ಈ ಘಟನೆ ನೆಡೆದು ತುಂಬಾ ವರ್ಷಗಳೇ ಆಗಿಹೋಗಿದೆ. ಆದರೂ ಈಗಲೂ ನೆನೆಸಿಕೊಂಡರೆ ಒಂದು ರೀತಿಯ ಭಯ ಮಿಶ್ರಿತ ಖುಷಿ. ನನಗಾಗ ಹನ್ನೆರಡು ವರ್ಷ ಇರಬಹುದು. ಮೊದಲಿನಿಂದಲೂ ನಮ್ಮ ಮನೆಯಲ್ಲಿ ದೀಪಾವಳಿ ತುಂಬಾ ಜೋರು. ಹೊಸಬಟ್ಟೆ, ಹೋಳಿಗೆ ಊಟ, ಅಂಗಡಿ ಪೂಜೆ ಇವೆಲ್ಲಾ ಮಕ್ಕಳಾದ ನಮಗಾಗ ಏನೋ ಸಡಗರ.
ಅವತ್ತು ಹಾಗೇ ಆಯ್ತು. ಸಂಜೆ ಏಳೆಂಟು ಗಂಟೆ ಆಗಿದ್ದಿರಬಹುದು. ನಮ್ಮ ಅಂಗಡಿ ಒಳಗೆ ಪೂಜೆ ತುಂಬಾ ಜೋರಾಗಿ ನಡೀತಾ ಇತ್ತು. ನಾವೆಲ್ಲ ಮಕ್ಕಳು ಒಟ್ಟಾಗಿ ಪಟಾಕಿ ಹೊಡೆಯುವುದರಲ್ಲಿ ಮುಳುಗಿ ಹೋಗಿದ್ದೆವು.ಎಲ್ಲಾ ರೀತಿಯ ಪಟಾಕಿ, ಘರ್ನಾಲ್, ನೆಲಚಕ್ರ, ಹೂವಿನ ಕುಂಡ, ಸುರ್ ಸುರ್ ಬತ್ತಿ, ಹನುಮಂತನ ಬಾಲ ಎಲ್ಲಾ ಮುಗಿದು, ಪಟಾಕಿ ಹೊಡೆಯುವ ಕೊನೆಯ ಹಂತಕ್ಕೆ ಬಂದು ತಲುಪಿದ್ದೆವು. ಈಗ ರಾಕೆಟ್ ಬಿಡುವ ಸಂಭ್ರಮ ಶುರು. ಬಾಟಲಿ ಇಟ್ಟು ಅದರಲ್ಲಿ ರಾಕೆಟ್ ನಿಲ್ಲಿಸಿ ನಮ್ಮಣ್ಣ ಬೆಂಕಿ ತಾಗಿಸಿ ತಿರುಗುವುದಕ್ಕೂ, ಬಾಟ್ಲಿ ಉರುಳಿ ನೆಲಕ್ಕೆ ಬೀಳುವುದಕ್ಕೂ ಸರೀ ಆಯ್ತು. ನಮ್ಮ ಸಲೂನ್ ಎದುರುಗಡೆಗೆ ಒಂದು ಬಟ್ಟೆ ಷೋರೂಮ್ ಇತ್ತು, ನಮ್ಮೂರಿಗೆ ದೊಡ್ಡದಾದ, ಗಾಜಿನ ಷೋಕೇಸಿನ ಬಟ್ಟೆ ಅಂಗಡಿ ಅದಾಗಿತ್ತು .ಬಿದ್ದ ಬಾಟಲಿಯಿಂದ ಹೊರಟ ನಮ್ಮ ರಾಕೆಟ್ ಒಳ್ಳೇ ಪರಮಾಣು ಬಾಂಬ್ ಥರಾ ಆ ಬಟ್ಟೆ ಷೋರೂಮ್ ಕಡೆಗೆ ಶರವೇಗದಲ್ಲಿ ಹೊರಡ್ತು.ನಮಗೆಲ್ಲಾ ಜೀವವೇ ಬಾಯಿಗೆ ಬಂದ ಅನುಭವ.ಆ ಕ್ಷಣದಲ್ಲಿ ನಮ್ಮ ತಲೆಯಲ್ಲಿ ಬಂದಿದ್ದು ಆ ರಾಕೆಟ್ ಬಟ್ಟೆ ಷೋರೂಮ್ ಒಳಗೆ ಬಿದ್ರೇ ಏನಾಗಬಹುದು ಅನ್ನುವುದಕ್ಕಿಂತ, ಆ ವಿಷಯ ನಮ್ಮ ಅಪ್ಪಯ್ಯನಿಗೆ ಗೊತ್ತಾದ್ರೇ ಏನಾಗಬಹುದು? ಅನ್ನುವುದೇ ನಮಗಾಗ ಹೆಚ್ಚು ಭಯ ತರಿಸಿತ್ತು. ಮೊದಲೇ ನಮ್ಮಪ್ಪಯ್ಯ ಧೂರ್ವಾಸ ಮುನಿಯ ಅಪರಾವತಾರ. ಸಧ್ಯ… ಆ ರಾಕೆಟ್ ಸೀದಾ ಹೋಗಿ ಆ ಷೋರೂಮ್ ಗ್ಲಾಸಿನ ಮುಂದೆ ಇದ್ದ ಒಂದು ಕಂಬಕ್ಕೆ ಬಡಿದು ಅಲ್ಲೇ ಡಮ್ ಎಂದು ಸದ್ದುಮಾಡಿ ಉರಿದು ಹೋಯ್ತು.ನಮಗೆ ಹೋದ ಜೀವ ಬಂದ ಅನುಭವ.ಅಲ್ಲಿಗೇ ಪಟಾಕಿ ಹೊಡೆಯುವ ನಮ್ಮ ಕಾರ್ಯಕ್ರಮಕ್ಕೆ ಅಲ್ಪವಿರಾಮ ನೀಡಿದೆವು.
ಈ ಘಟನೆ ನೆಡೆದು ಮೂವತ್ತು ವರ್ಷ ಮೇಲಾದರೂ ಈಗಲೂ ಆ ನೆನಪು ನಮ್ಮೆಲ್ಲರ ಮನಗಳಲ್ಲಿ ಹಸಿರಾಗಿದೆ. ಹೀಗೆ ನಮ್ಮಬಾಲ್ಯ, ನಮ್ಮ ಅಪ್ಪಯ್ಯ, ನಮ್ಮ ಆ ಕಾಲದ ದೀಪಾವಳಿಯ ಸಡಗರ ಇವನ್ನೆಲ್ಲಾ ನೆನಪು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ‘ಭಂಡಾರಿವಾರ್ತೆ’ ಯ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಧನ್ಯವಾದಗಳು.