January 18, 2025
Sumathi lakshman

ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇಬರೇ
ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿ :

ಇಂದಿಗೂ ಎಷ್ಟೋ ಜನ ಔಷಧ ತೆಗೆದುಕೊಳ್ಳುವಾಗ ಸುಭಾಷಿತದ ಮೇಲಿನ ಸಾಲನ್ನು ಹೇಳುತ್ತಾರೆ.

ವಯಸ್ಸಿನ ಅಥವಾ ಬಹಳ ಕಾಲದಿಂದ ನರಳುತ್ತಿರುವ ಕಾಯಿಲೆಯಿಂದ ಜರ್ಜರಿತವಾಗಿ ಕಳೇಬರದಂತಿರುವ ವ್ಯಕ್ತಿಗೆ ಬೇರೇನೂ ಔಷಧ ನೀಡಲಾರದೆ ಬಾಯಿಗೆ ಗಂಗೆಯ ನೀರನ್ನು (ಇಲ್ಲಿ ಗಂಗೆಯೇ ಔಷಧ) ಹಾಕಿ ಇನ್ನೇನಿದ್ದರೂ ಈ ನಾರಾಯಣನೇ ನೋಡಿಕೊಳ್ಳಬೇಕು ಎಂದು ಕೈಚೆಲ್ಲುವ ಅರ್ಥ ಒಂದೆಡೆಯಾದರೆ, ಈ ಸುಭಾಷಿತದ ಪ್ರಕಾರ ಜಾಹ್ನವಿ ಎಂದರೆ ಗಂಗೆ. ಗಂಗಾ ನೀರನ್ನು ಕುಡಿದರೆ ಎಲ್ಲವೂ ಗುಣಮುಖವಾಗುತ್ತದೆ ಇಲ್ಲದಿದ್ದರೆ ಮೋಕ್ಷ ಸಿಗುತ್ತದೆ ಎಂಬ ಅರ್ಥವೂ ಇದೆ. ಇದೊಂದು ನಿಜಕ್ಕೂ ಅರ್ಥಪೂರ್ಣ ಸುಭಾಷಿತ. ಸುಭಾಷಿತ ಏನೇ ಇದ್ದರೂ ಇದರ ಹಿಂದಿರುವ ಒಳಾರ್ಥ ಎಂದರೆ ನಂಬಿಕೆ .

ವೈದ್ಯರು ನಮ್ಮ ಕುಟುಂಬದ ಆಪ್ತ ಸಲಹೆಗಾರರು ದಿನದ 24ಗಂಟೆಯೂ ದುಡಿಯುವ ಸಮುದಾಯವಾಗಿದೆ. ಡಾಕ್ಟರ್ ಎಂಬ ಪದ ಬಂದ ಕೂಡಲೇ ನಮ್ಮ ಮನದಲ್ಲಿ ಮೂಡುವುದು ಗೌರವ, ಆತ್ಮೀಯತೆ ,ಪ್ರೀತಿ , ವಿಶ್ವಾಸ ,ನಂಬಿಕೆ , ಅಕ್ಕರೆ ಒಲವು .
ಹುಟ್ಟಿದ ಕ್ಷಣದಿಂದ ಪ್ರೀತಿಯಿಂದ ಮಾತನಾಡಿಸಿ ಆರೋಗ್ಯದ ಸಮಸ್ಯೆಗಳನ್ನು ಆಸಕ್ತಿಯಿಂದ ಕೇಳಿ ಆತ್ಮೀಯತೆಯಿಂದ ಮನೆಯಲ್ಲಿನ ಎಲ್ಲರ ಬಗ್ಗೆ ಹೆಸರು ಕೇಳಿ ತಿಳಿದುಕೊಂಡು ಆ ವೈದ್ಯ ಮಹಾಶಯ ನೆನಪಿನಲ್ಲಿ ಸದಾ ಇರುತ್ತಾರೆ .
ನಿರ್ಜೀವ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಿ ಮಂದಹಾಸ ಮೂಡಿಸುವಾಗ ವೈದ್ಯ ನಿರಂತರ ಸಲಹೆ ಸೂಚನೆ ನೀಡುತ್ತಾ ಆಸ್ಪತ್ರೆಗೆ ದಾಖಲಾಗದಂತೆ ಕಾಯುವಾತ ವೈದ್ಯ
ತಮ್ಮ ಊಟ ತಿಂಡಿ ಮನರಂಜನೆ ಕಡೆ ಗಮನ ನೀಡದೆ ರೋಗಿಯ ಚಿಂತೆಯಲ್ಲಿ ಕಾಲ ಕಳೆಯುವವರು ವೈದ್ಯರು. ಹೀಗೆ ನಿಜಕ್ಕೂ ವೈದ್ಯ ನಿತ್ಯ ನಿರಂತರವಾಗಿ ತನ್ನ ತನವನ್ನು ಬಿಟ್ಟು ತನ್ನನ್ನು ತೊಡಗಿಸಿಕೊಂಡಿರುತ್ತಾನೆ. ಇದರಿಂದಾಗಿ ವೈದ್ಯಕೀಯ ಕ್ಷೇತ್ರ ಎಂಬುದನ್ನು ನಿಜವಾದ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ. ಅದೊಂದು ವೃತ್ತಿಯೇ ಅಲ್ಲ! ಇದೊಂದು ಧರ್ಮ ! ಕೇವಲ ಧರ್ಮವೆಂದರೂ ಸರಿಯಾಗಲಾರದೇನೋ ? ಹಾಗಾಗಿ ಇದೊಂದು ಸರ್ವಶ್ರೇಷ್ಠ ಮಾನವೀಯ ಧರ್ಮ. ಜಾತಿ ಮತ ಬಡವ ಬಲ್ಲಿದರೆಂಬ ಭೇದವಿರಿಸದೆ ಎಲ್ಲರಿಗೂ ಬದುಕು ಸಾಂತ್ವನ ಕಟ್ಟಿಕೊಡುವ ಪರಮ ಪವಿತ್ರ ಜೀವನ ವಿಧಾನ ಹಾಗಾಗಿಯೇ ಧರ್ಮ ಪ್ರತಿಪಾದಕನನ್ನು ಧರ್ಮವನ್ನು ಆರಿಸಿಕೊಂಡವನನ್ನು ನಮ್ಮ ಸನಾತನ ಪರಂಪರೆ ದೈವತ್ವಕ್ಕೆ ಏರಿಸಿ ದೇವರಿಗೆ ಸಮಾನರನ್ನಾಗಿಸಿದೆ. ಹಾಗಾಗಿಯೇ ವೈದ್ಯೋ ನಾರಾಯಣ ಹರಿ ಎಂದು ಗುರುತಿಸಿ ಗೌರವಿಸಿದೆ .

