November 22, 2024
vijay bhandary nittoor copy

ಅಂಧಕಾನೂರು ಎಂಬುದು ಒಂದು ಪ್ರಕೃತಿಯ ಸೊಬಗನ್ನು ಬೇರೆ ಯಾವ ಸ್ಥಳವೂ ಮೀರಿಸಲಾಗದ ಅದ್ಭುತ ಸೌಂದರ್ಯವನ್ನು ಹೊಂದಿದ ಊರು. ಹಚ್ಚಹಸಿರಿನಿಂದ ವರ್ಷ ಪೂರ್ತಿ ಸ್ವಲ್ಪವೂ ಜಲವೆನ್ನುವುದು ಕಡಿಮೆಯಾಗದೇ ಹಳ್ಳ-ಕೊಳ್ಳ, ಕೆರೆಕಟ್ಟೆ-ಬಾವಿ, ನದಿ-ಜಲಪಾತ ಮೈದುಂಬಿ ಹರಿಯುತಿತ್ತು. ಪಶು-ಪಕ್ಷಿಗಳ ಸುಂದರ ಆವಾಸಸ್ಥಾನವಾಗಿತ್ತು. ಒಂದು ಕಡೆ ದಟ್ಟವಾದ ಕಾಡು, ಇನ್ನೊಂದು ಕಡೆ ಅಂಧಕಾನೂರು ಹಾಗಾಗಿ ಕಾಡು ಮೃಗಗಳ ಭೇಟಿಯೂ ಅವರಿಗೆ ಸಾಮಾನ್ಯವಾಗಿತ್ತು ಮತ್ತು ನಿರಂತರ ಅವುಗಳೊಂದಿಗಿನ ಪಳಗುವಿಗೆ ಅಂಧಕಾನೂರಿನ ಜನತೆಗೆ ಅವುಗಳೊಂದಿಗಿನ ಯಾವ ಅಪಾಯವನ್ನೂ ಎದುರಿಸುವ ಸಾಮರ್ಥ್ಯವನ್ನು ನೀಡಿತ್ತು.

ಇಷ್ಟೆಲ್ಲಾ ಅದ್ಭುತಗಳ ನಡುವೆ ಅಂಧಕಾನೂರಿಗೆ ಶಾಪವೂ ಒಲಿದುಬಂದಿತ್ತು. ಸಣ್ಣ ಗುಡಿಸಲ ಹಳ್ಳಿಗೆ ಅದು ನುಂಗಲಾರದ ತುತ್ತಾಗಿ ಪರಿಣಮಿಸೀತ್ತು. ಅದೇನೆಂದರೆ ಅವರ ಹಿಂದಿನಿಂದಲೂ ಕೃಷಿಯನ್ನೇ ಅವಲಂಬಿಸಿದ ಜೀವನ ಆದರೆ ಆ ಕೃಷಿಯೇ ಅವರ ಕೈ ಹಿಡಿಯುತ್ತಿರಲಿಲ್ಲ‌. ಫಸಲು ಕೈಗೆ ಬರುವಷ್ಟರಲ್ಲಿ ಅದು ಒಂದಿಲ್ಲೊಂದು ಕಾರಣದಿಂದ ನಷ್ಟದ ಹಾದಿ ಹಿಡಿಯುತಿತ್ತು. ಪರಶಿವನ ಅನುಗ್ರಹದಿಂದ ಎಲ್ಲವೂ ಕೈಗೂಡಿದರೂ ಇಂದ್ರನ ಶಾಪದಿಂದ ಈ ರೀತಿಯ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಎಂದರೆ ದೇವರ ದೀಪವೊಂದೆ. ಹೌದು ಅದು ಅಂಧಕಾನೂರಿನ ಕಾಡಿನ ಅಂಚಿನಲ್ಲಿ ಯಾರೂ ಏರಲಾರದ ಅತೀ ಎತ್ತರದ ಬೆಟ್ಟವೊಂದಿದೆ ಅದೇ ಆ ಊರಿನ ಅಂಚು, ಅದರ ತುದಿಯಲ್ಲಿ ದೀಪಾವಳಿಯ ಅಮಾವಾಸ್ಯೆಯ ದಿನ ಇಂದ್ರಾದಿ ದೇವತೆಗಳು ಬಂದು ದೀಪವನ್ನು ಹಚ್ಚುತ್ತಾರೆ, ಅಂದಿನ ದಿನ ಆ ಬೆಟ್ಟವನ್ನೇರಿ ದೀಪವನ್ನು ತಂದು ಊರಿನಲ್ಲಿ ಬೆಳಗಿದರೆ ಶಾಪ ವಿಮೋಚನೆ ಆಗುವುದು ಎನ್ನುವುದು ಎಲ್ಲರೂ ನಂಬಿಕೊಂಡು ಬಂದ ವಿಚಾರವಾಗಿತ್ತು. ಬಹಳ ಹಿಂದೆ ಕೆಲವಷ್ಟು ಜನ ಪ್ರಯತ್ನಪಟ್ಟು ಅವರು ವಾಪಾಸ್ಸು ಹಿಂತಿರುಗಲಿಲ್ಲ ಮತ್ತು ಆ ಬೆಟ್ಟವನ್ನು ಕಾಯುವ ಹಲವು ವಿಷಸರ್ಪಗಳು, ಅಲ್ಲಿ ವಾಸಿಸುವ ಬ್ರಹ್ಮರಾಕ್ಷಸರು ಇರುವುದರಿಂದ ಯಾರೂ ಕೂಡ ಪ್ರಾಣಸಹಿತವಾಗಿ ವಾಪಾಸ್ಸು ಬರುವುದಿಲ್ಲವೆಂಬ ಜನರ ನಂಬಿಕೆಯು ಅವರನ್ನು ತಟಸ್ಥವಾಗಿಸಿತ್ತು. ಅದನ್ನು ತರುವವನು ದೈವಾಂಶಸಂಭೂತನೇ ಆಗಿರಬೇಕೆಂದು ಜನರ ನಂಬಿಕೆಯಾಗಿತ್ತು.

ಅದೇ ಊರಿನಲ್ಲಿ ವಾಸಿಸುತ್ತಿದ್ದ ದ್ಯಾವಪ್ಪನೆಂಬ ಕ್ಷೌರಿಕ ಅಲ್ಲಾಗುತ್ತಿದ್ದ ಸಾಮಾಜಿಕ ತಾರತಮ್ಯಗಳಿಂದ ಬೇಸತ್ತು ಹೋಗಿದ್ದ. ಇನ್ನೂ ಯವ್ವನದ ಹುರುಪು ಮತ್ತು ಆ ಬೆಟ್ಟದಮೇಲೋಂದು ಸಣ್ಣ ಆಸಕ್ತಿ. ಇಲ್ಲಿದ್ದು ಮಾನಸಿಕವಾಗಿ ನೋವು ಪಡುವುದಕ್ಕಿಂತ ಬೆಟ್ಟವೇ ವಾಸಿ, ಗೆದ್ದರೆ ಸಮ್ಮಾನ ಸೋತರೆ ಸ್ವರ್ಗ ಎಂದು ತೀರ್ಮಾನಿಸಿಯೇಬಿಟ್ಟ. ದೀಪಾವಳಿ ಅಮಾವಾಸ್ಯೆಯ ದಿನ ದೇವರದೀಪದ ದರ್ಶನ ಪಡೆಯಲು ಎಲ್ಲರೂ ಸೇರಿರುವ ಸಂದರ್ಭ ಯಾರೂ ದಾಟಬಾರದೆಂದು ಹಾಕಿದ್ದ ಗಡಿಬೇಲಿಯನ್ನು ದಾಟಿ ದೀಪ ತರುತ್ತೇನೆ ಎಂದು ಹೊರಟೇಬಿಟ್ಟ. ಊರಿನವರೆಲ್ಲಾ ಹುಚ್ಚ ಎಂತೆಂತವರಿಗೂ ಆಗಲಿಲ್ಲ ಈ ಕೀಳು ಕ್ಷೌರಿಕನಿಂದ ಸಾಧ್ಯವೇ ಎಂದು ಮೂದಲಿಸಿದರು. ಆದರೂ ಕೆಟ್ಟ ಕುತೂಹಲವಿದ್ದ ಒಂದಷ್ಟು ಜನ ಅವನು ಹೋಗಿ ಬರುವುದನ್ನು ನೋಡಲು ಕಾದು ಕುಳಿತರು. ಆಶ್ಚರ್ಯದೊಂದಿಗೆ ದ್ಯಾವಪ್ಪ ಐದು ದಿನಗಳ ಬಳಿಕ ದೀಪದೊಂದಿಗೆ ಹಾಜರಿದ್ದ. ಬಹಳ ದೊಡ್ಡದಾದ ದೀಪವದು ಎಲ್ಲರೂ ದ್ಯಾವಪ್ಪನನ್ನು ಹೊಗಳುವವರೆ, ದೇವರ ರೂಪದಲ್ಲಿ ದ್ಯಾವಪ್ಪ ಊರಿನಮಂದಿಗೆ ಕಾಣಿಸತೊಡಗಿದ. ಎಲ್ಲರೂ ದೀಪವನ್ನು ಪರಶಿವನ ಮಂದಿರದ ಬಳಿ ಸ್ಥಾಪಿಸಿದರು.

