ಪ್ರತಿದಿನ ಚಿಕನ್ ತಿನ್ನಬಾರದು! ಒಂದು ವೇಳೆ ತಿಂದ್ರೆ, ಏನಾಗುತ್ತೆ ಗೊತ್ತಾ?
ಮಾಂಸಾಹಾರ ಮನುಷ್ಯನಿಗೆ ಅಗತ್ಯವಾಗಿದೆ ನಿಜ. ಆದರೆ ಮಿತಿ ಇರಬೇಕು. ಮಿತಿಮೀರಿ ಸೇವನೆ ಮಾಡುವ ಚಿಕನ್ ನಿಮ್ಮ ಹೃದಯಕ್ಕೆ ಡೇಂಜರ್, ಗೊತ್ತಾ?
ಆರೋಗ್ಯಕರ ಮನುಷ್ಯ ಉತ್ತಮ ಆಹಾರ ಪದ್ಧತಿಯನ್ನು ಮತ್ತು ಜೀವನಶೈಲಿಯನ್ನು ಹೊಂದಿರುತ್ತಾನೆ. ಯಾವ ಆಹಾರ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವು ದನ್ನು ಸಹ ಚೆನ್ನಾಗಿ ತಿಳಿದುಕೊಂಡಿರುತ್ತಾನೆ. ಪ್ರಮುಖವಾಗಿ ಸಮತೋಲನವಾದ ಆಹಾರಪದ್ಧತಿಯನ್ನು ಅಭ್ಯಾಸ ಮಾಡಿಕೊಂಡಿರುತ್ತಾನೆ.
ಆದರೆ ಮಾಂಸಾಹಾರ ಸೇವನೆಯ ವಿಚಾರದಲ್ಲಿ ಪ್ರತಿಯೊಬ್ಬರೂ ಸಹ ಒಂದು ವಿಶೇಷವಾದ ಗಮನವನ್ನು ಕೊಡಬೇಕು. ಚಿಕನ್ ಸೇವನೆ ಆರೋಗ್ಯಕರ ಎಂದು ಹೇಳಲಾಗುತ್ತದೆ. ಆದರೆ ಮಿತಿ ಮೀರಿ ಪ್ರತಿದಿನವೂ ಚಿಕನ್ ತಿನ್ನುತ್ತಾ ಹೋದರೆ, ಅದರಿಂದ ಆರೋಗ್ಯಕ್ಕಿಂತ ಅನಾರೋಗ್ಯವೇ ಹೆಚ್ಚಾಗುತ್ತದೆ. ಪ್ರತಿದಿನ ಚಿಕನ್ ತಿನ್ನುವುದರಿಂದ ಉಂಟಾಗುವ ಆರೋಗ್ಯದ ಅಡ್ಡಪರಿಣಾಮಗಳನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ
- ಸರಿಯಾದ ಪ್ರಮಾಣದಲ್ಲಿ ಚಿಕನ್ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಮಿತಿ ಮೀರಿ ಸೇವನೆ ಮಾಡಲು ಹೋದರೆ ಅದರಿಂದ ಅನಾಹುತ ತಪ್ಪಿದ್ದಲ್ಲ.
- ನೀವು ಡೀಪ್ ಫ್ರೈ ಮಾಡಿದ ಚಿಕನ್ ಅನ್ನು ಆಗಾಗ ಸೇವನೆ ಮಾಡುತ್ತಿದ್ದೀರಿ ಎಂದಾದರೆ, ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಗ್ಯಾರಂಟಿ. ಅಮೇರಿಕಾದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ತನ್ನ ಅಧ್ಯಯನದಲ್ಲಿ ವರದಿ ಮಾಡಲಾದ ಒಂದು ಮಾಹಿತಿಯ ಪ್ರಕಾರ, ಬಿಳಿ ಚಿಕನ್ ಮಾಂಸವನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ.
- ಇದು ಕೆಂಪು ಮಾಂಸಹಾರ ಹೆಚ್ಚು ಮಾಡುವಷ್ಟು ಸಮನಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳಲು ನೀವು ಗ್ರಿಲ್ ಮಾಡಿದ, ಬೇಯಿಸಿದ, ಬೇಕ್ ಮಾಡಿದ ಚಿಕನ್ ಸೇವನೆ ಮಾಡುವುದು ಒಳ್ಳೆಯದು.
ದೇಹದ ಉಷ್ಣಾಂಶ ಹೆಚ್ಚಾಗುತ್ತದೆ
- ಹೌದು. ಚಿಕನ್ ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಬೇಯುವ ಒಂದು ಆಹಾರ ಪದಾರ್ಥವಾಗಿದೆ. ಹೀಗಾಗಿ ಇದು ದೇಹದಲ್ಲಿ ಹೆಚ್ಚಿನ ಉಷ್ಣಾಂಶವನ್ನು ಉಂಟು ಮಾಡುತ್ತದೆ. ಇದರಿಂದ ಜನರಿಗೆ ಆಗಾಗ ನೆಗಡಿ ಬರುತ್ತದೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಈ ರೀತಿ ಆಗುತ್ತದೆ.
- ಪ್ರತಿದಿನ ಚಿಕನ್ ಸೇವನೆ ಮಾಡುವವರಿಗೆ ಇದು ಸಾಮಾನ್ಯ ಎಂದು ಹೇಳುತ್ತಾರೆ. ಒಂದು ವೇಳೆ ನಿಮಗೂ ಕೂಡ ಹೀಗೆ ಆದರೆ ಚಿಕನ್ ಸೇವನೆಯಿಂದ ಸ್ವಲ್ಪ ದಿನ ದೂರ ಉಳಿಯುವುದು ಒಳ್ಳೆಯದು.
ದೇಹದ ತೂಕ ಹೆಚ್ಚಾಗುತ್ತದೆ
- ನಿಯಮಿತವಾಗಿ ಆಗಾಗ ಚಿಕನ್ ಸೇವನೆ ಮಾಡುವುದರಿಂದ ಉಂಟಾಗುವ ಇನ್ನೊಂದು ಆರೋಗ್ಯದ ಅಡ್ಡಪರಿಣಾಮ ಎಂದರೆ ಅದು ನಿಮ್ಮ ದೇಹದ ತೂಕ ಹೆಚ್ಚಾಗುವುದು. ಚಿಕನ್ ಬಿರಿಯಾನಿ, ಬಟರ್ ಚಿಕನ್ ಮತ್ತು ಫ್ರೈಡ್ ಚಿಕನ್ ತಮ್ಮಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಒಳಗೊಂಡಿರುತ್ತವೆ.
- ಹೀಗಾಗಿ ಇವುಗಳನ್ನು ವಾರಕ್ಕೆ ಒಮ್ಮೆ ಸೇವನೆ ಮಾಡಿದರೆ ಪರವಾಗಿಲ್ಲ. ಆದರೆ ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಮಿತಿ ಮೀರಿ ಹೋಗುತ್ತದೆ.
ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ
- ಕೆಲವೊಂದು ಚಿಕನ್ ವೆರೈಟಿಗಳು ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ. ಒಂದು ಅಧ್ಯಯನ ಹೇಳುವ ಪ್ರಕಾರ, ಚಿಕನ್ ತನ್ನಲ್ಲಿ E.coli ಎಂಬ ಬ್ಯಾಕ್ಟೀರಿಯ ಒಳಗೊಂಡಿರುತ್ತದೆ.
- ಇದು ಚಿಕನ್ ಸೇವನೆ ಮಾಡಿದ ಜನರಲ್ಲಿ ಸಹ ಚಿಕನ್ ಸೇವನೆ ಮಾಡಿದ ನಂತರದಲ್ಲಿ ಕಂಡುಬಂದಿದೆ ಮತ್ತು ಅಧ್ಯಯನದಲ್ಲಿ ಕೂಡ ಸಾಬೀತಾಗಿದೆ. ಹೀಗಾಗಿ ಆಂಟಿಬಯೋಟಿಕ್ಸ್ ರಹಿತವಾಗಿ ಬೆಳವಣಿಗೆ ಆದಂತಹ ಚಿಕನ್ ಸೇವನೆ ಮಾಡುವುದು ಒಳ್ಳೆಯದು.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