ಬದುಕು ಸಾವುಗಳ ನಡುವಿನ ಒಂದು ಜೀವಂತ ಕೊಂಡಿಯಾಗಿರುವ ಆಪತ್ಬಾಂಧವ ಎಂದರೆ ವೈದ್ಯರು. ಹಿಂದಿನ ಕಾಲದಿಂದಲೂ ವೈದ್ಯ ವೃತ್ತಿಗೆ ಸಾಕಷ್ಟು ಮನ್ನಣೆ ನೀಡಲಾಗಿದೆ. ವೈದ್ಯರು ನಿಜವಾದ ಶ್ರಮಜೀವಿ ಇವರೆಲ್ಲರ ಮಧ್ಯೆ ಇಂಥ ಶ್ರಮಜೀವಿಯ ಸಾಲಿಗೆ ಸೇರಿದವರು ಬೆಂಗಳೂರಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ॥ ಸುಮತಿ ಲಕ್ಷ್ಮಣ್ ಕರಾವಳಿ ಎಂದರೆ ತಪ್ಪಾಗಲಾರದು.

ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ ಜೊತೆಗೆ ಎಲ್ಲರ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿದ ವೈದ್ಯರನ್ನು ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಜುಲೈ 1 ರ ಗುರುವಾರದಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐ. ಎಪ್. ಐ. ಎಂ.ಕಾಲೇಜಿನಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಆಸ್ಪತ್ರೆಗಳ ಕೆಲವು ವೈದ್ಯರನ್ನು ಗೌರವಿಸಿ ಸನ್ಮಾನಿತಗೊಂಡವರಲ್ಲಿ ಡಾ॥ ಸುಮತಿ ಲಕ್ಷ್ಮಣ ಕರಾವಳಿ ಕೂಡಾ ಒಬ್ಬರಾಗಿರುತ್ತಾರೆ. ಇದು ಇವರ ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ.

ಡಾ॥ ಸುಮತಿಯವರು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿಯನ್ನು ಪಡೆದು ತನ್ನ ತವರೂರಾದ ಸಾಗರ ತಾಲ್ಲೂಕಿನ ತಾಳಗುಪ್ಪ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವೃತ್ತಿಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಕನಕಪುರದ ಹಾರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿ ಅಲ್ಲಿಂದ ಬೆಂಗಳೂರಿನ ದೊಡ್ಡನೆಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ತನ್ನ ಹನ್ನೊಂದು ವರ್ಷಗಳ ಅಧಿಕಾರಾವಧಿ ಕಾಲದಲ್ಲಿ ದೊಡ್ಡನೆಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರದ ಅನುದಾನ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಮಾದರಿ ಆಸ್ಪತ್ರೆಯನ್ನಾಗಿ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಸೇವಾ ಕೇಂದ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮತ್ತು ಇವರ ಅತ್ಯುತ್ತಮ ಸೇವೆಯನ್ನು ಗುರುತಿಸಿ “ಕರುನಾಡ ಅಮೂಲ್ಯ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಹಾಗೂ ದೊಡ್ಡನೆಕ್ಕುಂಡಿ ಸುತ್ತಮುತ್ತಲಿನಲ್ಲಿ ನಾಗರಿಕರ ಆರೋಗ್ಯ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ಅತ್ಯುತ್ತಮ ಡಾಕ್ಟರ್ ಎಂದೇ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇವೆ ಸಲ್ಲಿಸುತ್ತಿದ್ದು ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಿಗೆ ಸೂಕ್ತ ಮುನ್ನೆಚ್ಚರಿಕೆಯನ್ನು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನವರಿಕೆ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಮತ್ತು ಜನರಿಗೆ ಕೊರೊನಾ ಲಸಿಕೆ ಅಚ್ಚುಕಟ್ಟಾಗಿ ನೀಡಲು ವ್ಯವಸ್ಥೆ ಮಾಡಿರುತ್ತಾರೆ. ಸಿದ್ಧಾಪುರದಲ್ಲಿ ಶೀಘ್ರದಲ್ಲಿ ಸ್ವಂತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಲು ಸರಕಾರ ಅನುದಾನ ಬಿಡುಗಡೆ ಮಾಡಲಿದೆ ಎನ್ನುತ್ತಾರೆ ಡಾ॥ ಸುಮತಿ ಲಕ್ಷ್ಮಣ್ ಕರಾವಳಿ. ಕಳೆದ 21 ವರ್ಷಗಳಿಂದ ಪ್ರಾಮಾಣಿಕವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ .

ಸಾಗರ ತಾಲ್ಲೂಕು ಕಾರ್ಗಲ್ ಶ್ರೀ ಮಹಾದೇವ ಮತ್ತು ಶ್ರೀಮತಿ ರಾಜಮ್ಮ ದಂಪತಿಯ ಪುತ್ರಿಯಾಗಿರುವ ಡಾ॥ ಸುಮತಿ ಬೆಂಗಳೂರಿನ ಮಾರತಹಳ್ಳಿಯಲ್ಲಿ ಇರುವ ಕರಾವಳಿ ಕೇಬಲ್& ಇಂಟರ್ನೆಟ್ ಸರ್ವಿಸಸ್ ಇದರ ಮಾಲಕರು ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸೇವಾ ಟ್ರಸ್ಟಿನ ಉಪಾಧ್ಯಕ್ಷರಾಗಿದ್ದ ಹಾಗೂ ಪ್ರಸ್ತುತ ಬೆಂಗಳೂರು ಭಂಡಾರಿ ಸಮಾಜ ಸಂಘದ ಗೌರವ ಅಧ್ಯಕ್ಷರಾಗಿರುವ ಸಮಾಜದ ಕೊಡುಗೈ ದಾನಿ ಲಕ್ಷ್ಮಣ್ ಕರಾವಳಿಯ ಅವರ ಧರ್ಮಪತ್ನಿಯಾಗಿರುತ್ತಾರೆ.

ಇವರ ಪುತ್ರರಾದ ಡಾ॥ ಹರ್ಷಿತ್ ಎಲ್. ಭಂಡಾರಿ ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿಯನ್ನು ಅತ್ಯುತ್ತಮ ಅಂಕದೊಂದಿಗೆ ಪಡೆದು ಪ್ರಸ್ತುತ ವೈದ್ಯಕೀಯ ತರಬೇತಿಯನ್ನು ಪಡೆಯುತ್ತಿದ್ದಾರೆ . ಆದಿತ್ಯ ಎಲ್. ಭಂಡಾರಿಯವರು ಬೆಂಗಳೂರಿನ ಸಿ. ಎಂ.ಆರ್.ಐ ಟಿ ಇಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ .ಇ. ವ್ಯಾಸಂಗ ಮಾಡುತ್ತಿದ್ದಾರೆ .

ಡಾ॥ ಸುಮತಿ ಲಕ್ಷ್ಮಣ ಕರಾವಳಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಜನ ಸೇವೆಯನ್ನು ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿ ಸಂತೃಪ್ತಿಯ ಜೀವನ ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *