
ನಾವು ಮೂಲತಃ ದಕ್ಷಿಣ ಕನ್ನಡದವರಾದರೂ ನಮ್ಮ ತಂದೆ ತಾಯಿ ಅನಿವಾರ್ಯ ಕಾರಣದಿಂದ ದುಡಿಮೆಗಾಗಿ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ದಲ್ಲಿ ಬಂದು ನೆಲೆಸಿದರು. ಮಲೆನಾಡಿನ ಈ ಭಾಗದಲ್ಲಿ ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ಮಹತ್ವ ಇದೆ. ನಮ್ಮ ತಾಯಿಯೋ ಸಂಪ್ರದಾಯಸ್ಥರು. ಹಾಗಾಗಿ ಎಲ್ಲಾ ಹಬ್ಬಗಳೂ ಮನೆಯಲ್ಲಿ ಸಂಪ್ರದಾಯ ಬದ್ದವಾಗಿ ನಡೆಯಬೇಕಿತ್ತು.
ಇಂತಹ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಮೂರು ದಿನಗಳ ಕಾಲ ಅದ್ದೂರಿಯಾಗಿ ಹಬ್ಬದ ಆಚರಣೆ ನಡೆಯುತ್ತಿತ್ತು. ಅದರಲ್ಲಿ ಮೊದಲ ದಿನ ಅಭ್ಯಂಜನ ಸ್ನಾನ. ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ಎಲ್ಲರೂ ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಸಿಹಿ ತಿನ್ನುವುದು ವಾಡಿಕೆ. ಹಾಗೆ ಮನೆಯಲ್ಲಿರುವ ಎಲ್ಲಾ ದನಕರುಗಳಿಗೆ ಕಬ್ಬಿಣದ ಕೊಳವೆ ಬಿಸಿ ಮಾಡಿ ಬರೆ ಹಾಕುವುದು ಪದ್ದತಿ. ಇದೇ ಸಮಯದಲ್ಲಿ ಅಭ್ಯಂಜನ ಸ್ನಾನ ಆದ ಕೂಡಲೇ ಮನೆಯವರಿಗೆಲ್ಲಾ ಅಗರಬತ್ತಿಯಿಂದ ‘ಬರೆ’ ಹಾಕುತ್ತಿದ್ದರು. ಹೀಗೆ ಮಾಡುವುದರಿಂದ ಕೆಟ್ಟ ಶಕ್ತಿಗಳಿಂದ ಏನೂ ತೊಂದರೆ ಬರುವುದಿಲ್ಲ ಎಂಬ ನಂಬಿಕೆ.
ನಮ್ಮದೋ 6 ಮಕ್ಕಳು ಹಾಗೂ ತಂದೆ ತಾಯಿ ಇರುವ ತುಂಬು ಕುಟುಂಬ. ನಮ್ಮ ತಂದೆ ಎಲ್ಲರನ್ನೂ ಬೆಳಗ್ಗೆ ಬೇಗ ಎಬ್ಬಿಸಿ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಜೊತೆಗೆ ಮಕ್ಕಳಿಗೆ *ಬರೆ* ನೀಡುತ್ತಿದ್ದರು. ನಮ್ಮ ಕೊನೆಯ ತಮ್ಮ ರತ್ನಾಕರ ಇನ್ನೂ ಚಿಕ್ಕವನಿದ್ದ. ನಮ್ಮ ಅಣ್ಣ ತನ್ನ ಸ್ನಾನ ಮಾಡಿ ಬಂದು ನಮ್ಮ ತಮ್ಮನಿಗೆ ಒಂದು ಸಣ್ಣ ಬರೆ ಹಾಕಿದ. ಇದರಿಂದ ಚಿಕ್ಕವನಾಗಿದ್ದ ಅವನು ಅಳಲು ಪ್ರಾರಂಭಿಸಿದ. ಆಗ ನಮ್ಮ ತಾಯಿ ಅವನನ್ನು ರಮಿಸಲು ಅವನಿಗೂ ಒಂದು ಅಗರಬತ್ತಿಗೆ ಬೆಂಕಿ ಹಚ್ಚಿಕೊಟ್ಟು ನಿಧಾನವಾಗಿ ಹೋಗಿ ಅಣ್ಣನಿಗೆ ತಿಳಿಯದ ಹಾಗೆ ನೀನೂ ಅವನಿಗೆ ಬರೆ ಹಾಕು ಎಂದು ಕಳಿಸಿದರು. ಆಗ ಅವನು ಬೆಂಕಿ ಹಚ್ಚಿದ ಅಗರಬತ್ತಿಯನ್ನು ತನ್ನ ಬೆನ್ನ ಹಿಂದೆ ಹಿಡಿದುಕೊಂಡು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಬರುತ್ತಿದ್ದವನು ಒಮ್ಮೆಲೇ ಓ ಎಂದು ದೊಡ್ಡ ಧ್ವನಿಯಲ್ಲಿ ಅಳಲು ಪ್ರಾರಂಭಿಸಿದ. ಎಲ್ಲರೂ ಏನಾಯಿತು ಇವನಿಗೆ ಎಂದು ಓಡಿ ಹೋಗಿ ನೋಡಿದರೆ ತನ್ನ ಅಗರಬತ್ತಿಯಿಂದ ಅವನಿಗೆ ಅರಿಯದೆ ಅವನ ಬೆನ್ನಿಗೆ ಅವನೇ ತಾಗಿಸಿಕೊಂಡು ಮತ್ತೊಂದು ಬರೆ ಹಾಕಿಕೊಂಡಿದ್ದ. ಎಲ್ಲರಿಗೂ ಜೋರು ನಗು. ಆದರೆ ಅವನ ಎದುರು ನಗಲಾರದೆ ಎಲ್ಲರೂ ಸೇರಿ ಸಮಾಧಾನ ಮಾಡಿ ಆಮೇಲೆ ಎಲ್ಲರೂ ಸೇರಿ ಬಿದ್ದು ಬಿದ್ದು ನಕ್ಕಿದ್ದೆವು. ಈಗಲೂ ಸಹ ಆ ಘಟನೆ ನೆನೆದು ಪ್ರತೀ ಸಾರಿ ಹಬ್ಬದಲ್ಲಿ ನಗುತ್ತಾ ಇರುತ್ತೇವೆ.
✍🏻: ಸುಧಾಕರ ಆರ್ ಭಂಡಾರಿ, ಶಿರಾಳಕೊಪ್ಪ.