September 20, 2024

ಈ ಕಾರಣಕ್ಕೆ ದುಡಿಯುವ ಮಹಿಳೆಯರು ಸುದರ್ಶನ ಕ್ರಿಯೆ ಮಾಡಿದರೆ ಒಳ್ಳೆಯದು.

ಹೆಣ್ಣಿಗೆ ಭಾರತದಲ್ಲಿ ವಿಶೇಷ ಸ್ಥನವಿದೆ. ಹೆಣ್ಣನ್ನು ಪೂಜ್ಯನೀಯ ಭಾವದಲ್ಲಿ ಕಾಣುತ್ತೇವೆ. ಇಂತಹ ಹೆಣ್ಣು ತಾಯಿ, ಪತ್ನಿ, ಸಹೋದರಿ, ಸ್ನೇಹಿತೆ ಎಂಬ ವಿವಿಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ಹಿಂದಿನಂತೆಯೇ ಹೆಣ್ಣು ಆಧುನಿಕ ಕಾಲದಲ್ಲೂ ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಮನೆಯಲ್ಲಿ ಕೆಲಸ, ಮನೆಯ ಹೊರಗೂ ಕೆಲಸ.
ಹೀಗೆ ಸಾಕಷ್ಟು ಜವಾಬ್ದಾರಿಗಳಿಂದ ಸ್ತ್ರೀ ಕೆಲಸ ನಿರ್ವಹಿಸುತ್ತಿದ್ದಾಳೆ. ಇದರಿಂದ ಒತ್ತಡ, ಆಯಾಸ ಸೇರಿ ಇನ್ನಿತರ ಸಮಸ್ಯೆಗಳಿಗೆ ಮಹಿಳೆ ತುತ್ತಾಗುತ್ತಾಳೆ. ಇದನ್ನು ನಿವಾರಿಸಲು ಕೆಲವರು ವಿಕೇಂಡ್ ನಲ್ಲಿ ಪಿಕ್ ನಿಕ್, ಟ್ರಿಪ್ ಅಂತ ಹೋಗುವುದುಂಟು. ಆದರೆ ಇದು ಕ್ಷಣಿಕ ಅಂದರೆ ಆ ಸಮಯಕ್ಕೆ ಖುಷಿ ಕೊಡಬಹುದು ಬಿಟ್ಟರೆ ಈ ಆಯಾಸ, ಒತ್ತಡ, ಟೆನ್ಷನ್ ನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮಹಿಳೆ ಬೇಗನೆ ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಾಳೆ ಮತ್ತು ಆಯಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಮಹಿಳೆ ಹೀಗೆ ಒತ್ತಡ, ಟೆನ್ಷನ್, ಆಯಾಸದಿಂದ ಜೀವನ ನಡೆಸಿದರೆ ಸಾಕೇ? ಅವರು ಈ ಸಮಸ್ಯೆ ಹೊರಬರಬೇಕಲ್ವೇ? .
ಯಸ್ ಅವರು ಈ ಸಮಸ್ಯೆಗಳಿಂದ ಹೊರಬರಬೇಕು ಅದಕ್ಕಾಗಿ ನಾವಿವತ್ತು ಕೆಲಸ ಮಾಡುವ ಮಹಿಳೆಯರಿಗೆ ಸುದರ್ಶನ ಕ್ರಿಯೆ ಎಷ್ಟು ಮುಖ್ಯ? ಇದರಿಂದಾಗುವ ಲಾಭವೇನು? ಎಲ್ಲವನ್ನು ಈ ವಿಶೇಷ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ.

ಏನಿದು ಸುದರ್ಶನ ಕ್ರಿಯೆ?

