January 18, 2025
Tumari Krishna Bhandary1

ತಾಯಿ ಮನಸ್ಸು, ಮಾನವೀಯ ಕಳಕಳಿ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣ, ಶಿಕ್ಷಣ ಪ್ರೇಮ ಎಲ್ಲವನ್ನು ಕಾಣಬಹುದಾದ ವ್ಯಕ್ತಿತ್ವದ ಹೆಸರೇ ತುಮರಿ ಕೃಷ್ಣ ಭಂಡಾರಿ. ತನ್ನಲ್ಲಿಗೆ ಬರುವವರ ಕೂದಲನ್ನು ಒಪ್ಪ ಓರಣವಾಗಿ ಕತ್ತರಿಸಿ ಸುಂದರಗೊಳಿಸುವ ಕಾರಣಕ್ಕೆ ಮಾತ್ರವಲ್ಲದೇ ತನ್ನ ಸುಂದರ ಮನಸ್ಸಿನಿಂದಲೂ ಎಲ್ಲರೊಳು ಒಂದಾಗಿದ್ದಾರೆ.

ಸಾಗರ ದ ತುಮರಿ ವೃತ್ತದಿಂದ ಬ್ಯಾಕೊಡು ರಸ್ತೆಯಲ್ಲಿ ಪಕ್ಕ ಹಳ್ಳಿಯಲ್ಲಿ ಇರುವಂಥ ಒಂದು ಕಟ್ಟಿಂಗ್‌ಶಾಪ್‌ ಇದೆ. ಆಡಂಬರವಿಲ್ಲದ, ಅಚ್ಚುಕಟ್ಟಾದ ಈ ಶಾಪ್‌ನಲ್ಲಿ ಎಂದಿಗೂ ನಗುಮೊಗದ ಸೇವೆ ನೀಡುವವರೇ ಈ ಕೃಷ್ಣ ಭಂಡಾರಿ. ಕಟ್ಟಿಂಗ್‌ ಜತೆಗೆ ಅವರ ಅರಳು ಹುರಿದಂತೆ ಆಡುವ ಮಾತುಗಳನ್ನು ಕೇಳಲೂ ಜನ ಬರುವುದು ಇಲ್ಲಿನ ವಿಶೇಷ.

ಕುಂದಾಪುರದ ಹಿರಿಯ ಭಂಡಾರಿ– ಅಕ್ಕಯ್ಯ ದಂಪತಿ ತುಮರಿಗೆ ಬಂದು ಬದುಕು ಕಟ್ಟಿಕೊಂಡವರು. ಈ ದಂಪತಿಗೆ 8 ಮಕ್ಕಳು. ಆ ಎಂಟು ಮಕ್ಕಳಲ್ಲಿ ಒಬ್ಬರಾಗಿರುವ ಕೃಷ್ಣ ಕಲಿತಿರುವುದು ಐದನೇ ಕ್ಲಾಸ್‌. ಆದರೆ ತನ್ನೂರಿನಲ್ಲಿ ಯಾರೂ ಶಿಕ್ಷಣದಿಂದ ಹೊರಗೆ ಉಳಿಯಬಾರದು ಎಂಬುದು ಅವರ ಕಾಳಜಿ. ಹಾಗಾಗಿಯೇ ತುಮರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ತುಮರಿಯಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೀಡಾಕೂಟದಲ್ಲಿ ಸಂಘಟಕರ ಜತೆ ಭಂಡಾರಿ ಇರುತ್ತಾರೆ. ಶಾಲಾ ವಾರ್ಷಿಕ ಕ್ರೀಡಾಕೂಟ ಅಥವಾ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಶಟ್ಲ್‌ ಬ್ಯಾಡ್ಮಿಂಟನ್‌, ಯಕ್ಷಗಾನ, ನಾಟಕ ಹೀಗೇ ಯಾವುದೇ ಕಾರ್ಯಕ್ರಮ ನಡೆದರೆ ಅದರ ಸಂಘಟಕರಲ್ಲಿ ಒಬ್ಬರು ಈ ಕೃಷ್ಣ ಭಂಡಾರಿ.

ಹೀಗೆ ಎಲ್ಲದಕ್ಕೂ ನೆರವಾಗಿ, ಎಲ್ಲರಿಗೂ ಬೇಕಾಗಿರುವ ಕೃಷ್ಣ ಭಂಡಾರಿ ಕೋಟ್ಯಧಿಪತಿ ಅಲ್ಲ. ಅವರದ್ದೊಂದು ಅಂಗಡಿ ಮತ್ತು ಮನೆ ಇಷ್ಟೇ ಆಸ್ತಿ. ಹಾಗಂತ ತುಮರಿಯಲ್ಲಿ ಹಣವಿದ್ದವರಿಗೆ ಕೊರತೆಯೂ ಇಲ್ಲ. ಆದರೆ ಅವರಿಗೆ ಕೃಷ್ಣ ಭಂಡಾರಿಯಂತೆ ದಾನಿಗಳಲ್ಲ. ತನ್ನ ಆದಾಯದಲ್ಲೇ ಕೆಲವು ಸಾವಿರಗಳನ್ನು ಉಳಿಸಿ, ಅಗತ್ಯ ಇರುವವರಿಗೆ, ಅಗತ್ಯ ಇರುವಲ್ಲಿಗೆ ನೀಡುತ್ತಾ ಬಂದವರು.

ದೊಡ್ಡ ಅವಿಭಕ್ತ ಕುಟುಂಬದ ಮುಖ್ಯಸ್ಥ ಅವರು. ಆದರೆ ಅವರ ಮನಸು ಅದೆಷ್ಟು ಮಾನವೀಯ ಎಂದರೆ ಕೆಲ ಸಾವಿರಗಳನ್ನು ಅವರು ಪ್ರತ್ಯೇಕ ಎತ್ತಿ ಇಟ್ಟಿದ್ದಾರೆ. ಈ ಹಣವನ್ನು ಅವರು ಸ್ವಲ್ಪ ಸ್ವಲ್ಪ ತೀರ ಅಗತ್ಯ ಇದ್ದವರಿಗೆ ಸಹಾಯ ಮಾಡುತ್ತಾರೆ. ತುಮರಿ ದುಡಿಯುವ ಜನರೇ ಹೆಚ್ಚಿರುವ ಊರು. ಬದುಕಿನ ತುರ್ತು ಅವಘಡ ಆದಾಗ ಬಂಡಾರಿ ಸಾಮಾನ್ಯ ಜನರಿಗೆ ನೆನಪಾಗುತ್ತಾರೆ. ಇದು ಅವರ ದೊಡ್ಡತನ. ಇದೇ ಕಾರಣಕ್ಕೆ ಅವರು ಬಡವರ ಪಾಲಿನ ಆಪತ್ ಬಾಂಧವ. ಅಪಘಾತ, ಅವಘಡಗಳು ಉಂಟಾದಾಗ ಓಡಿ ಬರುವ ಕೃಷ್ಣಣ್ಣ ಈ ಕಾರಣದಿಂದಲೇ ಊರಿಗೆ ಬೇಕಾದ ಅಣ್ಣ ಆಗಿದ್ದಾರೆ.

ತುಮರಿ ಸಾಂಸ್ಕೃತಿಕ ನಾಡು. ಇಲ್ಲಿ ನಾಟಕ, ಯಕ್ಷಗಾನ ನಿರಂತರ ನಡೆಯುತ್ತಿರುತ್ತದೆ. ಇಲ್ಲಿನ ಗೋಪಾಲ ಗೌಡ ರಂಗಮಂದಿರ ರಾಜ್ಯದಲ್ಲೇ ಹೆಸರಿದೆ. ಕೃಷ್ಣ ಭಂಡಾರಿ ಆರಂಭದಲ್ಲಿ ಅಭಿವ್ಯಕ್ತಿ ಬಳಗ ರಂಗಮಂದಿರ ನಿರ್ಮಾಣ ಮಾಡುವಾಗ ಶ್ರಮದಾನದಲಿ ಪಾಲ್ಗೊಂಡು ಅದೇ ವೇದಿಕೆಯಲ್ಲಿ ನಾಟಕವೊಂದರಲಿ ಪಾತ್ರ ಕೂಡ ಮಾಡಿದ್ದರು. ಕಳೆದ 25 ವರ್ಷಗಳಿಂದ ತುಮರಿಯಲ್ಲಿ ಪ್ರತಿ ವರ್ಷ ಯಕ್ಷಗಾನ ಅಯೋಜನೆ ಮಾಡುತ್ತಿರುವ ಕೃಷ್ಣ ಬಂಡಾರಿಯವರು ಯಕ್ಷಗಾನ ಸಂಘಟಕರಾಗಿಯೂ ಪ್ರಸಿದ್ಧಿ ಪಡೆದವರು.

ಸಮಾಜ ಸೇವೆ ಮಾಡುವ ಕೃಷ್ಣ ಭಂಡಾರಿಯವರನ್ನ ಕಂಡರೆ ನಾಡಿನ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ ಅಚ್ಚುಮೆಚ್ಚು. ಊರಿನಲ್ಲಿ ಎಲ್ಲ ಪಕ್ಷಗಳ ನಾಯಕರ ಜತೆಗೆ ಸುಮಧುರ ಬಾಂಧವ್ಯ ಇಟ್ಟುಕೊಂಡಿರುವ ಕೃಷ್ಣ ಭಂಡಾರಿ ತುಮರಿ ಎಂಬ ಊರಿನ ಆಸ್ತಿ ಆಗಿಬಿಟ್ಟಿದ್ದಾರೆ.

-ಭಂಡಾರಿ ವಾರ್ತೆ 

ಮಾಹಿತಿ :ಪ್ರದೀಪ್ ಕೆರೋಡಿ ,ಸಂತೋಷ್ ಭಂಡಾರಿ ಸಾಗರ(ಜಿ. ಟಿ. ಸತ್ಯನಾರಾಯಣ. ಕರೂರು ಸಹಯೋಗದೊಂದಿಗೆ )

Leave a Reply

Your email address will not be published. Required fields are marked *