ಬಾಲ್ಯದ ದಿನಗಳೇ ಹಾಗೆ…ಎಲ್ಲವೂ ಅವಿಸ್ಮರಣೀಯ. ಹಬ್ಬ ಹರಿದಿನಗಳಲ್ಲಂತೂ ಕೇಳೋದೆ ಬೇಡ. ಸ್ನೇಹಿತರು, ಸಂಬಂಧಿಕರೊಂದಿಗೆ ಬೆರೆತು ಪಟ್ಟ ಸಂಭ್ರಮ ವರುಷ ಕಳೆದರೂ ನೆನಪಿನ ಪುಟದಲ್ಲಿ ಅಚ್ಚೊತ್ತಿರುತ್ತದೆ. ಇನ್ನು ದೀಪಾವಳಿ ಹಬ್ಬದ ಸಡಗರವಂತೂ ಹೇಳೋದೆ ಬೇಡ, ಮರೆಯಬೇಕೆಂದರೂ ಮರೆಯಲಾಗದ ದಿನಗಳವು.
ಹೊಸ ಬಟ್ಟೆ, ಸಿಹಿ ತಿಂಡಿಯ ಸವಿಯ ಜೊತೆಗೆ ಎಲ್ಲರೊಂದಿಗೆ ಸೇರಿ ಹಬ್ಬವನ್ನು ಆಚರಿಸುವ ಗಮ್ಮತ್ತೇ ಬೇರೆ. ಬೆಳಗ್ಗೆ ಬೇಗ ಎದ್ದು ಎಣ್ಣೆ ಹಚ್ಚಿ ಬಿಸಿ ನೀರಿನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಅಕ್ಕಪಕ್ಕದ ಸ್ನೇಹಿತರಿಗೆಲ್ಲ ಶುಭಾಷಯ ಹೇಳೋ ನೆಪದಲ್ಲಿ ಅವರಿಗೆಲ್ಲ ಹೊಸ ಬಟ್ಟೆಯನ್ನು ತೋರಿಸೋ ಖುಷಿಯೇ ಬೇರೆ. ಸಂಜೆ ಆದ್ರೆ ಸಾಕು ಮನೆ ಮುಂದೆ, ತುಳಸೀಕಟ್ಟೆ ಸೇರಿದಂತೆ ಸಿಕ್ಕ ಸಿಕ್ಕ ಜಾಗದಲ್ಲೆಲ್ಲಾ ಹಣತೆಯನ್ನು ಬೆಳಗಿಸಿದ ಬಳಿಕ ಮನೆಯ ಲೈಟ್ ಆಫ್ ಮಾಡಿ ದೀಪದ ಬೆಳಕಲ್ಲೇ ಮನೆಯನ್ನು ನೋಡುವ ಸಂಭ್ರಮ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಇನ್ನು ದೊಡ್ಡ ದೊಡ್ಡ ಪಟಾಕಿಗಳಿಂದ ಸ್ವಲ್ಪ ದೂರವುಳಿದಿದ್ದ ನಮಗೆ ಸುರ್ ಸುರ್ ಬತ್ತಿ ರಂಗು ಇನ್ನೂ ನೆನಪಲ್ಲಿದೆ. ದೊಡ್ಡ ದೊಡ್ಡ ಪಟಾಕಿಗಳೇನಿದ್ರೂ ಅಪ್ಪನ ಪಾಲು.
ಇನ್ನು ಹಬ್ಬ ಅಂದ್ಮೇಲೆ ಶಾಲೆಗಳಿಗೆ ರಜಾ ಇದ್ದೇ ಇದೆ. ಬೆಳಗ್ಗೆ ಅಮ್ಮ ಮಾಡಿ ಕೊಟ್ಟ ದೋಸೆ ತಿಂದು ಅಕ್ಕ ಪಕ್ಕದ ಸ್ನೇಹಿತರೆಲ್ಲ ಒಂದೆಡೆ ಸೇರಿ ಆಟ ಆಡೋದಕ್ಕೆ ಆರಂಭಿಸಿದರೆ ಸಮಯ ಸರಿದಿದ್ದೇ ಗೊತ್ತಾಗ್ತಾ ಇರ್ಲಿಲ್ಲ. ನಮ್ಮದೇ ಪ್ರಪಂಚ, ಅಲ್ಲಿ ನಮ್ಮದೇ ಕಾರ್ಬಾರು. ಮತ್ತೆ ಅಮ್ಮ ಕರೆದಾಗಲೇ ಊಟದ ಸಮಯ ಆಗಿದೆ ಅಂತ ತಿಳಿಯೋದು.
ಈಗ ಅದೆಲ್ಲಾ ನೆನಪುಗಳಷ್ಟೇ. ಹಬ್ಬದ ಸಂಭ್ರಮವೂ ಹಿಂದಿನಷ್ಟು ಖುಷಿ ಕೊಡುತ್ತಿಲ್ಲ. ಸ್ನೇಹಿತರು ಬಿಡಿ ಮನೆಯವರೊಂದಿಗೂ ಹಬ್ಬವನ್ನೂ ಆಚರಿಸಲು ಜನರಿಗೆ ಪುರುಸೊತ್ತಿಲ್ಲ. ಆಫೀಸ್ ನಲ್ಲಿ ರಜೆನೇ ಸಿಗೋಲ್ಲ, ಇನ್ನು ಹಬ್ಬದ ಖುಷಿ ಎಲ್ಲಿ ಬಂತು ಅಂತಾರೆ ಕೆಲವರು. ಅದೂ ನಿಜ ಬಿಡಿ. ಹಬ್ಬದ ದಿನ ಮನೆಗೆ ಬಂದವರಿಗೂ ಮನೆ ಮಂದಿಯೊಂದಿಗೆ ದಿನ ಕಳೆಯಲು ಈ ಮೊಬೈಲು ಬಿಡಬೇಕಲ್ಲ. ಇರುವ ವಾಟ್ಸಾಪ್ ಗ್ರೂಪ್ ಗಳಲ್ಲಿ ರೆಪ್ಲೇ ಮಾಡೋವಷ್ಟರಲ್ಲೇ ಸಂಜೆಯಾಗಿ ಬಿಡುತ್ತೆ. ಇನ್ನು ಮನೆ ಮನೆಗೆ ತೆರಳಿ ಶುಭಾಶಯ ಹೇಳೋ ಕಾಲ ಮುಗಿದೇ ಹೋಗಿದೆ. ಈಗ ಏನಿದ್ರೂ, ಫೇಸ್ ಬುಕ್, ವಾಟ್ಸಾಪ್ ನಲ್ಲೇ ಶುಭಾಶಯದ ಸಂದೇಶ ರವಾನೆ…
ಏನೇ ಇರಲಿ ಬಾಲ್ಯದ ದಿನಗಳಿಗೆ ಸರಿಸಾಟಿ ಯಾವುದೂ ಇಲ್ಲ. ಆ ದಿನದ ತುಂಟಾಟ, ಸಂಭ್ರಮ, ಸಡಗರ ಇನ್ನೆಂದೂ ಸಿಗೋದು ಇಲ್ಲ.
✍🏻: ದಿವ್ಯ ಉಜಿರೆ