November 24, 2024
IMG-20181101-WA0033
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುವ ಜಿಲ್ಲಾಡಳಿತದ ಪದ್ದತಿಯಂತೆ ಕಾರ್ಕಳ ಶ್ರೀ ಶೇಖರ್ ಭಂಡಾರಿಯವರನ್ನು ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ 2018 ರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಆಯ್ಕೆ ಮಾಡಲಾಗಿತ್ತು.

ನವೆಂಬರ್ 1,2018 ರ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ,ರಾಜ್ಯ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಶ್ರೀ ಯು.ಟಿ.ಖಾದರ್ ಶ್ರೀ ಶೇಖರ್ ಭಂಡಾರಿಯವರಿಗೆ ಸ್ಮರಣಿಕೆಯನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.

ಸಮಾರಂಭದಲ್ಲಿ ವಿದಾನಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜ಼,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು,ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ಶಶಿಕಾಂತ್ ಸೆಂಥಿಲ್,ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕಲ್ಕೂರು,ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸೆಲ್ವಮಣಿ,ಬಿಜೆಪಿಯ ವಿದಾನಸಭೆಯ ಸದಸ್ಯರುಗಳಾದ ಶ್ರೀ ಎಸ್.ಅಂಗಾರ,ಶ್ರೀ ವೈ.ಭರತ್ ಶೆಟ್ಟಿ, ಶ್ರೀ ಹರೀಶ್ ಪೂಂಜಾ,ಶ್ರೀ ಉಮಾನಾಥ್ ಕೋಟ್ಯಾನ್ ಮತ್ತು ಶ್ರೀ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.


ಕಾರ್ಕಳದ ಬೆಟ್ಟದಮನೆ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ಅಭಯ ಭಂಡಾರಿ ದಂಪತಿಯ ಪುತ್ರರಾದ ಶ್ರೀ ಕಾರ್ಕಳ ಶೇಖರ್ ಭಂಡಾರಿಯವರೊಂದು ದೈತ್ಯ ಪ್ರತಿಭೆ.ಬಾಲ್ಯದಲ್ಲಿ ಬಡತನದ ಬವಣೆಗೆ ಸಿಲುಕಿ,ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಜೀವನದಲ್ಲಿ ನೆಲೆ ನಿಂತು,ಬ್ಯಾಂಕ್ ಉದ್ಯೋಗಿಯಾಗಿ,ನಾಟಕಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗ ಪ್ರವೇಶಿಸಿ ಖಳನಟ,ಖಳನಾಯಕ,ಹಾಸ್ಯ ಪಾತ್ರ,ಪೋಷಕ ಪಾತ್ರ ಹೀಗೆ ಪಾಲಿಗೆ ಬಂದ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾ ಗಮನ ಸೆಳೆದು,ಚುಟುಕು ಸಾಹಿತ್ಯ ಕೃಷಿಗಿಳಿದು ಅಲ್ಲಿಯೂ ತಮ್ಮ ಛಾಪು ಒತ್ತಿ “ಚುಟುಕು ಸಾಹಿತಿ” “ಪ್ರಾಸ ಪ್ರವೀಣ” ನೆಂದು ಹೆಸರು ಗಳಿಸಿ,ಸಮಾಜ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಪ್ಪತ್ತರ ಹರೆಯದಲ್ಲೂ ಲವಲವಿಕೆಯಿಂದ ಇರುವ ಇವರಿಗೆ  2018 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಭಂಡಾರಿ ಸಮಾಜಕ್ಕೊಂದು ಹೆಮ್ಮೆ.


ರಾಜ್ಯೋತ್ಸವ ಪ್ರಶಸ್ತಿ ಪಡೆದ ಶೇಖರ್ ಭಂಡಾರಿಯವರನ್ನು ಅವರ ಪತ್ನಿ ಶ್ರೀಮತಿ ವಾರಿಜಾ ಶೇಖರ್ ಭಂಡಾರಿ, ಮಕ್ಕಳಾದ ಶ್ರೀಮತಿ ಪ್ರೀತಿ ಪದ್ಮನಾಭ್ ಮತ್ತು ಶ್ರೀಮತಿ ಸ್ವಾತಿ ಶರತ್,ಕುಟುಂಬವರ್ಗದವರು,ಆತ್ಮೀಯರು, ಹಿತೈಷಿಗಳು ಮತ್ತು ಸಮಸ್ತ ಭಂಡಾರಿ ಬಂಧುಗಳು ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದಾರೆ.


ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾರ್ಕಳ ಶ್ರೀ ಶೇಖರ್ ಭಂಡಾರಿಯವರನ್ನು ಭಂಡಾರಿವಾರ್ತೆ ಅಭಿನಂದಿಸಲು ಕರೆ ಮಾಡಿದಾಗ ತುಂಬಾ ಸಂತೋಷದಿಂದ ನಮ್ಮೊಂದಿಗೆ ಮಾತನಾಡುತ್ತಾ….” ಈ ಸಂದರ್ಭದಲ್ಲಿ ನಿರಂತರವಾಗಿ ನನಗೆ ಸಹಕಾರ ನೀಡುತ್ತಾ ಬಂದ ನನ್ನ ಪತ್ನಿ,ನನ್ನ ಮಕ್ಕಳು,ನನ್ನ ಸಂಪೂರ್ಣ ಕುಟುಂಬಕ್ಕೆ ನಾನು ಆಭಾರಿಯಾಗಿದ್ದೇನೆ.ಮತ್ತು ಕಾರ್ಕಳದ ದಿವಂಗತ ಶ್ರೀ ಮೋಹನ್ ದಾಸ್ ಅಡ್ಯಂತಾಯ ಅವರನ್ನು, ಅವರ ಕುಟುಂಬದವರನ್ನು ಸ್ಮರಿಸಿಕೊಳ್ಳುತ್ತೇನೆ.ಸಂಕಷ್ಟದಲ್ಲಿದ್ದ ನನಗೆ ವಿಜಯ ಬ್ಯಾಂಕ್ ನಲ್ಲಿ ಉದ್ಯೋಗ ದೊರಕಿಸಿಕೊಟ್ಟು ನನ್ನ ಬದುಕಿಗೆ ತಿರುವು ನೀಡಿದ ಮಹಾತ್ಮ ಅವರು.ಹಾಗೂ ಪ್ರಶಸ್ತಿ ಪ್ರಕಟಗೊಂಡ ಕೂಡಲೇ ನನಗೆ ಕರೆ ಮಾಡಿ ಶುಭ ಹಾರೈಸಿದ ಭಂಡಾರಿವಾರ್ತೆಗೂ ನಾನು ಕೃತಜ್ಞತೆಯನ್ನು  ಸಲ್ಲಿಸಬಯಸುತ್ತೇನೆ” ಎಂದು ನುಡಿದರು.


ಕಾರ್ಕಳ ಶೇಖರ್ ಭಂಡಾರಿಯವರಿಗೆ ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ವಿಜಯ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಪ್ರಕಾಶ್.ಪಿ.ಮಲ್ಯರಿಂದ “ವಿಜಯಶ್ರೀ ಪ್ರಶಸ್ತಿ” ಪಡೆದಿದ್ದಾರೆ. “ಕರ್ನಾಟಕ ತಿಲಕ ರಾಜ್ಯ ಪ್ರಶಸ್ತಿ,ಡಾ|| ರಾಜ್ ಕುಮಾರ್ ಸದ್ಭಾವನ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಡಾ|| ಶಿವರಾಮ ಕಾರಂತ ಸದ್ಭಾವನ ಪ್ರಶಸ್ತಿ….” ಹೀಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದ್ದು,ಈಗ ದೊರೆತಿರುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯೇನೂ ಸಾಮಾನ್ಯವಾದ ಪ್ರಶಸ್ತಿಯಲ್ಲ.ಶ್ರೀಯುತರು ಆದಷ್ಟು ಬೇಗ ರಾಜ್ಯ ಸರಕಾರದ ಮುಖೇನ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯುವಂತಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.


ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *