
ಪ್ಯಾಂಡಮಿಕ್ ಪ್ರಭಾವದಿಂದ ಜನರಲ್ಲಿ ಹೆಚ್ಚಾಗಿದೆ ಡಿಜಿಟಲ್ ಗೇಮಿಂಗ್ ಹುಚ್ಚು: ಇದೆಷ್ಟು ಅಪಾಯಕಾರಿ ಗೊತ್ತಾ?
ವಯಸ್ಸಿನ ಗಣನೆ ಇಲ್ಲದೆ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ತನ್ನ ಕಡೆಗೆ ವಾಲಿಸಿಕೊಂಡು ಬಿಡಿಸಿಕೊಳ್ಳಲಾಗದಂತಹ ಬಲೆಯಲ್ಲಿ ಸೆರೆಹಿಡಿದಿರುವ ಸಾಮರ್ಥ್ಯ ಈ ಗೇಮಿಂಗ್ ಗೆ ಇದೆ ಎಂದರೆ ತಪ್ಪಾಗಲಾರದು.
ಪ್ಯಾಂಡಮಿಕ್ ನಿಂದಾಗಿ ಪ್ರಪಂಚದಾದ್ಯಂತ 25% ಜನಸಂಖ್ಯೆಯು ಖಿನ್ನತೆ ಮತ್ತು ಮಾನಸಿಕ ತಳಮಳಕ್ಕೆ ಒಳಗಾಗಿತ್ತೆಂದು ಡಬ್ಲ್ಯೂ ಎಚ್ ಓ ಹೇಳಿದೆ. ಇಂತಹ ಸಂದರ್ಭದಲ್ಲಿ ಪರೋಕ್ಷವಾಗಿ ನೆರವಿಗೆ ಬಂದದ್ದು ಈ ಗೇಮಿಂಗ್ ಎಂದರೆ ಕೆಲವರಿಗೆ ಆಶ್ಚರ್ಯವೆನಿಸಬಹುದು.
ಹೌದು…. ಎಷ್ಟೋ ಜನ ಟೈಂಪಾಸ್ ಗಷ್ಟೇ ಈ ಗೇಮ್ ಗಳು ಅಥವಾ ಗೇಮ್ ಗಳನ್ನು ಆಡುವುದೇ ವ್ಯರ್ಥವೆಂಬ ಅನಿಸಿಕೆ ಹೊಂದಿದ್ದಾರೆ. ಆದರೆ ಮನಸ್ಸನ್ನು ಮುದಗೊಳಿಸಲು, ಮಾನಸಿಕ ಒತ್ತಡ ಕಮ್ಮಿ ಮಾಡುವಲ್ಲಿ ಗೇಮಿಂಗ್ ಇಂಡಸ್ಟ್ರಿ ಯಶಸ್ವಿಯಾಗಿದೆ ಎಂಬುದು ವಾಸ್ತವಿಕ ಸಂಗತಿ
ಸಾಮಾಜಿಕ ಅಂತರ ಪಾಲಿಸುವಾಗ ಒಂಟಿತನ ಹೋಗಲಾಡಿಸುವಲ್ಲಿ ತಾನು ತನ್ನ ಬಂಧು- ಮಿತ್ರರ ಜೊತೆ ಸಂಪರ್ಕ ಕಟ್ಟುವಲ್ಲಿ ಈ ಆನ್ಲೈನ್ ಗೇಮಿಂಗ್ ಆಧಾರ ಸ್ತಂಭವಾಗಿ ನಿಂತಿತ್ತು. ಅದಕ್ಕೆ ನೋಡಿ ಪ್ಯಾಂಡಮಿಕ್ ಸಮಯದಲ್ಲಿ ಗೇಮಿಂಗ್ ಮಾರುಕಟ್ಟೆ 23% ಪರ್ಸೆಂಟ್ ಬೆಳೆದಿತ್ತು.
ಮನುಷ್ಯ ಆರೋಗ್ಯದಿಂದಿರಲು ಸಂತೋಷವಾಗಿರಬೇಕು. ಆಗಲೇ ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ಸ್ ಉಂಟಾಗುವುದು. ಇವು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಈ ನಿಟ್ಟಿನಲ್ಲಿ ಗೇಮ್ ಆಡುವವರು ತಮ್ಮ ಮನಸ್ಸನ್ನು ಸಂತೋಷವಾಗಿಟ್ಟುಕೊಂಡು ಸಕಾರಾತ್ಮಕವಾದ ಪ್ರಯೋಜನ ಹೊಂದಿದ್ದಾರೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಅದಕ್ಕೆ ಗೇಮ್ ನ ಮೊರೆ ಹೋಗಬೇಕೆ ಬೇರೆ ದಾರಿ ಇಲ್ಲವೇ ಎಂದು ನಿಮಗನಿಸಬಹುದು. ಅನೇಕ ದಾರಿಗಳಿರಬಹುದು. ಆದರೆ ಈಗಿನ ತಲೆಮಾರಿನವರಿಗೆ ಮೊದಲು ತೋರುವುದೇ ಗೇಮಿಂಗ್, ಬಹಳ ಇಷ್ಟಪಟ್ಟು ಆಡುತ್ತಾರೆ. ಇಷ್ಟಪಟ್ಟಾಗ ಮಾತ್ರ ಸಂತೋಷ ಉಂಟಾಗುವುದು ಅಲ್ಲವೇ ? ಜನ ಅಷ್ಟು ಇಷ್ಟ ಪಡುತ್ತಿರುವುದರಿಂದಲೇ ಗೇಮಿಂಗ್ ಮಾರುಕಟ್ಟೆ ಸಿನಿಮಾ ಮತ್ತು ಕ್ರೀಡೆ ಗಳನ್ನು ಮೀರಿ ಬೆಳೆದು ನಿಂತಿದೆ.
ಪ್ಯಾಂಡಮಿಕ್ ಸಮಯದಲ್ಲಿ ಅಷ್ಟೇ ಅಲ್ಲದೆ ಗೇಮ್ ಅನೇಕ ವರ್ಷಗಳಿಂದ ಹಿಡಿದು ಇಂದಿನ ತನಕ ಮನುಷ್ಯನ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ, ಯೋಚನಾ ಲಹರಿಯನ್ನು ಉತ್ತಮಗೊಳಿಸುವಲ್ಲಿ ಸಫಲವಾಗಿವೆ. ಕಲಿಕೆಗೆ, ಜ್ಞಾನಾರ್ಜನೆಗೆ, ಮನೋರಂಜನೆಗೆ ತರಹಾವರಿ ಗೇಮ್ ಗಳಿವೆ
ಈಗಾಗಲೇ ವಿಜ್ಞಾನಿಗಳು ಹಾಗೂ ಗೇಮ್ ಡೆವಲಪರ್ ಗಳು ಎಂತಹ ಗೇಮ್ ಗಳನ್ನು ಆಡಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ವಿಶ್ಲೇಷಿಸುವಲ್ಲಿ ಕೈಜೋಡಿಸಿದ್ದಾರೆ. ಎಷ್ಟೋ ಕಂಪನಿಗಳು ಮಾನಸಿಕ ಆರೋಗ್ಯವನ್ನು ಹೆಚ್ಚಿಸಲೆಂದೇ ಕೆಲವು ಗೇಮ್ ಗಳನ್ನು ತಯಾರು ಮಾಡಿದ್ದಾರಂತೆ.
ನಮ್ಮ ಮನಸ್ಸಿನ ತೊಂದರೆಗಳನ್ನು ಅರಿತು ನಮ್ಮ ಮನಸ್ಸಿನೊಳಗೆ ಇಳಿದು ಮನಸ್ಸಿನ ನೋವನ್ನು ಹೋಗಲಾಡಿಸಿಕೊಂಡು ನಲಿವನ್ನು ಉಂಟು ಮಾಡಿಸುವಂತಹ ಗೇಮ್ ಗಳೂ ಬರುತ್ತವೆಯಂತೆ. ಇತ್ತೀಚಿನ ಮೈಕ್ರೋಸಾಫ್ಟ್ ಸರ್ವೆ ಒಂದರ ಪ್ರಕಾರ 84% ಅಂಗವಿಕಲರು ಗೇಮಿಂಗ್ ಮೂಲಕ ಮಾನಸಿಕ ಆರೋಗ್ಯ ಹೆಚ್ಚಿಸಿಕೊಂಡಿದ್ದಾರಂತೆ.
ಗೇಮ್ ಆಡುವುದರಿಂದ ಮನಸ್ಸನ್ನು ಪೋಷಿಸಿಕೊಳ್ಳಬಹುದು. ಇತ್ತೀಚೆಗಷ್ಟೇ ಆಕ್ಸ್ಫರ್ಡ್ ಯುನಿವರ್ಸಿಟಿ, ಗೇಮ್ ಆಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವುದಿಲ್ಲವೆಂದು ಸಾಬೀತುಪಡಿಸಿದ್ದಾರೆ. ಇದರರ್ಥ ಹೆಚ್ಚಾಗಿ ಗೇಮ್ ಆಡುವುದು ಒಳ್ಳೆಯದೆಂದು ಪುಷ್ಟಿಕರಿಸುವುದಲ್ಲ. ಹೆಚ್ಚಾದರೆ ಅಮೃತವೂ ವಿಷವೆಂಬ ಮಾತನ್ನು ನೆನಪಿಟ್ಟುಕೊಂಡು ಇದರ ಚಟಕ್ಕೆ ಬೀಳದೆ ಹಿತಮಿತವಾಗಿ ಆಡುತ್ತಾ ಇದರಿಂದ ಲಾಭ ಮಾತ್ರ ಪಡೆದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ನಿಯಮಗಳು ಮತ್ತು ಷರತ್ತುಗಳು ಅನ್ವಯ ಎಂಬುದು ಈಗ ಎಲ್ಲಾ ಕಡೆಯೂ ಕಾಣ ಸಿಗುತ್ತದೆ. ಈ ವಿಷಯದಲ್ಲೂ ನಾವು ಇದನ್ನು ಅನ್ವಯಿಸಿಕೊಳ್ಳೋಣ. ಗೇಮಿಂಗ್ ಪ್ರಯೋಜನಗಳಿಂದ ವಂಚಿತರಾಗದೆ, ಚಿಂತಕರಾಗಿ ಯೋಚಿಸಿ ಮಿತಿಯಿಂದ ಪರಿಮಿತಿಯಲ್ಲಿ ಆಡೋಣ. ಏನಂತೀರಿ?
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