ದೀಪಾವಳಿ ಎಂದರೆ ದೀಪಗಳ ಹಬ್ಬ. ಮನೆ, ತೋಟ, ಗದ್ದೆ, ಕೊಟ್ಟಿಗೆ, ಕಣಜ, ತುಳಸಿ ಕಟ್ಟೆ… ಹೀಗೆ ಎಲ್ಲಾ ಕಡೆ ದೀಪಗಳು. ಕೃಷಿಕರ ಮನೆಯಲ್ಲಿ ದೀಪಾವಳಿ ಎಂದರೆ ಸಡಗರ ಸ್ವಲ್ಪ ಹೆಚ್ಚಾಗೆ ಇರುತ್ತದೆ. ಕೆಲವರಿಗೆ ಪಟಾಕಿ ಸಿಡಿಸುವ ಸಂಭ್ರಮವಾದರೆ, ಇನ್ನು ಕೆಲವರಿಗೆ ಗದ್ದೆಯಲ್ಲಿ ಬಲಿಯೇಂದ್ರನನ್ನು ಕರೆಯುವುದೇ ಮಜಾ. ಆದರೆ ನನಗೆ ದೀಪಾವಳಿ ಎಂದರೆ ಅರಿಸಿನ ಎಲೆಯ ಗಟ್ಟಿ ತಿನ್ನುವ ಹಬ್ಬ…ಹೌದು, ಅಕ್ಕಿ ಕಡೆದು ಅದನ್ನು ಅರಿಸಿನ ಎಲೆಯ ಮೇಲೆ ತಟ್ಟಿ, ಅದರ ಮೇಲೆ ಬೆಲ್ಲ ಕೊಬ್ಬರಿ ಮಿಶ್ರಣ ಹಾಕಿ ಬೇಯಿಸುತ್ತಾರೆ. ಬೇಯುವಾಗಲೇ ಅರಸಿನ ಎಲೆ ಬೀರುವ ಪರಿಮಳಕ್ಕೆ ಯಾವ ಸುಗಂಧ ದ್ರವ್ಯ ಸಹ ಸಾಟಿಯಿಲ್ಲ ಅನ್ನೋದು ನನ್ನ ಭಾವನೆ. ಚಿಕ್ಕಂದಿನಲ್ಲಿ ಎಲ್ಲರೂ ಪಟಾಕಿ ಹಚ್ಚುವಾಗ, ತುಳಸಿ ಕಟ್ಟೆ ಯಲ್ಲಿ ಶ್ರೀನಿವಾಸ ದೇವರಿಗೆ ಮುಡಿಪು ಇಡುವಾಗ ನಾನು ನಾಪತ್ತೆ. ಗಟ್ಟಿ ತಿನ್ನಲು ಅಡುಗೆ ಮನೆಯಲ್ಲಿ ದೊಡ್ಡ ಪಾತ್ರೆಯ ಮುಚ್ಚಳ ತೆಗೆಯಲು ಒದ್ದಾಡುತ್ತಿದ್ದ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಊಟಕ್ಕೆ ಕುಳಿತಾಗ ಎರಡು ಗಟ್ಟಿ ಸಿಗುತ್ತದೆ. ಆದ್ರೆ ಅರಿಸಿನ ಗಟ್ಟಿ ಪ್ರಿಯನಾದ ನನಗೆ ಅದು ಸಾಕಾಗುವುದಿಲ್ಲ. ಅದಕ್ಕಾಗಿ ನಾನು ಕಂಡುಕೊಂಡ ಉಪಾಯ ‘ಗಟ್ಟಿ ಕಳ್ಳತನ’.
ನಮ್ಮದು ಅವಿಭಕ್ತ ಕುಟುಂಬ. ಅಜ್ಜಿಯಂದಿರು, ಅಜ್ಜಂದಿರು, ಮಾವಂದಿರು, ಅತ್ತೆಯಂದಿರು, ಅಮ್ಮ, ಚಿಕ್ಕಮ್ಮಂದಿರು, ಮಕ್ಕಳು ಸೇರಿದಂತೆ ನಲುವತ್ತು ಜನರಿದ್ದೆವು. ಒಂದು ಬಾರಿ ಈ ಗಟ್ಟಿ ಕಳ್ಳತನಕ್ಕೆ ಮುಂದಾದೆ. ಜೋರಾಗಿ ಕೇಳಿದ ಶಬ್ದಕ್ಕೆ ಹೊರಗಿದ್ದವರೆಲ್ಲಾ ಒಳಗೆ ಓಡಿ ಬಂದಾಗ ನಾನು ನೆಲದಲ್ಲಿ ಹೊರಳಾಡುತ್ತಿದ್ದೆ. ಗಟ್ಟಿ ತಿನ್ನಲೆಂದು ದೊಡ್ಡ ಪಾತ್ರೆಯ ಬಾಯಿ ಕಷ್ಟ ಪಟ್ಟು ತೆರೆದರೆ ಪಾತ್ರೆಯ ಒಳಗಿಂದ ಬಿಸಿ ಹಬೆ ನನ್ನ ಮುಖಕ್ಕೆ ಬಡಿಯಬೇಕೇ. ಕೇಳಬೇಡಿ ನನ್ನ ಅವಸ್ಥೆ, ಕಣ್ಣಿಗೆ ಕತ್ತಲು ಕವಿದಂತೆ ಆಗಿ, ಮುಖ ಉರಿದು ಸಹಿಸಲಾರದೆ ಜೋರಾಗಿ ಕಿರುಚಿಕೊಂಡೆ. ನನ್ನ ಅವಸ್ಥೆ ನೋಡಿಯೇ ನನ್ನ ಕಳ್ಳಾಟದ ಅರಿವು ಮನೆಯವರಿಗಾಗಿತ್ತು ಅಂತ ಬೇರೆ ಹೇಳಬೇಕಾಗಿಲ್ಲ. ನಾನು ಮಾಡಿದ ಎಡವಟ್ಟಿನಿಂದ ತಾಯಿಗೆ ನಾಚಿಕೆ ಆಗಿ ನನ್ನನ್ನು ಹೊರಗೆ ಎಳೆದುಕೊಂಡು ಹೋಗಿ ನಾಲ್ಕು ಬಾರಿಸಿದರು. ಏಟಿನ ಮೇಲೆ ಏಟು ಬೆನ್ನ ಮೇಲೆ ಸರಿಯಾಗೇ ಬಿತ್ತು. ಅಂದು ಅಳುತ್ತಾ ಊಟ ಮಾಡದೇ ಮಲಗಿದೆ. ನಡುರಾತ್ರಿ ಅಮ್ಮ ಎಬ್ಬಿಸಿ ಮೈ ತಡವಿ ಮುತ್ತು ಕೊಟ್ಟು ಅವರ ಪಾಲಿದ್ದು ಸೇರಿಸಿ ನಾಲ್ಕು ಅರಿಸಿನ ಗಟ್ಟಿ ಕೊಟ್ಟರು. ಗಟ್ಟಿ ಕಂಡಾಗ ನನ್ನ ನೋವೆಲ್ಲಾ ಮರೆಯಾಗಿ ಹೋಯಿತು.
ದೀಪಾವಳಿ ಮತ್ತೆ ಬಂದಿದೆ. ಇಷ್ಟು ವರ್ಷಗಳ ಬಳಿಕ ಮತ್ತೆ ಆ ಘಟನೆ ನೆನಪಾಗುತ್ತಿದೆ. ಜೊತೆಗೆ ಅಮ್ಮನ ನೆನಪು ಸಹ…
✍🏻 : ಸುಧಾಕರ್ ಬನ್ನಂಜೆ