ಗುಡ್ ಎಂಬ ಪದಕ್ಕೆ ಪರ್ಯಾಯವಾಗಿ ಸುರಕ್ಷಿತ ಎಂಬುದಾಗಿ ಟಚ್ ಎಂಬುದಕ್ಕೆ ಸ್ಪರ್ಶ ಎಂದು ಹೇಳಲಾಗುತ್ತದೆ. ಬ್ಯಾಡ್ ಪದಕ್ಕೆ ಅಸುರಕ್ಷಿತ( ಕೆಟ್ಟ) ಎಂಬುದಾಗಿ ಹೇಳಲಾಗುತ್ತದೆ.
ಸುರಕ್ಷಿತ ಸ್ಪರ್ಶ: ಈ ಸ್ಪರ್ಶಗಳನ್ನು ಸಾಮಾನ್ಯವಾಗಿ ತಂದೆ ,ತಾಯಿ , ಪೋಷಕರು, ಆರೈಕೆ ಮಾಡುವವರು, ಅಥವಾ ವಿಶ್ವಾಸಾರ್ಹ ವ್ಯಕ್ತಿಗಳು ನೀಡುತ್ತಾರೆ. ಈ ಸ್ಪರ್ಶವು ಮಗು ಅಥವಾ ಯಾವುದೇ ವ್ಯಕ್ತಿಗೆ ಆರಾಮದಾಯಕ ಮತ್ತು ಒಳ್ಳೆಯ ಭಾವನೆಯನ್ನು ಉಂಟು ಮಾಡುತ್ತದೆ.
- ಸುರಕ್ಷಿತ ಸ್ಪರ್ಶದ ವಿಧಗಳು: ಸ್ಪರ್ಶವು ಹಣೆ,ತಲೆ, ಕೆನ್ನೆ, ಭುಜ,ಬೆನ್ನು, ಕೈ ಕುಲುಕುವುದು, ಹೈ ಪೈ,(Hi-fi) ಬದಿಯ ಅಪ್ಪುಗೆ (ಸೈಡ್ ಹಗ್) ಮಾಡುವುದು ಸೇರುತ್ತದೆ.
ಅಸುರಕ್ಷಿತ ಕೆಟ್ಟ ಸ್ಪರ್ಶ: ಈ ಸ್ಪರ್ಶವು ಮಗು ಅಥವಾ ವ್ಯಕ್ತಿಗೆ ಮೂಲಭೂತವಾಗಿ ಆತಂಕ,ಭಯ, ಅನಾನುಕೂಲ, ಅಹಿತಕರ ಅಥವಾ ಬೆದೆರಿಕೆಯನ್ನುಂಟು ಮಾಡುವ ಸ್ಪರ್ಶವಾಗಿದೆ. ಅಸುರಕ್ಷಿತ ಸ್ಪರ್ಶವು ಮಗುವಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಮತ್ತು ನಿರಂತರ ಭಯದಲ್ಲಿ ಬದುಕಬಹುದು. ವಿಶೇಷವಾಗಿ ಅಪರಾಧಿ ಅದರ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡಿದರೆ ಆ ಮಗು ಅಥವಾ ವ್ಯಕ್ತಿ ಭಯದಿಂದ ಅವನ/ಅವಳ ಮಾನಸಿಕ ಯಾತನೆಯಿಂದ ಆರೋಗ್ಯ ಕೆಡಬಹುದು.
- ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶದ ವಿಧಗಳು: ಮಗು ಅಥವಾ ಯಾವುದೇ ವ್ಯಕ್ತಿಯ ದೇಹದ ಖಾಸಗಿ ಭಾಗಗಳನು ಅನುಚಿತವಾಗಿ ಸ್ಪರ್ಶಿಸುವುದು, ಅಂದರೆ ತುಟಿಗಳು,ಜನನಾಂಗ , ಎದೆ, ಪ್ರಷ್ಠ (ಬೆನ್ನಿನ ಕೆಳ ಭಾಗ) ಇತ್ಯಾದಿಗಳನ್ನು ಸ್ಪರ್ಶಿಸುವುದು, ತಳ್ಳುವುದು, ಪಿಂಚ್ ಮಾಡುವುದು, ಒದೆಯುವುದು, ನಿಂದನೆ ಮಾಡುವುದು ಅದರಲ್ಲೂ ನಿರ್ದಿಷ್ಟವಾಗಿ ಲೈಂಗಿಕ ನಿಂದನೆ ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶಕ್ಕೆ ಸೇರಿದೆ.
