November 22, 2024
depawali-5

          ದೀಪಾವಳಿ ಬದುಕಿನ ಸಂಭ್ರಮವನ್ನ ಹೆಚ್ಚಿಸುವ ಹಬ್ಬ. ಹಬ್ಬ ಎಂದಾಕ್ಷಣ ಹಲವು ವರುಷಗಳ ನೆನಪು, ಬಾಂಧವ್ಯಗಳು ಅದರ ಜೊತೆಗೆ ಬೆಸೆದುಕೊಂಡಿರುತ್ತವೆ. ಬಾಲ್ಯದಲ್ಲಿ ಅನುಭವಿಸಿದ ಹಬ್ಬದ ಪ್ರತಿಕ್ಷಣವೂ ಅಮೂಲ್ಯ ಮುತ್ತುಗಳು. ಆ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದು ಬೆಳಕಿನಂತೆ ನಮ್ಮೊಂದಿಗೆ ಪ್ರತಿಫಲಿಸುತ್ತಿರುತ್ತದೆ. ಜಗತ್ತೇ ಆಚರಿಸುವ ದೀಪದ ಹಬ್ಬದ ಗಮ್ಮತ್ತೇ ವಿಶೇಷವಾದದ್ದು. ಕಳೆದು ಹೋದ ಬಾಲ್ಯದ ನೆನಪಿನ ಸುರುಳಿಗಳು ನೆಲಚಕ್ರದಂತೆ ನಮ್ಮ ಮುಂದೆ ನಮ್ಮ ಕಣ್ಣಮುಂದೆ ಬಂದುಹೋಗುತ್ತವೆ.
ದೀಪಾವಳಿ ಅಂದಾಕ್ಷಣ ನೆನಪಿಗೆ ಬರೋದೆ ಎಣ್ಣೆಸ್ನಾನ, ಗೋಪೂಜೆ, ಬಲೀಂದ್ರಪೂಜೆ, ಅಂಗಡಿಪೂಜೆ, ಹಬ್ಬದ ತಿಂಡಿತಿನಿಸುಗಳು, ಪಟಾಕಿಯ ಸದ್ದುಗಳು. ಅಬ್ಬಾ! ಎಷ್ಟು ಮಜವಾಗಿತ್ತು ಬಾಲ್ಯದ ದೀಪಾವಳಿ. ಈಗಿನ ಕಾಂಕ್ರೀಟ್ ಕಾಡಿನ, ರಜ ಸಿಗದ ಉದ್ಯೋಗದ ನಡುವಿನ ಹಬ್ಬದ ಸಂಭ್ರಮದಲ್ಲಿ ಬಾಲ್ಯದ ಪ್ರಕೃತಿ ಜೊತೆಗಿನ ದೀಪಾವಳಿಯು ಬದುಕಿನ ಅಮೂಲ್ಯ ಕ್ಷಣಗಳು ಅನಿಸುತ್ತದೆ. “ಅಮ್ಮಾ, ನನಗೆ ಈ ಸಲ ತುಂಬಾ ಪಟಾಕಿ ಕೊಡಿಸಬೇಕು” ಎಂದು ಅಮ್ಮನ ಕೈಯಿಂದ ಕಾಸು ಕೀಳುವ ಕೆಲಸ ಒಂದು ವಾರದ ಮುಂಚೆಯೇ ಶುರುವಾಗುತ್ತಿತ್ತು. ಎಲೆಕ್ಯಾಪ್, ರೋಲ್ಕ್ಯಾಪ್, ಜೊತೆಗೊಂದು ಪಿಸ್ತೂಲ್ ಹಬ್ಬಕ್ಕೂ ಮೊದಲೇ ನಮ್ಮ ಕೈ ಸೇರುತ್ತಿದ್ದವು. ಪಿಸ್ತೂಲ್ ಕೈಯಲ್ಲಿ ಹಿಡಿದು ಗುರಿ ಇಟ್ಟರೆ ನಾವು ಯಾವ ಶಾರ್ಪ್ ಶೂಟರ್ಗೂ ಕಮ್ಮಿ ಇಲ್ಲ ಎಂಬ ಭಾವನೆ ಪುಟ್ಟ ಮನಸ್ಸಿನಲ್ಲಿ. ಎಲೆಕ್ಯಾಪ್ ನ ಕಲ್ಲಲ್ಲಿ ಗುದ್ದಿ ಸಿಡಿಸುವಾಗ ಎಷ್ಟು ಬಾರಿ ಕೈ ಜಜ್ಜಿಕೊಂಡಿಲ್ಲ. ಶಾಲೆಗೆ ಪಟಾಕಿ ತರಬಾರದು ಎಂದು ಟೀಚರ್ ಸ್ಟ್ರಿಕ್ಟ್ ಆಗಿ ಆರ್ಡರ್ ಮಾಡಿದ್ದರೂ ಯಾರಿಗೂ ತಿಳಿಯದಂತೆ ಬ್ಯಾಗಿನಲ್ಲಿ ಪಟಾಕಿ ಒಯ್ದು ಶಾಲೆ ಬಿಟ್ಟ ನಂತರ ಗೆಳೆಯರ ಜೊತೆಗೆ ಮೈದಾನದಲ್ಲಿ ಪಟಾಕಿ ಬಿಡುವ ಖುಷಿಯೇ ಅಪರೂಪ. ನೆನಪಿಸಿಕೊಂಡಾಗಲೆಲ್ಲಾ ಸಣ್ಣಗೆ ನಗು. ಹಬ್ಬದಂದು ಮುಂಜಾನೆ ಬೇಗನೆ ಎದ್ದು ಮೈಗೆಲ್ಲಾ ಎಣ್ಣೆಹಚ್ಚಿ ಸ್ನಾನಮಾಡಿ ವರ್ಷಕೊಮ್ಮೆ ಕೊಡಿಸುವ ಹೊಸಬಟ್ಟೆ ತೊಟ್ಟಾಗ ಮೈಮನಸಲ್ಲೆಲ್ಲಾ ಹೊಸ ಉಲ್ಲಾಸ. ಅದೇ ದೀಪಾವಳಿಯ ಆರಂಭ. ಅಮ್ಮ ಮಾಡಿದ ಹಬ್ಬದ ತಿಂಡಿ ದೋಸೆಗೆ ಆವತ್ತು ಎಂಥದೋ ಸ್ಪೆಷಲ್ ರುಚಿ.
ಕತ್ತಲಾಗುತ್ತಿದಂತೆ ಮಣ್ಣಿನ ಹಣತೆಯನ್ನು ಮನೆಯ ಸುತ್ತ ಇಟ್ಟು ಅಮ್ಮ ದೀಪ ಹಚ್ಚುತ್ತಿದ್ದರೆ, ನಮ್ಮದು ಪಟಾಕಿ ಹೊಡೆಯುವ ಸಂಭ್ರಮ. ನೆಲಚಕ್ರದ ಗಿರಗಿರ ಸುತ್ತಾಟ, ಮಳೆಬಿಲ್ಲಿನ ಚಿತ್ತಾರ, ಸುರ್ ಸುರ್ ಕಡ್ಡಿಯ ಹೊಳೆಯುವ ನಕ್ಷತ್ರಗಳು, ತಾರಲೋಕವೇ ಮನೆಯಂಗಳದಲ್ಲಿ ಬಂದ ಸಂಭ್ರಮ. ಬೆಂಕಿಹಚ್ಚಿ ಎಸೆದ ಪಟಾಕಿ ಸುರ್ ಸುರ್ ಎಂದು ಅರ್ಧಕ್ಕೆ ನಿಂತಾಗ, ಮೆಲ್ಲಗೆ ಅದನ್ನು ನೋಡಲು ಹತ್ತಿರ ಹೋದಾಗ ಡಂ ಅಂತ ಎಷ್ಟು ಬಾರಿ ಹೆದರಿಸಿಲ್ಲ. ನೆಲಚಕ್ರ ಕಾಲ ಕೆಳಗೇ ಬಂದಾಗ ನಮ್ಮ ಅತ್ತಿಂದಿತ್ತ ಓಡಾಟ ಮನೆಯವರ ನಗುವಿಗೆ ಕಾರಣವಾಗುತ್ತಿದ್ದ ನೆನಪುಗಳು ಎಷ್ಟೊಂದು ಅಪರೂಪವಾಗಿಬಿಟ್ಟವು. ಅಪ್ಪ ಲಕ್ಷ್ಮಿಪಟಾಕಿ ಮತ್ತು ದೊಡ್ಡ ಪಟಾಕಿಗಳನ್ನ ಕೈಯಲ್ಲೇ ಸುಡುವಾಗ ಏನೋ ಅದ್ಬುತ ಕಂಡಂತೆ ನಮಗೆಲ್ಲ. ಬೆಳೆದಂತೆ ನಾವು ಅದರಲ್ಲಿ ಪರಿಣಿತಿ ಹೊಂದಿದೆವು.
          ಗೋಪೂಜೆ ದಿನ ಗೋವುಗಳಿಗೆ ಸ್ನಾನ ಮಾಡಿಸುವುದೇ ಖುಷಿ. ಸಣ್ಣ ಕರುಗಳು ನಮಗೆ, ದೊಡ್ಡ ದನಗಳು ಹಿರಿಯರಿಗೆ ಎಂದು ಅವುಗಳನ್ನು ನದಿಗೆ ಕೊಂಡೊಯ್ದು ಸ್ನಾನಮಾಡಿಸಿ ಅವುಗಳ ಜೊತೆಗೆ ನಮ್ಮದೂ ಈಜಾಟ ನಡೆಯುತ್ತಿತ್ತು. ಅವುಗಳಿಗೆ ಮಧುಮಗಳಂತೆ ಗೊಂಡೆಹೂವಿನ ಅಲಂಕಾರ ಮಾಡಿ ಪೂಜೆಗೆ ಸಿದ್ಧಪಡಿಸುತ್ತಿದ್ದೆವು. ರಾತ್ರಿ ಆಗುತ್ತಿದ್ದಂತೆ ಬುಟ್ಟಿಯೊಳಗೆ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಂಡು ಹಿರಿಯರ ಜೊತೆಗೆ ಗುಡ್ಡೆ ಕಡೆಗೆ ಬಲೀಂದ್ರ ಪೂಜೆಗೆ ಹೋಗುವ ಚಂದ ಅನುಭವಿಸಿದರೇ ಬಲ್ಲರು. ಗದ್ದೆಯಲ್ಲಿ ನೆಟ್ಟ ಕೋಲಿನ ತ್ರಿಭುಜಕ್ಕೆ ಬತ್ತಿ ಇಟ್ಟು ಕೆಳಗೆ ಬಾಳೆಎಲೆ ಹಾಕಿ ಬಲೀಂದ್ರನಿಗೆ ಎಡೆ ಇಟ್ಟು, ಹಿರಿಯರು ಹೇಳುವ ಪಾರ್ದನಕ್ಕೆ ಧ್ವನಿಗೂಡಿಸಿ “ಒರ ಬಲ ಬಲೀಂದ್ರ ಕೂ……” ಎಂದು ಬಲೀಂದ್ರನನ್ನು ಕರೆಯುವ ನೆನಪುಗಳು ಮಾತ್ರ ಬಹಳ ಖುಷಿ ತರಿಸುತ್ತವೆ. ಮನೆಯ ಅಂಗಳಕ್ಕೆ ಬಂದು ಮತ್ತೆ ಪಟಾಕಿ ಸದ್ದು ಶುರು. ಅಯ್ಯೋ ನನ್ನ ಪಟಾಕಿ ಖಾಲಿ ಆಯಿತು ಎಂದು ಸಪ್ಪೆಮೋರೆ ಹಾಕುತ್ತಾ, ಪಕ್ಕದ ಮನೆಗೆ ಓಡಿಹೋಗಿ ಅಲ್ಲಿ ಮಕ್ಕಳ ಜೊತೆ ಸೇರಿ ಸಂಭ್ರಮ ಪಟ್ಟದ್ದೂ ಇದೆ. ಒಬ್ಬರ ಕಾಲ ಕೆಳಗೆ ಒಬ್ಬರು ಪಟಾಕಿ ಹಾಕುತ್ತಾ ಅನುಭವಿಸಿದ ಖುಷಿ ಮರೆಯಲಾಗದು. ಕೊನೆಗೆ ಗಡದ್ದಾಗಿ ಹಬ್ಬದೂಟ ಮಾಡಿ ನಿದ್ರೆಗೆ ಶರಣಾದರೆ ಮತ್ತೆ ಯಾವ ಬಾಂಬ್ ಸದ್ದಿಗೂ ಎಚ್ಚರವಾಗುತ್ತಿರಲಿಲ್ಲ.
ಇಂದು ಇವೆಲ್ಲಾ ಕೇವಲ ನೆನಪಷ್ಟೆ. ಈ ನೆನಪುಗಳು ದೀಪಾವಳಿಯ ಜೊತೆ ನಮ್ಮ ಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತವೆ. ಬಾಲ್ಯವಂತೂ ಮರಳಿ ಬರುವುದಿಲ್ಲ. ಆದ್ರೆ ಬಾಲ್ಯದ ನೆನಪಿನ ಬುತ್ತಿ ಮಾತ್ರ ಪ್ರತಿಕ್ಷಣವೂ ಸಿಹಿಯನ್ನ ಉಣಿಸುತ್ತಲೇ ಇರುತ್ತದೆ. ಆ ನೆನಪು ಸದಾ ಶಾಶ್ವತವಾಗಿರಬೇಕು.

✍🏻ದೀಪಕ್ ಭಂಡಾರಿ ಮುಚ್ಚೂರು.

Leave a Reply

Your email address will not be published. Required fields are marked *