ಇನ್ನು ತಮ್ಮ ಶಾಪ ಕಳೆಯಿತೆಂದು ಎಲ್ಲರೂ ಶ್ರದ್ದೆಯಿಂದ ಆಸಕ್ತಿಯಿಂದ ಮುತುವರ್ಜಿವಹಿಸಿ ಬೇಲಿಗಳನ್ನು ನಿರ್ಮಿಸಿ ಕೃಷಿ ಕೆಲಸದಲ್ಲಿ ತೊಡಗಿದರು. ಆಶ್ಚರ್ಯ ಎಂಬಂತೆ ನಷ್ಟದ ಪ್ರಮಾಣ ಕ್ರಮೇಣ ಕಡಿಮೆಯಾಗಲಾರಂಭಿಸಿತು. ದೀಪವನ್ನು ತರಲು ಹೋದಾಗ ವಿಷಸರ್ಪಗಳು ಸಿಕ್ಕಿದ್ದವು, ಬ್ರಹ್ಮರಾಕ್ಷಸರು ಸಿಕ್ಕಿದ್ದರು ಅವರನ್ನೆಲ್ಲಾ ಬೇಡಿದ್ದಕ್ಕೆ ಏನೂ ತೊಂದರೆ ಮಾಡದೇ ಬಿಟ್ಟಿದ್ದರು, ದೇವತೆಗಳ ದರ್ಶನವಾಯಿತು ಎನ್ನುವ ತರಹೆವೇತಾರಿ ಕತೆಗಳನ್ನು ಹೇಳಿದ್ದ ದ್ಯಾವಪ್ಪ, ಆ ಎತ್ತರದ ಬೆಟ್ಟದಮೇಲೊಂದು ಊರಿದೆ, ಅವರಲ್ಲೂ ಹಿಂದೆ ಈ ಬೆಟ್ಟದ ತುದಿಯಿಂದ ಬಿದ್ದು ಸತ್ತವರ ಸಂಖ್ಯೆ ಬಹಳಷ್ಟಿದೆ ಹಾಗಾಗಿ ಅಲ್ಲಿ ಯಾರಿಗೂ ಪ್ರವೇಶ ನೀಡದೆ ಬೇಲಿ ನಿರ್ಮಿಸಿ ಅಲ್ಲೊಂದು ಸಣ್ಣ ದೇಗುಲ ನಿರ್ಮಾಣ ಮಾಡಿ ಪ್ರತೀ ದೀಪಾವಳಿ ಅಮಾವಾಸ್ಯೆಯ ದಿನ ಬಹಳ ದೊಡ್ಡದಾದ ದೀಪವನ್ನು ಹಚ್ಚಿ ವಿಶೇಷವಾಗಿ ಆಚರಿಸುವ ಪ್ರತೀತಿ ಇದೆ ಎಂದು ತನ್ನ ಉಸಿರಿನ ಕೊನೆಯವರೆಗೂ ಹೇಳಲೇ ಇಲ್ಲ.

 

 

 

  • ವಿಜಯ ಭಂಡಾರಿ ನಿಟ್ಟೂರು.

ಲೇಖಕರ ಕಿರು ಪರಿಚಯ

ಊರು : ನಗೋಡಿ ಗ್ರಾಮ , ನಿಟ್ಟೂರು , ಹೊಸನಗರ

ತಂದೆ ದಿವಂಗತ ಉದಯ ಭಂಡಾರಿ
ತಾಯಿ ಗುಲಾಬಿ
ತಂಗಿ ವಿದ್ಯಾ
ತಮ್ಮ ವಿಘ್ನೇಶ್
ವಿದ್ಯಾರ್ಹತೆ : ಪದವಿ
ವೃತ್ತಿ : ಸಲೂನ್

Leave a Reply

Your email address will not be published. Required fields are marked *