ರಾತ್ರಿ ಮಗುವಿನಂತೆ ಮಲಗಿ ನಿದ್ರಿಸಲು ಈ ಟಿಪ್ಸ್ ಫಾಲೋ ಮಾಡಿ
ಉತ್ತಮ ನಿದ್ದೆ ಇಡೀ ದಿನ ಚೈತನ್ಯಪೂರ್ಣವಾಗಿರುವಂತೆ ಮಾಡುತ್ತದೆ. ಆದರೆ ಅನೇಕ ಕಾರಣಗಳಿಂದ ರಾತ್ರಿ ನಿದ್ದೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಉತ್ತಮ ನಿದ್ದೆ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ.
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಎಲೆಕ್ಟ್ರಾನಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಅಥವಾ ಮಾನಸಿಕ ಖಿನ್ನತೆ, ಪ್ರೀತಿ ಪಾತ್ರರ ನಷ್ಟ ಹೀಗೆ ಹಲವು ಕಾರಣಗಳಿಂದ ಅನೇಕರಲ್ಲಿ ರಾತ್ರಿ ನಿದ್ದೆ ಸರಿಯಾಗಿ ಬರದಿರುವ ಸಮಸ್ಯೆ ಕಾಡುತ್ತಿದೆ. ಇದು ಪೂರ್ತಿಯಾಗಿ ನಿದ್ರಾಹೀನತೆ ಕಾಯಿಲೆ ಅಲ್ಲ. ಆದರೆ ಅದರ ಆರಂಭದ ಹಂತ ಹೇಳಬಹುದು.
ಆಯುರ್ವೇದದ ಪ್ರಕಾರ ಆರೋಗ್ಯ ಎಲ್ಲ ರೀತಿಯಲ್ಲಿಯೂ ಉತ್ತಮವಾಗಿರಬೇಕೆಂದರೆ ನಿದ್ದೆ ಸರಿಯಾಗಿರಬೇಕು ಎನ್ನಲಾಗುತ್ತದೆ. ಹೀಗಾಗಿ ನಿದ್ದೆ ಕೊರತೆಯಾದರೆ ಸಾಲು ಸಾಲಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಹಾಗಾದರೆ ರಾತ್ರಿ ಚೆನ್ನಾಗಿ ನಿದ್ದೆ ಬರಬೇಕೆಂದರೆ ಏನು ಮಾಡಬೇಕು, ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳೇನು ಎನ್ನುವ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಯೋಗಾಸನಗಳು
ದೇಹವನ್ನು ಚೈತನ್ಯಪೂರ್ಣವಾಗಿಡಲು ಹೇಗೆ ಯೋಗಾಸನಗಳು ಸಹಕಾರಿಯೋ ಅದೇ ರೀತಿ ಉತ್ತಮ ನಿದ್ದೆಗೆ ಕೂಡ ಯೋಗಾಸನಗಳು ಉತ್ತಮ ಸ್ನೇಹಿಯಾಗಿದೆ. ಹೀಗಾಗಿ ಊಟದ ನಂತರ 2 ಗಂಟೆಗಳ ಬಳಿಕ ಅರ್ಧಗಂಟೆ ಯೋಗಾಸನಗಳನ್ನು ಅಭ್ಯಾಸ ಮಾಡಿ.
ಯೋಗಾಸನದಿಂದ ದೇಹ ಕೊಂಚ ಮಟ್ಟಿನ ದಣಿವಾಗುತ್ತದೆ. ಅಲ್ಲದೆ ಆಹಾರ ಕೂಡ ಸರಿಯಾಗಿ ಜೀರ್ಣವಾಗಿ ಚೆನ್ನಾಗಿ ನಿದ್ದೆ ಬರಲು ಸಹಾಯವಾಗುತ್ತದೆ. ಉತ್ಥಾನಾಸನ, ಬದ್ಧಕೋನಾಸನ, ಸೇತುಬಂಧಾಸನ, ಅಧೋ ಮುಖಶ್ವಾನಾಸನ, ಬಾಲಾಸನ ಹೀಗೆ ನಿದ್ದೆಗೆ ಎಲ್ಲಾ ರೀತಿಯ ಆಸನಗಳು ಸಹಕಾರಿಯಾಗಿವೆ.
ಆಹಾರ ಸೇವನೆ
ರಾತ್ರಿ ಚೆನ್ನಾಗಿ ನಿದ್ದೆ ಬರಬೇಕೆಂದರೆ ರಾತ್ರಿಯ ಊಟ ಸರಿಯಾಗಿರಬೇಕು. ನಿದ್ದೆಗೆ ಪೂರಕವಾಗುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಅಂದರೆ ಹೆಚ್ಚು ಖಾರವಿಲ್ಲದ ಪದಾರ್ಥ, ಸ್ವಲ್ಪ ಮೊಸರು, ಹಣ್ಣುಗಳ ಸೇವನೆ ಹಾಗೂ ಹಾಲು ಕುಡಿಯುವುದು ಮುಖ್ಯವಾಗಿರುತ್ತದೆ.
ಹೊಟ್ಟೆಯಲ್ಲಿ ಬಹುಬೇಗನೆ ಜೀರ್ಣವಾಗುವ ಹಾಗೂ ಯಾವುದೇ ರೀತಿ ಸಂಕಟಗಳನ್ನು ಉಂಟು ಮಾಡದೇ ಇರುವ ಆಹಾರಗಳ ಸೇವನೆ ರಾತ್ರಿ ಒಳ್ಳೆಯದು. ಊಟದ ನಂತರ ಕನಿಷ್ಠ ಒಂದರಿಂದ ಎರಡು ಗಂಟೆಗಳ ನಂತರ ಮಲಗಿ. ಇದರಿಂದ ತಿಂದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗಿರುತ್ತದೆ
ಬ್ರಿಸ್ಕ್ ವಾಕಿಂಗ್
ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ, ಮನಸ್ಸು ಶಾಂತವಾಗಿದ್ದಾಗ ನಿದ್ದೆ ಮಾಡಲು ಯಾವ ಮದ್ದು ಕೂಡ ಬೇಕಾಗುವುದಿಲ್ಲ. ಅದಕ್ಕೆ ಹೇಳುವುದು ಚಿಂತೆಯಿಲ್ಲದವನಿಗೆ ಸಂತೆಯಿಲ್ಲೂ ನಿದ್ದೆ ಎಂದು. ಹೀಗಾಗಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನಿಮಗೆ ವಾಕಿಂಗ್ ಅತ್ಯುತ್ತಮ ದಾರಿಯಾಗಿದೆ. ಮನೆಯ ಹೊರಗೆ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಊಟದ ನಂತರ 15 ನಿಮಿಷವಾಕಿಂಗ್ ಮಾಡಿದರೆ ಮನಸ್ಸು ಪ್ರಫುಲ್ಲ ವಾಗುತ್ತದೆ.
ನೀವೇನಾದರೂ ಇಡೀ ದಿನ ಕುಳಿತು ಕೆಲಸ ಮಾಡಿದ್ದರೆ ನಡಿಗೆಯಿಂದ ಕಾಲುಗಳಿಗೆ ಆಹ್ಲಾದತೆ ಸಿಗುತ್ತದೆ. ಈ ಮೂಲಕ ಉತ್ತಮ ನಿದ್ದೆಯೂ ಬರುತ್ತದೆ. ಅಲ್ಲದೆ ಬ್ರಿಸ್ಕ್ ವಾಕ್‌ನಿಂದ ದೇಹದಲ್ಲಿ ಆರೋಗ್ಯಕ್ಕೆ ಉತ್ತಮವಾಗಿರುವ ಹಾರ್ಮೋನಗಳು ಉತ್ಪತ್ತಿಯಾಗುತ್ತವೆ ಎನ್ನುತ್ತಾರೆ ವೈದ್ಯರು.
ವ್ಯಸನಗಳಿಂದ ದೂರವಿರಿ
ನಿದ್ದೆ ಚೆನ್ನಾಗಿ ಬರಬೇಕೆಂದರೆ ದೇಹಕ್ಕೆ ಏನು ನೀಡುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಹೀಗಾಗಿ ಧೂಮಪಾನ, ಮದ್ಯಪಾನ, ಡ್ರಗ್ಸ್‌ನಂತಹ ಅಭ್ಯಾಸಗಳಿಂದ ದೂರವಿರಿ. ನೀವುವ್ಯಸನಗಳಿಗೆ ದಾಸರಾದಷ್ಟೂ ದೇಹದಲ್ಲಿನ ತೂಕ ಹೆಚ್ಚಳವಾಗುತ್ತದೆ.
ದೇಹದ ತೂಕ ಒಂದು ಬಾರಿ ಹೆಚ್ಚಾದರೆ ಸಾಲು ಸಾಲು ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಅಲ್ಲದೆ ದೇಹದ ತೂಕ ಹೆಚ್ಚಿರುವ ಕೆಲವರಲ್ಲಿ ರಾತ್ರಿ ಮೂಗು ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನಿದ್ದೆಗೆ ಅಡ್ಡಿಯಾಗಬಹುದು.
ಗ್ಯಾಜೆಟ್‌ಗಳ ಬಳಕೆ
ಈಗ ಹೇಗಾಗಿದೆ ಎಂದರೆ ಕಣ್ಣು ಮುಚ್ಚಿ ಮಲಗುವಾಗಲೂ ಮೊಬೈಲ್, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಮೊಬೈಲ್ ನೋಡುವುದೇ ಆಗಿದೆ. ಆದರೆ ಇದರಿಂದ ಮೆದುಳಿಗೆ ಸಾಕಷ್ಟು ಹಾನಿಯುಂಟು ಮಾಡುತ್ತದೆ ಎನ್ನುವುದು ನೆನಪಿರಲಿ.
ರಾತ್ರಿ ನಿದ್ದೆಗೆ ಅಡ್ಡಿ ಮಾಡುವುದು ಇದೇಗ್ಯಾಜೆಟ್‌ಗಳೇ ಆಗಿವೆ. ಸರಿ ರಾತ್ರಿಯವರೆಗೂ ಟಿವಿ ನೋಡುವುದು, ಮೊಬೈಲ್, ವಿಡಿಯೋ ಗೇಮ್ ಎಂದು ಬಳಸುತ್ತಿದ್ದರೆ ಕಣ್ಣು ಅತಿಯಾಗಿ ದಣಿದು ನಿದ್ದೆಗೆ ಜಾರುತ್ತದೆ. ಆದರೆ ಈ ನಿದ್ದೆ ಪರಿಪೂರ್ಣವಾಗಿರುವುದಿಲ್ಲ. ಬೇಕಾದರೆ ನೀವೇ ಗಮನಿಸಿ, ನಿದ್ದೆ ಮಾಡಿ ಎದ್ದರೂ ಆಯಾಸ, ತಲೆನೋವು ಕಾಡುತ್ತಿರುತ್ತದೆ. ಹೀಗಾಗಿ ಮಲಗುವ ಕನಿಷ್ಠ ಅರ್ಧ ಗಂಟೆ ಮೊದಲಾದರೂ ನಿಮ್ಮ ಗ್ಯಾಜೆಟ್‌ಗಳಿಂದ ದೂರವಿರಿ. ಆ ಸಮಯದಲ್ಲಿ ವಾಕಿಂಗ್ ಮಾಡುವುದೋ ಅಥವಾ ಧ್ಯಾನ ಮಾಡುವುದೋ ಅಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ನಿದ್ದೆ ಚೆನ್ನಾಗಿ ಬರುತ್ತದೆಎಂದು ಸಲಹೆ ನೀಡುತ್ತಾರೆ ವೈದ್ಯರು.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ
.