ನಿಮ್ಮ ಮಗು ಹೆಚ್ಚು ಬೆರಳು ಚೀಪುತ್ತಿದ್ಯಾ? ಹಾಗಾದ್ರೆ ನಿಯಂತ್ರಿಸಲು ಹೀಗೆ ಮಾಡಿ.
ಚಿಕ್ಕಮಕ್ಕಳು ಬೆರಳನ್ನು ಚೀಪುವುದು ಸಾಮಾನ್ಯ. ಆದರೆ ಅದು 4 ವರ್ಷಕ್ಕಿಂತಲೂ ಹೆಚ್ಚು ದಿನ ಮುಂದುವರೆದರೆ ಒಳ್ಳೆಯದಲ್ಲ. ಬೆರಳು ಚೀಪಲು ಕಾರಣವೇನು, ಇದನ್ನು ಹೇಗೆ.
ಸಾಮಾನ್ಯವಾಗಿ ಚಿಕ್ಕಮಕ್ಕಳು ಬೆರಳನ್ನು ಚೀಪುವುದನ್ನು ನೋಡಿರುತ್ತೇವೆ. ಒಂದರಿಂದ 3 ಮೂರು ವರ್ಷದೊಳಗಿನ ಮಕ್ಕಳು ಮಲಗುವಾಗ, ಆಡವಾಡುತ್ತಾ ಕುಳಿತಿರುವಾಗ ಬೆರಳನ್ನು ಬಾಯಿಗೆ ಹಾಕಿ ಚೀಪುತ್ತವೆ.
ಈ ರೀತಿ ಹೆಚ್ಚು ಹೊತ್ತು ಬೆರಳನ್ನು ಚೀಪುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಮಕ್ಕಳಿಗೆ ಕಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸುವುದು ಮುಖ್ಯವಾಗಿರುತ್ತದೆ.
ಇದರಿಂದಾಗುವ ತೊಂದರೆಗಳೇನು, ಬೆರಳು ಚೀಪುವ ಅಭ್ಯಾಸವನ್ನು ತಡೆಯುವುದು ಹೇಗೆ ಎನ್ನುವ ಬಗ್ಗೆ ಮಕ್ಕಳ ತಜ್ಞರಾದ ಡಾ. ಶಿ.ಪ್ರ ಅವರು ಮಾಹಿತಿ ನೀಡಿದ್ದಾರೆ.
ಮಗು ಬೆರಳನ್ನು ಚೀಪುವುದರಿಂದ..
- ಬಾಯಿಗೆ ಬೆರಳನ್ನು ಹಾಕಿಕೊಳ್ಳುವುದರಿಂದ ಮಕ್ಕಳಲ್ಲಿ ದಂತ ಸಮಸ್ಯೆ ಕಾಣಿಸಿಕೊಳ್ಳಬಹುದು
- ಆಡವಾಡುತ್ತಿರುವಾಗ ಬೆರಳನ್ನು ಬಾಯಿಗೆ ಹಾಕಿ ವಿಷಕಾರಿ ಅಂಶ ಹೊಟ್ಟೆಗೆ ಹೋಗಿ ಅತಿಸಾರ, ಹೊಟ್ಟೆ ನೋವು ಕಾಡಬಹುದು,
- ಬೆರಳು ಅಥವಾ ಉಗುರಿಗೆ ಸೋಂಕು ತಗುಲಬಹುದು
- ಇಡೀ ದಿನ ಬೆರಳನ್ನು ಹಾಕಿಕೊಳ್ಳುವುದಿರಂದ ಮಾತು ತಡವಾಗುವ ಸಾಧ್ಯತೆ ಇರುತ್ತದೆ.
ಮಗು ಬೆರಳು ಚೀಪಲು ಕಾರಣವೆಂದರೆ
- ಮಗುವಿಗೆ ಆತಂಕವಾದಾಗ ಬೆರಳನ್ನು ಚೀಪುತ್ತದೆ
- ಕೆಲವೊಮ್ಮೆ ಹಸಿವೆಯಾದಾಗ ಅಥವಾ ನಿದ್ದೆ ಬಂದಾಗ
- ಅಭದ್ರತೆ ಕಾಡಿದಾಗ, ಒಂಟಿಯಾಗಿದ್ದಾಗ ಬೆರಳನ್ನು ಹಾಕಿಕೊಳ್ಳುತ್ತವೆ
- ತಂದೆ, ತಾಯಿಯ ಪ್ರೀತಿ ಕಡಿಮೆಯಾದರೆ ಅಥವಾ ಹೆಚ್ಚು ಗದರುತ್ತಿದ್ದರೆ ಬೇಸರದಿಂದ ಬಾಯಿಗೆ ಬೆರಳನ್ನು ಹಾಕಿಕೊಳ್ಳುತ್ತವೆ.
ಯಾವಾಗ ಅಪಾಯ?
- ಸಾಮಾನ್ಯವಾಗಿ 4 ವರ್ಷದವರೆಗೆ ಮಕ್ಕಳು ಬೆರಳನ್ನು ಚೀಪಬಹುದು. ಆದರೆ ಅದರ ನಂತರವೂ ಅದೇ ಅಭ್ಯಾಸ ಮುಂದುವರೆದರೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.
- ಇದನ್ನು ತಪ್ಪಿಸಲು ಮಗುವಿನ ಮನಸ್ಸನ್ನು ಬೇರಡೆಗೆ ಸೆಳೆಯಲು ಯತ್ನಿಸಬೇಕು.
- ಪ್ರೀತಿಯಿಂದಲೆ ತಿಳಿ ಹೇಳುವ ಮೂಲಕವೂ ಕೂಡ ಬಾಯಿಗೆ ಬೆರಳನ್ನು ಹಾಕಿ ಚೀಪುವ ಅಭ್ಯಾಸವನ್ನು ತಪ್ಪಿಸಬಹುದು.
ಮಗು ಬೆರಳು ಚೀಪುವುದನ್ನು ತಡೆಯಲು ಹೀಗೆ ಮಾಡಿ
- ಆದಷ್ಟು ಮಗುವಿಗೆ ಪ್ರೀತಿ ತೋರಿಸಿ, ಹೆಚ್ಚು ಹೊತ್ತು ಮಗುವಿನೊಂದಿಗೆ ಕಾಲ ಕಳೆಯಿರಿ. ಇದರಿಂದ ನಿಮ್ಮೊಂದಿಗೆ ಬೆರೆತು ಬಾಯಿಗೆ ಬೆರಳನ್ನು ಹಾಕಿಕೊಳ್ಳುವುದರಿಂದ ದೂರವಿರುತ್ತದೆ.
- ಮಗು ಬೆರಳನ್ನು ಬಾಯಿಗೆ ಹಾಕಿಕೊಳ್ಳುತ್ತಿದೆ ಎನ್ನುವಾಗ ಅದಕ್ಕೆ ಆಟಿಕೆಗಳನ್ನು ನೀಡಿ ಗಮನವನ್ನು ಬೇರಡೆಗೆ ಹೋಗುವಂತೆ ಮಾಡಿ.
- ಮಗು ಮಲಗುವಾಗ, ನಿದ್ದೆಯಲ್ಲಿ ಎಚ್ಚರಗೊಂಡಾಗ ಪಕ್ಕದಲ್ಲಿಯೇ ಇರಿ. ಇದರಿಂದ ಆತಂಕ ಅಥವಾ ಅಭದ್ರತೆಯ ಭಾವನೆಯನ್ನು ಹೋಗಲಾಡಿಸಬಹುದು. ಈ ಮೂಲಕ ಬಾಯಿಗೆ ಬೆರಳು ಹಾಕಿ ಚೀಪುವುದನ್ನು ಕಡಿಮೆ ಮಾಡಿಸಬಹದು.
- ಇದಕ್ಕೆ ಯಾವುದೇ ಚಿಕಿತ್ಸೆ ಅಥವಾ ಮಾತ್ರೆಯ ಅಗತ್ಯ ಇರುವುದಿಲ್ಲ. ಬದಲಾಗಿ ಮಗು ಮತ್ತು ಪೋಷಕರ ನಡುವಿನ ಬಾಂಧವ್ಯದಿಂದಲೇ ಸರಿಪಡಿಸಬಹುದು ಎನ್ನುತ್ತಾರೆ ವೈದ್ಯರು.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