ಸುದರ್ಶನ ಕ್ರಿಯೆ ಎಂದರೆ ಯೋಗ, ಧ್ಯಾನ, ಪ್ರಾಣಯಮಗಳಿಗಿಂತ ಭಿನ್ನವಾಗಿರುವ ಒಂದು ಪ್ರಕ್ರಿಯೆ. ಸುಲಭವಾಗಿ ಹೇಳೋದಾದ್ರೆ ಇದು ಉಸಿರಾಟದ ಒಂದು ಪ್ರಕ್ರಿಯೆ. ನೈಜ ಉಸಿರಾಟದ ಲಯಕ್ಕೆ ಒಂದು ನವೀನ ತಿರುವನ್ನು ನೀಡಿ, ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನವನ್ನುಂಟು ಮಾಡುವ ಒಂದು ಕ್ರಿಯೆ ಎನ್ನಬಹುದು.

ಇನ್ನು ಈ ಸುದರ್ಶನ ಕ್ರಿಯೆಯಿಂದ, ಒತ್ತಡ, ಆಯಾಸ ಮತ್ತು ನಕಾರತ್ಮಕ ಭಾವನೆಗಳಾದ ಕೋಪ, ಆಶಾಭಂಗತೆ ಮತ್ತು ಖಿನ್ನತೆಯನ್ನು ಹೊರಹಾಕಿ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಪ್ರಕ್ರಿಯೆಯಾಗಿದೆ. ಸುದರ್ಶನ ಕ್ರಿಯೆಯು ಆರೋಗ್ಯ, ಶಾಂತಿ, ಆನಂದ ಇವುಗಳನ್ನು ನೀಡುವುದರ ಜೊತೆಗೆ ಜೀವನದಾಚೆಯ, ಬಯಲಾಗದ ರಹಸ್ಯವನ್ನು ತೆರೆದಿಡುತ್ತದೆ.

ಇದೊಂದು ಅಧ್ಯಾತ್ಮಿಕ ತಿರುವು ಆಗಿದ್ದು , ವ್ಯಕ್ತಿಗೆ ಜೀವನದ ಅನಂತತೆಯ ಒಂದು ಕ್ಷಣ ದೃಷ್ಟಿಯನ್ನು ನೀಡುತ್ತದೆ. ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುವವರಲ್ಲಿ ಹೆಚ್ಚಿನ ರೋಗ ನಿರೋಧಕರ ಶಕ್ತಿ, ಉತ್ತಮಗೊಂಡ ದೇಹದಾರ್ಢ್ಯ ಮತ್ತು ದೀರ್ಘಕಾಲ ನಿಲ್ಲುವಂತಹ ಚೈತನ್ಯವು ಕಂಡು ಬರುತ್ತದೆ. ಅಲ್ಲದೇ ಸುದರ್ಶನ ಕ್ರಿಯೆಯಿಂದ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚುತ್ತದೆ, ಒತ್ತಡ ಕಡಿಮೆ ಆಗುತ್ತದೆ, ಆಕ್ಟೀವ್ ಆಗಿ ಇರಲು ಸಹಕರಿಸುತ್ತದೆ. ಥೈರಾಯಿಡ್, ಮಧುಮೇಹ, ಬಿಪಿ, ನಿದ್ದೆ ಸಮಸ್ಯೆ ದೂರವಾಗುತ್ತದೆ. ಖುಷಿಯಾಗಿ, ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಆಯಾಸ ದೂರ ಮಾಡುತ್ತ.

ಎಲ್ಲಿ ಸುದರ್ಶನ ಕ್ರಿಯೆ ಪಡೆಯಬಹುದು?
ಯೂಟ್ಯೂಬ್ ಅಥವಾ ಆಪ್ ಗಳನ್ನು ನೋಡಿ ಇಂತಹ ಕ್ರಿಯೆ ಪಡೆಯಲು ಹೋಗಬೇಡಿ. ಇದಕ್ಕೆ ನುರಿತ ಪರಿಣಿತರು ಇರುತ್ತಾರೆ ಇವರಿಂದಲೇ ಈ ಕ್ರಿಯೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಶಿಬಿರಗಳು ಇರುತ್ತದೆ. ಈ ಶಿಬಿರಗಳಲ್ಲಿ ಪಾಲ್ಗೊಂಡು ಸುದರ್ಶನ ಕ್ರಿಯೆ ಪಡೆಯಬಹುದು. ಎಂಟು ವರ್ಷದ ಮಕ್ಕಳಿಂದ ಹಿಡಿದು ವೃದ್ದರಿಗೂ ಈ ಸುದರ್ಶನ ಕ್ರಿಯೆ ಮಾಡಬಹುದು. ಇನ್ನು ಮಕ್ಕಳಿಗೆ ನೀಡುವ ಶಿಬಿರ ಬೇರೆ ಇರುತ್ತದೆ. ಇನ್ನು 18 ರಿಂದ ಮೇಲ್ಪಟ್ಟವರೈಗೆ ಹ್ಯಾಪಿನೆಸ್ ಶಿಬಿರ ಇರುತ್ತದೆ. ಹತ್ತು ವರ್ಷ ತಪಸ್ಸು ಮಾಡಿದರೆ ಸಿಗುವ ಫಲದಷ್ಟೇ ಒಂದು ಬಾರಿಯ ಸುದರ್ಶನ ಕ್ರಿಯೆಯ ಸೆಷನ್ ನಲ್ಲಿ ಸಿಗುತ್ತದೆ ಎಂದು ಹೇಳಲಾಗಿದೆ.

ಕೆಲಸ ಮಾಡುವ ಮಹಿಳೆಯರು ಯಾಕೆ ಸುದರ್ಶನ ಕ್ರಿಯೆ ಮಾಡಬೇಕು?

1.ಮೊದಲ ಸೆಷನ್‌ನಿಂದಲೇ ಒತ್ತಡ ಕಡಿಮೆ!

ಮಹಿಳೆಯರು ಯಾವಾಗಲೂ ಒತ್ತಡದಲ್ಲೇ ಇರುತ್ತಾರೆ. ಮನೆಯ ಕೆಲಸದ ಒತ್ತಡ, ಕಚೇರಿಯ ಕೆಲಸದ ಒತ್ತಡ, ಮಕ್ಕಳ ವಿದ್ಯಾಭ್ಯಾಸದ ಒತ್ತಡ. ಹೀಗೆ ನಾನಾ ರೀತಿಯ ಒತ್ತಡಗಳಿಂದ ಮಹಿಳೆಯರು ಇರುತ್ತಾರೆ. ಅಂತಹವರಿಗೆ ಒತ್ತಡ ನಿವಾರಣೆಗೆ ಸುದರ್ಶನ ಕ್ರಿಯೆ ಅತ್ಯುತ್ತಮ. ಅಧ್ಯಯನದ ಪ್ರಕಾರ ಸುದರ್ಶನ ಕ್ರಿಯೆಯು ಕಾರ್ಟಿಸೋಲ್ (ಒಂದು ಪ್ರಮುಖ ಒತ್ತಡದ ಹಾರ್ಮೋನ್) ಅನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಇನ್ನು ದಿನ ನಿತ್ಯದ ಕೆಲಸಗಳಿಂದ ಮಹಿಳೆ ರೋಸಿ ಹೋಗಿರುತ್ತಾರೆ. ಇದು ಒತ್ತಡ, ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಸುದರ್ಶನ ಕ್ರಿಯೆಯು ಮಾನಸಿಕ ಅಸ್ವಸ್ಥತೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಇದು ಒತ್ತಡ ಸಮಯದಲ್ಲಿ ಹೇಗೆ ಜೀವನ, ಸಮಯವನ್ನು ನಿಭಾಯಿಸಬೇಕು ಎನ್ನುವುದನ್ನು ತಿಳಿಸುತ್ತದೆ. ಅದೇ ರೀತಿ ಮನಸ್ಸು ಕೆಲಸ ಮಾಡುತ್ತದೆ. ಸುದರ್ಶನ ಕ್ರಿಯೆಯಿಂದ ನಮ್ಮ ಜೀವನದ ಒತ್ತಡದ ಮತ್ತು ಕಠಿಣವಾದ ಸಂದರ್ಭಗಳಲ್ಲಿ ನಾವು ಹೇಗೆ ಇರಬೇಕು ಎನ್ನುವ ಗುಣಗಳನ್ನು ಇದು ಬೆಳೆಸುತ್ತದೆ.


2. ಕೆಲಸ-ಜೀವನದ ಬಗ್ಗೆ ಪಶ್ಚಾತ್ತಾಪ

ಅನೇಕ ಮಹಿಳೆಯರಿಗೆ ಈ ವಿಚಾರ ಕಾಡುತ್ತಿರುತ್ತದೆ. ಮಹಿಳೆಯರಿಗೆ ತಮ್ಮ ಭೂತಕಾಲದ ಬಗ್ಗೆ ಚಿಂತಿಸುತ್ತಿರುತ್ತಾರೆ. ಇದಕ್ಕೆ ಪಶ್ಚಾತ್ತಾಪ ಕೂಡ ಪಡುತ್ತಿರುತ್ತಾರೆ. ಅಲ್ಲದೇ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ ಕೊರಗುತ್ತಾರೆ. ಇನ್ನೊಂದು ಕಡೆ ಕೆಲ ಮಹಿಳೆಯರು ತಮ್ಮ ಜೀವನ ಹಾಗೂ ತಮ್ಮ ಕೆಲಸಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಾ ಕೊರಗುತ್ತಿರುತ್ತಾರೆ. ಇದರಿಂದ ಒತ್ತಡ, ಖಿನ್ನತೆ ಹಾಗೂ ಆಯಾಸ ಮೂಡುವುದು ಸಹಜ. ಆದರೆ ಇಂತಹ ಪಶ್ಚಾತ್ತಾಪ ಪಡುವ ದುಷ್ಟ ಯೋಚನೆಯಿಂದ ಸುದರ್ಶನ ಕ್ರಿಯೆ ಮಹಿಳೆಯರನ್ನು ಮುಕ್ತಗೊಳಿಸುತ್ತದೆ. ಇಂತಹ ಆಲೋಚನೆಗಳಿಗೆ ನಿಮ್ಮ ಮನಸ್ಸು ಹೋಗದೆ ಹಾಗೆ ಕಟ್ಟಿ ಹಾಕುತ್ತದೆ. ಕ್ರಿಯೆ ಆರಂಭಿಸಿದ ಒಂದು ವಾರದಲ್ಲಿ ನೀವು ಆಶಾವಾದಿಗಳಾಗಿರುತ್ತೀರಿ, ಅಲ್ಲದೇ ನಿಮ್ಮ ಯೋಗ ಕ್ಷೇಮದ ಬಗ್ಗೆ ನಿಮಗೆ ಕಾಳಜಿ ಬರುತ್ತದೆ.

3. ಹಲವು ಕೆಲಸ ಮಾಡಲು ಚೈತನ್ಯ

ಮಹಿಳೆ ಅಂದರೆ ಇತ್ತೀಚಿನ ದಿನಗಳಲ್ಲಿ ರೋಬೋಟ್ ಆಗಿ ಬಿಟ್ಟಿದ್ದಾರೆ. ದಿನ ನಿತ್ಯವೂ ಕೆಲಸ. ರಜೆಯೂ ಇಲ್ಲ. ರಜೆ ಇದ್ದರೆ ಮನೆಯಲ್ಲಿ ನೂರಾರು ಕೆಲಸ. ಮಕ್ಕಳನ್ನು ನೋಡಿಕೊಳ್ಳುವುದು, ಗಂಡನ ಆರೈಕೆ ಮಾಡುವುದು. ಅತಿಥಿಗಳು ಬಂದರೆ ಅವರನ್ನು ಉಪಚಾರ ಮಾಡುವುದು ಹೀಗೆ ಕೆಲಸ ಮಾಡುತ್ತ ಒತ್ತಡಗಳ ಮೇಲೆ ಒತ್ತಡ ತಂದಿಟ್ಟುಕೊಳ್ಳುತ್ತ ಮಹಿಳೆ ಬಳಲಿ ಬೆಂಡಾಗಿ ಹೋಗುತ್ತಾಳೆ. ಆದರೆ ಸುದರ್ಶನ ಕ್ರಿಯೆಯೂ ನಿಮ್ಮಗಿರುವ ಒತ್ತಡವನ್ನು ಕಡಿಮೆ ಮಾಡಿ ನವ ಚೈತನ್ಯ ನೀಡುತ್ತದೆ. ಈ ಕ್ರಿಯೆಯು ಧನಾತ್ಮಕ ಮನಸ್ಥಿತಿಯನ್ನು ಪೋಷಿಸಲು ಸಹಾಯ ಮಾಡುತ್ತದೆ. ಈ ಮೂಲಕ ಹಲವು ಕೆಲಸಗಳನ್ನು ಯಾವುದೇ ಒತ್ತಡವಿಲ್ಲದ ಮಾಡಲು ಶಕ್ತಿ ನೀಡುತ್ತದೆ. ನಿಮ್ಮ ಕೆಲಸಗಳಿಗೆ ಬೂಸ್ಟ್ ನೀಡುವ ಅಥವಾ ಉತ್ತೇಜನ ನೀಡುವ ಒಂದು ಸಾಧನವೇ ಸುದರ್ಶನ ಕ್ರಿಯೆ.

4.ಸಂಬಂಧಗಳ ಕೊಂಡಿ ಬೆಸೆಯುತ್ತದೆ!

ಸುದರ್ಶನ ಕ್ರಿಯೆಯೂ ಭಾವನೆಗಳು ಮತ್ತು ಸಂಬಂಧ ಹಳಸುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ನೀವು ಸುದರ್ಶನ ಕ್ರಿಯೆಯಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ, ಒತ್ತಡ ದೂರವಾಗುತ್ತದೆ. ಇದರಿಂದ ನಿಮ್ಮ ಪೋಷಕರು, ನಿಮ್ಮ ಪತಿ, ನಿಮ್ಮ ಮಕ್ಕಳು, ಗೆಳೆಯರು, ನಿಮ್ಮ ನೆರೆ-ಹೊರೆಯವರೊಂದಿಗೆ ನಿಮ್ಮ ಮಧುರ ಮಾತುಕತೆ ಹೊಂದಲು ಸಾಧ್ಯವಾಗುತ್ತದೆ. ಇದರಿಂದ ಉತ್ತಮ ಹಾಗೂ ಧನಾತ್ಮಕ ಸಂಬಂಧಗಳನ್ನು ಬೆಸೆದುಕೊಳ್ಳಬಹುದು. ಅಲ್ಲದೇ, ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾದರು ಅದನ್ನು ನಿಭಾಯಿಸುವ ಶಕ್ತಿಯನ್ನು ನೀವು ಸುದರ್ಶನ ಕ್ರಿಯೆಯಿಂದ ಪಡೆದುಕೊಂಡಿರುತ್ತೀರಿ

5. ಮೆದುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ

ಸುದರ್ಶನ ಕ್ರಿಯೆಯೂ ಮೆದುಳಿನ ಕಾರ್ಯನಿರ್ವಹಣೆಯನ್ನು ಭಾರೀ ಸುಧಾರಿಸುತ್ತದೆ. ಹಲವಾರು ಅಧ್ಯಯನಗಳಿಂದ ಇದು ಸಾಬೀತಾಗಿದೆ. ನೆನಪಿನ ಶಕ್ತಿ, ಏಕಾಗ್ರತೆಯೂ ಹೆಚ್ಚುವುದರಿಂದ ಮೆದುಳು ಚುರುಕುಗೊಳ್ಳುತ್ತದೆ. ಇನ್ನು ಮೆದುಳು ಚುರುಕುಗೊಳ್ಳುವುದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಾಧನೆಗೆ ಇದು ಸಹಾಯ ಮಾಡುತ್ತದೆ. ಸುದರ್ಶನ ಕ್ರಿಯೆಯು ಮೆದುಳಿನ ಕಾರ್ಯವನ್ನು ಗಮನಾರ್ಹವಾಗಿ ಸುಧಾರಿಸುವುದರಿಂದ ಅದು ನಿಮ್ಮ ಗಮನವನ್ನು ಕೇಂದ್ರೀಕರಿಸುವ, ಸಮಸ್ಯೆಗಳನ್ನು ಪರಿಹರಿಸುವ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

6.ಮನೆಯ ಆದರ್ಶ ಸದಸ್ಯೆಯಾಗುತ್ತೀರಿ!

ಒತ್ತಡಗಳಿಂದ ಕುಟುಂಬವನ್ನು ನಿರ್ವಹಿಸಬೇಕಾದ ಮಹಿಳೆ ಮನೆಯಲ್ಲಿ ಯಾವತ್ತೂ ಗಲಾಟೆ, ಗದ್ದಲಗಳಿಗೆ ಕಾರಣವಾಗುತ್ತಾಳೆ. ಇದರಿಂದ ಮಹಿಳೆಯ ಬಗ್ಗ ಆಕೆಯ ಮಕ್ಕಳು ಹಾಗೂ ಕುಟುಂಬದಲ್ಲಿ ನೆಗೆಟಿವ್ ಆಲೋಚನೆಗಳಿಗೆ ಕಾರಣವಾಗುತ್ತದೆ. ಆದರೆ ಸುದರ್ಶನ ಕ್ರಿಯೆಯೂ ನಿಮ್ಮ ಒತ್ತಡಗಳನ್ನು ದೂರ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ಶಾಂತಿ, ಸಮಾಧಾನ ಮೂಡಿಸುತ್ತದೆ. ಮಕ್ಕಳು, ಕುಟುಂಬಸ್ಥರೊಂದಿಗೆ ಅನ್ಯೋನ್ಯವಾಗಿ ಇರುವಂತೆ ಮಾಡುತ್ತದೆ. ಎಲ್ಲದಕ್ಕೂ ದುಖಃ ಪಡದೆ. ಸಕರಾತ್ಮಕ ಚಿಂತನೆಯನ್ನು ಮೂಡಿಸುತ್ತದೆ

7.ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ!

ಸುದರ್ಶನ ಕ್ರಿಯೆಯು ವೈಜ್ಞಾನಿಕ ಉಸಿರಾಟದ ಅಭ್ಯಾಸವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಮೂಲಕ ನಿಮ್ಮ ಆರೋಗ್ಯ ಹದಗೆಡದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ರೋಗನಿರೋಧ ಶಕ್ತಿ ವೃದ್ದಿಸುವ ಮೂಲಕ ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಹಲವು ಸಂಶೋಧನೆಗಳಿಂದ ಇದು ಬಯಲಾಗಿದೆ. ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್‌ ಎಂಬ ಹಾರ್ಮೋನ್ 56% ಕುಸಿತ ಮಾಡುತ್ತದೆ. ಹೃದಯರಕ್ತನಾಳದ ಮತ್ತು ಅಂತಃಸ್ರಾವಕ ವ್ಯವಸ್ಥೆಗಳ ಮೇಲೂ ಈ ಕ್ರಿಯೆ ಪರಿಣಾಮ ಬೀರುತ್ತದೆ. ಸುದರ್ಶನ ಕ್ರಿಯೆಯಿಂದ ಥೈರಾಯಿಡ್, ಮಧುಮೇಹ, ಅಧಿಕದೊತ್ತಡದ ಸಮಸ್ಯೆ ಸೇರಿ ಹಲವು ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಯವ್ವನವಾಗಿರುವಂತೆ ಮಾಡುವುದಲ್ಲದೇ ಮುಖದಲ್ಲಿ ಮಂದಹಾಸ, ಚರಿಷ್ಮಾ ಮೂಡುವಂತೆ ಮಾಡುತ್ತದೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *