January 18, 2025
images (1)

40 ರಿಂದ 50 ವರ್ಷದ ಅವಧಿಯಲ್ಲಿ ಪ್ರತೀ ಹೆಣ್ಣಿನಲ್ಲಿ ಕಾಣಿಸಿಕೊಳ್ಳುವ ಬದಲಾವಣೆ ಋತುಬಂಧ. ಈ ಸಮಯದಲ್ಲಿ ಆರೋಗ್ಯದ ಕಾಳಜಿ ಹೇಗೆ, ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ನಾವೆಲ್ಲರೂ ತಿಳಿದುಕೊಳ್ಳಬೇಕಾದುದು ಅತಿ ಅಗತ್ಯ.
 
ಪ್ರತಿ ಜೀವಿಗೂ ವಯಸ್ಸಾದಂತೆ ಅನಾರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಅದರಲ್ಲೂ ಮಹಿಳೆಯರಲ್ಲಿ ದೇಹದಲ್ಲಿನ ಬದಲಾವಣೆಗಳಿಂದ ಅನಾರೋಗ್ಯ ಕಾಡುತ್ತದೆ. ಅಂತಹ ನೈಸರ್ಗಿಕ ಬದಲಾವಣೆಗಳಲ್ಲಿ ಋತುಬಂಧ ಕೂಡ ಒಂದು. ಅಂದರೆ ಮುಟ್ಟು ನಿಲ್ಲುವ ದಿನಗಳು.

ಮುಟ್ಟು ನಿಲ್ಲುವ ದಿನಗಳು ಮಹಿಳೆಯರಿಗೆ ಸಹಜವಾಗಿದ್ದರೂ ಆ ದಿನಗಳಲ್ಲಿ ದೇಹದಲ್ಲಿ ಅನೇಕ ರೀತಿಯ ಏರುಪೇರುಗಳಾಗುತ್ತವೆ. ಸಾಮಾನ್ಯವಾಗಿ 40ರಿಂದ 50 ವರ್ಷದ ಮಹಿಳೆಯರಲ್ಲಿ ಋತುಬಂಧ ಕಾಣಿಸಿಕೊಳ್ಳುತ್ತದೆ.

ಕೆಲವರಿಗೆ ಕಾಲಕ್ಕೆ ಮೊದಲೇ ಮುಟ್ಟು ನಿಂತುಹೋಗಬಹುದು. ಕೆಲವೊಮ್ಮೆ ಅತಿಯಾದ ದೈಹಿಕಕಾಯಿಲೆಗಳಿಂದಲೂ ತೀವ್ರವಾದ ಭಾವಾತ್ಮಕ ಹಾಗೂ ಮಾನಸಿಕ ತೊಂದರೆಯಿಂದಲೂ 40ವರ್ಷಗಳಿಗೂ ಮೊದಲೇ ಮುಟ್ಟು ನಿಂತುಹೋಗಬಹುದು. ಅಂಡಾಶಯಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಅಥವಾ ಕ್ಷ ಕಿರಣಗಳಿಂದ ಅವುಗಳ ಕೆಲಸವನ್ನು ನಿಲ್ಲಿಸಿ, ನಿರ್ದಿಷ್ಟ ಕಾಲಕ್ಕೆ ಮೊದಲೇ ಮುಟ್ಟು ನಿಲ್ಲಿಸಬಹುದು. ಆದರೆ ಇಂಥ ವ್ಯಕ್ತಿಗಳಿಗೆ ಮಾನಸಿಕ ಮತ್ತು ನರಸಂಬಂಧಿ ತೊಂದರೆಗಳು ಬಲುಬೇಗನೆ ಬರುತ್ತವೆ.ಕೆಲವರಿಗೆ 50 ವರುಷದ ತನಕ ಮುಟ್ಟು ಆಗುತ್ತಿರಬಹುದು.

ಮುಟ್ಟು ನಿಲ್ಲುವುದನ್ನು ವೈದ್ಯಕೀಯ ದೃಷ್ಟಿಯಂದ ನೋಡಿದರೆ ಮುಖ್ಯವಾಗಿ ಮಹಿಳೆಯ ದೇಹದಲ್ಲಿ ಮಕ್ಕಳನ್ನು ಹೆರುವ ಕಾಲ ಮುಗಿಯುತ್ತ ಬಂದಂತೆ. ಆಗ ಗರ್ಭಕೋಶದ ಗಡ್ಡೆಗಳು ಮತ್ತು ಅಂಡಾಶಯದ ಗಡ್ಡೆಗಳು ಬರುವ ಸಂಭವ ಹೆಚ್ಚುತ್ತ ಹೋಗುತ್ತದೆ. ಅವ್ಯವಸ್ಥಿತವಾಗಿ ರಕ್ತಸ್ರಾವವಾಗುವುದೇ ಗರ್ಭಕೋಶದ ರೋಗದ ಮೊದಲನೆಯ ಕುರುಹು. ಅತಿಸ್ರಾವವಾಗುವುದು ಗರ್ಭಕೋಶದ ಗಡ್ಡೆಗೆ ಕುರುಹು. ಇವೆರಡೂ ಮುಟ್ಟು ನಿಲ್ಲುವ ಕಾಲಕ್ಕೆ ಬರಬಹುದು. ಆದ್ದರಿಂದ ಮಹಿಳೆಯರು ಇವಕ್ಕೆ ಹೆಚ್ಚು ಗಮನ ಕೊಡಬೇಕಾಗುತ್ತದೆ ಮತ್ತು ರೋಗಗಳ ಮೊದಲ ಲಕ್ಷಣವನ್ನು ಅಸಡ್ಡೆ ಮಾಡಬಾರದು. ಹೊಟ್ಟೆ ದಪ್ಪವಾಗಿರುವುದನ್ನು ನಿರ್ಲಕ್ಷಿಸಿ ಅದನ್ನು ಮುಟ್ಟುನಿಂತ ಮೇಲೆ ಸಾಮಾನ್ಯವಾಗಿ ಬರುವ ಮೈ ಎಂದು ಭಾವಿಸಬಾರದು. ಇಂಥ ಸಂದರ್ಭಗಳಲ್ಲಿ ಯೋಗ್ಯ ವೈದ್ಯಕೀಯ ಸಲಹೆ ಪಡೆಯುವುದು ಅತೀ ಅಗತ್ಯ.

ಮುಟ್ಟು ನಿಲ್ಲುವ ಸಮಯದಲ್ಲಿ ಕಾಣಿಸಿಕೊಳ್ಳುವ ಮತ್ತು ಮುಟ್ಟು ನಿಂತ ನಂತರ ಮುಂದುವರಿಯುವ ಲಕ್ಷಣಗಳು ಈ ಕೆಳಗಿನಂತಿವೆ :

ತಿಂಗಳು ತಿಂಗಳು ಮುಟ್ಟು ಆಗದೆ ಇರಬಹುದು,ದೇಹದಲ್ಲಿ ಅತಿಯಾದ ಬೆವರುವಿಕೆ,ನಿದ್ದೆ ಬಾರದೇ ಇರುವುದು,ಯೋನಿಯ (ಜನನಾಂಗ)ಒಣಗುವಿಕೆ ,ಆಗಾಗ ಚಳಿಯ ಅನುಭವ,ಮನಸ್ಸಿನ ಚಂಚಲತೆ ,ಕೆಲವರಲ್ಲಿ ದೇಹದ ತೂಕ ಹೆಚ್ಚಾಗುವುದು,ಹಸಿವೆಯಾಗದೇ ಇರುವುದು,ಕೂದಲು ಉದುರುವಿಕೆ,ಸ್ತನಗಳಲ್ಲಿ ಬದಲಾವಣೆ,ಯೋನಿ( ಜನನಾಂಗ) ನಾಳದ ಉರಿಯೂತ,
ಹೆಣ್ಣು ಗಂಡು ಸಮಾಗಮದಲ್ಲಿ ನೋವು ಇರಬಹುದು. ಮೈ ನೋವು, ಬೆನ್ನು ನೋವು,ಚರ್ಮ ಜುಮ್ಮೆನಿಸುವಿಕೆ, ಶಕ್ತಿ ಕಡಿಮೆಯಾಗುವುದು, ಸ್ತನ ನೋವು, ಹೃದಯ ಬಡಿತ ಹೆಚ್ಚಾಗುವುದು, ತಲೆನೋವು, ತಲೆತಿರುಗುವಿಕೆ, ರಾತ್ರಿ ನಿದ್ರಿಸುವಾಗ ಬೆವರುವುದು.

ಈ ಸಂದರ್ಭದಲ್ಲಿ ಮೂಳೆಗಳ ಸವೆತ ಆರಂಭವಾಗುತ್ತದೆ. ಬೆನ್ನುಮೂಳೆ ಸೊಂಟದ ಮೂಳೆ ತೊಡೆಯ ಮೂಳೆಗಳು ಅತಿಯಾಗಿ ತೆಳುವಾಗಿ ಬಿಡುತ್ತವೆ . ಸಣ್ಣ ಪೆಟ್ಟು, ಎದ್ದು ನಿಲ್ಲುವಾಗ, ಕೆಳಗೆ ಬಗ್ಗಿದಾಗ, ಇಂತಹ ನಿತ್ಯದ ಕೆಲಸಗಳಿಗೇ ಮೂಳೆ ಸುಲಭವಾಗಿ ಮುರಿಯಬಹುದು. ಇದಕ್ಕಾಗಿ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ನಿಯಮಿತ ಆಹಾರ, ವ್ಯಾಯಾಮ, ಯೋಗ, ಮಾನಸಿಕ ನೆಮ್ಮದಿಗಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಪ್ರಯೋಜನಕಾರಿ.

ಮುಟ್ಟು ನಿಲ್ಲುವ ಸಮಯದಲ್ಲಿ ಋತುಚಕ್ರದ ಅವಧಿ ಕಡಿಮೆಯಾಗುತ್ತದೆ (2ರಿಂದ 5 ದಿನಗಳು) ಹಾಗೂ ತಿಂಗಳು ತಿಂಗಳು ಆಗುವ ಬದಲು ಎರಡು ಮೂರು ತಿಂಗಳು ಆಗದೆ ಇರಬಹುದು. ಕ್ರಮವಲ್ಲದ ರಕ್ತಸ್ರಾವ ಇರಬಹುದು. ಹಾರ್ಮೋನುಗಳ ಬದಲಾವಣೆಗಳಿಂದಾಗಿ ನಿಷ್ಕ್ರಿಯ ಗರ್ಭಾಶಯದ ರಕ್ತಸ್ರಾವ ಕಂಡುಬರುತ್ತದೆ.

ಇದರಿಂದ ಮಾನಸಿಕವಾಗಿಯೂ ಆತಂಕ, ನೆನಪಿನ ಶಕ್ತಿ ಕಡಿಮೆಯಾಗುವುದು, ಖಿನ್ನತೆಯ ಮನಸ್ಥಿತಿ, ಮನಸ್ಥಿತಿಯ ಏರು ಪೇರು, ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗುವುದು ಆಗಬಹುದು.

ದೀರ್ಘಕಾಲೀನ ಪರಿಣಾಮಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು, ದುರ್ಬಲಗೊಂಡ ಶ್ವಾಸಕೋಶದ ತೊಂದರೆ ಬರುವ ಸಾಧ್ಯತೆ ಇರುತ್ತದೆ.

ಪ್ರತೀ ಹೆಣ್ಣಿಗೆ 40 ವರ್ಷ ದಾಟಿದ ಬಳಿಕ ಮುಟ್ಟು ನಿಲ್ಲುವ ದಿನಗಳು ಹತ್ತಿರ ಬರುತ್ತದೆ. ಹೀಗಾಗಿ ಆ ದಿನಗಳಲ್ಲಿ ಹಾರ್ಮೋನಗಳ ವ್ಯತ್ಯಾಸದಿಂದ ಮಾನಸಿಕ ಕಿರಿಕಿರಿಗಳು ಉಂಟಾಗುತ್ತವೆ. ಹೀಗಾಗಿ ಈ ದಿನಗಳಲ್ಲಿ ಅಂತಹ ಮಹಿಳೆಯರಿಗೆ ಕುಟುಂಬದ ಇತರ ಸದಸ್ಯರು ಅಂದರೆ ಮಕ್ಕಳು ಗಂಡ ಹೀಗೆ ಎಲ್ಲರ ಪ್ರೋತ್ಸಾಹ ಹೆಚ್ಚು ಅಗತ್ಯವಾಗಿರುತ್ತದೆ.

ಕುಟುಂಬಕ್ಕೆ ನಾನೇನಾದರೂ ಜೋರಾಗಿ ಮಾತನಾಡಿದರೆ ಸಹಿಸಿಕೊಳ್ಳುವಂತೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ.

ಕೆಲವೊಂದು ಉಪಯುಕ್ತ ಸಲಹೆಗಳು:
ಇನ್ನು ಯೋನಿಯಲ್ಲಿ ಒಣಗುವಿಕೆ ಕಾಣಿಸಿಕೊಳ್ಳುವುದರಿಂದ ಲೈಂಗಿಕ ಕ್ರಿಯೆಗೆ ಅಡ್ಡಿಯಾಗಬಹುದು. ಹೀಗಾಗಿ ಲ್ಯುಬ್ರಿಕೆಂಟ್ಸ್‌ಗಳನ್ನು ಬಳಸುವುದು ಒಳ್ಳೆಯದು. ಇನ್ನು ಯೋನಿಯಲ್ಲಿ ಸೋಂಕು ಉಂಟಾಗುವ ಅಪಾಯವಿರುತ್ತದೆ ಹೀಗಾಗಿ ತಣ್ಣನೆಯ ನೀರಿನಿಂದ ಯೋನಿಯ ಭಾಗಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗುತ್ತದೆ.

ಮುಖ್ಯವಾಗಿ ಮುಟ್ಟು ನಿಲ್ಲುವ ದಿನಗಳಲ್ಲಿ ಅನಿಯಮಿತ ಮುಟ್ಟು ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯರ ಸಹಾಯದಿಂದ ಸರಿಪಡಿಸಕೊಳ್ಳಬೇಕು. ಆಗ ದೇಹದಲ್ಲಿನ ಅನೇಕ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ.

ಆದಷ್ಟು ಕಡಿಮೆ ಜವಾಬ್ದಾರಿಗಳನ್ನು ತೆಗದುಕೊಳ್ಳಿ. ಯಾಕೆಂದರೆ ಹಾರ್ಮೋನುಗಳ ವ್ಯತ್ಯಾಸದಿಂದ ಮಾನಸಿಕವಾಗಿ ಚಂಚಲತೆ ಉಂಟಾಗಬಹುದು. ಕೆಲಸಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಆದಷ್ಟು ಆರಾಮದಲ್ಲಿ ಇರಲು ಅಭ್ಯಾಸ ಮಾಡಿಕೊಳ್ಳಬೇಕು.

ಈ ಆಹಾರಗಳನ್ನು ಅವಶ್ಯವಾಗಿ ಸೇವಿಸಿ:
ಮುಟ್ಟು ನಿಲ್ಲುವ ದಿನಗಳಲ್ಲಿ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುತ್ತದೆ. ಹೀಗಾಗಿ ಕ್ಯಾಲ್ಸಿಯಂ ಯುಕ್ತ ಸೊಪ್ಪು, ಹಸಿರು ತರಕಾರಿಗಳನ್ನು ಸೇವನೆ ಮಾಡುವುದು ಒಳ್ಳೆಯದು.ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಕುಸಿಯುವುದರಿಂದ ಸಂಧಿವಾತ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಲು ಮೊಟ್ಟೆ ಹಸಿರು ತರಕಾರಿ ಸೊಪ್ಪು ಯಥೇಚ್ಛವಾಗಿ ತಿನ್ನಬೇಕು.

ಇನ್ನು ದೇಹದಲ್ಲಿ ಅತಿಯಾದ ಬೆವರು ಕಾಣಿಸಿಕೊಳ್ಳುವ ಕಾರಣ ಹೆಚ್ಚು ನೀರು ಮತ್ತು ದ್ರವ ಪದಾರ್ಥಗಳನ್ನು ಸೇವನೆ ಮಾಡಿದರೆ ಉತ್ತಮ.

ಹೆಚ್ಚು ಖಾರ, ಮಸಾಲೆ ಪದಾರ್ಥಗಳನ್ನು ಸೇವನೆ ಮಾಡದೆ, ದೇಹವನ್ನು ತಂಪಾಗಿಡುವ, ವಿಟಮಿನ್‌ ಸಿ ಅಂಶವಿರುವ ಆಹಾರ ಸೇವನೆ ಮಾಡಬೇಕು.

ಯೋನಿಯ ಮಾಂಸಖಂಡಗಳು ಸಡಿಲವಾಗಿರುತ್ತದೆ. ಹೀಗಾಗಿ ನಗುವಾಗ, ಕೆಮ್ಮಿದಾಗ ಮೂತ್ರ ವಿಸರ್ಜನೆಯಾಗಬಹುದು.ಯೋನಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು.

ದೇಹ ತಣ್ಣಗಿರಲು ಯಾವ ಆಹಾರ ಸೂಕ್ತವೋ ಅಂತಹ ಆಹಾರವನ್ನು ಸೇವಿಸಬೇಕು.

ಮುಟ್ಟು ನಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಬೆವರುವಿಕೆ ಹೆಚ್ಚಾಗಿರುತ್ತದೆ. ಅದರಲ್ಲೂ ರಾತ್ರಿ ಹೊತ್ತು ಹೆಚ್ಚು ಬೆವತುಹೋಗುತ್ತಾರೆ. ಇದರಿಂದ ನಿದ್ರೆ ಬಾರದೆ ಇರಬಹುದು . ಹೀಗೆ ಆದಾಗ ದಪ್ಪಗಿನ ಬ್ಲಾಂಕೆಂಟ್ ಹೊದ್ದು ಮಲಗುವುದನ್ನು ಬಿಡಿ. ತೆಳುವಾದ ಕಾಟನ್ ಬ್ಲಾಂಕೆಟ್ ಅನ್ನೇ ಬಳಸಿ. ಕಿಟಕಿ, ಬಾಗಿಲನ್ನು ತೆರೆದು ಚೆನ್ನಾಗಿ ಗಾಳಿ ಆಡುವ ವಾತಾವರಣವನ್ನು ಮನೆಯೊಳಗೆ ನಿರ್ಮಿಸಿಕೊಳ್ಳಿ. ಇದರಿಂದ ರಾತ್ರಿ ಹೊತ್ತು ಆರಾಮದಾಯಕ ನಿದ್ರೆ ಬರುತ್ತದೆ.ನಿದ್ದೆ ಬರದೇ ಇದ್ದಾಗ ಆದಷ್ಟು ತಣ್ಣಗಿನ ಪದಾರ್ಥಗಳ ಸೇವನೆ ಫ್ಯಾನ್‌ನಡಿಯಲ್ಲಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.

ಧ್ಯಾನ, ಯೋಗ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಮುಖ್ಯವಾಗಿ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಇದರಿಂದ ಮಾನಸಿಕವಾಗಿ ಆಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.ಗಿಡಗಳನ್ನು ಬೆಳೆಸಿ, ಅವುಗಳನ್ನು ಪೋಷಣೆ ಮಾಡಿ. ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿ.ಓದುವುದು, ಬರೆಯುವುದು, ಹೊಲಿಗೆ,ಹೊರ ಸಂಚಾರ, ಮಿತ್ರರ ಭೇಟಿ, ಅಡುಗೆ ಮಾಡುವುದು, ಪ್ರಾಣಿ ಪಕ್ಷಿಗಳನ್ನು ಸಾಕುವುದು, ಮೀನು ಸಾಕುವುದು ಮೊದಲಾದ ಕೆಲಸಗಳನ್ನು ಮಾಡಿ ಅದರಲ್ಲಿ ತೃಪ್ತಿ ಕಂಡುಕೊಳ್ಳಿ.

ಇನ್ನು ಪ್ರವಾಸ, ಮಕ್ಕಳೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದಾಗಿ ಒಂಟಿತನ ಕಾಡುತ್ತಿದ್ದರೆ ಸರಿಹೋಗುತ್ತದೆ.

ಋತುಬಂಧ ಪ್ರತಿ ಮಹಿಳೆಗೆ ಆಗುವ ಸಹಜ ಪ್ರಕ್ರಿಯೆಯಾಗಿದ್ದರಿಂದ ಅದಕ್ಕೆ ಗಾಬರಿ ಪಡುವುದಾಗಲಿ, ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. 12 ತಿಂಗಳವರೆಗೆ ಈ ರೀತಿಯ ದೇಹದಲ್ಲಿನ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ನಂತರ ಸರಿಹೋಗುತ್ತದೆ ಎನ್ನುತ್ತಾರೆ ನುರಿತ ವೈದ್ಯರು.

ಕೊನೆಯದಾಗಿ ಹೇಳುವುದು ಏನೆಂದರೆ ಮಹಿಳೆಯರಾದ ನಾವು ಮೊದಲ ಹೆಜ್ಜೆಯಾದ ಮುಟ್ಟು ಆಗುವ ಪ್ರಕ್ರಿಯೆಯಿಂದ ಇಷ್ಟು ದೀರ್ಘ ವರುಷ ಅಲ್ಲಿಯ ಎಡರು ತೊಡರುಗಳನ್ನು ದಾಟಿ ಬಂದಿದ್ದೇವೆ. ಹಾಗಿರುವಾಗ ಈ ಮುಟ್ಟು ನಿಲ್ಲುವ ಹಂತವನ್ನು ನಾವು ಯಾವುದೇ ರೀತಿಯ ಚಿಂತೆ ಇಲ್ಲದೆ ದಿಟ್ಟತನದಿಂದ ಎದುರಿಸೋಣ ಮನಸ್ಸಿನ ಚಿಂತೆಯೇ ದೈಹಿಕ ಆರೋಗ್ಯದ ಗುಟ್ಟು ಮಾನಸಿಕ ಒತ್ತಡ ಮಾಡಿಕೊಳ್ಳದೆ ನೆಮ್ಮದಿಯ ಬದುಕು ಸಾಗಿಸೋಣ!!!!!

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *