ದೀಪಾವಳಿ ಮತ್ತು ಪರಿಸರ
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಇದೆ. ಯಾಕೆ ಎಂದು ನೋಡಿದರೆ, ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುತ್ತೇವೆ.ದಿನ ಬೆಳಿಗ್ಗೆ ಪ್ರತಿ ಮನೆಯಲ್ಲೂ ಬೆಂಕಿ ಉರಿಸಿಯೇ ನಮ್ಮ ದೇಹಕ್ಕೆ ಅಗತ್ಯವಾದ ಆಹಾರ ಬೇಯಿಸಿಕೊಳ್ಳುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ದೀಪಗಳ ತುದಿ ಮೇಲ್ಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ದೀಪದಂತೆ ಪ್ರಜ್ವಲ ಮಾನವಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರದಂತೆ ದೀಪದ ರೀತಿ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಅದೇ ರೀತಿ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ.
ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ.
ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ. ಹೀಗಾಗಿ ದೀಪಗಳ ಆವಳಿ ಅಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬವಾಗಿದೆ.
ಹಬ್ಬಗಳು ಸಹೋದರತ್ವ, ಉತ್ತಮ ಬಾಂಧವ್ಯ ಮತ್ತು ಮಾನವನ ಸಾಮಾಜಿಕ ಜೀವನವನ್ನು ಹಂಚಿಕೊಳ್ಳುವಂತಹ ವೇದಿಕೆ ಆಗುವುದು ಇಂದಿನ ಅಗತ್ಯ. ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಮತ್ತು ನಾವು ಕತ್ತಲೆಯನ್ನು ಬೆಳಕಿನಿಂದ ತೊಡೆದುಹಾಕಬೇಕು ಎಂದು ದೀಪಾವಳಿ ನಮಗೆ ಕಲಿಸುತ್ತದೆ.
ದೀಪಾವಳಿಯು ಸಂತೋಷ ಮತ್ತು ಉಲ್ಲಾಸದಿಂದ ಆಚರಿಸುವ ಹಬ್ಬವಾಗಿದೆ. ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷವನ್ನು ಹರಡುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ.ನಮ್ಮ ನೆರೆಹೊರೆಯವರನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಸಂಬಂಧ ಬೆಸೆಯಲು ಹಬ್ಬಗಳು ಪರಿಪೂರ್ಣ ಮಾರ್ಗವಾಗಿದೆ.
ದೀಪಾವಳಿ ರಾತ್ರಿಯಲ್ಲಿ ಹೆಚ್ಚು ರೋಮಾಂಚನಕಾರಿಯಾಗಿದೆ ಏಕೆಂದರೆ ಈ ದಿನ ಸಾಕಷ್ಟು ದೀಪಗಳನ್ನು ಮತ್ತು ಹೆಚ್ಚಿನ ಮನೆಗಳಲ್ಲಿ ಪಟಾಕಿಗಳನ್ನು ಹಚ್ಚಲಾಗುತ್ತದೆ.
ದೀಪಾವಳಿ ದೀಪಗಳ ಹಬ್ಬ ಹೌದು. ಆದರೆ ಪಟಾಕಿ ಸಿಡಿಸುವುದರೊಂದಿಗೆ ಸಂಬಂಧ ಹೊಂದಿದೆಯೇ? ಆಂದರೆ ಇದು ಅಗತ್ಯವೇ???
ಖಂಡಿತ ಇಲ್ಲ, ನಾವೆಲ್ಲರೂ ಮನೆಯಲ್ಲಿಯೇ ಇದ್ದು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂತೋಷದಿಂದ ಭೋಜನವನ್ನು ಆನಂದಿಸಿದರೆ ದೀಪಾವಳಿಯನ್ನು ಇನ್ನೂ ಅದ್ಭುತವಾಗಿ ಆಚರಿಸಬಹುದು. ಪಟಾಕಿಗಳನ್ನು ಸಿಡಿಸುವುದರಿಂದ ವಾತಾವರಣಕ್ಕೆ ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತವೆ ಅದು ಅಂತಿಮವಾಗಿ ವಾಯು ಮಾಲಿನ್ಯಕ್ಕೆ, ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಪಟಾಕಿಗಳು ನಮ್ಮ ಸುತ್ತಮುತ್ತ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ಹಾನಿ ಮಾಡುತ್ತದೆ. ಇತರರ ಸುರಕ್ಷತೆಗೆ ಧಕ್ಕೆಯಾಗದಂತೆ ನಾವು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸಬೇಕೆ ವಿನಃ ನಮ್ಮಿಂದ ಇತರರಿಗೆ ನೋವು ಉಂಟಾಗಿ ನಾವು ಹೇಗೆ ಸಂತೋಷದಿಂದ ಇರಲು ಸಾಧ್ಯ? ಹಬ್ಬಗಳು ನಮ್ಮೆಲ್ಲರಿಗೂ ಸಂತೋಷವನ್ನು ತರಬೇಕೇ ಹೊರತು ಆಚರಣೆಯ ಹೆಸರಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳುಮಾಡಲು ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ದೀಪಗಳ ಹಬ್ಬ ದೀಪಾವಳಿ ಸಂಭ್ರಮ, ಸಡಗರ ಮತ್ತು ಉತ್ಸಾಹಗಳನ್ನು ತರಬೇಕು. ಗೆಳೆಯರು ಸಂಬಂಧಿಕರು ಎಲ್ಲರೂ ರುಚಿಯಾದ ಸಿಹಿ ತಿನಿಸುಗಳನ್ನು ತಿಂದು, ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂತೋಷ ಪಡಬೇಕು. ಯಾರೂ ಪಟಾಕಿಗಳ ಅನಾಹುತದಿಂದ ಆಸ್ಪತ್ರೆ ಸೇರಬಾರದು.
ದೀಪಾವಳಿ ಹಬ್ಬದ ಸಮಯದಲ್ಲಿ ಹಚ್ಚುವ ಪಟಾಕಿಗಳು ಕೆಲವರ ಭವಿಷ್ಯವನ್ನು ಅಂಧಕಾರದಿಂದ ಮುಳುಗಿಸಿ ಬಿಡುತ್ತದೆ ಎಂದರೆ ತಪ್ಪಾಗಲಾರದು. ಭಾರತ ದೇಶದಲ್ಲಿ ಸುಮಾರು 40 ತರಹದ ಪಟಾಕಿಗಳಿವೆ. ಒಂದು ಪಟಾಕಿಗಿಂತ, ಇನ್ನೊಂದು ಪಟಾಕಿಯು ಹೆಚ್ಚು ಶಬ್ಧವನ್ನು ಮಾಡುತ್ತದೆ ಮತ್ತು ಹೆಚ್ಚು ಹೊಗೆಯನ್ನು ವಾತಾವರಣದಲ್ಲಿ ಬಿಟ್ಟು ವಾತಾವರಣವನ್ನು ಕಲುಷಿತಗೊಳಿಸುತ್ತವೆ. ಪ್ರಶಾಂತವಾದ, ಶುಭ್ರವಾದ ವಾತಾವರಣವು ಪಟಾಕಿಗಳಿಂದ ಹೊರಬೀಳುವ ಹೊಗೆ, ವಾಹನಗಳಿಂದ ಬರುವ ಹೊಗೆ ಮತ್ತು ಮಂಜಿನ ಮಿಶ್ರಣದಿಂದ ವಿಷವಾಗಿ, ಸಾಮಾನ್ಯ ಜನರು ಮತ್ತು ಉಸಿರಾಟದ ತೊಂದರೆ ಇರುವವರಿಗೆ, ಅಸ್ತಮಾ, ಶ್ವಾಸಕೋಶದ ಕಾಯಿಲೆ ಇರುವವರಿಗೆ, ಸಣ್ಣ ಮಕ್ಕಳಿಗೆ, ವಯಸ್ಸಾದ ವೃದ್ಧರಿಗೆ, ಆರೋಗ್ಯ ಸರಿ ಇಲ್ಲದವರಿಗೆ ಉಸಿರಾಡಲು ತೊಂದರೆಯಾಗುತ್ತದೆ.
ಪಟಾಕಿಗಳನ್ನು ಸುಟ್ಟಾಗ ಅದರಲ್ಲಿರುವ ಸಲ್ಪರ್ ಡೈ ಆಕ್ಸೈಡ್, ಕ್ಯಾಡಿಮಿಯಮ್ ತಾಮ್ರ ಮ್ಯಾಗ್ನಿಷಿಯಂ ನೈಟ್ರೆಟೆಸ್ ಮತ್ತು ನೈಟ್ರಾಯಿಟಸ್ ಮುಂತಾದ ವಿಷ ಅನಿಲಗಳು ವಾತಾವರಣವನ್ನು ಸಂಪೂರ್ಣ ಕಲುಷಿತಗೊಳಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ, ಭಾರತ ದೇಶದ ಎಲ್ಲ ಪಟ್ಟಣಗಳಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ನಾವು ಉಸಿರಾಡುವ ಗಾಳಿಯು ವಿಷವಾಗಿ ಪರಿವರ್ತಿತವಾಗಿರುತ್ತದೆ ಎಂದು ವರದಿ ತಿಳಿಸಿದೆ.
- ಪಟಾಕಿಗಳಿಂದ ಸುಟ್ಟಗಾಯ : ಪಟಾಕಿ ಹಚ್ಚುವಾಗ ಮತ್ತು ಪಟಾಕಿ ಹಚ್ಚಿದ ಮೇಲೆ ಜಾಗರೂಕತೆ ವಹಿಸದಿದ್ದರೆ, ಸುಟ್ಟಗಾಯಗಳು ಆಗುವವು. ಸುಟ್ಟಗಾಯಗಳು ಕಡಿಮೆ ಪ್ರಮಾಣದ್ದಿರಬಹುದು. ಇಲ್ಲವೆ ತೀವ್ರ ಪ್ರಮಾಣದ್ದಿರಬಹುದು. ಕಣ್ಣಿಗೆ ಗಾಯವಾಗಬಹುದು. ಕೆಲವೊಂದು ಸಲ ಕಣ್ಣಿನ ದೃಷ್ಟಿಯೇ ಹೋಗಬಹುದು. ಬಾಟಲ್ ರಾಕೆಟನ್ನು ಬಿಟ್ಟಾಗ, ರಾಕೆಟ್ ಆಕಾಶದಲ್ಲಿ ಹಾರಿ ಕೆಳಗೆ ಬಿದ್ದಾಗ, ಬೆಂಕಿ ಹತ್ತುವ ವಸ್ತುಗಳ ಮೇಲೆ ಬಿದ್ದರೆ, ಬೆಂಕಿ ಹತ್ತಿ ಮನೆಗಳು, ವಾಹನಗಳು,ಅಂಗಡಿಗಳು ಸುಡಬಹುದು.
- ಪಟಾಕಿಗಳಿಂದ ಉಂಟಾಗುವ ಶಬ್ದ ಮಾಲಿನ್ಯ : ಜನರು ವಾಸಮಾಡುವ ಸ್ಥಳಗಳಲ್ಲಿ ಸುರಕ್ಷಿತವಾದ ಶಬ್ದದ ಸಾಮಥ್ರ್ಯ 55 ಡೆಸಿಬಲ್ಸ್ ಮತ್ತು ರಾತ್ರಿ ಸಮಯ 45 ಡೆಸಿಬಲ್ಸ್. ಇವತ್ತು ಪಟಾಕಿಗಳನ್ನು ಸುಟ್ಟಾಗ ಉಂಟಾಗುವ ಶಬ್ದವು 90 ಡೆಸಿಬಲ್ಸ್ ಇರುತ್ತದೆ. ಇನ್ನು ಹೆಚ್ಚು ಕೂಡ ಇರಬಹುದು. ಈ ಹೆಚ್ಚು ಶಬ್ದವು ತಾತ್ಕಾಲಿಕ ತಲೆನೋವು, ತಲೆಸುತ್ತು, ವಾಂತಿಯನ್ನು ಉಂಟು ಮಾಡಬಹುದು. ವಯಸ್ಸಾದ ವೃದ್ಧರಿಗೆ, ಮಕ್ಕಳಿಗೆ ಕಿವಿ ಕೇಳುವುದು ನಷ್ಟವಾಗಬಹುದು.
- . ಪಟಾಕಿಯ ಸದ್ದು ಪರಿಸರದ ಸುತ್ತ ಮುತ್ತ ಇರುವ ಪಕ್ಷಿಗಳು, ಪ್ರಾಣಿಗಳಿಗೆ ಕಿವಿಯ ತಮಟೆ ಒಡೆದು ಮತ್ತೆಂದೂ ಕಿವಿ ಕೇಳದೆ ಇರಬಹುದು ಅಥವಾ ಅವುಗಳ ಬೇರೆ ಬೇರೆ ಅಂಗಗಳಿಗೆ ಊನ ಆಗಬಹುದು.
ಪ್ರಸ್ತುತ ಸರ್ವೋಚ್ಚ ನ್ಯಾಯಾಲಯವು ಪಟಾಕಿಯ ಪರಿಣಾಮವಾಗಿ ಆಗುವ ಅನಾಹುತಗಳಿಗೆ ಕಡಿವಾಣ ಹಾಕಲು ದೀಪಾವಳಿ ಹಬ್ಬದ ಸಮಯ ರಾತ್ರಿ 8ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಮಾರ್ಗ ಸೂಚಿ ಮಾಡಿದೆ… ಇದು ಒಳ್ಳೆಯ ಬೆಳವಣಿಗೆ ಇದನ್ನು ನಾವೆಲ್ಲರೂ ಪಾಲಿಸೋಣ..
ದೀಪಾವಳಿ ಹಬ್ಬ ನಮ್ಮ ಮನೆಯಲ್ಲಿ ಮನಸ್ಸಿನ ದ್ವೇಷ ಎಂಬ ಕತ್ತಲೆಯನ್ನು ಕಳೆದು ಪ್ರೀತಿ ಎಂಬ ಬೆಳಕು ನೀಡಲಿ ಎಲ್ಲೆಲ್ಲೂ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಲಿ ಎಂದು ಈ ಮೂಲಕ ಎಲ್ಲಾರಿಗೂ ದೀಪಾವಳಿಯ ಶುಭಾಶಯಗಳನ್ನು ಹೇಳುತ್ತೇನೆ…
✍️ ವನಿತಾ ಅರುಣ್ ಭಂಡಾರಿ ಬಜಪೆ.