January 18, 2025
1

ರಾತ್ರಿ ಲೇಟಾಗಿ ಊಟ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ರಾತ್ರಿ ಊಟ ಲಘುವಾಗಿದ್ದಷ್ಟೇ ಸರಿಯಾದ ಸಮಯಕ್ಕೆ ತಿನ್ನುವುದು ಕೂಡ ಮುಖ್ಯವಾಗಿರುತ್ತದೆ. ತಡರಾತ್ರಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯೇ ಜಾಸ್ತಿ. ರಾತ್ರಿ ಲೇಟ್‌ಆಗಿ ಊಟ ಮಾಡುವುದರಿಂದ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಊಟ ಮಾಡುವುದು ಎಲ್ಲರಿಗೂ ಅಗತ್ಯ. ಅದರಲ್ಲೂ ಆರೋಗ್ಯದ ದೃಷ್ಟಿಯಿಂದ ರಾತ್ರಿ ಊಟದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಆದರೆ ಇಂದಿನ ಬದಲಾದ ಜೀವನಶೈಲಿಯಲ್ಲಿ ನೈಟ್‌ ಶಿಪ್ಟ್‌, ತಡವಾಗಿ ಮನೆಗೆ ಬರುವುದು, ಸಂಜೆ ಹೊತ್ತು ಕರಿದ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹಸಿವೆ ಇಲ್ಲದಂತಾಗುತ್ತದೆ.

ಇದರಿಂದಾಗಿ ತಡರಾತ್ರಿಯೋ ಅಥವಾ ಹಸಿವೆಯಾದಾಗಲೋ ಊಟ ಮಾಡುವುದು ಇಂದಿನ ಯುವ ಜನರ ಹವ್ಯಾಸವಾಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು, ಇದರಿಂದ ಏನೆಲ್ಲಾ ಸಮಸ್ಯೆಗಾಳಗಬಹುದು ಎನ್ನುವುದು ತಿಳಿದಿದೆಯಾ? ಈ ಲೇಖನದಲ್ಲಿ  ರಾತ್ರಿ ಲೇಟಾಗಿ ಊಟ ಮಾಡುವುದರಿಂದ ಏನಾಗುತ್ತದೆ ಎನ್ನುವುದನ್ನು ತಿಳಿಸಿದ್ದಾರೆ ನೋಡೋಣ.

ರಾತ್ರಿಯ ಊಟ

ರಾತ್ರಿ ಊಟ ದೇಹಕ್ಕೆ ಅತ್ಯಗತ್ಯವಾಗಿರುತ್ತದೆ. ಆದರೆ ಲಘು ಆಹಾರ ಮಾತ್ರ ಸೇವನೆ ಮಾಡಬೇಕು. ರಾತ್ರಿ ದೇಹ ವಿಶ್ರಾಂತಿಯ ಸ್ಥಿತಿಯಲ್ಲಿರುತ್ತದೆ ಹೀಗಾಗಿ ಹೊಟ್ಟೆ ಬಿರಿಯುವಂತೆ ಊಟ ಮಾಡುವುದು ಒಳ್ಳೆಯದಲ್ಲ. ಅಲ್ಲದೆ ತಡರಾತ್ರಿಯ ಊಟವೂ ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೊರತು ಒಳ್ಳೆಯದಲ್ಲ.

ಸರಿಯಾದ ಊಟದ ಸಮಯ

  • ಸಂಜೆ 6 ರಿಂದ ರಾತ್ರಿ 10 ರವರೆಗೆ ದೇಹದಲ್ಲಿ ಹೆಚ್ಚು ಕಫದ ಉತ್ಪತ್ತಿಯಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಹೀಗಾಗಿ ಹೊಟ್ಟೆ ತುಂಬಾ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಲು ಬೇಕಾದ ಅಗ್ನಿ ಹೊಟ್ಟೆಯಲ್ಲಿ ಇರುವುದಿಲ್ಲ.
  • ಆದ್ದರಿಂದ ರಾತ್ರಿ ಲಘು ಆಹಾರ ಸೇವನೆ ಮಹತ್ವದ್ದಾಗಿರುತ್ತದೆ. ಅಲ್ಲದೆ ಮಲಗುವ 3 ಗಂಟೆಗಳ ಮುನ್ನ ಆಹಾರ ಸೇವನೆ ಮಾಡುವುದು ಒಳ್ಳೆಯದು. ಆದ್ದರಿಂದ ಸಾಧ್ಯವಾದರೆ ಸಂಜೆ 6 ಗಂಟೆಯ ಅಥವಾ ಕನಿಷ್ಠ 7 ಗಂಟೆಯ ಮೊದಲು ಊಟ ಮಾಡುವುದು ಯಾವಾಗಲೂ ಉತ್ತಮ.

ತಡರಾತ್ರಿ ಎಚ್ಚರವಿದ್ದರೆ ಹಸಿವೆಯಾಗುವುದೇಕೆ?

ರಾತ್ರಿ 10 ರಿಂದ ಬೆಳಗಿನ ಜಾವ 2 ಗಂಟೆಯ ನಂತರ ದೇಹದಲ್ಲಿ ಪಿತ್ತ ಹೆಚ್ಚು ಉತ್ಪತ್ತಿಯಾಗುತ್ತಿರುತ್ತದೆ. ಪಿತ್ತ ಯಾವಾಗಲೂ ಜೀರ್ಣಕಾರಿ ಅಗ್ನಿಯನ್ನು ಹೊಂದಿರುತ್ತದೆ. ಹೀಗಾಗಿ ತಡರಾತ್ರಿಯವರೆಗೆ ಎಚ್ಚರವಿದ್ದರೆ ಹಸಿವೆಯಾಗುತ್ತದೆ.

ತಡರಾತ್ರಿ ಊಟ ಒಳ್ಳೆಯದಲ್ಲ

  • ರಾತ್ರಿಯ ವೇಳೆಯಲ್ಲಿ ವಾಸ್ತವವಾಗಿ ನಮ್ಮ ದೇಹವನ್ನು ನಿರ್ವಿಷಗೊಳಿಸಲು ಮತ್ತು ಮುಂದಿನ ದಿನಕ್ಕೆ ತಯಾರಾಗಲು ಇರುವ ಸಮಯವಾಗಿದೆ.
  • ಆದರೆ ನಾವು ಆ ಸಮಯದಲ್ಲಿ ನಿದ್ದೆ ಮಾಡದೇ ಇರುವಾಗ ಇದು ಮತ್ತು ತಿನ್ನುವುದರಿಂದ ದೇಹದ ಸಾಮಾನ್ಯ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ.
  • ದೇಹವು ಎರಡೂ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಪ್ರತಿಯಾಗಿ ದೇಹದ ಜೈವಿಕ ಚಟುವಟಿಕೆ ಏರುಪೇರಾಗುತ್ತದೆ.

ತಡರಾತ್ರಿ ಊಟ ಮಾಡುವುದರಿಂದಾಗುವ ಅಪಾಯಗಳು

  • ತಡರಾತ್ರಿಯಲ್ಲಿ ತಿಂದರೆ ತೂಕ ಹೆಚ್ಚಾಗಬಹುದು. ಆಹಾರ ಸರಿಯಾಗಿ ಜೀರ್ಣವಾಗದೆ ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗಬಹುದು.
  • ಆಸಿಡ್ ರಿಫ್ಲಕ್ಸ್ ಸಮಸ್ಯೆ ಕಾಡುತ್ತದೆ. ತಡರಾತ್ರಿ ಊಟ ಮಾಡುವುದರಿಂದ ಹೊಟ್ಟೆಯಲ್ಲಿ ಆಸಿಡ್‌ ಉತ್ಪತ್ತಿಯಾಗುವ ಕಾರಣ ಆಸಿಡಿಟಿ, ಪದೇ ಪದೇ ತೇಗು ಬರುವುದು, ಎದೆಉರಿ ಸಮಸ್ಯೆ ಹೆಚ್ಚಾಗಿ ಕಾಡಬಹುದು
  • ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತದೆ. ದೇಹದ ಚಟುವಟಿಕೆ ಹದಗೆಟ್ಟು ಅಜೀರ್ಣ, ಹೊಟ್ಟೆಯ ಸಮಸ್ಯೆಗಳು ಕಾಡಬಹುದು.
  • ಇದು ಹೃದಯದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ತಡರಾತ್ರಿ ಊಟ ಕೊಲೆಸ್ಟ್ರಾಲ್‌ ಹೆಚ್ಚು ಮಾಡಲು ಕಾರಣವಾಗಬಹುದು. ಇದರಿಂದ ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *