2020 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ನಮ್ಮ ಭಂಡಾರಿ ಸಮಾಜದ ಬಂಧು, ತುಳು ರಂಗಭೂಮಿ ಕಲಾವಿದ ಶ್ರೀ ದಿನಕರ ಭಂಡಾರಿ ಕಣಂಜಾರು ಅವರಿಗೆ ರಂಗಭೂಮಿಯ ವಿಶಿಷ್ಟ ಸಾಧನೆಗಾಗಿ ಒಲಿದು ಬಂದಿರುವುದು ನಾವೆಲ್ಲ ಹೆಮ್ಮೆ ಪಡುವ ಸಂಗತಿಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಂಜಾರು ಎಂಬಲ್ಲಿಯ ಶ್ರೀಮತಿ ಗುಲಾಬಿ ಭಂಡಾರಿ ಮತ್ತು ವೆಂಕಪ್ಪ ಭಂಡಾರಿಯವರ ಮಗನಾದ ದಿನಕರ್ ಭಂಡಾರಿ ಕಣಂಜಾರ್ ಕಳೆದ ಇಪ್ಪತ್ತು ವರ್ಷಗಳಿಂದ ನಾಟಕ ರಂಗದಲ್ಲಿ ಗುರುತಿಸಿಕೊಂಡಿದ್ದು ,ಇವರು ಕಥೆ, ಸಂಭಾಷಣೆ ಬರೆದ 18 ತುಳು ನಾಟಕಗಳು, 7 ಕಿರು ನಾಟಕಗಳು ಸುಮಾರು ಮೂರು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿದೆ, ಜೊತೆಗೆ ದಿನಕರ್ ಭಂಡಾರಿ ಕಣಂಜಾರು ಸುಮಾರು 500 ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ನೀಡಿದ್ದಾರೆ. ಮತ್ತು 750 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಅದಲ್ಲದೆ ದಿನಕರ್ ಭಂಡಾರಿ ಕಣಂಜಾರ್ 350 ಕ್ಕೂ ಹೆಚ್ಚು ಕಡೆ ಸನ್ಮಾನಿಸಲ್ಪಟ್ಟಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ತುಳು ನಾಟಕ ರಂಗ ಇವರಿಗೆ ”ಕಥೇತ ಬೀರೆ” ಮತ್ತು “ಕಲಾಸಿಂಧು” ಬಿರುದುಗಳನ್ನು ನೀಡಿ ಗೌರವಿಸಿದೆ.
ದಿನಕರ್ ಭಂಡಾರಿ ಕಣಂಜಾರ್ ಬರೆದ ನಾಟಕಗಳು ದಕ್ಷಿಣ ಕನ್ನಡ , ಉಡುಪಿ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು , ಪುಣೆ , ಮುಂಬೈ , ನಾಸಿಕ್ , ಬೆಹರೈನ್ , ಮಸ್ಕತ್ ,ದುಬೈ ಗಳಲ್ಲಿ ಪ್ರದರ್ಶನಗೊಂಡಿವೆ.
ದಿನಕರ್ ಭಂಡಾರಿ ಕಣಂಜಾರ್ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ನಿಸರ್ಗ ಯುವಕ ಮಂಡಲ ಎಡ್ಮೆರು , ಮೂಡುಬೆಳ್ಳೆ ಇದರ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಸವಿತಾ ಸಮಾಜ ಇದರ ಮೂಡುಬೆಳ್ಳೆ ಘಟಕದ ಅಧ್ಯಕ್ಷರಾಗಿದ್ದಾರೆ.
ಉಡುಪಿ ಜಿಲ್ಲಾಡಳಿತ ವಿಶಿಷ್ಟ ಸಾಧನೆ ಮಾಡಿದವರಿಗೆ ಕೊಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಅವರನ್ನು ಅಭಿನಂದಿಸಲು ಕರೆಮಾಡಿದ “ಭಂಡಾರಿವಾರ್ತೆ”ಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು.
ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರಲಿ,ಕಲಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶ್ರೀ ದಿನಕರ್ ಭಂಡಾರಿ ಕಣಂಜಾರು ಅವರಿಗೆ ಶುಭ ಹಾರೈಸುತ್ತದೆ.
“ಭಂಡಾರಿ ವಾರ್ತೆ.”