January 18, 2025
bv

ಕೆಲವರಿಗೆ ಸ್ವಲ್ಪದೂರ ಪ್ರಯಾಣಿಸಿದರೂ ವಾಂತಿ, ತಲೆಸುತ್ತು ಆರಂಭವಾಗುತ್ತದೆ. ಅದರ ತಡೆಗೆ ಏನು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ.

ಸಾಮಾನ್ಯವಾಗಿ ಕೆಲವರಿಗೆ ಪ್ರಯಾಣ ಮಾಡಿದರೆ ವಾಂತಿಯಾಗುತ್ತದೆ. ಬಸ್ಸಿನಲ್ಲಿ ಹೋಗುವಾಗ, ಆಟೋದಲ್ಲಿ ಹೋಗುವಾಗ ಅಥವಾ ಕಾರಿನಲ್ಲಿ ಹೋಗುವಾಗ ತಲೆಸುತ್ತು ಬಂದಂತಾಗಿ, ವಾಂತಿಯಾಗುತ್ತದೆ. ಹೆಚ್ಚಿನ ಜನರಲ್ಲಿ ಇದನ್ನು ಕಾಣುತ್ತೇವೆ. ಎಲ್ಲಿಯಾದರೂ ದೂರ ಪ್ರಯಾಣ ಮಾಡುತ್ತಾರೆ ಎಂದರೆ ವಾಂತಿಗೆ ಹೆಚ್ಚು ಹೆದರಬೇಕಾಗಿರುವ ಸ್ಥಿತಿ ಹಲವರದ್ದಿರುತ್ತದೆ.

ಇದರಿಂದಾಗಿ ಸುಸ್ತು, ದೇಹದಲ್ಲಿ ನಿರ್ಜಲೀಕರಣದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ದೂರದ ಪ್ರಯಾಣಕ್ಕೆ ಈ ರೀತಿ ಸಮಸ್ಯೆ ಇರುವ ಜನರು ಹೆದರುತ್ತಾರೆ. ಹಾಗಾದರೆ ಪ್ರಯಾಣ ಮಾಡುವಾಗ ವಾಂತಿಯಾಗುತ್ತಿದ್ದರೆ ಏನು ಮಾಡಬೇಕು, ಅದನ್ನು ನಿಯಂತ್ರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಬರುತ್ತದೆ.

ಅದಕ್ಕಾಗಿ ಪ್ರಯಾಣ ಮಾಡುವಾಗ ಉಂಟಾಗುವ ವಾಂತಿ ತಡೆಗೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಇಲ್ಲಿದೆ ನೋಡಿ.

ಪ್ರಯಾಣಕ್ಕೂ 2 ಗಂಟೆಗಳ ಮುನ್ನ ಆಹಾರ ಸೇವನೆ

ಎಲ್ಲಿಯಾದರು ಪ್ರಯಾಣ ಮಾಡುವ 2 ಗಂಟೆಗಳ ಮೊದಲು ಆಹಾರ ಸೇವಿಸಿ. ಆದಷ್ಟು ಹೊರಡುವಾಗ ಹೊಟ್ಟೆಯಲ್ಲಿ ಆಹಾರ ಜೀರ್ಣವಾಗಿರುವಂತೆ ನೋಡಿಕೊಳ್ಳಿ. ನೀರಿನಂತಹ ದ್ರವ ಪಾನೀಯಗಳ್ನು ಸೇವಿಸಬಹುದು ಆದರೆ ಹೊಟ್ಟೆ ತುಂಬುವಂತಹ ಆಹಾರವನ್ನು ಪ್ರಯಾಣದ ವೇಳೆ ಸೇವಿಸಬೇಡಿ.

ಇದರಿಂದ ನಿಮ್ಮ ಪ್ರಯಾಣದ ಸಮಯದಲ್ಲಿ ವಾಂತಿ, ತಲೆಸುತ್ತು ಇಲ್ಲದೆ ಆರಾಮದಲ್ಲಿ ಪ್ರಯಾಣಿಸಬಹುದು.

ಲವಂಗ, ಏಲಕ್ಕಿಯನ್ನು ಜೊತೆಗೆ ಇರಿಸಿಕೊಳ್ಳಿ

ಲವಂಗ, ಏಲಕ್ಕಿಯಂತಹ ಪರಿಮಳಯುಕ್ತ ವಸ್ತುಗಳನ್ನು ಆದಷ್ಟು ಪ್ರಯಾಣದ ವೇಳೆ ನಿಮ್ಮೊಂದಿಗೆ ಇರಿಸಿಕೊಳ್ಳಿ. ಆಗಾಗ ಸೇವನೆ ಕೂಡ ಮಾಡಬಹುದು ಜೊತೆಗೆ ಅದರ ಪರಿಮಳದಿಂದ ಮನಸ್ಸು ವಾಂತಿಯಾಗುತ್ತದೆ ಎನ್ನುವ ಭಾವನೆಯೆಡೆಗೆ ಸೆಳೆಯುವುದನ್ನು ತಡೆಯುತ್ತದೆ.

ಆದಷ್ಟು ಮಾತ್ರೆಗಳನ್ನು ಸೇವಿಸಬೇಡಿ

ಕೆಲವರು ಟ್ರಾವೆಲ್‌ ಮಾಡುವಾಗ ವಾಂತಿಯಾಗುತ್ತದೆ ಎಂದು ಹೊರಡುವ ಮುನ್ನ ಮಾತ್ರೆಗಳನ್ನು ತೆಗದುಕೊಳ್ಳುತ್ತಾರೆ.ಈ ರೀತಿ ವಾಂತಿಯನ್ನು ತಡೆಯುವ ಮಾತ್ರೆಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಆಯುರ್ವೇದದ ಪ್ರಕಾರ ವಾಂತಿ ಮತ್ತು ಬೇಧಿಯನ್ನು ಯಾವಾಗಲೂ ತಡೆಯಬಾರದು ಎನ್ನುತ್ತಾರೆ ವೈದ್ಯರು. ಏಕೆಂದರೆ ವಾಂತಿ ಮತ್ತು ಬೇಧಿ ದೇಹದಲ್ಲಿನ ಅಜೀರ್ಣ ಮತ್ತು ಕಲ್ಮಷಗಳನ್ನು ಹೊರಹಾಕುತ್ತವೆ. ಹೀಗಾಗಿ ಆದಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ.

ಲಿಂಬುವಿನ ಬಳಕೆ

ಪ್ರಯಾಣದ ವೇಳೆಯ ವಾಂತಿ, ಹೊಟ್ಟೆಯಲ್ಲಿನ ಕಿರಿಕಿರಿಯ ತಡೆಗೆ ಲಿಂಬು ಸಹಾಯಕವಾಗಿದೆ. ಹೇಗೆ ಅಂತೀರಾ? ಲಿಂಬೆಹಣ್ಣುಗಳಲ್ಲಿರುವ ಸಿಟ್ರಿಕ್ ಆಸಿಡ್ ಗುಣಲಕ್ಷಣಗಳಿಂದಾಗಿ ವಿಶಿಷ್ಟವಾದ ವಾಸನೆಯನ್ನು ಹೊಂದಿರುತ್ತವೆ, ಇದು ಹೊಟ್ಟೆಯ ಕಿರಿಕಿರಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಇದರಿಂದ ವಾಂತಿಯಾಗುವುದನ್ನು ತಡೆಯಬಹುದಾಗಿದೆ.

ಮದ್ಯಪಾನ ಅಥವಾ ಧೂಮಪಾನದ ಅಭ್ಯಾಸವಿದ್ದರೆ ತ್ಯಜಿಸಿ

ಸಾಮಾನ್ಯ ದಿನಗಳಲ್ಲಾದರೂ ಅಷ್ಟೆ ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕರವೇ ಅಗಿದೆ. ಅದರಲ್ಲಂತೂ ಪ್ರಯಾಣ ಮಾಡುವಾಗ ಸೇವನೆ ಮಾಡಿದರೆ ವಾಂತಿ, ಹೊಟ್ಟೆಯಲ್ಲಿ ಕಿರಿಕಿರಿ, ತಲೆಸುತ್ತು ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಬಹುದು..

ಆದ್ದರಿಂದ ಪ್ರಯಾಣದ ವೇಳೆಯ ಆನಾರೋಗ್ಯವನ್ನು ತಡೆಯಲು ಮದ್ಯಪಾನ ಮತ್ತು ಧೂಮಪಾನದ ಅಭ್ಯಾಸವನ್ನು ತ್ಯಜಿಸಿ ಎಂದು ಸಲಹೆ ನೀಡುತ್ತಾರೆ ವೈದ್ಯರು.

 

ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *