ರಾತ್ರಿ 8 ಗಂಟೆಯೊಳಗೆ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಂತೆ, ಯಾಕೆ ಗೊತ್ತಾ?
ರಾತ್ರಿ 7 ಗಂಟೆಯಿಂದ 8 ಗಂಟೆಯೊಳಗೆ ಊಟಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಊಟ ಮಾಡುವುದರಿಂದ ಈ ಎಲ್ಲಾ ಪ್ರಯೋಜನ ಪಡೆಯಬಹುದು.
ಆಹಾರ ಸೇವನೆ ಪ್ರತೀ ಜೀವಿಗೆ ಅಗತ್ಯವಾಗಿರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹರವನ್ನುಸೇವನೆ ಮಾಡುವುದರ ಜೊತೆಗೆ ಆಹಾರ ಸೇವನೆಯ ಸಮಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಯಾವಾಗಲೂ ಊಟವಾದ ತಕ್ಷಣ ಮಲಗಬಾರದು, ಅಥವಾ ಊಟವಾದ ತಕ್ಷಣ ಸಿಹಿ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು.
ಅದರಲ್ಲೂ ರಾತ್ರಿ ಊಟ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯವಾಗಿರುತ್ತದೆ. ಯಾವಾಗಲೂ ರಾತ್ರಿ 7 ರಿಂದ 8 ಗಂಟೆಯ ಒಳಗೆ ಊಟಮಾಡುವ ಅಭ್ಯಾಸ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಲಗುವ 3 ಗಂಟೆಯ ಮೊದಲು ಊಟ ಮಾಡುವುದು ಹೆಚ್ಚು ಒಳಿತು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.
ಆಸಿಡಿಟಿ ನಿಯಂತ್ರಣ
ರಾತ್ರಿ ಮಲಗುವ ಕನಿಷ್ಠ 3 ಗಂಟೆ ಮೊದಲು ಊಟ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಇದರಿಂದ ಆಸಿಡಿಟಿ ಸಮಸ್ಯೆ ಕಾಡುವುದಿಲ್ಲ.
ಹೀಗಾಗಿ ಆಸಿಟಿಡಿ ಸಮಸ್ಯೆ ಇದ್ದವರು 8 ಗಂಟೆ ಒಳಗೆ ಊಟ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಅಲ್ಲದೆ ಅಜೀರ್ಣವಾಗುವ ಆಹಾರ ಸೇವನೆ ಮಾಡಿದ್ದರೂ ಕೂಡ ತಕ್ಷಣ ಮಲಗದೇ ಇರುವುದರಿಂದ ಜೀರ್ಣವಾಗಿ ಹೊಟ್ಟೆ ಸಮಸ್ಯೆ ಕಾಡುವ ಸಂಭವ ಕಡಿಮೆ ಇರುತ್ತದೆ.
ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ
ರಾತ್ರಿ ಬೇಗ ಊಟ ಮಾಡುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮಲಗುವ ಮುನ್ನ ಆಹಾರ ಜೀರ್ಣವಾಗಿ, ಜೀರ್ಣಾಂಗ ವ್ಯವಸ್ಥೆಗೆ ಕೊಂಚ ಮಟ್ಟಿಗೆ ವಿಶ್ರಾಂತಿ ದೊರಕುತ್ತದೆ. ಬೇಗನೆ ಊಟ ಮಾಡುವುದರಿಂದ ಆಹಾರ ಜೀರ್ಣವಾಗಿ ಇಡೀ ದೇಹಕ್ಕೆ ಶಕ್ತಿ ಸರಿಯಾಗಿ ಸಂಚಯವಾಗುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆ ನಿಮಗೆ ಮತ್ತೆ ಆರೋಗ್ಯಯುತ ಆಹಾರ ಸೇವಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಆದಷ್ಟು ರಾತ್ರಿ 8 ಗಂಟೆಗೆ ಊಟ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ನಿದ್ರಾಹೀನತೆ ಕಡಿಮೆಯಾಗುತ್ತದೆ
ಕೆಲವರಿಗೆ ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರುವುದಿಲ್ಲ. ಅದಕ್ಕೆ ಸೇವಿಸುವ ಆಹಾರ ಕೂಡ ಕಾರಣವಾಗುತ್ತದೆ. ಮಲಗುವ ಮುನ್ನ ಮಸಾಲೆ ಪದಾರ್ಥ ಅಥವಾ ಕರಿದ ಆಹಾರಗಳನ್ನು ತಿಂದರೆ ಬೇಗನೆ ನಿದ್ದೆ ಬರುವುದಿಲ್ಲ.
ಇದನ್ನು ತಪ್ಪಿಸಲು ಬೇಗನೆ ಊಟ ಮಾಡಿ. ಅದಕ್ಕೆ ಸರಿಯಾದ ಸಮಯ ಎಂದರೆ ರಾತ್ರಿ 8 ಗಂಟೆಯೊಳಗೆ ಊಟ ಮಾಡುವುದು ಒಳಿತು. ಬೇಗನೆ ಊಟ ಮಾಡುವುದರಿಂದ ಆಹಾರ ಜೀರ್ಣವಾಗಿ ಮಲಗಿದ ತಕ್ಷಣ ನಿದ್ದೆ ಬರುತ್ತದೆ.
ಹೊಟ್ಟೆ ಆರೋಗ್ಯವಾಗಿರುತ್ತದೆ
ಸಾಮಾನ್ಯವಾಗಿ ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಂಗಳಿಗೊಮ್ಮೆ ಉಪವಾಸ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಅದರೆ ನೀವು ರಾತ್ರಿ ಬೇಗ ಊಟ ಮಾಡಿ ಮಲಗಿದಾಗ ಸರಿಸುಮಾರು 12 ಗಂಟೆಗಳ ಕಾಲ ಹೊಟ್ಟೆಗೆ ಯಾವುದೇ ಆಹಾರ ಸೇವನೆ ಇರುವುದಿಲ್ಲ. ಇದರಿಂದಾಗಿ ಹೊಟ್ಟೆ ಸ್ವಚ್ಛಗೊಳ್ಳುತ್ತದೆ. ಪ್ರತ್ಯೇಕ ಉಪವಾಸದ ಅಗತ್ಯ ಇರುವುದಿಲ್ಲ.
ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಮುರಿಯುವ ಸಮಸ್ಯೆ ಇದ್ದರೂ ಬೇಗನೆ ಊಟ ಮಾಡಿ ಮಲಗುವುದರಿಂದ ಸರಿಹೋಗುತ್ತದೆ.
ಹೃದಾಯಾಘಾತದ ಅಪಾಯ ತಗ್ಗಿಸುತ್ತದೆ
ರಾತ್ರಿ ಬೇಗನೆ ಊಟ ಮಾಡುವುದರಿಂದ ಹೃದಾಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
ಏಕೆಂದರೆ ರಾತ್ರಿ ಆರಾಮಾದಲ್ಲಿ ನಿದ್ದೆ ಮಾಡಿದಾಗ ರಕ್ತದೊತ್ತಡವು ಸುಮಾರು ಶೇ. 10 ರಷ್ಟು ಕಡಿಮೆಯಾಗುತ್ತದೆ. ಇದು ನಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಬೆಳಿಗ್ಗೆ, ನಾವು ಏಳುವ ಮೊದಲು, ಅದು ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಬೇಗನೆ ಊಟ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಜೊತೆಗೆ ಹೃದಯವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬಹುದಾಗಿದೆ.
ಸಂಗ್ರಹ : SB
ಮೂಲ: ವಿ ಕೆ