January 18, 2025
sridevi_1

ಸುಮಾರು ಹತ್ತು ವರ್ಷಗಳ ಕಾಲ ಭಾರತೀಯ ಚಿತ್ರರಂಗದ ಅನಭಿಷಕ್ತ ರಾಣಿಯಂತೆ ಮೆರೆದ,ತನ್ನ ಮೋಹಕ ಚೆಲುವಿನಿಂದ ಪಡ್ಡೆಗಳ ನಿದ್ದೆಗೆಡಿಸಿ,ಹಿಂದಿ ಚಿತ್ರರಂಗವನ್ನು ತನ್ನ ನಟನಾಚಾತುರ್ಯ,ಅಪ್ರತಿಮ ಚೆಲುವಿನಿಂದ ಅಕ್ಷರಶಃ ಆಳಿದ ಪಂಚಭಾಷಾ ತಾರೆ ಶ್ರೀದೇವಿ ಇನ್ನು ನೆನಪು ಮಾತ್ರ.

ಫೆಬ್ರವರಿ 24 ರಂದು ದುಬೈನಲ್ಲಿ ತಮ್ಮ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ಪತಿ ಶ್ರೀ ಭೋನಿ ಕಪೂರ್ ಮಗಳು ಖುಷಿಯೊಂದಿಗೆ ತೆರಳಿದ್ದ ಶ್ರೀದೇವಿ ದುಬೈ ಕಾಲಮಾನ ರಾತ್ರಿ 11:30 ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೊಳಗಾಗಿ ತಮ್ಮ ಕೊನೆಯುಸಿರು ಚೆಲ್ಲಿದರು. ತಮಿಳುನಾಡಿನ ಶಿವಕಾಶಿಯ ಅಯ್ಯಪ್ಪನ್ ಮತ್ತು ರಾಜೇಶ್ವರಿ ದಂಪತಿಗಳಿಗೆ 1963 ರ ಆಗಸ್ಟ್ 13 ರಂದು ಜನಿಸಿದ ಶ್ರೀದೇವಿ ಭಾರತೀಯ ಚಿತ್ರರಂಗದಲ್ಲಿ ದೃವತಾರೆಯಂತೆ ಮಿನುಗಿದ ಕಥೆ ಅಷ್ಟೇ ರೋಚಕವಾಗಿದೆ.ತನ್ನ ನಾಲ್ಕನೆಯ ವರ್ಷದಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಆಕೆ ಹಲವಾರು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು.ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ ಆಕೆ ಗಮನ ಸೆಳೆದಿದ್ದು ಭಕ್ತಕುಂಬಾರ ಚಿತ್ರದ ಭಕ್ತೆ ಮುಕ್ತಾಬಾಯಿ ಪಾತ್ರದಲ್ಲಿ.ರಜನೀಕಾಂತ್ ಅಂಬರೀಷ್ ರೊಂದಿಗೆ ನಟಿಸಿದ ಪ್ರಿಯಾ ಚಿತ್ರ ಅವರ ಕನ್ನಡದ ಕೊನೆಯ ಚಿತ್ರವಾಯಿತು.