ಮುಖ್ಯ ಏಕೆ?: ಅಸುರಕ್ಷಿತ ಸ್ಪರ್ಶವು ಮಕ್ಕಳ ಲೈಂಗಿಕ ಕಿರುಕುಳದಲ್ಲಿ ಕೊನೆಗೊಳ್ಳುವುದರಿಂದ ಸಾಧ್ಯವಾದಷ್ಟು ಪೋಷಕರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಉದಾಹರಣೆಗೆ: ಮಕ್ಕಳ ಶಿಕ್ಷಕ ವರ್ಗದವರು, ಸಾಮಾಜಿಕ ಕಾಳಜಿ ಉಳ್ಳವರು,ಶಾಲೆ, ಕಾಲೇಜಿನ ಅಪ್ತ ಸಮಾಲೋಚಕರು ಈ ಸಮಸ್ಯೆಯ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.
ಪೋಷಕರು ಮತ್ತು ಶಿಕ್ಷಕರು ಹಾಗೂ ಅಪ್ತ ಸಮಾಲೋಚಕರು ಮಗು ಅಥವಾ ಮಕ್ಕಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವ ಸರಳ ಉಪಾಯಗಳು:
1) ಸುರಕ್ಷಿತ (ಒಳ್ಳೆಯ) ಸ್ಪರ್ಶ ಮತ್ತು ಅಸುರಕ್ಷಿತ (ಕೆಟ್ಟ) ಸ್ಪರ್ಶದ ಬಗ್ಗೆ ಮಗು ಅಥವಾ ಮಕ್ಕಳಲ್ಲಿ ಮಾತನಾಡಿ.
2) ದೇಹ ರಚನೆ ಬಗ್ಗೆ ನಾಚಿಕೆ ಪಡಬೇಡಿ ಎಂಬುದನ್ನು ಹೇಳಿ ಕೊಡಿ.
3) ಮಗು ಅಥವಾ ಮಕ್ಕಳಿಗೆ ಅವರ ದೇಹದ ಮಾಲೀಕತ್ವವನ್ನು ಅವರಿಗೆ ಕಲಿಸಿ.
4) ಮಗು ಅಥವಾ ಮಕ್ಕಳಿಗೆ ತಮ್ಮ ದೇಹದ ಭಾಗಗಳನ್ನು ಅಸುರಕ್ಷಿತ ಸ್ಪರ್ಶ ಆದಾಗ ಹೋರಾಡಲು ಕಲಿಸಿ.(Teach them to fight back).
5) ಮಗು ಅಥವಾ ಮಕ್ಕಳಿಗೆ ಅವರ ನಿರ್ಧಾರವನ್ನು ನಂಬಲು ಕಲಿಸಿ.
6) ಯಾರಾದರೂ ಮಗುವಿಗೆ ಅಥವಾ ವ್ಯಕ್ತಿಗೆ ಅಸುರಕ್ಷಿತ ರೀತಿಯಲ್ಲಿ ಸ್ಪರ್ಶಿಸಲು ಪ್ರಯತ್ನಿಸಿದರೆ ಎದ್ದು ನಿಂತು ಅಥವಾ ಆ ವ್ಯಕ್ತಿಯನ್ನು ದುರುಗುಟ್ಟಿ ನೋಡಿ “ ಇಲ್ಲ” ಎಂದು ಹೇಳುವ ಹಕ್ಕು ಪ್ರತಿಯೊಬ್ಬ ಮಗು ಅಥವಾ ವ್ಯಕ್ತಿಗೆ ಇದೆ ಎಂಬುದನ್ನು ಹೇಳಿ ಕೊಡಿ.
ಪೋಷಕರ ಕರ್ತವ್ಯ:
1) ಮಗು ಅಸುರಕ್ಷಿತ (ಕೆಟ್ಟ) ಸ್ಪರ್ಶಕ್ಕೆ ಒಳಪಟ್ಟ ಸಂದರ್ಭದಲ್ಲಿ ಮಗುವಿನ ಮಾತನ್ನು ಪೂರ್ತಿ ಕೇಳಿಸಿಕೊಳ್ಳಿ ಮದ್ಯೆ ಮದ್ಯೆ ಅವರ ಮಾತನ್ನು ತುಂಡರಿಸ ಬೇಡಿ.
2) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ನಿಮ್ಮಲ್ಲಿ ಹೇಳಿದಾಗ ಮಗುವಿಗೆ ಗೌರವ ಕೊಡಿ.
3) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟ ಸಂದರ್ಭದಲ್ಲಿ ಬೈಯಬೇಡಿ, ಹೊಡೆಯಬೇಡಿ.
4) ಮಗುವನ್ನೇ ನೀನು ಅಲ್ಲಿ ಯಾಕೆ ಹೋಗಿದ್ದು ನೀನೇ ಸರಿ ಇಲ್ಲ ಎಂಬ ಅರ್ಥದಲ್ಲಿ ಮಗುವನ್ನು ನಿಂದಿಸಬೇಡಿ.
5) ಮಗುವಿಗೆ ಸೂಕ್ತ ಮಾರ್ಗದರ್ಶನ, ಸೂಕ್ತ ಸಲಹೆ ನೀಡಿ.
6) ಅದಷ್ಟು ಮಗು ಅಥವಾ ಮಕ್ಕಳನ್ನು ಇಂತಹವರಿಂದ ದೂರ ಇಡಿ. ಮಗುವಿಗೂ ಅದೇ ಸಲಹೆ ನೀಡಿ.
7) ಮಗುವನ್ನು ಗೌರವಿಸಿ ಹಾಗೂ ಪ್ರೀತಿಸಿ. ಅದರಲ್ಲೂ ಕೆಟ್ಟ ಸ್ಪರ್ಶಕ್ಕೆ ಒಳಪಟ್ಟ ಸಂದರ್ಭದಲ್ಲಿ ಮಗುವಿಗೆ ಶಾಂತತೆಯಿಂದ ಇರಲು ಸಹಕಾರ ನೀಡಿ.
8) ಮಗು ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶಕ್ಕೆ ಒಳಪಟ್ಟು ನಿಮ್ಮಲ್ಲಿ ಹೇಳಿದಾಗ ನೀವು ಗದರಿದರೆ, ಅಥವಾ ಸಿಟ್ಟು ಮಾಡಿಕೊಂಡರೆ, ಮರ್ಯಾದೆ ಹೋಯಿತು ಎಂಬ ಅರ್ಥದಲ್ಲಿ ಮಾತನಾಡಿದರೆ ಮುಂದೆ ಮಗು ಅಥವಾ ಮಕ್ಕಳು ಅಸುರಕ್ಷಿತ ಸ್ಪರ್ಶಕ್ಕೆ ಒಳಗಾದರೆ ಖಂಡಿತಾವಾಗಿಯು ನಿಮ್ಮಲ್ಲಿ ಹೇಳಿಕೊಳ್ಳುವುದಿಲ್ಲ,
9) ಮಗು ಅಥವಾ ಮಕ್ಕಳು ತಮ್ಮ ದೇಹದ ಮೇಲಾಗುವ ಅಸುರಕ್ಷಿತ ಸ್ಪರ್ಶವನ್ನು ಹೇಳಿಕೊಳ್ಳದಿದ್ದರೆ ಮುಂದೆ ಮಗು ಲೈಂಗಿಕ ಕಿರುಕುಳಕ್ಕೆ ಒಳಗಾಗಬಹುದು ಎಚ್ಚರ.
10) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ಮಗುವಿನ ಮಾನಸಿಕ ಯಾತನೆಯಿಂದ ಮಗುವಿನ ಆರೋಗ್ಯ ಕೆಡಬಹುದು.
11) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ತನ್ನ ಏಕಾಗ್ರತೆಯನ್ನು ಕಳೆದುಕೊಂಡು ತರಗತಿಯಲ್ಲಿ ಪಾಠ ಪ್ರವಚನಗಳನ್ನು ಕೇಳುವ ಆಸಕ್ತಿ ಇಲ್ಲದೆ ಶಾಲೆ, ಕಾಲೇಜುಗಳನ್ನು ತ್ಯಜಿಸಬಹುದು.
12) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ನಿರಂತರ ಭಯದಲ್ಲಿ ಬದುಕಬಹುದು.
13) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ನಿಮ್ಮಲ್ಲಿ ಹೇಳಿಕೊಳ್ಳಲು ಆಗದಿದ್ದರೆ, ನೀವು ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡದಿದ್ದರೆ ಮಗುವಿನ ಮುಂದಿನ ಭವಿಷ್ಯದುದ್ದಕ್ಕೂ ಕೆಟ್ಟ ಸ್ವಪ್ನದಂತೆ ಇದು ಕಾಡಬಹುದು.
14) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ಮಾನಸಿಕ ಒತ್ತಡ ಅನುಭವಿಸಿದರೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಿಂದೇಟು ಹಾಕಬಹುದು.
15) ಮಗು ಅಸುರಕ್ಷಿತ ಸ್ಪರ್ಶಕ್ಕೆ ಒಳಪಟ್ಟು ಎಲ್ಲಾ ವ್ಯಕ್ತಿಗಳೂ ಹೀಗೆಯೇ ಎಂಬ ಭಯದಿಂದ ಎಲ್ಲರನ್ನೂ ಸಂಶಯಾಸ್ಪದವಾಗಿ ನೋಡುವ ಸ್ಥಿತಿ ನಿರ್ಮಾಣವಾಗಬಹುದು.
ಶಿಕ್ಷಕರ ಕರ್ತವ್ಯಗಳು:
1) ತಮ್ಮ ಶಾಲೆಯ ಅಥವಾ ತಮ್ಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು ಮಾಹಿತಿ ನೀಡಿ.
2) ತಮ್ಮ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಗಮನ ಪ್ರತಿ ಸಲ ತಪ್ಪಿದಾಗ ಆ ಮಗುವನ್ನು ಗೌಪ್ಯವಾಗಿ ಪ್ರೀತಿಯಿಂದ ಮಾತನಾಡಿಸಿ ಅವರ ಏಕಾಗ್ರತೆ ತಪ್ಪಲು ಕಾರಣವೇನು ಎಂಬುದು ಮಗುವಿನಿಂದಲೇ ಬರುವಂತೆ ಪ್ರೇರಣೆ ನೀಡಿ.
3) ಮಗು ಅಥವಾ ಮಕ್ಕಳಿಗೆ ತಮ್ಮ ಮನೆಯಲ್ಲಿ ಅಥವಾ ಮನೆಯ ಸಂಬಂಧ ಪಟ್ಟವರಿಂದ ಕೆಟ್ಟ ಸ್ಪರ್ಶಕ್ಕೆ ಒಳಪಟ್ಟು ಮನೆಯಲ್ಲಿ ಹೇಳಲು ಮುಜುಗರಕ್ಕೆ ಒಳಗಾದ ಸಂದರ್ಭದಲ್ಲಿ ಆ ಮಗುವಿಗೆ ಶಾಲೆ ಅಥವಾ ಆ ಮಗುವಿನ ಶಿಕ್ಷಕ/ಶಿಕ್ಷಕಿ ಪ್ರೀತಿ ವಿಶ್ವಾಸದಿಂದ ಮಾತನಾಡಿದರೆ ಮಗು ನಿಮ್ಮಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡು ಆತಂಕದಿಂದ ಮುಕ್ತವಾಗಬಹುದು .
4) ಮಗು ಅಥವಾ ಮಕ್ಕಳು ಶಿಕ್ಷಕರಲ್ಲಿ ತಮ್ಮ ಸಮಸ್ಯೆ ಹೇಳಿದಾಗ ಅದನ್ನು ಎಲ್ಲರ ಮುಂದೆ ಹೇಳಿಕೊಂಡು ಮಗುವನ್ನು ಮುಜುಗರಕ್ಕೆ ಒಳಪಡಿಸಬೇಡಿ.
5) ಮಗು ತನ್ನ ಶಿಕ್ಷಕ/ ಶಿಕ್ಷಕಿ ಯಲ್ಲಿ ತಮ್ಮ ಆತಂಕ ಸಮಸ್ಯೆ ಹೇಳಿದ ಮೇಲೆ ಅದನು ಬೇರೆ ತಮ್ಮ ಸಹೋದ್ಯೋಗಿಗಳಿಗೆ ಅಲ್ಲದೆ ಇತರರಲ್ಲಿ ಅದನು ಹೇಳಿಕೊಂಡು ಅಪಹಾಸ್ಯ ಮಾಡಬೇಡಿ. ಮಗುವಿನ ಗೌಪ್ಯತೆ ಕಾಪಾಡಲು ಸಹಕರಿಸಿ.
6) ಸಮಸ್ಯೆ ಇದ್ದ ಮಗು ಅಥವಾ ಮಕ್ಕಳಿಗೆ ತಮ್ಮ ಎಲ್ಲ ಸಹಕಾರವನ್ನು ನೀಡಿ. ಸಾಧ್ಯವಾದಲ್ಲಿ ಆ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿ. ಮತ್ತು ಮಗುವಿನ ಕಡೆ ಗಮನ ನೀಡಿ.
7) ಮಗುವನ್ನು ಅಪ್ತ ಸಮಾಲೋಚಕರ ಬಳಿ ಕರೆದೊಯ್ದು ಅವರಿಂದ ಮಾತನಾಡಿಸಿ.
8) ಮುಖ್ಯವಾಗಿ ಶಿಕ್ಷಕರು/ಶಿಕ್ಷಕಿ ಮಗು ಅಥವಾ ಮಕ್ಕಳಿಗೆ ನಿಮ್ಮ ಬಳಿ ಬಂದು ಮುಕ್ತವಾಗಿ ಅವರ ಸಮಸ್ಯೆ ಹೇಳಿಕೊಳ್ಳುವ ಅವಕಾಶ ಮಾಡಿಕೊಡಿ.
ಸಮಾಜದ ನಾಗರಿಕರ ಮುಖ್ಯ ಜವಾಬ್ದಾರಿಗಳು :
ಮುಖ್ಯವಾಹಿನಿಯಲ್ಲಿ ಇರುವ ನಾಗರಿಕರು ಯಾವುದೇ ಮಗು ಅಥವಾ ಮಕ್ಕಳು ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶಕ್ಕೆ ಒಳಪಡುತ್ತಿದ್ದಾರೆ ಎಂಬ ಸಂದೇಹ ಅಥವಾ ಆ ಮಗು ಅಥವಾ ಮಕ್ಕಳು ಹೇಳಿದರೆ ಅಥವಾ ನೀವು ನೋಡಿದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ, ಪೋಷಕರಿಗೆ, ಶಾಲೆಗೆ ತಿಳಿಯಪಡಿಸಿ, ಮಗು ಅಥವಾ ಮಕ್ಕಳಿಗೆ ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗುವಂತೆ ಸಹಕರಿಸಿ. ಮಗುವಿನ ಕಾಳಜಿ ವಹಿಸಿ. ಮಗು ಅಥವಾ ಮಕ್ಕಳು ತುಂಬು ಜನಸಂದಣಿ ಇರುವ ಅಥವಾ ಏಕಾಂಗಿಯಾಗಿ ಯಾವುದೇ ಜಾಗದಲ್ಲಿ ಇದ್ದರೂ ಮಕ್ಕಳನ್ನು ಗೌರವಿಸಿ ಮತ್ತು ಅವರಿಗೆ ಅನ್ಯಾಯ ಆಗುತ್ತಿದ್ದರೆ ಅದನ್ನು ಪ್ರಶ್ನಿಸಿ. ಅಲ್ಲಿಂದ ಅಂತಹ ವ್ಯಕ್ತಿಗಳಿಂದ ಮಕ್ಕಳನ್ನು ದೂರ ಇರಿಸುವ ಮೂಲಕ ನಿಮ್ಮ ಕಾಳಜಿ ವ್ಯಕ್ತಪಡಿಸಿ.
ವಿಶೇಷ ಸೂಚನೆಗಳು:
1) ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶಕ್ಕೆ ಯಾವುದೇ ಪ್ರಾಯದ ಸಣ್ಣ ಮಗುವಿನಿಂದ ಹಿಡಿದು ಹಿರಿಯ ಪ್ರಾಯದವರು ಒಳಪಡಬಹುದು.
2) ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶಕ್ಕೆ ಹೆಣ್ಣು / ಗಂಡು/ ಮಂಗಳಮುಖಿಯರು ಯಾರೂ ಬೇಕಾದರೂ ಒಳಪಡಬಹುದು ಎಚ್ಚರಿಕೆ ವಹಿಸಿ.
3) ಪ್ರತಿಯೊಂದು ಶಾಲೆಗೂ ಆತ್ಮೀಯ ವಿಶ್ವಾಸಾರ್ಹವಾದ ಆಪ್ತ ಸಮಾಲೋಚಕರು ಇರುವುದು ಅಗತ್ಯ.
ಅಸುರಕ್ಷಿತ ಅಥವಾ ಕೆಟ್ಟ ಸ್ಪರ್ಶಕ್ಕೆ ಒಳಪಟ್ಟಾಗ ತಕ್ಷಣ ಯಾರನ್ನು ಸಂಪರ್ಕಿಸಬಹುದು :
1) ಪೋಲೀಸ್: 100
2) ಪೋಲೀಸ್ ಸಹಾಯ ವಾಣಿ; 112
3) ಮಕ್ಕಳ ಸಹಾಯವಾಣಿ: 1098
4) ಮಹಿಳಾ ಸಹಾಯವಾಣಿ: 181
ಲೇಖಕರು: ವನಿತಾ ಅರುಣ್ ಭಂಡಾರಿ ಬಜಪೆ