ಇಂದಿನ ಸಂಚಿಕೆಯಲ್ಲಿ ನುಗ್ಗೆ ಸೊಪ್ಪು ಮತ್ತು ನುಗ್ಗೆ ಕಾಯಿ ಇದರ ಉಪಯೋಗದ ಬಗ್ಗೆ ತಿಳಿದುಕೊಳ್ಳೋಣ.
ನುಗ್ಗೆ: ನುಗ್ಗೆ ಚಿರಪರಿಚಿತ ಸೊಪ್ಪು- ತರಕಾರಿ ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯಬಹುದು. ನಮ್ಮ ಹಳ್ಳಿಗಳಲ್ಲಿ ಸರ್ವೆ ಸಾಮಾನ್ಯವಾಗಿ ಕಾಣ ಸಿಗುವ ಸೊಪ್ಪು-ತರಕಾರಿ ಎಂದರೆ ಅದು ನುಗ್ಗೆ. ಇದರ ಸೊಪ್ಪು, ಕೋಡುಗಳು ತರಕಾರಿಯಾಗಿ ಬಳಕೆಯಾಗುದರ ಜೊತೆಗೆ ಬೀಜ ,ಹೂ ,ಬೇರುಗಳು ಔಷಧಿಯಾಗಿ ಉಪಯೋಗಕ್ಕೆ ಬರುತ್ತವೆ.
ಸಾಮಾನ್ಯವಾಗಿ ನುಗ್ಗೆ ಮರ ಸುಮಾರು 8-10 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ವರ್ಷಕ್ಕೆ 2-3 ಬಾರಿ ಬಿಳಿಯಾದ ಗೊಂಚಲು ಹೂ ಬಿಡುತ್ತದೆ. ನುಗ್ಗೆಕಾಯಿಯನ್ನು ಸಾರು, ಸಾಂಬಾರು ಮಾಡಲು ಎಲೆಯನ್ನು ಪಲ್ಯ, ಚಟ್ನಿ ಮಾಡಲು ಬಳಸುತ್ತಾರೆ. ಆದರೆ ಕಾಂಡದ ತೊಗಟೆ ಮಾತ್ರ ವಿಷಕಾರಕ . ನುಗ್ಗೆಯಲ್ಲಿ ಒಗರು ಸಿಹಿ – ಕಹಿ ಕ್ಷಾರ ರುಚಿಗಳು ಸಂಗಮಿಸಿದ್ದು ಅದರ ಸೊಪ್ಪನ್ನು ಬಿಟ್ಟು ಉಳಿದೆಲ್ಲ ಭಾಗಗಳು ಉಷ್ಣ ಗುಣವನ್ನು ಹೊಂದಿದೆ. ಸೊಪ್ಪು ಮಾತ್ರ ತಂಪು. ನಾಲಿಗೆಯ ರುಚಿ ಹೆಚ್ಚಿಸುತ್ತದೆ, ಹಸಿವೆ ಹೆಚ್ಚಿಸುತ್ತದೆ, ಪಿತ್ತದ ಸಮಸ್ಯೆಯಿರುವವರು ಮಾತ್ರ ನುಗ್ಗೆಯನ್ನು ಸೇವಿಸದಿರುವುದು ಒಳ್ಳೆಯದು. ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳುಳ್ಳ ಕಾಯಿಪಲ್ಲೆ. ಇದು ಆರೋಗ್ಯವರ್ಧಕ ತರಕಾರಿ. ಎಳೆ ನುಗ್ಗೆಕಾಯಿಗಳನ್ನು ತುಂಡುಗಳನ್ನಾಗಿ ಮಾಡಿ ತೊಗರಿ ಬೇಳೆಯೊಂದಿಗೆ ಬೇಯಿಸಿ ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಕೂಡ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ಬಲು ರುಚಿ.
ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಚಗಟೆ ಸೊಪ್ಪಿನೊಂದಿಗೆ ನುಗ್ಗೆ ಸೊಪ್ಪು ಹಾಗೂ ಹಲಸಿನಕಾಯಿ ಬೀಜ ಹಾಕಿ ಮಾಡುವ ಪಲ್ಯ ಬಹಳ ರುಚಿಕರವಾದದ್ದು. ಹಾಗೆಯೇ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ‘ಆಟಿದ ಅಗೆಲ್’ ಎಂಬ ವಿಶಿಷ್ಟವಾದ ಆಚರಣೆ ಈಗಲೂ ನಮ್ಮ ತುಳುನಾಡಿನಲ್ಲಿದೆ ಇದಕ್ಕಂತೂ ನುಗ್ಗೆ ಸೊಪ್ಪಿನ ಪಲ್ಯ ಬೇಕೆ ಬೇಕು. ಅಷ್ಟೇ ಅಲ್ಲದೆ ‘ಆಟಿಡೊಂಜಿ ದಿನ’ ಎಂದು ಇತ್ತೀಚೆಗೆ ಆಚರಣೆಗೆ ಬಂದಿರುವ ಈ ಕಾರ್ಯಕ್ರಮದಲ್ಲೂ ನುಗ್ಗೆ ಸೊಪ್ಪಿಗೆ ಒಂದು ಸ್ಥಾನವಿದೆ. ಹಾಗೂ ಸೀಮಂತಕ್ಕೂ ಗರ್ಭಿಣಿಯರಿಗೆ ನುಗ್ಗೆ ಸೊಪ್ಪಿನ ಪಲ್ಯ ಮಾಡಿ ಬಡಿಸುವ ಕ್ರಮ ಕೂಡಾ ಇದೆ.
ಹಾಗಾಗಿ ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ. ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು. ಇದು ಕಣ್ಣಿಗೆ ಬಹಳ ಉತ್ತಮ. ನುಗ್ಗೆ ಮರದ ಬೇರು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ನುಗ್ಗೆ ಪದಾರ್ಥ ದಿನವೂ ಸೇವಿಸುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ನುಗ್ಗೆಕಾಯಿ ಉತ್ತಮ ಪೋಷಕಾಂಶಗಳನ್ನು ಹೊಂದಿ ಸಾರಯುಕ್ತವಾಗಿರುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ರಕ್ತ ಶುದ್ದಿಯಾಗುವುದಲ್ಲದೆ ತ್ವಚೆಗೆ ಒಳ್ಳೆಯ ಬಣ್ಣ ಬರುವುದು. ನುಗ್ಗೆಕಾಯಿ ಪಲ್ಯ ಮತ್ತು ನುಗ್ಗೆ ಸೊಪ್ಪು ಪಲ್ಯ ಮಾಡಿ ಸೇವಿಸುತ್ತಿದ್ದರೆ ನರದೌರ್ಬಲ್ಯ ನಿವಾರಣೆಯಾಗುತ್ತದೆ. ತಲೆನೋವು, ಮೂಲವ್ಯಾಧಿ ನಿವಾರಣೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿ ಹೆಂಗಸರಿಗೆ ಹಾಲುಣಿಸುವ ತಾಯಂದಿರಿಗೆ ಬಹಳ ಒಳ್ಳೆಯದು. ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ ಇದರಲ್ಲಿ ಇದೆ.
ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದ್ದರೆ, ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ ಇದೆ. ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್ ಎ ಇದ್ದರೆ ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ ಇದೆ.
ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ ಇದ್ದರೆ ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್ ಈ ನುಗ್ಗೆಯಲ್ಲಿದೆ.
100 ಗ್ರಾಂ ನುಗ್ಗೆಯಲ್ಲಿ
ಪ್ರೊಟೀನ್ – 9.4 ಗ್ರಾಂ
ವಿಟಮಿನ್ ಎ – 151 %
ವಿಟಮಿನ್ ಸಿ – 86 %
ಕ್ಯಾಲ್ಸಿಯಮ್- 18 %
ಕಬ್ಬಿಣ – 22 %
ಅತಿಯಾದರೆ ಅಪಾಯ:
ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸದಂತೆ ವೈದ್ಯರು ಎಚ್ಚರಿಸುತ್ತಾರೆ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನುಗ್ಗೆಕಾಯಿಯನ್ನು ನೇರವಾಗಿ ತೆಗೆದುಕೊಳ್ಳುವುದು ಕೂಡ ಅಪಾಯಕರ. ಇದು ಎದೆಯುರಿಗೆ ಕಾಣವಾಗಬಲ್ಲುದು.
ಸಾವಯವದಲ್ಲಿ ಬೆಳೆದ ನುಗ್ಗೆಯಿಂದ ಯಾವುದೇ ಹಾನಿಯಿಲ್ಲ. ಒಂದು ವೇಳೆ ರಾಸಾಯನಿಕ ಸಿಂಪಡಣೆ ಮಾಡಿ ಬೆಳೆದ ಗಿಡಗಳ ಬೇರನ್ನು ಸೇವಿಸಿದರೆ ಗರ್ಭಸ್ರಾವ ಆಗುವ ಸಾಧ್ಯತೆ ಇದೆ. ಇನ್ನು ರಫ್ತಿನ ವಿಷಯಕ್ಕೆ ಬಂದರೆ ನುಗ್ಗೆ ರಫ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ನಂ.1 ನೇ ಸ್ಥಾನ ಇದೆ.
ನುಗ್ಗೇ ಪದಾರ್ಥ ರಫ್ತು:
ಭಾರತ : 80%
ಏಷಿಯಾ ಪೆಸಿಫಿಕ್ : 9%
ಆಫ್ರಿಕಾ :8%
ಅಮೇರಿಕ :3%
ಹೀಗೆ ನಮ್ಮ ಹಿತ್ತಲಲ್ಲಿ ಬೆಳೆದ ಎಷ್ಟೋ ತರಕಾರಿ ಸೊಪ್ಪುಗಳು ನಮ್ಮ ಆರೋಗ್ಯ ಪೋಷಿಸುವಲ್ಲಿ ಸಹಾಯಕವಾಗಿರುವುದಂತೂ ಸುಳ್ಳಲ್ಲ ಅಲ್ಲವೇ….!
– ಸುಪ್ರೀತ ಭಂಡಾರಿ ಸೂರಿಂಜೆ