January 18, 2025
depawali-10

    ಭಾರತೀಯರ ಸಂಸ್ಕೃತಿಯಲ್ಲಿ ದೀಪವನ್ನು ವಿಧವಿಧವಾಗಿ ವರ್ಣಿಸಲಾಗಿದೆ. ಅಜ್ಞಾನವನ್ನು ಕತ್ತಲೆಗೂ, ಜ್ಞಾನವನ್ನು ಬೆಳಕಿಗೂ ಹೋಲಿಸಲಾಗಿದೆ. ದೀಪ ಬೆಳಗಿಸುವುದೆಂದರೆ ನಮ್ಮಲ್ಲಿನ ಅಜ್ಞಾನವನ್ನು ದೂರ ಸರಿಸಿ ಜ್ಞಾನ ಮಾರ್ಗದ ಕಡೆಗೆ ಮುನ್ನಡೆಯುತ್ತಿರುವುದೇ ಆಗಿದೆ. ದೀಪದ ಪ್ರಕಾಶತೆ ಜ್ಞಾನದ ಸಂಕೇತ. ಇದೇ ಕಾರಣಕ್ಕಾಗಿ ದೀಪಾವಳಿಯನ್ನು ಬೆಳಕಿನ ಹಬ್ಬವೆಂದು ಕರೆಯಲಾಗುತ್ತದೆ. ದೀಪಾವಳಿ ಎಂದರೆ ಸಾಲು ಸಾಲು ದೀಪಗಳು. ಇದು ದೀಪಾವಳಿಯ ಪ್ರಮುಖ ಆಕರ್ಷಣೆ. ಇದೇ ಹಬ್ಬದ ವೈಶಿಷ್ಟ್ಯವೂ ಕೂಡ. ಸತ್ಯ ಮತ್ತು ಬೆಳಕಿನತ್ತ ನಮ್ಮನ್ನು ಕರೆದೊಯ್ಯುವ ಈ ಹಬ್ಬಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ.
ಹಬ್ಬಗಳ ಹಿನ್ನಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ವೈಜ್ಞಾನಿಕ ನಿಗೂಢಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಪುಣ್ಯ ಕಥೆಯನ್ನು ಬೆಸೆದು ಹಬ್ಬಕ್ಕೆ ಮೆರುಗು ನೀಡಿದ್ದಾರೆ.

ಅಮಾವಾಸ್ಯೆಯಂದು ದೀಪಗಳನ್ನು ಹಚ್ಚಿ ಪಟಾಕಿಗಳನ್ನು ಸಿಡಿಸಿ, ಲೋಕ ಕಂಟಕನಾದ ನರಕಾಸುರನನ್ನು ಕೊಂದ ಸಂಭ್ರಮವನ್ನು ನೆನಪಿಸಿಕೊಂಡು ದೀಪಾವಳಿಯನ್ನು ಆಚರಿಸುತ್ತೇವೆ. ದುಷ್ಟರನ್ನು ಹೊಡೆದೋಡಿಸಿ ಶಿಷ್ಟರಾಗಿ, ಕತ್ತಲನ್ನು ತೊಲಗಿಸಿ ಜ್ಞಾನದ ಬೆಳಕನ್ನು ಬೆಳಗಿಸುವಂತಹ ಸಂಕೇತವೇ ದೀಪಾವಳಿ ಆಚರಣೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಇದು ಧರ್ಮದ ಮೂಲ ಮಂತ್ರ.
ಒಳ್ಳೆಯ ಮನಸ್ಸಿನಿಂದ ಹಬ್ಬಗಳನ್ನು ಆಚರಿಸುತ್ತೇವೆ. ಅಂತಹುದರಲ್ಲಿ ದೀಪಾವಳಿ ಹಬ್ಬ ನಮ್ಮನ್ನು ಎಚ್ಚರಿಸುತ್ತದೆ. ದುಷ್ಟರನ್ನು ನಾಶ ಮಾಡಿ ಶಿಷ್ಯರನ್ನು ರಕ್ಷಣೆ ಮಾಡುವುದೇ ದೀಪಾವಳಿ ಆಚರಣೆಯ ವಿಶೇಷತೆ. ಹಾಗೆ ವಿಚಾರ ಮಾಡುವುದಾದರೆ ದುಷ್ಟರು ಯಾರು? ಶಿಷ್ಟರು ಯಾರು? ಎಲ್ಲ ಸಮಸ್ಯೆ, ಸಂಕಟ ,ಸುಖ-ದುಃಖಗಳಿಗೆ ಮನಸ್ಸೇ ಮೂಲ. ಇದು ಮಾನವನ ಮೂಲ ಪ್ರವೃತ್ತಿ ಕೂಡಾ. ಸತ್ವ (ಸ್ವಾತಿಕ), ರಜಸ್ಸು(ಮದ), ತಮಸ್ಸು(ಅಜ್ಞಾನ) ಈ ಮೂರರಿಂದಲೂ ಕೂಡಿದವರೇ ನಾವೆಲ್ಲರು. ದೇವ, ಮಾನವ, ರಾಕ್ಷಸ ಈ ಮೂವರು ಪ್ರತಿ ವ್ಯಕ್ತಿಯಲ್ಲೂ ಇರುತ್ತಾರೆ.
ಉಲ್ಲಾಸ ಬಯಸುವುದು ಮಾನವ ಸ್ವಭಾವ. ಜೀವನದ ಕಷ್ಟ ದುಃಖಗಳನೆಲ್ಲ ಮರೆತು ಸ್ವಲ್ಪ ಕಾಲವನ್ನಾದರೂ ಸಂತೋಷದಿಂದ ಕಳೆಯಬೇಕೆಂಬುದೇ ಎಲ್ಲರ ಆಸೆ. ನಮ್ಮ ದೈನಂದಿನ ಬದುಕಿನಲ್ಲಿ ಬರುವ ಕಷ್ಟ ಕೋಟಲೆಗಳಿಂದ ಎಂದಾದರೂ ಮುಕ್ತಿ ದೊರೆಕಿತೇ!!!!. ಕತ್ತಲು ಕಳೆದು ಬೆಳಕು ಹರಿದೀತೆ!!!!!. ದುಷ್ಟರಲ್ಲದ ಶಿಷ್ಟ ಸುಸಂಸ್ಕೃತ ಸಮಾಜ ನಮ್ಮದಾಗುವುದೇ? ನಮ್ಮದಾಗಲು ಮೊದಲು ನಮ್ಮ ಮನಸ್ಸಿನ ನಿರಾಕಾರಗಳಾದ ಕಾಮ, ಕ್ರೋಧ, ಮದ, ಮತ್ಸರಗಳನ್ನು ತೊಡೆದು ಹಾಕಿ ಮನದಲ್ಲಿಡಗಿರುವ ಕೊಳೆಯನ್ನು ಹೊಸಕಿ ಜ್ಯೋತಿಯಷ್ಟೇ ಪರಿಶುದ್ಧ ನಿರ್ಮಲ ಮನಸ್ಸು ನಮ್ಮದಾಗಿಸಬೇಕು.
ಭೂಮಿಯ ಮೇಲೆ ಉದ್ಧವಿಸಿರುವ ಪ್ರತಿಯೊಂದು ಜೀವರಾಶಿ ಒಂದು ಜೀವನದ ಜ್ಯೋತಿಯಂತೆ. ಮನುಷ್ಯನ ಬಾಳಿನಲ್ಲಿ ಪ್ರತಿ ಹಂತದಲ್ಲೂ ದೀಪವನ್ನು ಬೆಳಗಿಸಲು ಪ್ರತ್ಯೇಕ ಸ್ಥಾನ ಗೌರವವಿದೆ. ಆತ್ಮಕ್ಕೆ ಮರಣವಿಲ್ಲ ಎಂಬುದು ಭಾರತೀಯರ ವಿಶ್ವಾಸ. ಆದ್ದರಿಂದಲೇ ಪಾರ್ಥಿವ ಶರೀರದ ತಲೆಯ ಭಾಗದಲ್ಲಿ ದೀಪ ಬೆಳಗಿಸುವ ಆಚಾರ ನಮ್ಮ ದೇಶಿಯರಿಗಿದೆ. ಹುಟ್ಟು ಹಬ್ಬ, ಸಂಪ್ರದಾಯದ ಕಾರ್ಯಕ್ರಮಗಳು, ದುಷ್ಟಶಕ್ತಿಗಳ ವಿನಾಶವಾದಾಗ ಹೀಗೆ ಪ್ರತಿಯೊಂದು ಪ್ರತ್ಯೇಕ ಸಂದರ್ಭಗಳಲ್ಲೂ ದೀಪಾರಾಧನೆಯನ್ನು ಮಾಡುವುದು ನಮ್ಮ ಸಂಪ್ರದಾಯ ಇದರ ನಡುವೆ ಇರುವ ಅನುಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳಲು ಆರತಿ ನೀಡುವುದು ನಮ್ಮ ಅಭ್ಯಾಸ..
ತಮಸೋಮ ಜ್ಯೋತಿರ್ಗಮಯ ಎಂಬಂತೆ ಎಲ್ಲರ ಬಾಳಿನ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಹರಿಸುವಂತಾಗಲಿ ಎಂಬುದೇ ನನ್ನ ಹಾರೈಕೆ.

✍🏻 ಸುಪ್ರೀತ ಭಂಡಾರಿ, ಸೂರಿಂಜೆ

Leave a Reply

Your email address will not be published. Required fields are marked *