September 20, 2024

ಪರಿಸರ ದಿನಾಚರಣೆ ಒಂದು ದಿನಕ್ಕೆ  ಸೀಮಿತವೇ.

ಪ್ರತಿ ವರ್ಷ ಪರಿಸರ ದಿನಾಚರಣೆ ಬರುತ್ತದೆ. ಆ ಸಂದರ್ಭದಲ್ಲಿ ಎಲ್ಲರ ಬಾಯಲ್ಲಿ ಪರಿಸರ ಕಾಳಜಿ ಬಗೆಗಿನ ಭಾಷಣಗಳು, ಲೇಖನಗಳು, ಕವಿತೆಗಳು, ಗಿಡ ನೆಡುವ ಸಡಗರ.. ಪರಿಸರ ಸಂರಕ್ಷಣೆಯ ಅಣಿಮುತ್ತುಗಳು..ಎಲ್ಲಡೆ ಹಸಿರಿನಿಂದ ಕಂಗೊಳಿಸುವ ಬಣ್ಣ ಮುಂದಿನ ವರ್ಷದ ಪರಿಸರ ದಿನಾಚರಣೆ ಬರುವ ಹೊತ್ತಿಗೆ ಎಲ್ಲ ಕಡೆಯೂ ಹಸಿರ ಸಿರಿಯ ಮಾಡಿಬಿಡುತ್ತೇವೆ ಎಂಬ ಧಾವಂತ ಹಾಗೆ ದಿನಗಳೆದಂತೆ ಆಡಿದ ಮಾತನ್ನು, ಪರಿಸರದ ಬಗೆಗಿನ ಕಾಳಜಿಯನ್ನೇ ಮರೆತು ಸಾಗುವ ಪರಿ.. ಇದು ನಾವು ಆಚರಿಸುತ್ತಿರುವ ಪರಿಸರ ದಿನಾಚರಣೆ.

    ಪರಿಸರ ಅಥವಾ ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಅಮೂಲ್ಯ ಕೊಡುಗೆಗಳನ್ನು ನೀಡಿದೆ.. ಪ್ರತಿಯೊಂದು ಜೀವಿಗೂ ಪರಿಸರ ಅಗತ್ಯ, ಹಾಗೂ ಅನಿವಾರ್ಯ.. ಆದರೆ ನಾವಿಂದು ಪರಿಸರಕ್ಕಾಗಿ, ಏನನ್ನು ಕೊಟ್ಟಿದ್ದೇವೆ.. ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಮನುಷ್ಯ ತಾನು ಮಾತ್ರ ಇಲ್ಲಿ ಜೀವಿಸುವುದು ಎಂಬಂತೆ ಅಹಂಕಾರದಿಂದ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲೂ ಆಗದಷ್ಟು ಉದಾಸೀನ ಉಡಾಫೆಯಿಂದ ವರ್ತಿಸುತ್ತಿರುವುದು ಖಂಡನೀಯ.

ಹಸಿರಾದ ಗಿಡ ಮರಗಳನ್ನು ಉಳಿಸಲು ಇದೆಯೆ ನಮಗೆ ಇಚ್ಚಾ ಶಕ್ತಿ?

ಖಂಡಿತಾ ಇಲ್ಲ ಹೊಸ ಗಿಡ ನೆಡುವುದು ಬಿಡಿ.. ಇದ್ದ ಗಿಡ ಮರಗಳನ್ನು ವಾಹನಕ್ಕೆ ತೊಂದರೆ ಆಗುತ್ತದೆ, ವಿದ್ಯುತ್ ವೈಯರ್ ಗೆ ತಾಗುತ್ತದೆ, ಪ್ರತಿ ದಿನ ಅದರ ಎಲೆ ಉದುರುತ್ತದೆ, ದಿನ ಕಸ ಗುಡಿಸುವ ಕೆಲಸ ಕಷ್ಟ ಆಗುತ್ತದೆ, ಮರದ ಬೇರುಗಳು ಬಂದು ಮನೆಯ ಪಂಚಾಂಗಕ್ಕೆ ಹೋಗುತ್ತದೆ, ಕಾಂಕ್ರೀಟ್ ರಸ್ತೆಗಳನ್ನು ಮರದ ಬೇರುಗಳು ಹಾಳುಮಾಡುತ್ತದೆ, ರಸ್ತೆಯನ್ನು ಅಗಲ ಮಾಡಬೇಕು, ಮನೆಯ ಕಾಂಪೌಂಡ್ ಬೇರು ಬಂದರೆ ಕಾಂಪೌಂಡ್ ಬೀಳುತ್ತದೆ, ಮಳೆ ಗಾಳಿಗೆ ಮರ ಇದ್ದರೆ ಬೀಳುತ್ತದೆ ಹೀಗೆ ಒಂದಾ ಎರಡಾ ನಮ್ಮ ಸಮಸ್ಯೆಗಳು???? ಈ ಭೂಮಿಯಲ್ಲಿ ನಮಗೆ ಮಾತ್ರ ಜೀವಿಸಲು ಹಕ್ಕು ಎಂಬಂತೆ ವರ್ತಿಸುತ್ತಿದ್ದೇವೆ !!!! ಇತರ ಜೀವಸಂಕುಲಗಳಿಗೂ ನಮ್ಮ ಹಾಗೆ ಇಲ್ಲಿ ಜೀವಿಸುವ ಹಕ್ಕು ಇದೆ ಎಂದು ನಮಗೆ ಗೊತ್ತಿಲ್ಲವೆ ಅಥವಾ ನಮ್ಮ ಉದ್ಧಟತನವೇ!!!!

ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಕಣ್ಣೆತ್ತಿ ನೋಡಿದರೆ ಪರ್ವತದಂತೆ ಎದ್ದು ನಿಂತ, ನಿಲ್ಲುತ್ತಿರುವ ಕಟ್ಟಡಗಳ ಸಮುಚ್ಛಯ, ರಸ್ತೆಯಲ್ಲಿ ತುಂಬಿದ ತ್ಯಾಜ್ಯ, ಗಾಳಿಯಲ್ಲಿ ಮಾಲಿನ್ಯದ ದಟ್ಟ ಹೊಗೆ, ಚರಂಡಿಗಳ ಅವ್ಯವಸ್ಥೆಯಿಂದ ಕೊಳಚೆ ನೀರಿನ ಪ್ರವಾಹ, ವಾಹನಗಳ ಭರಾಟೆ, ಕಿವಿಗಡಚಿಕ್ಕುವ ಶಬ್ದ. ಇವುಗಳಿಂದ ಕಲ್ಮಷವಾದ ದೂಳಿನ ಕಣಗಳ ನಿರಂತರ ಸೇವನೆಯಿಂದ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಿರುವ ಮಕ್ಕಳು, ಮನುಷ್ಯರು, ಪ್ರಾಣಿಗಳು ಕಲುಷಿತಗೊಂಡ ನೀರು, ಗಾಳಿ, ಆಹಾರದ ಸೇವನೆಗೆ ನಮ್ಮನ್ನೇ ನಾವು ಒಗ್ಗೂಡಿಸಿಕೊಂಡು ಬದುಕುವ ಸ್ಥಿತಿ ಬಂದೊದಗಿದೆ.

ಬರೀ ನಗರಗಳಲ್ಲಿ ಮಾತ್ರ ಅಲ್ಲ ಹಳ್ಳಿ ಹಳ್ಳಿಗಳಲ್ಲಿ ಕೂಡ ಇದ್ದ ಗಿಡ ಮರಗಳನ್ನು ಕಡಿದು ಕಟ್ಟಡಗಳನ್ನು ಕಟ್ಟುವುದು ಅಭಿವೃದ್ಧಿ ಎಂಬಂತಾಗಿದೆ . ಹಾಗೂ ಪ್ಲಾಸ್ಟಿಕ್ ಬಳಕೆ ಎಲ್ಲರಿಗೂ ಪ್ಯಾಶನ್ ಆಗಿದೆ. ಕೆಲವು ಹಳ್ಳಿ ಪ್ರದೇಶಗಳಲ್ಲಿ ನಗರದಿಂದ ತ್ಯಾಜ್ಯಗಳನ್ನು ತಂದು ಸುರಿದು ಗೊತ್ತಿಲ್ಲದೆ ಪರಾರಿಯಾಗುವುದು ಸರ್ವೇಸಾಮಾನ್ಯವಾಗಿದೆ. ಸುಮಾರು ಹತ್ತು, ಹದಿನೈದು ವರ್ಷಗಳ ಹಿಂದೆ ಜನರಲ್ಲಿ ತಮ್ಮ ಊರಿನಲ್ಲಿ,ಮನೆಯ ಹತ್ತಿರ ಕಸದ ರಾಶಿ ಇದ್ದರೆ, ಪ್ಲಾಸ್ಟಿಕ್ ರಾಶಿ ಬಿದ್ದರೆ, ಯಾವುದೇ ತ್ರಾಜ್ಯ ಇದ್ದರೆ ತುಂಬಾ ಅವಮಾನ ಆಗುತಿತ್ತು ಅಲ್ಲಿಂದ ತೆಗೆದು ಸ್ವಚ್ಛಗೊಳಿಸಿ ಕಸ ವಿಲೇವಾರಿ ಆಗುತಿತ್ತು. ಆದರೆ ಇತ್ತೀಚಿನ ಬೆಳವಣಿಗೆಯ ರೀತಿ ನೋಡಿದರೆ ಎಲ್ಲಿ ಕಸ ಇದೆ ಎಂದು ಹುಡುಕುತ್ತಾ ಹೋಗಬೇಕಾಗಿಲ್ಲ. ಎಲ್ಲೆಲ್ಲೂ ಕಸ ಬಿದ್ದಿರುತ್ತದೆ ಪ್ಲಾಸ್ಟಿಕ್ ಅಂತು ಕೇಳುವುದೇ ಬೇಡ ಅವರು ಇವರು ಎನ್ನದೆ ಎಲ್ಲರೂ ಒಂದಲ್ಲ ಒಂದು ರೀತಿಯ ಪ್ಲಾಸ್ಟಿಕ್ ಬಳಕೆ ಮಾಡಿ ರಸ್ತೆ ಬದಿಯಲ್ಲಿ, ಕಾಡು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಶಿಕ್ಷಿತರು ಅಶಿಕ್ಷಿತರು ಎಂಬ ಭೇದವಿಲ್ಲದೆ ಬಡವ ಶ್ರೀಮಂತ ತಾರತಮ್ಯ ಇಲ್ಲದೆ ಪರಿಸರ ಹಾಳು ಮಾಡುವಲ್ಲಿ ಎಲ್ಲರ ಪಾತ್ರ ಇದೆ.

ಕಾಂಕ್ರೀಟ್ ಕಾಡಲ್ಲಿ ಹಸಿರಿಗೆಲ್ಲಿ ಉಳಿವು ?..

ಹೆಚ್ಚಿನ  ಎಲ್ಲ  ಮನೆಗಳಲ್ಲಿ ಮೊದಲಿನ  ಅಂಗಳ ಮಾಯವಾಗಿ ಕಾಂಕ್ರೀಟ್ ಹಾಕಿದ ಅಂಗಳವೇ ಇರುವುದನ್ನು ಕಾಣಬಹುದು. ರಸ್ತೆ, ಬೀದಿ, ಅಂಗಡಿ ಮುಂಗಟ್ಟುಗಳು , ಪಾರ್ಕ್ ಸುತ್ತ ಮುತ್ತ ಹೀಗೆ ಎಲ್ಲ ಕಡೆ ಕಾಂಕ್ರೀಟ್ ಮಯವಾಗಿದೆ .

ಜನರು ಒಂದೇ ಸಲ-ಬಳಕೆ ಅಥವಾ ಬಿಸಾಡಬಹುದಾದ ವಸ್ತುಗಳ ಮೇಲೆ ಹೆಚ್ಚು ಅವಲಂಬನೆಯಿಂದ ಮುಕ್ತರಾಗಿರಬೇಕು, ಏಕೆಂದರೆ ಅವು ತೀವ್ರವಾದ ಪರಿಸರ ಪರಿಣಾಮಗಳನ್ನು ಹೊಂದಿರುತ್ತವೆ. ನಾವು ನಮ್ಮ ನೈಸರ್ಗಿಕ ಸ್ಥಳಗಳನ್ನು, ನಮ್ಮ ವನ್ಯಜೀವಿಗಳನ್ನು ಮತ್ತು ನಮ್ಮ ಆರೋಗ್ಯವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಬೇಕು.

ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗಳಿಗೆ ’ಪರಿಸರ’, ’ಹಸಿರು’ ಎಂದರೇನು ಎಂಬುದೇ ಗೊತ್ತಾಗದ ಸ್ಥಿತಿ ತಲುಪುವ ಕಾಲ ದೂರವಿಲ್ಲ. ಅಷ್ಟೊತ್ತಿಗೆ ಉಸಿರಾಟಕ್ಕೂ ನಿರ್ಮಲವಾದ ಗಾಳಿ ಇಲ್ಲದೇ ಮನುಷ್ಯ ಪರದಾಡುವ ಪರಿಸ್ಥಿತಿ ಬರುವುದು ನಿಶ್ಚಿತ.

ಇನ್ನಾದರೂ ಮನುಷ್ಯ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಅಂದಾಗ ಮಾತ್ರ ಪರಿಸರ ದಿನಾಚರಣೆಗೊಂದು ಅರ್ಥ ಸಿಗುತ್ತದೆ.. ಪರಿಸರವನ್ನು ಉಳಿಸುವ ಮೂಲಕ ನಾವು ಬದುಕಿ ಮುಂದಿನ ನಮ್ಮ ಮಕ್ಕಳಿಗೂ ಬಾಳುವಂತೆ ಮಾಡಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ಪರಿಸರದ ಅಗತ್ಯತೆ, ಕಾಳಜಿ, ಅರಿವನ್ನು ಹೊಂದಿರುವುದರ ಜೊತೆಗೆ. ಪರಿಸರಕ್ಕೆ ತಾನು ನೀಡುತ್ತಿರುವ ಕೊಡುಗೆಯಾದರೂ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಅದರ ಉಳಿವಿಗಾಗಿ ಜಾಗೃತನಾಗಬೇಕು. ನಮಗಿರುವ ಒಂದೇ ಒಂದು ಭೂಮಿಯನ್ನು ಉಳಿಸಿಕೊಳ್ಳಲು ಬಾಯಲ್ಲಿ ಮಾತ್ರ ಪಠಣ ಮಾಡಿದರೆ ಸಾಲದು. ಪ್ರತಿ ಮನೆ, ಪ್ರತಿ ಶಾಲೆಯಲ್ಲಿ ಪರಿಸರ ಕಾಳಜಿ ಪ್ರಾರಂಭ ಆಗಬೇಕು. ಬೇರೆಯವರನ್ನು ನಾವು ಈ ವಿಷಯದಲ್ಲಿ ಅನುಕರಿಸ ಕೂಡದು. ಸಿಕ್ಕ ‌ಸಿಕ್ಕಲ್ಲಿ ಚಾಕಲೇಟ್, ಲೇಸ್,ಕುರ್ ಕುರೆ ಮುಂತಾದ ತಿಂಡಿ ತಿನಿಸುಗಳ ಪ್ಯಾಕೇಟ್. ನೀರು ಮತ್ತು ತಂಪು ಪಾನೀಯ ಕುಡಿದು ಬಿಸಾಡುವ ಬಾಟಲ್ ಗಳು ಇತ್ಯಾದಿ ವಸ್ತುಗಳನ್ನು ಬಳಸಿ ಬಿಸಾಡುವ ಕುರಿತು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿ ವಹಿಸಬೇಕು.. ಜಿಲ್ಲಾಡಳಿತ, ಪಂಚಾಯತ್ ಆಡಳಿತ ಪರಿಸರ ಹಾಳು ಮಾಡುವವರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರತಿ ಶಾಲೆ, ಮನೆಗಳಲ್ಲಿ ‌ ಜನಜಾಗೃತಿ ಆಗಬೇಕು.

ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಒಟ್ಟಾಗಿ ಈ ಬಗ್ಗೆ ಕಾರ್ಯನಿರತವಾದರೆ ಮಾತ್ರ ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯ.
ಪರಿಸರ ಉಳಿದರೆ ನಾವು ನಮ್ಮ ಪೀಳಿಗೆ ಇಲ್ಲಿ ಉಳಿಯಲು ಸಾಧ್ಯ.

– ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *