ದೀಪಾವಳಿ ಎಂದರೆ ಏನೋ ಸಂಭ್ರಮ. ಸುತ್ತಮುತ್ತಲೂ ಪಟಾಕಿಗಳ ಸದ್ದು ಗದ್ದಲ. ಎಲ್ಲೆಲ್ಲೂ ದೀಪಗಳ ಬೆಳಕು. ಕತ್ತಲೆಯ ಅಂಧಕಾರವು ತೊಲಗಿ, ಬೆಳಕು ಪ್ರಜ್ವಲಿಸುತ್ತಾ ಇರುವಾಗ ಮನದಲ್ಲಿರುವ ಜಡತ್ವ ಹೋಗಿ ಉಲ್ಲಾಸ ಮೂಡುತ್ತದೆ. ಮನಸ್ಸು ನವಿಲಿನಂತೆ ಗರಿಗೆದರಿ ನರ್ತಿಸುತ್ತದೆ. ಬಗೆ ಬಗೆಯ ಪಟಾಕಿಗಳು ಆಕಾಶದೆತ್ತರಕ್ಕೆ ಸಿಡಿದು, ಬಣ್ಣದ ಬೆಳಕನ್ನು ಸುತ್ತಲೂ ಚೆಲ್ಲಿ, ಬೆಳಕಿನ ಕಿಡಿಗಳು ಅಂಬರದಿಂದ ಪ್ರಥ್ವಿಯ ಕಡೆಯ ಬರುವ ಸುಂದರ ನೋಟ ಕಣ್ಣಿಗೆ ಹಬ್ಬವೋ ಹಬ್ಬ. ಈ ಸುಂದರ ನೋಟವನ್ನು ನೋಡಿ ಸಂತಸ ಪಡದ ಹಿರಿಯರಿಲ್ಲ, ಮಕ್ಕಳಿಲ್ಲ. ಎಲ್ಲರಿಗೂ ಖುಷಿ ಕೊಡುತ್ತದೆ. ಆಜಾಗರೂಕತೆಯಿಂದ ಪಟಾಕಿ ಸಿಡಿದು ಎಷ್ಟೋ ಬಾರಿ ಅವಾಂತರವನ್ನೆ ಮಾಡುತ್ತದೆ.
ಸುಮಾರು ನಲವತ್ತು ವರ್ಷಗಳ ಹಿಂದೆ ಹಿಂತಿರುಗಿ ನೋಡಿದಾಗ, ಮನಃಪಟಲದಲ್ಲಿ ಕೆಲವೊಂದು ಘಟನೆಗಳು ಮೂಡಿ ಮರೆಯಾಗುತ್ತದೆ. ಮನೆಯಲ್ಲಿ ತಾಂಡವವಾಡುತ್ತಿರುವ ಬಡತನ…. ಹೊಸ ಬಟ್ಟೆ, ಸಿಹಿ ತರಲು ಕೂಡ ಹಣವಿಲ್ಲ ಅಪ್ಪ ಅಮ್ಮನ ಕೈಯಲ್ಲಿ…. ನೆರೆಹೊರೆಯ ಮನೆಯ ಮಕ್ಕಳು ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮ ಪಡುವಾಗ ನಮ್ಮ ಮನೆ ಮಕ್ಕಳಿಗೆ ಕೊಡಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತಾ, ಮಕ್ಕಳಿಗೆ ನೋವಾಗಬಾರದು ಅಂತ ತಮ್ಮ ಹಳೆ ಸೀರೆಯಿಂದ ಲಂಗ ದಾವಣಿ ಹೊಲಿಸಿ ಕೊಟ್ಟಿದ್ದರು ಅಮ್ಮ. ಆ ಬಟ್ಟೆಯಲ್ಲೂ ಅತ್ಯಂತ ಆನಂದದಿಂದ ದೀಪಾವಳಿ ಆಚರಿಸುತ್ತಿದ್ದೆವು. ಬದಿಯ ಮನೆಯವರು ಹಾರಿಸುವ ದೊಡ್ಡ ದೊಡ್ಡ ಮಾಲೆ ಪಟಾಕಿ, ಮಳೆ, ಅಟಮ್ ಬಾಮ್ ಗಳನ್ನು ಭಯದಿಂದ ನೋಡಿ ಸಂಭ್ರಮ ಪಡುತ್ತಿದ್ದೆವು.
