಋಣಾತ್ಮಕವಾಗಿ ಪರಿಣಾಮ ಬೀರಬಹುದು

ನಿಮ್ಮ ಮಕ್ಕಳ ಸ್ನೇಹಿತರ ಮೇಲ್ನೋಟ ಅಥವಾ ಅವರ ವರ್ತನೆಯನ್ನು ನೀವು ಇಷ್ಟಪಡದಿರಬಹುದು. ಅವರನ್ನು ಕೇವಲ ನೋಡಿ ಅವರ ಬಗ್ಗೆ ನೆಗೆಟಿವ್‌ ಆಗಿ ಅಂದುಕೊಳ್ಳುವುದು ತಪ್ಪು. ನಿಮ್ಮ ಮಕ್ಕಳ ಸ್ನೇಹಿತರನ್ನು ದೂಷಿಸುವ ಮೊದಲು ಅವರನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅವರ ಸ್ನೇಹವು ಕೆಟ್ಟ ಸ್ನೇಹಿತರನ್ನು ಒಳಗೊಂಡಿದೆ ಎನ್ನುವುದನ್ನು ನೀವು ಕಂಡುಕೊಂಡರೆ ನಿಮ್ಮ ಮಕ್ಕಳ ಗಮನಕ್ಕೆ ತರಲು ಪ್ರಯತ್ನಿಸಿ. ನಿಮ್ಮ ಮಕ್ಕಳ ನಿರ್ಧಾರಗಳು ಯಾವಾಗಲೂ ಸರಿಯಾಗಿರುತ್ತದೆ, ಅವರ ಮೇಲೆ ಸಂಪೂರ್ಣ ವಿಶ್ವಾಸ ನಿಮಗಿರುತ್ತದೆ ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಂಡರೆ ಅವರು ನಿಮ್ಮ ಕಾಳಜಿಯನ್ನು ಅಪಾರ್ಥ ಮಾಡಿಕೊಳ್ಳಲಾರರು. ಇದು ಅವರನ್ನು ಸ್ನೇಹಿತರ ಆಯ್ಕೆಯ ವಿಷಯದಲ್ಲಿ ಯೋಚಿಸುವಂತೆಯೂ ಮಾಡಬಹುದು.

ಮೊದಲೇ ಹೇಳಿದಂತೆ ಹದಿಹರೆಯದಲ್ಲಿ ಸ್ವಾತಂತ್ರ್ಯವನ್ನು ಹೆಚ್ಚು ಬಯಸುತ್ತಾರೆ. ಅವರ ಸ್ನೇಹಿತರ ಆಯ್ಕೆ ಅವರ ಅಭಿರುಚಿಗಳಿಗೆ ತಕ್ಕಂತಿರಬಹುದು. ನಿಮ್ಮ ಮಕ್ಕಳ ನಡವಳಿಕೆ ಮೊದಲಿಗಿಂತಲೂ ಬದಲಾಗಿದೆ ಎಂದು ಕಂಡುಬಂದಲ್ಲಿ ಮಕ್ಕಳ ಗಮನಕ್ಕೂ ತನ್ನಿ. ಅವರ ಆ ಬದಲಾವಣೆಗೆ ಕಾರಣವೇನೆಂದು ತಿಳಿದುಕೊಳ್ಳಿ. ಹದಿಹರೆಯದ ಮನಸ್ಸು ಚಂಚಲವಾದದ್ದು ಆಕರ್ಷಣೆಗಳಿಗೆ ಹೆಚ್ಚು ವಾಲುತ್ತದೆ. ಅದರ ಬಗ್ಗೆ ನಿಯಂತ್ರಣವಿರಿಸಿಕೊಳ್ಳುವುದು, ಮಕ್ಕಳು ಸರಿಯಾದ ಸಿಕ್ಕಿನಲ್ಲಿ ನಡೆಯುವಂತೆ ಮಾಡುವುದು ಪೋಷಕರ ಜವಾಬ್ದಾರಿಯೂ ಹೌದು. ಕರ್ತವ್ಯವೂ ಹೌದು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಬಿ ಎಸ್

Leave a Reply

Your email address will not be published. Required fields are marked *