ತಮಿಳಿನಲ್ಲಿ ಕಮಲ್ ಹಾಸನ್, ರಜನೀಕಾಂತ್ ರಂತಹ ದಿಗ್ಗಜರೊಂದಿಗೆ ನಟಿಸಿದ ಮೂಂಡ್ರಾ ಮುಡಿಪ್ಪು,ಪದಿನಾರು ವಯದಿನಿಲೆ,ಸಿಗಪ್ಪು ರೋಜಾಕ್ಕಳ್,ಮೂನ್ರಾಂಪಿರೈ ಸೂಪರ್ ಹಿಟ್ ಚಿತ್ರಗಳಾದವು.ತೆಲುಗಿನಲ್ಲಿ ಎನ್.ಟಿ.ಆರ್, ಚಿರಂಜೀವಿ, ಕೃಷ್ಣಾ,ವೆಂಕಟೇಶ್, ನಾಗಾರ್ಜುನರೊಂದಿಗೆ ನಟಿಸಿದ ಪ್ರೇಮಾಭಿಷೇಕಂ,ಆಖರೀ ಪೋರಾಟಂ,ಜಗದೇಕ ವೀರುಡು ಅತಿಲೋಕ ಸುಂದರಿ,ಕ್ಷಣಂಕ್ಷಣಂ ಎಲ್ಲಾ ಯಶಸ್ವೀ ಚಿತ್ರಗಳೇ.ಅದಾಗಲೇ ಶ್ರೀದೇವಿಯ ಚೆಲುವಿಗೆ ಅಭಿನಯಕ್ಕೆ ಮಾರುಹೋಗಿದ್ದ ಬಾಲಿವುಡ್ ಅವರನ್ನು ಕೈ ಬೀಸಿ ಕರೆಯಿತು.ಹಿಂದಿಯಲ್ಲಿ ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ಕೊಟ್ಟು ಅತೀ ಬೇಡಿಕೆಯ ನಾಯಕಿ ನಟಿಯಾದರು.ಆಗಿನ ಕಾಲದ ನಾಯಕ ನಟರಾದ ರಿಷಿಕಪೂರ್,ಮಿಥುನ್ ಚಕ್ರವರ್ತಿ, ಅನಿಲ್ ಕಪೂರ್, ಗೋವಿಂದ,ಧರ್ಮೇಂದ್ರ, ಅಮಿತಾಬ್,ವಿನೋದ್ ಖನ್ಮಾ,ರಾಜೇಶ್ ಖನ್ನಾ ಎಲ್ಲಾ ವಯೋಮಾನದ ನಾಯಕರಿಗೂ ಸರಿಸಾಟಿಯಾಗಿ ಅಭಿನಯಿಸಿದರು.ಜಯಪ್ರದ,ಪದ್ಮಿನಿ ಕೊಲ್ಹಾಪುರೆ,ರೇಖಾ,ಮೀನಾಕ್ಷಿ ಶೇಷಾದ್ರಿ ಮುಂತಾದ ಅತೀ ಪ್ರತಿಭಾವಂತ ನಟಿಯರೊಂದಿಗೆ ಆರೋಗ್ಯಕರ ಪೈಪೋಟಿ ನೀಡುತ್ತಾ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ಚಿತ್ರರಸಿಕರ ಮನ ಗೆದ್ದರು.ಕೇವಲ ನಾಯಕ ಕೇಂದ್ರಿತವಾಗಿದ್ದ ಚಿತ್ರರಂಗವನ್ನು ನಾಯಕಿಯಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡರು.ಹಿಂದಿಯಲ್ಲಿ ಚಾಂದನಿ,ಸದ್ಮಾ,ನಗೀನ,ತೋಫಾ,ಚಾಲ್ಬಾಝ್,ಖುದಾಗವಾ,ಮಿಸ್ಟರ್ ಇಂಡಿಯಾ, ಲಾಡ್ಲಾ,ಜುದಾಯಿ,ಕರ್ಮಾ ಹೀಗೆ ಒಂದೊಂದೂ ಅವಿಸ್ಮರಣೀಯ ಚಿತ್ರಗಳು.ಚಾಂದನಿ ಚಿತ್ರದಲ್ಲಿನ ಅವರ ಸೌಂದರ್ಯ, ಮಿಸ್ಟರ್ ಇಂಡಿಯಾ ಚಿತ್ರದಲ್ಲಿನ ಅವರ ಬಬ್ಲಿ ಬಬ್ಲಿ ನಟನೆ,ಸದ್ಮಾ ಚಿತ್ರದ ಬುದ್ದಿಮಾಂದ್ಯೆಯ ಅಭಿನಯ,ತೋಫಾ ಚಿತ್ರದ,ನಾಗಿನ್ ಚಿತ್ರದ ನೃತ್ಯಗಳು ಇವೆಲ್ಲಾ ಚಿತ್ರರಸಿಕರನ್ನು ತುಂಬಾ ದಿನಗಳವರೆಗೆ ಕಾಡಿದ ಗುಂಗುಗಳು.ಐದು ಫಿಲ್ಮ್ ಫೇರ್ ಪ್ರಶಸ್ತಿಗಳು ಮತ್ತು ಅದಕ್ಕೆ ಗರಿಯೆಂಬಂತೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ಅವರ ನಟನೆಗೆ ಒಲಿದುಬಂದ ಪಾರಿತೋಷಕಗಳು.

 


ಹಾಗೆಯೇ ಗಾಸಿಪ್ ಗಳಿಗೂ ಏನೂ ಕೊರತೆಯಿರಲಿಲ್ಲ.ಹಲವಾರು ನಟರೊಂದಿಗೆ ಇವರ ಹೆಸರನ್ನು ತಳುಕು ಹಾಕಿ ಗಾಸಿಪ್ ಮಾಡಲಾಯಿತು, ಅನಿಲ್ ಕಪೂರ್, ಮಿಥುನ್ ಚಕ್ರವರ್ತಿ, ಜಿತೇಂದ್ರ ಹಲವರ ಹೆಸರು ಕೇಳಿ ಬಂದರೂ ಕೊನೆಗೆ 1996 ರಲ್ಲಿ ನಿರ್ಮಾಪಕ ಬೋನಿ ಕಪೂರ್ ರನ್ನು ಮದುವೆಯಾಗಿ ಜಾಹ್ನವಿ ಮತ್ತು ಖುಷಿ ಎಂಬೆರಡು ಹೆಣ್ಣು ಮಕ್ಕಳಿಗೆ ತಾಯಿಯಾಗಿ ಸಂತೃಪ್ತ ಜೀವನ ನಡೆಸುತ್ತಿದ್ದರು.2012 ರಲ್ಲಿ ಮತ್ತೆ ಬಣ್ಣ ಹಚ್ಚಿ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು.54 ರ ಇಳಿ ವಯಸ್ಸಿನಲ್ಲಿಯೂ ಬಳುಕುವ ಬಳ್ಳಿಯಂತೆ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದ ಅವರು ಇಷ್ಟು ಬೇಗ ಮರೆಯಾಗಿ ಹೋಗಬಹುದೆಂಬ ಸಣ್ಣ ಸಂದೇಹವೂ ಯಾರಿಗೂ ಇರಲಿಲ್ಲ.ಆದರೆ ವಿಧಿಯಾಟವೇ ವಿಚಿತ್ರ,
ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಸಿಕರನ್ನು,ಅಭಿಮಾನಿಗಳನ್ನು ಮನರಂಜಿಸಿ ತಮ್ಮ ಕರ್ತವ್ಯಗಳನ್ನು ಪೂರೈಸಿ ತೆರೆಮರೆಗೆ ಸರಿದ ಮೋಹಕ ಚೆಲುವಿನ ಅಭಿನೇತ್ರಿಗೆ ಭಂಡಾರಿವಾರ್ತೆಯಿಂದ ಒಂದು ಶುಭ ವಿದಾಯ ಹೇಳೋಣವೇ…

ಕಾಟೇ ನಹೀ ಕಟ್ ತೇ ಯೇ ದಿನ್ ಯೇ ರಾತ್…
ಕಹ್ನೀ ಥೀ ತುಮ್ ಸೇ ಮೈ ಯೇ ದಿಲ್ ಕೀ ಬಾತ್…
ಲೋ ಆಜ್ ಮೈ ಕೆಹತಾ ಹ್ಞೂಂ…..
ಐ ಲವ್ ಯೂ…..
ಐ ಲವ್ ಯೂ…….

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *