January 18, 2025
Dinesh Rai kadaba

ಭಂಡಾರಿ ಸಮಾಜದ ಕುಲವೃತ್ತಿಯ ಬಗ್ಗೆ ತನ್ನ ಅಜ್ಞಾನದಿಂದ ಮೂಡಬಿದಿರೆ ಸಮಾಜ ಮಂದಿರದಲ್ಲಿ  ದಿನಾಂಕ 5ನೇ ಜನವರಿ 2020ರಂದು ನಡೆದ ಯಕ್ಷಗಾನವೊಂದರಲ್ಲಿ  ಮನಸ್ಸೋ ಇಚ್ಚೇ ಅಕ್ಷೇಪಾರ್ಹ ಪದ ಬಳಕೆ ಮಾಡಿ ಹಾಸ್ಯ ಮಾಡಿದ್ದ ಕಲಾವಿದ ದಿನೇಶ್ ರೈ ಕಡಬ ಭಂಡಾರಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಸಮಾಜದ ನಾಯಕರು ತೀವ್ರ ತರಾಟೆ ವ್ಯಕ್ತಪಡಿಸಿ ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು. ಭಂಡಾರಿ ವಾರ್ತೆ ಕೂಡಾ ದಿನೇಶ್ ರೈ ಅವರನ್ನು ಸಂಪರ್ಕಿಸಿ ಕ್ಷಮೆಗೆ ಆಗ್ರಹಿಸಿತ್ತು. ಇದರ ಪ್ರತಿಫಲವಾಗಿ  ಮೂಡಬಿದಿರೆ ಪ್ರೆಸ್ ಕ್ಲಬ್ ನಲ್ಲಿ  ಭಂಡಾರಿ ಸಮಾಜದ ಪ್ರಮುಖ ನಾಯಕರ ಸಮ್ಮುಖದಲ್ಲಿ ದಿನಾಂಕ 9 ನೇ ಜನವರಿ 2020ರಂದು ಗುರುವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 

ಇಂದು ಮೂಡಬಿದಿರೆಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ಯಕ್ಷಗಾನ ಕಲಾವಿದ ದಿನೇಶ್ ರೈ ಕಡಬ ಮಾತನಾಡುತ್ತಾ ” ದಿನಾಂಕ 05-01-2020 ರಂದು ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಯಕ್ಷಗಾನವೊಂದರಲ್ಲಿ ಹಾಸ್ಯ ಪಾತ್ರ ನಿರ್ವಹಿಸುವಾಗ  ಒಂದು ಸನ್ನಿವೇಶದಲ್ಲಿ ಭಂಡಾರಿ ಸಮಾಜಕ್ಕೆ ಹಾಗೂ ಅವರ ಹಿರಿಯರಿಂದ ಬಂದ ಕುಲಕಸುಬಿಗೆ ನನ್ನಿಂದ ಅಚಾತುರ್ಯವಾಗಿ ಅಪಹಾಸ್ಯವಾಗಿದ್ದು, ನಾನು ಉದ್ದೇಶಪೂರ್ವಕವಾಗಿ ಯಾವುದೇ ಸಮಾಜವನ್ನು ಯಾ ಕಸುಬನ್ನು ನಿಂದನೆ ಯಾ ಕೀಳುಮಟ್ಟದಿಂದ ದೂಷಿಸುವ ಉದ್ದೇಶ ಹೊಂದಿರದೇ ನನ್ನಿಂದ ಒಂದು ಕ್ಷಣ ಅಪರಾಧ ನಡೆದು ಹೋಗಿದ್ದು ಈ ಬಗ್ಗೆ ಗೌರವಾನ್ವಿತ ಭಂಡಾರಿ ಸಮಾಜದ ಪ್ರತಿಯೊಬ್ಬರಲ್ಲೂ ಕ್ಷಮೆ ಕೋರಿ ಪಶ್ಚಾತಾಪ ವ್ಯಕ್ತಪಡಿಸುತ್ತಾ, ಭಂಡಾರಿ ಸಮಾಜವೆಂಬುದು ಪುರಾತನ ಕಾಲದಿಂದಲೂ ವರ್ಚಸ್ವಿ ಸಮುದಾಯವಾಗಿದ್ದು, ಇತರ ಸಮುದಾಯದೊಂದಿಗೆ ಅನೋನ್ಯ ಸಂಬಂಧ ಮತ್ತು ಗೌರವಕ್ಕೆ ಪಾತ್ರವಾಗಿದೆ. ‘ಶ್ರೀ ನಾಗೇಶ್ವರ’ ದೇವರನ್ನು ಕುಲದೇವರಾಗಿ ಆರಾಧಿಸುವ ಈ ಸಮಾಜ ರಾಜ ಮನೆತನಗಳ ಕಾಲದಿಂದಲೂ ಕೋಶ ಕಾಯುವ ಜವಾಬ್ದಾರಿ ನಿರ್ವಹಿಸುತ್ತಾ ಬರುತ್ತಿರುವುದರಿಂದ ಈ ಸಮಾಜಕ್ಕೆ ಭಂಡಾರ ಕಾಯುವ ‘ಭಂಡಾರಿ’ ಎಂಬುದಾಗಿ ಇತಿಹಾಸದಿಂದ ತಿಳಿದಿದ್ದೇನೆ. ಹಿಂದೂ ಧರ್ಮದಲ್ಲಿ ಎಲ್ಲ ಜಾತಿಗಳಿಗೂ  ಕುಲಕಸುಬು ಇರುವಂತೆ ಭಂಡಾರಿ ಜಾತಿಗೂ ಒಂದು ಕುಲಕಸುಬು ಇದೆ. ಈಗ ಕುಲಕಸುಬನ್ನು ಯಾರೂ ನೆಚ್ಚಿಕೊಳ್ಳದೇ ಇದು ಉದ್ಯಮವಾಗಿ ಬೆಳೆದು ಜಾತಿ ಬೇಧವಿಲ್ಲದೇ ಎಲ್ಲ ಸಮುದಾಯದವರು ಭಂಡಾರಿ ಕುಲಕಸುಬಿನಲ್ಲೂ ತೊಡಗಿಸಿಕೊಂಡಿದ್ದಾರೆ. ಇದಕ್ಕೂ ಮಿಗಿಲಾಗಿ ಭಂಡಾರಿ ಸಮುದಾಯ ದೇವರು ಹಾಗೂ ದೈವಾರಾಧನೆಯಲ್ಲಿ, ಪೂಜಾ ಪುರಸ್ಕಾರದಲ್ಲಿ , ದೇವಸ್ಥಾನ , ದೈವಸ್ಥಾನಗಳಲ್ಲಿ ಗೌರವಸ್ಥಾನ ಹೊಂದಿರುವುದು ನನಗೆ ತಿಳಿದಿದೆ.” ಎಂದು ಇಂತಹ ಸಮುದಾಯಕ್ಕೆ ಅಪಮಾನಿಸಿದ್ದಕ್ಕೆ ಮತ್ತೊಮ್ಮೆ ಕ್ಷಮೆಯಾಚಿಸಿದರು.

Image result for dinesh rai kadaba

ನಂತರ ಮುಂದುವರೆದು, “ತುಳುನಾಡಿನ ಬಂಟ ಸಮುದಾಯಕ್ಕೆ ಭಂಡಾರಿ ಸಮಾಜದವರೇ ಕುಲಪುರೋಹಿತರು , ನಾನು ಬಂಟ ಸಮುದಾಯದವನಾಗಿದ್ದು , ಭಂಡಾರಿ ಸಮಾಜ ನಮ್ಮ ಕುಲಪುರೋಹಿತರೆಂಬ ಹೆಮ್ಮೆ ಹಾಗೂ ಅಭಿಮಾನವಿದೆ. ಇತರ ಸಮಾಜದೊಂದಿಗೆ ವೈರತ್ವ ಅಥವಾ ಬೇಧ ಭಾವವಿಲ್ಲದೇ ಅನೋನ್ಯವಾಗಿ ಬೆರೆಯುವ ಸಮುದಾಯಗಳಲ್ಲಿ ಭಂಡಾರಿ ಸಮುದಾಯವು ಒಂದು ಎಂದು ಹೇಳಲು ಸಂತೋಷಪಡುತ್ತೇನೆ. ಭಂಡಾರಿ ಸಮುದಾಯವು ಕೇವಲ ಕುಲಕಸುಬು ಅಲ್ಲದೇ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸುತ್ತಾ ನೊಂದವರಿಗೆ ಬಡವರಿಗೆ ಆಶಾಕಿರಣವಾಗಿ , ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಎಲ್ಲಾ ಉದ್ಯಮಗಳಲ್ಲೂ ತೊಡಗಿಸಿಕೊಂಡು ಉದ್ಯೋಗಧಾತರಾಗಿ ಗೌರವಯುತವಾಗಿ ಸ್ವಾಭಿಮಾನದಿಂದ ಬದುಕು ನಡೆಸುತ್ತಿರುವವರು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಈ ಎಲ್ಲಾ ವಿಚಾರ ತಿಳಿದು ಸಾರ್ವಜನಿಕರಿಗೆ ತಿಳಿಸುತ್ತಾ ಕ್ಷಮೆಯಾಚಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಮೊನ್ನೆಯ ಘಟನೆ ಇನ್ನು ಮುಂದೆ  ಎಲ್ಲಿಯೂ ಮರುಕಳಿಸದಂತೆ ಎಚ್ಚರವಹಿಸುತ್ತೇನೆ ಮತ್ತು ಗೌರವಾನ್ವಿತ ಭಂಡಾರಿ ಸಮಾಜದ ಎಲ್ಲಾ ಮಹನೀಯರಲ್ಲೂ , ಹೃದಯಪೂರ್ವಕ ಕ್ಷಮೆ ಕೋರುತ್ತೇನೆ” ಎಂದು ಮತ್ತೊಮ್ಮೆ ಕ್ಷಮೆಯಾಚಿಸಿ ವಿವಾದಕ್ಕೆ ಕೊನೆಹಾಡಿದರು.

ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆದ  ಈ ಪತ್ರಿಕಾ ಗೋಷ್ಠಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ವಲಯದ ಭಂಡಾರಿ ಸಮಾಜ ಸಂಘಗಳ ನಾಯಕರು ಭಾಗವಹಿಸಿದ್ದರು.

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *