ಕಲಾಕ್ಷೇತ್ರ ಎನ್ನುವುದು ಎಲ್ಲರನ್ನೂ ಕೈ ಹಿಡಿಯುವುದಿಲ್ಲ. ಶ್ರದ್ಧೆ, ನಿರಂತರ ಶ್ರಮದಿಂದ ಶಾರದೆಯನ್ನು ಒಲಿಸಿಕೊಂಡರೆ ಎಂದಿಗೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಇದೀಗ ಭಂಡಾರಿ ಪ್ರತಿಭೆಯೊಬ್ಬ ಕಲಾಕ್ಷೇತ್ರದಲ್ಲಿ ತೊಡಗಿಕೊಂಡು ಸಾಧನೆಯ ಪಥದತ್ತ ಮುಂದಡಿಯಿಟ್ಟದ್ದಾರೆ. ಅದರಲ್ಲೂ ಚಿತ್ರರಂಗವೆಂಬ ಬಣ್ಣದ ಲೋಕದತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಅವರ ಸಾಧನೆಯ ಹಾದಿಯ ಚಿತ್ರಣ ಇಲ್ಲಿದೆ…
ಡ್ಯಾನ್ಸ್ ಅಂದ್ರೆ ಇಷ್ಟ… ಹಾಡು ಅಂದ್ರೆ ಪ್ರಾಣ… ಛಾಯಾಗ್ರಹಣ ಇವರ ಹವ್ಯಾಸ… ಇದರ ಜೊತೆಗೆ ಚಿತ್ರಕಲೆ, ಸಾಹಿತ್ಯ ರಚನೆ, ಸಂಗೀತ ಸಂಯೋಜನೆ, ಕವನ ರಚನೆ, ಮಿಮಿಕ್ರಿ, ನಿರ್ದೇಶನ, ನಟನೆಯಲ್ಲೂ ಎತ್ತಿದ ಕೈ.
ಇವೆಲ್ಲವೂ ಉಜಿರೆಯ ದೀಕ್ಷಿತ್ ಭಂಡಾರಿ ಎಂಬ ಬಹುಮುಖ ಪ್ರತಿಭೆಯಲ್ಲಿ ಅಡಗಿರುವ ಕಲೆ. ಶಾಲಾ ದಿನಗಳಿಂದಲೂ ನಾಟಕ, ನೃತ್ಯ, ಭಾಷಣ, ಮಿಮಿಕ್ರಿ, ಏಕಪಾತ್ರಾಭಿನಯಗಳಲ್ಲಿ ಅಭಿನಯಿಸುತ್ತಿದ್ದ ಇವರಿಗೆ ಇಂದು ಈ ಪ್ರತಿಭೆಗಳೇ ಕೈ ಹಿಡಿದಿವೆ. ಈಗಾಗಲೇ ಕಿರುಚಿತ್ರ ಹಾಗೂ ಶೀಘ್ರದಲ್ಲೇ ತೆರೆಕಾಣಲಿರುವ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಿರುವ ಇವರು ಅವನಿ ಎಂಬ ಕನ್ನಡ ಕಿರುಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಈ ಕಿರುಚಿತ್ರದಲ್ಲಿ ಸಾಹಿತ್ಯ, ಸಂಗೀತ ಸಂಯೋಜನೆಯ ಜೊತೆಗೆ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಇನ್ನೂ 3 ಕಿರುಚಿತ್ರಗಳು ಇವರ ಕೈಯಲಿದ್ದು, ಶೀಘ್ರವೇ ಹಾಡಿನ ಆಲ್ಬಂವೊಂದನ್ನು ಹೊರತರುವ ಪ್ರಯತ್ನದಲ್ಲಿದ್ದಾರೆ. ಒಂದು ಹಾಡಿನ ಆಲ್ಬಂ ಈಗಾಗಲೇ ಯೂಟ್ಯೂಬ್ ಲ್ಲಿ ರಿಲೀಸ್ ಆಗಿದೆ. ಈಗಾಗಲೇ ಹಲವು ನೃತ್ಯ ತಂಡಗಳಿಗೆ ಇವರು ನೃತ್ಯ ಸಂಯೋಜನೆ ಮಾಡಿದ್ದು, ಶಾಲಾ ದಿನಗಳಿಂದಲೇ ಜಿಲ್ಲೆಯ ಹಲವೆಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಹಲವು ಶಾಲಾ, ಕಾಲೇಜುಗಳ ವಾರ್ಷಿಕೋತ್ಸವಕ್ಕೂ ನೃತ್ಯ ಸಂಯೋಜನೆ ಮಾಡಿರುವ ಇವರು ಹಾಡು, ನೃತ್ಯ, ನಟನೆಯಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಮನೆಯವರ ಬೆಂಬಲ, ಸಾಧಿಸಬೇಕೆಂಬ ಹಂಬಲ
ಉಜಿರೆಯ ನಿನ್ನಿಕಲ್ಲು ನಿವಾಸಿಗಳಾದ ವಸಂತ ಭಂಡಾರಿ ಹಾಗೂ ಮೋಹಿನಿ ವಿ.ಭಂಡಾರಿ ದಂಪತಿಗಳ ಪುತ್ರನಾಗಿರುವ ಇವರು ಖಾಸಗಿ ವಾಹಿನಿಯ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿವ್ಯ ಉಜಿರೆ ಹಾಗೂ ಬೆಂಗಳೂರಿನ ಹೆಸರಾಂತ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವ್ಯ ಅವರ ಸಹೋದರ. ಮನೆಯವರ ಬೆಂಬಲ, ಜೊತೆಗೆ ಸಾಧಿಸಬೇಕೆಂಬ ಹಂಬಲ ಇವರನ್ನು ಇಂದು ಯಶಸ್ಸಿನ ಹಾದಿಗೆ ಕರೆತಂದಿದೆ. ಈಗಾಗಲೇ ಭಂಡಾರಿ ಕಿಚನ್, ಭಂಡಾರಿ ಯೂತ್ ವಾರಿಯರ್ಸ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಲೋಗೋ ಡಿಸೈನ್ ಕೂಡಾ ಮಾಡಿದ್ದಾರೆ.
ಚಿಕ್ಕಂದಿನಿಂದಲೇ ಛಾಯಾಗ್ರಹಣದಲ್ಲಿ ವಿಶೇಷ ಒಲವು ಹೊಂದಿದ್ದ ದೀಕ್ಷಿತ್ ಇಂದು ವೀಡಿಯೋಗ್ರಫಿ, ಶುಭ ಸಮಾರಂಭ, ಮಾಡೆಲ್ ಫೋಟೋಗ್ರಫಿ ಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಜೊತೆಗೆ ಫೋಟೋ ಎಡಿಟಿಂಗ್ ನಲ್ಲೂ ವಿಶೇಷ ಆಸಕ್ತಿ ಹೊಂದಿರುವ ಇವರ ಕೈಯಲ್ಲಿ ಹಲವು ಫೋಟೋಗಳು ಇನ್ನೂ ಸುಂದರವಾಗಿ ಮೂಡಿ ಬಂದಿವೆ. ಇವರ ನಿರ್ದೇಶನದ ಅವನಿ ಕನ್ನಡ ಕಿರುಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿರುವುದರ ಜೊತೆಗೆ ಜನ ಮೆಚ್ಚುಗೆ ಗಳಿಸಿದೆ. ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಅನ್ನೋದು ನಮ್ಮ ಹಾರೈಕೆ.
-ವೈಶು ಭಂಡಾರಿ ಮಿಜಾರು.