ನರಕಚತುರ್ದಶಿಗೆ ಇನ್ನೇನು ಒಂದು ವಾರ ಇದೆ ಎನ್ನುವಾಗಲೇ ಅಮ್ಮ ಬಿಸಿ ನೀರಿಗೆ ಬೇಕಾದ ತರೆಗೆಲೆ,ತೆಂಗಿನ ಚಿಪ್ಪು ಒಟ್ಟು ಮಾಡುವ ಕೆಲಸ ನನಗೆ ನೀಡುತ್ತಿದ್ದರು. ತಮ್ಮ ತಂಗಿಯರನ್ನು ಕೂಡಿಕೊಂಡು ಸುತ್ತ ಮುತ್ತಲಿನ ಮರದ ಎಲೆಗಳನ್ನು ಗುಡಿಸಿ ತೆಂಗಿನ ಗರಿಯ ತೊಟ್ಟೆಯಲ್ಲಿ (ಬುಟ್ಟಿಯಲ್ಲಿ) ತುಂಬಿಸಿ ಇಡುತ್ತಿದ್ದೆವು. ಚತುರ್ದಶಿಯ ಹಿಂದಿನ ದಿನ, ತಿಕ್ಕಿ ತೊಳೆದ ಬಚ್ಚಲು ಮಡಕೆಗೆ ಶೇಡಿಯಲ್ಲಿ ಚಿತ್ರ ಬರೆದು , ಕಾಟ್ ತೊಂಡೆ ಗಿಡದ ಬಳ್ಳಿಯನ್ನು ಮಡಕೆಯ ಕುತ್ತಿಗೆಗೆ ಕಟ್ಟಿದ ಕೂಡಲೇ, ಅಮ್ಮ ನೀರು ತುಂಬಿಸಲು ಅಣಿ ಮಾಡುವರು. ನೆರೆಮನೆಯ ಭಟ್ಟರ ಮನೆಯವರು ಜಾಗಟೆ ಸದ್ದಿನೊಂದಿಗೆ ನೀರು ತುಂಬಿಸುವ ಕಾರ್ಯಕ್ರಮ ಮಾಡಿದರೆ, ನಮ್ಮ ಮನೆಯಲ್ಲಿ ತಮ್ಮ ಬಡಿಯುವ ಬಟ್ಟಲ ಸದ್ದಿನೊಂದಿಗೆ ನೀರು ತುಂಬಿಸುತ್ತಿದ್ದರು ಅಮ್ಮ….
ಮರುದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಬಿಸಿ ನೀರು ಕಾಯಿಸುವ ಕಾಯಕ ನನಗೆ ಮತ್ತು ತಮ್ಮನಿಗೆ…😊 ಸ್ನಾನ ಮಾಡಿ ಮುಗಿದ ಕೂಡಲೇ 1ಅಥವಾ 2ರೂಪಾಯಿಯ ನಾಣ್ಯ ಬಿಸಿ ನೀರಿನ ಮಡಕೆಯ ಒಳಗೆ ಹಾಕಬೇಕು. ಕೊನೆಗೆ ಸ್ನಾನ ಮಾಡಿದವರಿಗೆ ಆ ನಾಣ್ಯಗಳು ಅಂತ ಅಮ್ಮ ಹೇಳುತ್ತಿದ್ದರು. ಎಲ್ಲಾ ಕೆಲಸ ಮುಗಿದು ಕೊನೆಯ ಸ್ನಾನ ಅಮ್ಮ ಮಾಡುತ್ತಿದ್ದರು. ಆದರೆ ನಾಣ್ಯಗಳನ್ನು ತಂದು ಒಂದು ಡಬ್ಬಕ್ಕೆ ಹಾಕುತ್ತಿದ್ದರು. ಅರ್ಜೆಂಟಾಗಿ ಬೇಕಾಗಬಹುದು ಎಂಬ ದೂರದೃಷ್ಟಿಯಿಂದ…. ಈಗ ಆ ಎಲ್ಲಾ ಸಂಭ್ರಮ ಸೋಲಾರ್ ನ ಬಿಸಿ ನೀರು ಸ್ನಾನ ಮಾಡುವವರಿಗೆ ಎಲ್ಲಿಂದ ಬರಬೇಕು ಹೇಳಿ?
ತೆಂಗಿನಕಾಯಿ, ಬೆಲ್ಲ ಹಾಕಿದ ಅವಲಕ್ಕಿ ಹೊಟ್ಟೆ ತುಂಬಾ ತಿನ್ನುತ್ತಾ, ಕೊನೆಗೆ ಕೈ ನೆಕ್ಕುತ್ತಿದ್ದ ನೆನಪು ಈಗ ನೆನಪು ಮಾತ್ರ. ಯಾಕೆಂದರೆ ಈಗಿನ ಮಕ್ಕಳಿಗೆ ಅವಲಕ್ಕಿ ಅಂದರೆ ಆಗದು. ಮೂಗು ಮುರಿಯುತ್ತಾರೆ. ಆಗ ಬಡತನ ಇದ್ದರೂ ಹಬ್ಬದ ಸಂಭ್ರಮ ಎಲ್ಲರಲ್ಲೂ ಇತ್ತು. ಆದರೆ ಈಗ ಹಬ್ಬ ಅಂದರೆ ಮುಂಚಿನ ಸಂಭ್ರಮವು ಇಲ್ಲ. ತಿಂಡಿಯ ಆಸೆಯೂ ಇಲ್ಲ. ಆಗ ಹಬ್ಬಕ್ಕೆ ಮಾತ್ರ ತಿಂಡಿಗಳನ್ನು ಮಾಡುತ್ತಿದ್ದರು. ಮಕ್ಕಳೆಲ್ಲ ಹಬ್ಬ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ.
ಮೂರು ದಿನದ ಹಬ್ಬದ ಕೊನೆಯ ದಿನ ಬಲಿಪಾಡ್ಯಮಿ. ಬೆಳ್ಳಗ್ಗಿನಿಂದಲೇ ತಯಾರಿ ನಡೆಯುತ್ತದೆ. ನಮ್ಮ ದನದ ಕೊಟ್ಟಿಗೆಯಲ್ಲಿ 4,5 ದನಗಳು. ಅವುಗಳ ಕುತ್ತಿಗೆಗೆ ಮಾಲೆ ಮಾಡಲು, ನೆರೆಯ ಮಕ್ಕಳ ಜೊತೆಗೆ ನಸುಕಿನಲ್ಲೇ ಎದ್ದು ಬೇಲಿ ಬೇಲಿಗೆ ನುಗ್ಗಿ , ಹಳದಿ ಬಣ್ಣದ ಮಿಠಾಯಿ ಹೂ, ಬೆಕ್ಕಿನ ಹಣ್ಣಿನ (ಪುಚ್ಚೆ ಪರ್ದ್ )ಹೂ , ಗೊಂಡೆ ಹೂ ಕೊಯ್ದು ತರುವ ಆ ಸಂಭ್ರಮ. ಎಲ್ಲಾ ದನಗಳನ್ನು ಸ್ನಾನ ಮಾಡಿಸಿ, ಲೋಟದಲ್ಲಿ ಶೇಡಿ ಕಲಸಿ , ಅವುಗಳ ಮೈ ತುಂಬಾ ಚಿತ್ತಾರವನ್ನು ಬಿಡಿಸಿ, ಹಣೆಗೆ ಕುಂಕುಮ ಹಚ್ಚಿ ಹೊರಗೆ ಕಟ್ಟಿದಾಗ ಮನಕ್ಕೆ ಏನೋ ಸಂತಸ. ಅವುಗಳಿಗೂ ಸಂತಸ. ಪುಟ್ಟ ಕರುಗಳು ಹರಸಾಹಸ ಪಟ್ಟು , ಕುತ್ತಿಗೆಯ ಮಾಲೆಯನ್ನು ಎಳೆದು ತಿಂದು ಬಿಟ್ಟರೆ, ಅವುಗಳ ಮುಖದಲ್ಲಿ ವಿಜಯದ ಭಾವ. ಮಣ್ಣಿನ ನೆಲಕ್ಕೆ ಸೆಗಣಿ ಸಾರಿಸಿ, ರಂಗೋಲಿ ಪುಡಿಯಲ್ಲಿ ಚಿತ್ತಾರ ಬಿಡಿಸಿ ದೀಪಗಳನ್ನು ಹಚ್ಚಿ, ಎಷ್ಟು ಹೊತ್ತಿನವರೆಗೆ ಉರಿಯುತ್ತದೆ ಎಂದು ಹೊರಗೆ ನಿಂತು ಕಾಯುತ್ತಿದ್ದ ದಿನ ಇಂದಿಗೂ ಅಚ್ಚಳಿಯದೆ ಮನದಲ್ಲಿ ಉಳಿದಿದೆ. ಬಡತನ ಇದ್ದರೂ ಅಮ್ಮ, ಅವಲಕ್ಕಿ, ಬೆಲ್ಲದ ಗಟ್ಟಿ ಮಾಡಿ ನಮಗೂ, ದನಗಳಿಗೂ ಕೊಡುತ್ತಿದ್ದರು. ದನಗಳಿಗೆ, ಗೊಬ್ಬರ ಮೂಟೆಗೆ (ತುಡರ್)ದೀಪ ತೋರಿಸಿ, ದನ ಕರುಗಳ ಕಾಲಿಗೆ ನಮಸ್ಕರಿಸಿದ ಬಳಿಕ ನಮಗೆ ತಿನ್ನಲು ಕೊಡುತ್ತಿದ್ದರು. ಸುತ್ತುಮುತ್ತಲಿನ ಗದ್ದೆ ಇರುವ ಮನೆಯವರು ಗದ್ದೆಗಳಿಗೆ ತುಡರ್(ಬೆಳಕಿನ ದೊಂದಿ) ತೋರಿಸಿ ವಿಳ್ಯದೆಲೆ, ಅಡಿಕೆ, ಅವಲಕ್ಕಿ, ಹರಳು ಹಾಕಿ ಬಲೀಂದ್ರ ಕರೆದು ಕೂ ಎಂದು ಕೂಗುತ್ತಿದ್ದರು. ಒಂದೆಡೆ ದೀಪಗಳ ಸಾಲುಗಳು, ಪಟಾಕಿಗಳ ಸದ್ದಿನೊಂದಿಗೆ ಬಲಿಪಾಡ್ಯಮಿ ಕಳೆ ಕಟ್ಟುತ್ತಿತ್ತು. ಮರುದಿನ ಬೇಗ ಎದ್ದು ಎಲ್ಲಾ ಗದ್ದೆ ಬದುಗಳಿಗೆ ಹೋಗಿ ವಿಳ್ಯದೆಲೆ, ಅಡಕೆ ಹೆಕ್ಕಿ ತಂದು ಅಮ್ಮನಿಗೆ ಕೊಡುತ್ತಿದ್ದ ದಿನಗಳು ಇನ್ನು ಬರಲು ಸಾಧ್ಯವೇ?…. ಸಂಭ್ರಮದ ಮೂರು ದಿನಗಳ ದೀಪಾವಳಿಯ ಸಂಭ್ರಮ ಮುಗಿದರೆ ಮುಂದೆ ಯಾವ ಹಬ್ಬ ಬರುತ್ತದೆ ಎಂದು ಕಾಯುತ್ತಾ ಕೂರುತ್ತಿದ್ದರು ಮಕ್ಕಳು.
ಅಂದಿನ ದೀಪಾವಳಿಗೂ ಇಂದಿನ ದೀಪಾವಳಿಗೂ ಅಜಗಜಾಂತರ ವ್ಯತ್ಯಾಸ. ಇಂದು ಕೊರೋನ ಮಹಾ ಮಾರಿಯಿಂದ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಕೆಲವರಂತೂ ಕೆಲಸ ಕಳೆದುಕೊಂಡು ಕಷ್ಟ ಪಡುತ್ತಿದ್ದಾರೆ. ಹಬ್ಬ ಆಚರಿಸಲು ಹಣ ಇಲ್ಲದ ಪರಿಸ್ಥಿತಿ ಒದಗಿದೆ. ಉಳ್ಳವರಿಗೂ ಕೋವಿಡ್ ನಿಂದಾಗಿ ಸಂಭ್ರಮ ನೋಡಲು ಆಗುತ್ತಾ ಇಲ್ಲ. ಮುಂದಿನ ದೀಪಾವಳಿ ಎಲ್ಲರಿಗೂ ಸಂಭ್ರಮದ ದೀಪಾವಳಿ ಆಗಲಿ… ಕೊರೋನ ನಮ್ಮ ದೇಶ ಮಾತ್ರವಲ್ಲದೆ ವಿಶ್ವದಿಂದಲೇ ತೊಲಗಲಿ. ದೇಶ ಸುಭೀಕ್ಷವಾಗಲಿ. ಸರ್ವ ಜನರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾ ನನ್ನ ಪುಟ್ಟ ಲೇಖನಕ್ಕೆ ಚುಕ್ಕಿ ಇಡುವೆ 🙏🏽
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
✍️ ಸುಮಾ ಭಂಡಾರಿ, ಸುರತ್ಕಲ್