November 22, 2024
navundasrirama

ಭಂಡಾರಿ ಬಂಧುಗಳ ಕುಲಕಸುಬು ಕ್ಷೌರಿಕ ವೃತ್ತಿಯೇ ಆಗಿದ್ದರೂ,ಆಯುರ್ವೇದ ಮತ್ತು ಗಿಡಮೂಲಿಕೆ ಮದ್ದು ನೀಡುವುದರಲ್ಲಿಯೂ ನಮ್ಮವರು ಸಿದ್ಧಹಸ್ತರು. ಅದಕ್ಕೆ ಒಂದು ಉದಾಹರಣೆಯೆಂಬಂತೆ ನಮಗೆ ಸಿಕ್ಕವರು ನಾವುಂದದ ಕಿರಿಮಂಜೇಶ್ವರ ಶ್ರೀ ರಾಮಭಂಡಾರಿ ಯವರು. ಇವರ ಕುಟುಂಬದವರು ಸುಮಾರು 60 ವರ್ಷಗಳ ಹಿಂದಿನಿಂದಲೂ ಗಿಡಮೂಲಿಕಾ ಮದ್ದು ನೀಡುವುದರಲ್ಲಿ ಪ್ರಸಿದ್ಧಿ ಪಡೆದವರಾಗಿದ್ದರು. ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ರಾಮಭಂಡಾರಿಯವರು ಈಗಲೂ ಚರ್ಮರೋಗ,ಮೂಳೆಮುರಿತ,ಕಸವಾತ,ಬೆನ್ನುನೋವು,ನರ ಉಳುಕು ಹೀಗೆ ಹಲವಾರು ವ್ಯಾಧಿಗಳಿಗೆ ಗಿಡಮೂಲಿಕೆಗಳ ಮದ್ದು ನೀಡುತ್ತಾರೆ. ಇವರ ಬಳಿ ಬರುವ ಸಂತ್ರಸ್ತರಿಗೆ ಕೆಲವು ಪಥ್ಯಗಳನ್ನು ತಿಳಿಸಿ,ಹಲವು ಗಿಡಮೂಲಿಕೆಗಳಿಂದ ತಯಾರಿಸಿದ ಒಂದು ಉಂಡೆಯನ್ನು ನೀಡುತ್ತಾರೆ. ಅದನ್ನು ಅವರು ತಿಳಿಸಿದಂತೆ ಎಳ್ಳೆಣ್ಣೆ ಅಥವಾ ಹಾಲಿನಲ್ಲಿ ತೇಯ್ದು ಸೇವಿಸಬೇಕು ಅಥವಾ ಸಂಬಂಧಿತ ದೇಹದ ಭಾಗಗಳ ಮೇಲೆ ಲೇಪಿಸಬೇಕು .ಮೇಲ್ಕಾಣಿಸಿದ ಸಮಸ್ಯೆಗಳಿಗೆ ದನಕರುಗಳಿಗೂ ಮದ್ದು ನೀಡುವುದು ಇವರ ವಿಶೇಷ.

      ಶ್ರೀ ರಾಮಭಂಡಾರಿ ಮತ್ತು ಶ್ರೀಮತಿ ಗಣಪು ರಾಮಭಂಡಾರಿಯವರದ್ದು ಐದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳ ತುಂಬು ಕುಟುಂಬ. ಇವರನ್ನು ಸಂಪರ್ಕಿಸಲು ನಾವುಂದದ ಕಿರಿಮಂಜೇಶ್ವರ ಹೈಸ್ಕೂಲು ಬಳಿ ಇರುವ ಇವರ ಮನೆಯನ್ನು ಊರಲ್ಲಿ ಯಾರನ್ನು ಕೇಳಿದರೂ ತೋರಿಸುತ್ತಾರೆ. ಅಥವಾ ಅವರ ಮಗ ಸಂದೀಪ್ ಭಂಡಾರಿ ಯ ಮೊಬೈಲ್ ಸಂಖ್ಯೆ 79755 46697 ಗೆ ಕರೆ ಮಾಡಿ ಹೋಗಬಹುದು. ಇಂತಹ ವಿಶೇಷತೆಗಳಿರುವ ಭಂಡಾರಿ ಬಂಧುಗಳನ್ನು ಸಮಾಜಕ್ಕೆ ಪರಿಚಯಿಸುವುದು ನಮ್ಮ ಭಂಡಾರಿವಾರ್ತೆ ಯ ಆದ್ಯ ಕರ್ತವ್ಯವಾಗಿದೆ.

     ಶ್ರೀ ರಾಮಭಂಡಾರಿಯವರಿಗೆ ಸಮಾಜ ಸೇವೆ ಮಾಡಲು ಇನ್ನಷ್ಟು ಶಕ್ತಿ ಮತ್ತು ಚೈತನ್ಯವನ್ನು ಭಗವಂತನು ನೀಡಲಿ ಎಂಬುದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಯ ಶುಭಹಾರೈಕೆ.

✍ ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ

Leave a Reply

Your email address will not be published. Required fields are marked *