November 22, 2024
depawali-12
ಭಂಡಾರಿ  ವಾರ್ತೆಯ ‘ದೀಪಾವಳಿ-ಬಾಲ್ಯದ ನೆನಪು’  ಶೀರ್ಷಿಕೆ ನೋಡಿದೊಡನೆ ನನ್ನ ಬಾಲ್ಯದ ದಿನಗಳು ಹಾಗೆ ಕಣ್ಣ ಮುಂದೆ ಬಂದವು. ಆಗಲೇ  ಒಂದೊಂದೇ ಘಟನೆಗಳನ್ನು ಮೆಲುಕು ಹಾಕತೊಡಗಿದೆ.  ನಾನು ಹುಟ್ಟಿ ಬೆಳೆದದ್ದೆಲ್ಲ ಮಂಜೇಶ್ವರ ಸಮೀಪದ ಪಾತೂರು ಎಂಬ ಪುಟ್ಟ ಊರಿನಲ್ಲಿ. ತುಂಬು  ಕುಟುಂಬ  ನಮ್ಮದು. ಅಮ್ಮ, ಅಣ್ಣಂದಿರು, ಅಕ್ಕಂದಿರ ಜೊತೆ ನಾನು ಕೊನೆಯವ.
  ಮನೆಯಲ್ಲಿ ಹೇಳಿಕೊಳ್ಳುವಷ್ಟು ಸಿರಿತನವಿಲ್ಲದಿದ್ದರೂ, ಹಬ್ಬ ಹರಿದಿನಗಳ  ಸಂಭ್ರಮಾಚರಣೆಗೇನೂ ಕೊರತೆಯಿರಲಿಲ್ಲ. ಅಷ್ಟಮಿ, ಚೌತಿ, ಯುಗಾದಿ… ಹೀಗೆ  ಎಲ್ಲ  ಹಬ್ಬಗಳು  ಸಡಗರವೇ. ಇನ್ನು ದೀಪಾವಳಿಯಂತೂ ಕೇಳೋದೇ  ಬೇಡ. ಹಿಂದಿನ ದಿನವೇ ಎಲ್ಲರೂ ಒಟ್ಟು ಸೇರಿ ಹಂಡೆಯನ್ನು ಚೆನ್ನಾಗಿ ತೊಳೆದು ಗೊಂಡೆ ಹೂಗಳಿಂದ ಶೃಂಗರಿಸುತ್ತಿದ್ದೆವು. ಬೆಳಗ್ಗೆ  ನಾವು  ಏಳುವ  ಮುಂಚೆಯೇ ಅಮ್ಮ, ಅಕ್ಕಂದಿರು ಬಿಸಿ ನೀರು ಸಿದ್ಧಪಡಿಸುತ್ತಿದ್ದರು. ಬಳಿಕ ನಾವು ಎದ್ದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಬರೋವಷ್ಟರಲ್ಲಿ ಅವಲಕ್ಕಿ, ಬಿಸಿ  ಬಿಸಿ ದೋಸೆ ತಯಾರಾಗಿರುತ್ತಿತ್ತು. ಅದನ್ನು ತಿಂದೇ ನಮ್ಮ ಮುಂದಿನ ಕೆಲಸ. ಲಕ್ಷ್ಮಿ  ಪೂಜೆ , ಗೋ  ಪೂಜೆ ಹೀಗೆ ದೀಪಾವಳಿಯ ಮೂರು ದಿನಗಳು ಮನೆಯಲ್ಲಿ ಸಂಭ್ರಮ, ಸಡಗರ. ಈಗಲೂ ಆ ದಿನಗಳನ್ನು ನೆನಪಿಸಿಕೊಂಡರೆ ಕಣ್ಣು ತುಂಬಿ  ಬರುತ್ತೆ. ಬೆಲೆ ಬಾಳುವ ಬಟ್ಟೆ ಖರೀದಿಗಾಗಲಿ, ದುಬಾರಿ ಪಟಾಕಿ ಕೊಳ್ಳೋಕೆ ಆಗ ನಮ್ಮ ಬಳಿ ಹಣವಿರಲಿಲ್ಲ. ಆದ್ರೆ ಬೆಲೆ ಕಟ್ಟಲಾಗದ ಪ್ರೀತಿ, ಬಾಂಧವ್ಯವಿತ್ತು. ಏನೇ ಕಷ್ಟ ಬಂದರೂ ಒಟ್ಟಾಗಿ ಎದುರಿಸುವ ಒಗ್ಗಟ್ಟಿತ್ತು. ಈಗಲೂ ಕೂಡ… ಅಷ್ಟೇ ಅನ್ಯೋನ್ಯತೆ, ಅದೇ ಪ್ರೀತಿ, ಅದೇ ಕಾಳಜಿ.
  ಕಾಲ ಬದಲಾಗಿದೆ. ಕೂಡು ಕುಟುಂಬಗಳು ಒಡೆದು  ಹೋಗಿದೆ. ಒಬ್ಬರೇ ಮಕ್ಕಳಿರುವ ಕೆಲ ಮಕ್ಕಳಿಗೆ ಸಂಬಂಧಗಳ ಮಹತ್ವವೇ ತಿಳಿದಿಲ್ಲ. ಕೈ ತುಂಬ  ಸಂಬಳ ಸಿಗುವ ಉದ್ಯೋಗವಿದೆ. ಪ್ರತಿಯೊಂದನ್ನೂ ದುಡ್ಡಿನಿಂದಲೇ ಅಳೆಯುವ ನಾವು ಸಂಬಂಧಗಳ ಬೆಲೆ ಏನೆಂಬುದನ್ನು ತಿಳಿದುಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ.
  ಹೌದು, ಎಲ್ಲವೂ ಯಾಂತ್ರೀಕೃತವಾಗುತ್ತಿದೆ. ಕ್ರಮೇಣ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ…ಜೊತೆಗೆ ನಮ್ಮತನವನ್ನು ಕೂಡಾ…
 
ಕುಶಲ್ ಕುಮಾರ್, ಬೆಂಗಳೂರು

Leave a Reply

Your email address will not be published. Required fields are marked *