January 18, 2025
1

ಶೀತ-ಕೆಮ್ಮು ಕೂಡಲೇ ಕಮ್ಮಿ ಆಗಲು, ಮಾತ್ರೆ ಬಿಡಿ-ಈ ಕಷಾಯ ಕುಡಿಯಿರಿ

ಶೀತ ಕೆಮ್ಮಿನ ಸಮಸ್ಯೆ ನಿವಾರಿಸಲು, ಮಾತ್ರೆಗಳನ್ನು ನುಂಗುವ ಬದಲು ಮನೆಯಲ್ಲಿ ಮಾಡಿ ಕೊಳ್ಳಬಹುದಾದ ಕೆಲವೊಂದು ಸರಳ ಮನೆಮದ್ದು ಗಳನ್ನು ಸೇವನೆ ಮಾಡಿದರೆ ಪರಿಹಾರ ಕಾಣಬಹುದಾಗಿದೆ.

ಹಿಂದಿನ ಕಾಲದಲ್ಲಿ ಆಕಸ್ಮಾತ್ ಆಗಿ ನಮಗೆ, ಕೆಮ್ಮು, ಶೀತ, ನೆಗಡಿ ಅಥವಾ ಜ್ವರ ಶುರುವಾದ ಸಂದರ್ಭಗಳಲ್ಲಿ ಮನೆಯಲ್ಲಿದ್ದ ಹಿರಿಯರು ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿ ಕೊಂಡು ಕಷಾಯ ರೆಡಿ ಮಾಡಿಕೊಡುತ್ತಿದ್ದರು ಇಂತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆಲ್ಲಾ ವೈದ್ಯರ ಬಳಿ ನಮ್ಮನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಹಿರಿಯರು ನೀಡುತ್ತಿದ್ದ, ಕೆಲವೊಂದು ಮನೆಮದ್ದು ಗಳನ್ನು ಸೇವಿಸಿ ಆರೋಗ್ಯಕರವಾಗಿ ಇರುತ್ತಿದ್ದೆವು…

ಆದರೆ ಈಗ ಕಾಲ ಬದಲಾಗಿ ಬಿಟ್ಟಿದೆ. ಇಂತಹ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ, ಮೆಡಿಕಲ್‌ನಲ್ಲಿ ತಂದಿಟ್ಟ ಮಾತ್ರೆಗಳನ್ನು ಹಿಂದೆ-ಮುಂದೆ ಆಲೋಚನೆ ಮಾಡದೆ ನುಂಗುತ್ತಾರೆ. ಇದರಿಂದ ತಕ್ಷಣಕ್ಕೆ ಪರಿಹಾರ ಕಾಣ ಬಹುದು, ಆದರೆ ಮುಂದಿನ ದಿನಗಳಲ್ಲಿ ಇದರಿಂದ ಬರುವ ಅಡ್ಡಪರಿಣಾಮಗಳು, ಒಂದೆರಡು ಅಲ್ಲ! ಹೀಗಾಗಿ ಇವೆಲ್ಲಾ ಸಮಸ್ಯೆಗಳನ್ನು ಅನಾವಶ್ಯಕವಾಗಿ ಮೈಮೇಲೆ ಎಳೆದುಕೊಳ್ಳುವ ಬದಲು ಯಾವುದೇ ಅಡ್ಡಪರಿಣಾಮಗಳು ಇಲ್ಲದ ಕೆಲವೊಂದು ಸರಳ ಮನೆಮದ್ದುಗಳ ಬಗ್ಗೆ ಈ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ..

ತುಳಸಿ ಎಲೆ

  • ನಮಗೆಲ್ಲಾ ಗೊತ್ತೇ ಇರುವ ಹಾಗೆ, ತುಳಸಿಯ ಎಲೆಗಳಲ್ಲಿ ಔಷಧೀಯ ಗುಣಗಳ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿದೆ. ಪ್ರಮುಖವಾಗಿ ತುಳಸಿ ಗಿಡದ ಎಲೆಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇಸ್ಫ್ಲಾಮೇಟರಿ, ಗುಣಲಲಕ್ಷಣಗಳು ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ, ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಹಳ ಬೇಗನೇ ನಿವಾರಣೆ ಮಾಡುತ್ತದೆ.
  • ಒಂದು ವೇಳೆ, ನಿಮಗೆ ಸಡನ್ ಆಗಿ ಒಣ ಕೆಮ್ಮಿನ ಸಮಸ್ಯೆಗಳು ಕಾಣಿಸಿಕೊಂಡರೆ, ಸ್ವಲ್ಪ ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು, ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಿ. ಇನ್ನು ಇದಕ್ಕೆ ಅರ್ಧ ಚಮಚ ಶುಂಠಿ ರಸ ಹಾಗೂ ಇಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಈ ಮನೆಮದ್ದನ್ನು ಪ್ರತಿದಿನ ಒಂದೆರಡು ಮಾಡಿ ಸೇವನೆ ಮಾಡಿದರೆ, ಕೂಡಲೇ ಒಣ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.

ಜೇನುತುಪ್ಪ

  • ಜೇನುತುಪ್ಪ ಅಂದಾಗ ಬಾಯಲ್ಲಿನೀರೂರುತ್ತದೆ ಅಲ್ಲವೇ? ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಸಿಹಿ ಅಂಶಗಳನ್ನು ಹೊಂದಿರುವುದರ ಜೊತೆಗೆ, ಹಲವಾರು ಬಗೆಯ ಔಷಧೀಯ ಗುಣಗಳು ಕೂಡ ಕಂಡು ಬರುತ್ತದೆ.
  • ಪ್ರಮುಖವಾಗಿ ಜೇನಿನಲ್ಲಿ, ಹಲವು ಬಗೆಯ ವಿಟಮಿನ್ ಅಂಶಗಳು, ಖನಿಜಾಂಶಗಳು, ಕಾರ್ಬೋ ಹೈಡ್ರೇಟ್ ಅಂಶಗಳು, ಅಮೈನೋ ಆಮ್ಲಗಳು ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ಕೆಮ್ಮಿನ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೀಗೆ ಮಾಡಿ

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ತುಂಡು ನಿಂಬೆಹಣ್ಣಿನ ರಸ ಹಿಂಡಿ ಅದಕ್ಕೆ ಜೇನು ತುಪ್ಪವನ್ನು ಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದುಮಾತ್ರವಲ್ಲದೆ, ಕೆಮ್ಮಿನ ಸಮಸ್ಯೆ ಕೂಡ ದೂರವಾಗುವುದು.

ಅರಿಶಿನ

  • ಅಡುಗೆ ಮನೆಯ ರಾಣಿ ಅರಿಶಿನದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಪ್ರಮುಖವಾಗಿ ಅರಿಶಿನ ದಲ್ಲಿ ಕರ್ಕ್ಯುಮಿನ್ ಎನ್ನುವ ಆರೋಗ್ಯಕಾರಿ, ಅಂಶ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಆಂಟಿ – ಇನ್ಫಾಮೇಟರಿ ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದರ ಸಂಪೂರ್ಣ ಲಾಭಗಳನ್ನು ಪಡೆದುಕೊಳ್ಳಲು.
  • ಒಂದು ಲೋಟ ಕುದಿಯುವ ಬಿಸಿ ಹಾಲಿಗೆ ಅರಿಶಿನವನ್ನು ಮಿಶ್ರಣ ಮಾಡಿ ಜೊತೆಗೆ ಸ್ವಲ್ಪ ತುಪ್ಪ ವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆ ಬಳಿಕ ರಾತ್ರಿ ಮಲಗುವ ಸಮಯದಲ್ಲಿ ಕುಡಿಯುವು ದರಿಂದ ಮೂಗು ಸೋರುವುದು, ಎದೆ ಕಟ್ಟುವುದು, ತಲೆನೋವು ಹಾಗೂ ಜ್ವರದ ರೋಗ ಲಕ್ಷಣಗಳು ಎಲ್ಲಾ ದೂರವಾಗುತ್ತದೆ

ಗಿಡಮೂಲಿಕೆ ಕಷಾಯ

  • ಸ್ವಲ್ಪ ದಾಲ್ಚಿನ್ನಿ, ಎರಡು ಮೂರು ಲವಂಗ ಹಾಗೂ ಕಪ್ಪು ಮೆಣಸು, ಒಂದು ಚಮಚ ಶುದ್ಧ ಹಸುವಿನ ತುಪ್ಪ, ಶುಂಠಿ, ಸ್ವಲ್ಪ ತುಳಸಿ ಎಲೆಗಳು ಹಾಗೂ ಎರಡು ಎಸಳು ಬೆಳ್ಳುಳ್ಳಿ.
  • ಇವುಗಳನ್ನು ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿ ತಯಾರಾದ ಪಾನೀಯವನ್ನು ಸೋಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಶೀತ, ಜ್ವರ, ಕೆಮ್ಮಿನ ಸಮಸ್ಯೆ ಹತ್ತಿರಕ್ಕೂ ಕೂಡ ಸುಳಿಯಲಾರದು.

ಕೊನೆಯ ಮಾತು

ಶೀತ, ಕೆಮ್ಮು, ಜ್ವರದಂತಹ ಸಮಸ್ಯೆ ಬಂದ ಸಂದರ್ಭದಲ್ಲಿ ತಕ್ಷಣಕ್ಕೆ ಮಾಡಿಕೊಳ್ಳಬಹುದಾದ ಪರಿಹಾರ ಗಳಿವು. ಒಂದು ವೇಳೆ ಈ ಸಮಸ್ಯೆಗಳು ಕಂಟ್ರೋಲ್‌ಗೆ ಬರದೇ ಹೋದರೆ, ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಿ.

 

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *