ಮಳೆಗಾಲದಲ್ಲಿ ಪಾಲಕ್-ಮೆಂತೆ ಸೊಪ್ಪು ತಿನ್ನಬಾರದಂತೆ! ಯಾಕೆ ಗೊತ್ತಾ?
ಮಳೆಗಾಲದಲ್ಲಿ ಪಾಲಕ್ ಸೊಪ್ಪು ತಿನ್ನಬಾರದು, ಮೆಂತ್ಯ ಸೊಪ್ಪಿನಿಂದ ದೂರ ಉಳಿಯಬೇಕು ಎಂದೆಲ್ಲಾ ಹೇಳುತ್ತಾರಲ್ಲ, ಇದು ಎಷ್ಟು ನಿಜ?
ಈಗಾಗಲೇ ಎಲ್ಲಾ ಕಡೆ ಭರ್ಜರಿಯಾಗಿ ಮಳೆಗಾಲ ಶುರುವಾಗಿದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲಿ ಕೂಡ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವಾತಾವರಣದಲ್ಲಿ ಯಾವಾಗ ಏನು ಬೇಕಾದರೂ ಬದಲಾಗಬಹುದು. ಮಳೆಗಾಲದಲ್ಲಿ ಅದು ಸಾಮಾನ್ಯ. ಕೆಲವೊಮ್ಮೆ ವಿಪರೀತ ಬಿಸಿಲು ಕೆಲವೊಮ್ಮೆ ಇದ್ದಕ್ಕಿದ್ದಂತೆ ಮಳೆ ಸಾಮಾನ್ಯವಾಗಿ ಬರುತ್ತದೆ.
ಈ ಸಂದರ್ಭದಲ್ಲಿ ಜನರಿಗೆ ಕೆಮ್ಮು, ಕಫ, ನೆಗಡಿ, ಜ್ವರ ಸಾಮಾನ್ಯವಾಗಿ ಬರುತ್ತದೆ. ವಾತಾವರಣದಲ್ಲಿನ ಇಂತಹ ಬದಲಾವಣೆಯಿಂದ ದೇಹದ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ದೇಹದಲ್ಲಿ ಸೋಂಕುಗಳು ಮನೆ ಮಾಡುತ್ತವೆ. ಹೀಗಾಗಿ ನಾವು ಯಾವ ಆಹಾರ ತಿನ್ನುತ್ತೇವೆ ಎಂಬ ಬಗ್ಗೆ ನಮಗೆ ಗಮನ ಇರಬೇಕು
ಕೆಲವು ಆಹಾರ ತಜ್ಞರು ಹೇಳುವ ಹಾಗೆ ಹಸಿರು ಎಲೆ ತರಕಾರಿಗಳು ಇಂದು ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಕೊಡುತ್ತವೆ. ಪ್ರತಿಯೊಬ್ಬರ ಆಹಾರಪದ್ಧತಿಯಲ್ಲಿ ಕೂಡ ಹಸಿರು ಎಲೆ-ತರಕಾರಿ ಇರಲೇಬೇಕು. ಆದರೆ ಮಳೆಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆಗಳನ್ನು ತಂದುಕೊಳ್ಳಬೇಕು ಎಂಬುದು ಆಹಾರ ತಜ್ಞರ ಅಭಿಪ್ರಾಯ. ಇದಕ್ಕೆ ಕಾರಣ ಏನು ಎಂದು ನೋಡುವುದಾದರೆ…….
ಹಸಿರು ಎಲೆ-ತರಕಾರಿಗಳಲ್ಲಿ ಸೂಕ್ಷ್ಮಾಣುಗಳು ಇರುತ್ತವೆ!
- ಸಾಮಾನ್ಯವಾಗಿ ಹಸಿರು ಎಲೆ-ತರಕಾರಿ ಬೆಳೆಯುವುದು ಸ್ವಲ್ಪ ನೀರಿನ ತೇವಾಂಶ ಜಾಸ್ತಿ ಇರುವ ಮಣ್ಣಿನ ಪ್ರದೇಶಗಳಲ್ಲಿ. ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಇತ್ಯಾದಿಗಳು ಇಲ್ಲಿ ಜಾಸ್ತಿ. ಸೂರ್ಯನ ಬೆಳಕು ಭೂಮಿಯ ಮಣ್ಣಿನ ಮೇಲೆ ಬೀಳುತ್ತಿದ್ದಂತೆ ಈ ಸೂಕ್ಷ್ಮಾಣುಗಳು ಬೆಳವಣಿಗೆ ಹೊಂದುತ್ತ ಸಾಗುತ್ತವೆ.
- ಇವುಗಳು ಎಲೆಗಳಿಗೂ ಕೂಡ ಅಂಟಿಕೊಂಡು ಎಲೆಗಳನ್ನು ಸೋಂಕು ಹೊಂದುವಂತೆ ಮಾಡುತ್ತವೆ. ಯಾವಾಗ ಮಳೆ ಬೀಳಲು ಪ್ರಾರಂಭವಾಗುತ್ತದೆ ಮತ್ತು ಬಿಸಿಲು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಎಲೆಗಳಿಗೆ ಸೋಂಕು ಹರಡುವುದು ಜಾಸ್ತಿ.
- ನಮ್ಮ ಸಾಧಾರಣ ಕಣ್ಣುಗಳಿಗೆ ಇವುಗಳು ಕಾಣುವುದಿಲ್ಲ ನಾವು ಇವುಗಳನ್ನು ಬೇರ್ಪಡಿಸಲು ಕೂಡ ಸಾಧ್ಯವಿರುವುದಿಲ್ಲ. ಹೀಗಾಗಿ ನಾವು ಹಸಿರು ಎಲೆ-ತರಕಾರಿಗಳನ್ನು ಅಡುಗೆ ಮಾಡಿ ತಿನ್ನುತ್ತೇವೆ ಮತ್ತು ಆರೋಗ್ಯಕ್ಕೆ ಹಾನಿ ತಂದುಕೊಳ್ಳುತ್ತೇವೆ. ಜೊತೆಗೆ ಅವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವಾಗ ಶುಚಿತ್ವ ಕಾಯ್ದುಕೊಂಡಿರುತ್ತಾರೆ ಎನ್ನುವ ಯಾವುದೇ ಭರವಸೆ ಇಲ್ಲ.
ಆಹಾರ ತಜ್ಞರು ಹೇಳುವಂತೆ
ಆಹಾರ ತಜ್ಞರು ಹೇಳುವಂತೆ ಮಳೆಗಾಲದಲ್ಲಿ ಸಂದರ್ಭದಲ್ಲಿ ಸಹಜವಾಗಿ ಮೆಂತ್ಯ ಸೊಪ್ಪು, ಪಾಲಕ್ ಸೊಪ್ಪು, ಬ್ರೊಕೋಲಿ,ಹೂಕೋಸು, ಎಲೆಕೋಸುಇತ್ಯಾದಿಗಳನ್ನು ಸೇವನೆ ಮಾಡದೇ ಇರುವುದು ಒಳ್ಳೆಯದು. ಅತಿಯಾದ ಮಳೆಯ ಸಂದರ್ಭಕ್ಕೆ ಸಿಲುಕಿದ ಇಂತಹ ತರಕಾರಿಗಳಿಂದ ಸ್ವಲ್ಪ ದೂರವುಳಿದರೆ ಒಳ್ಳೆಯದು.
ಹಸಿರು ಎಲೆ-ತರಕಾರಿಗಳನ್ನು ತಿನ್ನುವ ಮುಂಚೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
- ಕೆಲವು ತಜ್ಞರು ಹೇಳುವ ಪ್ರಕಾರ ಹಸಿರು ಎಲೆ-ತರಕಾರಿಗಳನ್ನು ಸಂಪೂರ್ಣವಾಗಿ ಮಳೆಗಾಲದಲ್ಲಿ ಮಾಡುವುದನ್ನು ಬಿಟ್ಟು ಬಿಡಬೇಕು ಎನ್ನುವಂತಿಲ್ಲ. ಅದರ ಬದಲು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಸಾಕಷ್ಟು ಅನುಕೂಲವಾಗುತ್ತದೆ.
- ಅವುಗಳನ್ನು ಬೇಯಿಸುವಾಗ ಮತ್ತು ತಿನ್ನುವ ಸಂದರ್ಭದಲ್ಲಿ ಕೇರ್ ಫುಲ್ ಆಗಿರಬೇಕು. ನಿಮ್ಮ ಆಹಾರ ಪದ್ಧತಿಯಲ್ಲಿ ಹಸಿರು ಎಲೆ-ತರಕಾರಿಗಳನ್ನು ಸೇರಿಸಿ ಸೇವನೆ ಮಾಡುವ ಅಭ್ಯಾಸದ ಮುಂಚೆ ಈ ಟಿಪ್ಸ್ ಗಳನ್ನು ಅನುಸರಿಸಿ.
ಮಳೆಗಾಲದಲ್ಲಿ ಎಲೆ-ತರಕಾರಿಗಳನ್ನು ಸೇವಿಸುವ ಮುನ್ನ…
- ವಿಶೇಷವಾಗಿ ಮಳೆಗಾಲದಲ್ಲಿ ನೀವು ತರಕಾರಿ ಮಾಡುವವರ ಕಡೆಯಿಂದ ತರುವಂತಹ ಹಸಿರು ಎಲೆ-ತರಕಾರಿಗಳನ್ನು ಮೊದಲು ನೀರಿನಲ್ಲಿ ಚೆನ್ನಾಗಿ ಸ್ವಚ್ಛಮಾಡಬೇಕು.
- ಅದು ಬಿಸಿ ನೀರು ಆದರೂ ಸರಿ ಅಥವಾ ನೀರಿಗೆ ಉಪ್ಪು ಬೆರೆಸಿ ಇಲ್ಲವೆಂದರೆ ವಿನೆಗರ್ ಬೆರೆಸಿ ಸ್ವಚ್ಛ ಮಾಡಿ. ಇದರಿಂದ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ನಾಶವಾಗುತ್ತವೆ. ಬೇಯಿಸುವ ಮುಂಚೆ ಅವುಗಳಲ್ಲಿ ಯಾವುದಾದರೂ ಕಣ್ಣಿಗೆ ಕಾಣುವ ಹಾಗೆ ಕೀಟಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚಿಕೊಳ್ಳಿ.
ರೆಸ್ಟೋರೆಂಟ್ ಮತ್ತು ಡಾಬಾಗಳಲ್ಲಿ….
- ಆರೋಗ್ಯ ತಜ್ಞರು ಹೇಳುವ ಹಾಗೆ ರೆಸ್ಟೋರೆಂಟ್ ಮತ್ತು ಡಾಬಾಗಳಲ್ಲಿ ಈ ಸಂದರ್ಭದಲ್ಲಿ ಜನರು ಆಹಾರ ಸೇವನೆ ಮಾಡುವುದರಿಂದ ದೂರವುಳಿದರೆ ಒಳ್ಳೆಯದು.
- ಏಕೆಂದರೆ ಅಲ್ಲಿ ಆಹಾರ ತಯಾರಿಕೆ ಸಂದರ್ಭದಲ್ಲಿ ಸ್ವಚ್ಛತೆಯನ್ನು ಅಷ್ಟಾಗಿ ಕಾಯ್ದು ಕೊಂಡಿ ರುತ್ತಾರೆ ಎನ್ನುವ ಯಾವುದೇ ಭರವಸೆ ಇರುವುದಿಲ್ಲ. ತರಕಾರಿಗಳನ್ನು ಸಹ ಸರಿಯಾದ ರೀತಿ ಸ್ವಚ್ಛ ವಾಗಿ ತೊಳೆಯುವುದಿಲ್ಲ. ನೀವು ಮಳೆಗಾಲದಲ್ಲಿ ಸಂಪೂರ್ಣವಾಗಿ ಹಸಿರು ಎಲೆ-ತರಕಾರಿಗಳನ್ನು ಸೇವನೆ ಮಾಡುವುದನ್ನು ಬಿಡುವ ಬದಲು ಈ ರೀತಿ ಮಾಡಬಹುದು.
- ಹಸಿರು ಎಲೆ ತರಕಾರಿಗಳ ಬದಲು ಸೋರೆಕಾಯಿ, ಕುಂಬಳಕಾಯಿ, ಸಿಹಿ ಗೆಣಸು, ಹಾಗಲಕಾಯಿ ಇತ್ಯಾದಿಗಳನ್ನು ಸೇವನೆ ಮಾಡಿ. ಇವು ಸುಲಭವಾಗಿ ನಿಮ್ಮ ಹೊಟ್ಟೆಯಲ್ಲಿ ಜೀರ್ಣವಾಗುತ್ತವೆ ಮತ್ತು ತಿನ್ನಲು ಕೂಡ ಹಗುರವಾಗಿರುತ್ತವೆ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