January 19, 2025
hirannaya

ರಂಗಭೂಮಿಯ ಮಾಧ್ಯಮದ ಮೂಲಕ ಸಮಾಜದ ಅಂಕು ಡೊಂಕುಗಳ ಮೇಲೆ ಬೆಳಕು ಚೆಲ್ಲುತ್ತಾ ತಮ್ಮ ವಿಡಂಬನಾತ್ಮಕ ಮಾತಿನ ಚಾಟಿ ಏಟಿನಿಂದ ವೈಚಾರಿಕ ಹಿನ್ನೆಲೆಯಲ್ಲಿ ಸಮಾಜವನ್ನು  ತಿದ್ದಲು ಪ್ರಯತ್ನಿಸುತ್ತ ಖಾಕಿ, ಕಾವಿ, ಖಾದಿಧಾರಿಗಳ ಭ್ರಷ್ಟಾಚಾರವನ್ನು ಯಾವ ಮುಚ್ಚು ಮರೆಯಿಲ್ಲದೆ, ಮುಖಮೂತಿ ನೋಡದೆ ಮುಖಕ್ಕೆ ರಾಚುವಂತೆ ಹೇಳುತ್ತಾ  ಹಲವು ರಾಜಕೀಯ ಮುಖಂಡರುಗಳ, ಮಠಾಧೀಶರ, ಅಧಿಕಾರಿ ವರ್ಗದ ಪ್ರತಿರೋಧವನ್ನು ಎದುರಿಸಿ ಲಕ್ಷಾಂತರ ಅಭಿಮಾನಿಗಳ ವಲಯವನ್ನು ಸೃಷ್ಟಿಸಿಕೊಂಡು, ಹಲವು ದಶಕಗಳ ಕಾಲ ವೃತ್ತಿ ರಂಗಭೂಮಿಯ ಅನಭಿಷಿಕ್ತ ದೊರೆಯಾಗಿ ಮೆರೆದ ಮಾತಿನ ಮಲ್ಲ, ನಟರತ್ನಾಕರ, ಮಾಸ್ಟರ್ ಹಿರಣ್ಣಯ್ಯನವರು ಕಾಲನ ಕರೆಗೆ ಓಗೊಟ್ಟು ಚಿರಮೌನ ತಾಳುವುದರೊಂದಿಗೆ ವೃತ್ತಿ ರಂಗಭೂಮಿಯ ಕಟ್ಟ ಕಡೆಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.


ಮೈಸೂರಿನ ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಪುತ್ರನಾಗಿ 1934 ರ ಫೆಬ್ರವರಿ 15 ರಂದು ಜನಿಸಿದ ನರಸಿಂಹಮೂರ್ತಿಯವರ ಬಾಲ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ. ಶಾಲಾ ಕಾಲೇಜು ದಿನಗಳಲ್ಲಿ ಮನೆ ಮನೆಗೆ ದಿನಪತ್ರಿಕೆಗಳನ್ನು ಹಂಚುತ್ತಾ ತಮ್ಮ ಶಾಲೆಯ ಫೀಸು ಮುಂತಾದ ಖರ್ಚುಗಳನ್ನು ನಿಭಾಯಿಸಿಕೊಂಡು ಇಂಟರ್ ಮೀಡಿಯೆಟ್ ಪೂರೈಸಿದ ನರಸಿಂಹಮೂರ್ತಿಯವರು ತಂದೆಯವರ “ಕೆ.ಹಿರಣ್ಣಯ್ಯ ಮಿತ್ರ ಮಂಡಳಿ” ನಾಟಕ ಕಂಪನಿಯಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿಭಾಯಿಸಿಕೊಂಡು, ಕಂಪನಿಯ ವ್ಯವಹಾರಗಳನ್ನು ಸರಿದೂಗಿಸಿಕೊಂಡು ಹೋಗತೊಡಗಿದರು.ನಾಟಕ ಕಂಪೆನಿಯೊಂದಿಗೆ ಊರೂರು ತಿರುಗುತ್ತಾ ತಮಿಳುನಾಡು ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಗೂ ಭೇಟಿಕೊಟ್ಟು  ಅಲ್ಲಿಯೂ ಪ್ರದರ್ಶನಗಳನ್ನು ನೀಡಿ ಜನರಿಂದ ಸೈ ಎನಿಸಿಕೊಂಡು, ಕಂಪನಿ ಬೆಳೆದಂತೆಲ್ಲ ನರಸಿಂಹಮೂರ್ತಿಯವರು ಕನ್ನಡ, ತೆಲುಗು, ತಮಿಳು,ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯವನ್ನು ಗಳಿಸಿದರು.1953 ರಲ್ಲಿ ತಂದೆ ಕೆ ಹಿರಣ್ಣಯ್ಯನವರು ಆಕಸ್ಮಿಕವಾಗಿ ನಿಧನ ಹೊಂದಿದಾಗ ಕಂಪೆನಿಯ ಸಂಪೂರ್ಣ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಸ್ನೇಹಿತರಾದ ಅ.ನ.ಕೃಷ್ಣರಾಯರು, ಮಿತ್ರ ಮುಂತಾದವರೊಂದಿಗೆ ಸೇರಿ ಹಿರಣ್ಣಯ್ಯ ಮಿತ್ರ ಮಂಡಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅವರ ಲಂಚಾವತಾರ ನಾಟಕ ಅದ್ಭುತ ಯಶಸ್ಸು ಕಂಡು ಅವರಿಗೆ ತಂದೆಯಂತೆಯೇ ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರನ್ನು ಗಳಿಸಿಕೊಟ್ಟಿತು. ಸಮಾಜದ ಹುಳುಕನ್ನು, ಭ್ರಷ್ಟ ರಾಜಕಾರಣಿಗಳ, ಕಾವಿಧಾರಿಗಳ, ಲಂಚದ ಕೂಪದಲ್ಲಿ ಮುಳುಗೆದ್ದ  ಅಧಿಕಾರಿ ವರ್ಗದವರ ದರ್ಪವನ್ನು ಹಸಿಹಸಿಯಾಗಿ ವೇದಿಕೆಯ ಮೇಲೆ ತಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾ ಸಮಾಜವನ್ನು ಎಚ್ಚರಿಸುವ ತಿದ್ದುವ ಕೆಲಸವನ್ನು ತಮ್ಮದೇ ಆದ ಶೈಲಿಯಲ್ಲಿ ಮುಂದುವರಿಸಿಕೊಂಡು ಬಂದ ಹಿರಣ್ಣಯ್ಯನವರ ನಾಟಕಗಳು ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವವನ್ನು ನೀಡಿದವು. ಕೇವಲ ಪೌರಾಣಿಕ,ಐತಿಹಾಸಿಕ ನಾಟಕಗಳನ್ನು ನೋಡಿ ಏಕತಾನತೆಯಿಂದ ಬೇಸತ್ತಿದ್ದ ಪ್ರೇಕ್ಷಕರು ಹಿರಣ್ಣಯ್ಯನವರ ಸಾಮಾಜಿಕ ಕಳಕಳಿಯ ನಾಟಕಗಳಿಗೆ ಮಾರು ಹೋಗಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಹಲವು ರಾಜಕೀಯ ಮುಖಂಡರುಗಳಿಗೆ ಬೆಂಬಿಡದೇ ಕಾಡಿದರು.ಎಸ್. ನಿಜಲಿಂಗಪ್ಪನವರು, ಪ್ರಧಾನಮಂತ್ರಿ  ಇಂದಿರಾ ಗಾಂಧಿಯವರು, ಗುಂಡೂರಾಯರು ಹೀಗೆ ಹಲವು ರಾಜಕಾರಣಿಗಳನ್ನು ನೇರವಾಗಿ  ಟೀಕಿಸುತ್ತಾ ಅವರ ಕೆಂಗಣ್ಣಿಗೆ ಗುರಿಯಾಗಿ ಕೋರ್ಟು ಕಚೇರಿ ಅಲೆದಾಡಿ,ಹೋರಾಡಿ, ಬಡಿದಾಡಿ ಜಯಿಸಿಕೊಂಡು ಬಂದರೆ ವಿನಃ ಯಾರೊಂದಿಗೂ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳಲಿಲ್ಲ.ಇವರ ಲಂಚಾವತಾರ, ಭ್ರಷ್ಟಾಚಾರ, ಅನಾಚಾರ, ಕಲ್ಕ್ಯಾವತಾರ,ನಡುಬೀದಿ ನಾರಾಯಣ, ಮಕ್ಮಲ್ ಟೋಪಿ, ದೇವದಾಸಿ, ಲಾಟರಿ ಸರ್ಕಾರ, ಕಪಿಮುಷ್ಟಿ, ಸನ್ಯಾಸಿ ಸಂಸಾರ, ಚಪಲಾವತಾರ, ಡಬ್ಬಲ್ ತಾಳಿ, ಅಮ್ಮಾವರ ಅವತಾರ,ಸಧಾರಮೆ, ಪುರುಷಾಮೃಗ ಮುಂತಾದ ನಾಟಕಗಳು ಅವರಿಗೆ ಅದ್ಭುತ ಯಶಸ್ಸನ್ನು ಕೀರ್ತಿಯನ್ನು ತಂದುಕೊಟ್ಟವು. ಅವರ ಲಂಚಾವತಾರ ನಾಟಕವೊಂದೇ ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿತು.ಅವರ ದೇವದಾಸಿ ನಾಟಕ ಚಲನಚಿತ್ರವಾಗಿ ನಿರ್ಮಾಣಗೊಂಡು ಅದರಲ್ಲಿಯೂ ಇವರು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದರು.


ಕೇವಲ ನಾಟಕಗಳಲ್ಲಿ ಮಾತ್ರವಲ್ಲದೆ  ಚಿತ್ರರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ ಮಾಸ್ಟರ್  ಹಿರಣ್ಣಯ್ಯನವರು ತಮ್ಮ ತಂದೆ ನಿರ್ಮಿಸಿದ “ವಾಣಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.ಕೇರ್ ಆಫ್ ಫುಟ್ಪಾತ್, ನಂಬರ್ 73 ಶಾಂತಿ ನಿವಾಸ, ಯಕ್ಷ, ನಿರಂತರ, ಈ ಸಂಭಾಷಣೆ, ಲಂಚ ಸಾಮ್ರಾಜ್ಯ, ಹುಡ್ಗೀರು ಸಾರ್ ಹುಡ್ಗೀರು, ಆಪರೇಷನ್ ಅಂತ, ಗಜ, ದೇವದಾಸಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ಕಿರುತೆರೆಗೆ ಪಾದಾರ್ಪಣೆ ಮಾಡಿದ ಮಾಸ್ಟರ್ ಪುಣ್ಯಕೋಟಿ, ಅಮೃತವಾಹಿನಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದರು.ರಂಗಭೂಮಿ, ಚಲನ ಚಿತ್ರರಂಗ, ಕಿರುತೆರೆ ಮಾತ್ರವಲ್ಲದೆ ನಿರ್ದೇಶನ, ಬರವಣಿಗೆ, ಚಿತ್ರಕತೆ ರಚನೆಯಲ್ಲಿಯೂ ತಮ್ಮ ನೈಪುಣ್ಯತೆಯನ್ನು ತೋರ್ಪಡಿಸಿದ್ದರು.
ಇವರ ನಾಟಕಗಳು ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡು ಪ್ರಖ್ಯಾತಿಯನ್ನು ಗಳಿಸಿದ್ದವು. ಇವರನ್ನು ನ್ಯೂಜೆರ್ಸಿ, ನ್ಯೂಯಾರ್ಕ್, ಅಮೆರಿಕ ಮುಂತಾದ ದೇಶಗಳಲ್ಲಿ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದ್ದಾರೆ.ಇವರಿಗೆ ರಾಜ್ಯದ ರಾಷ್ಟ್ರದ ಅತ್ಯುತ್ತಮ ಪ್ರಶಸ್ತಿಗಳು ಒಲಿದು ಬಂದಿದ್ದವು. ಅವುಗಳಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ನವರತ್ನರಾಮ್ ಪ್ರಶಸ್ತಿ ಮುಂತಾದವುಗಳು ಪ್ರಮುಖವಾದವುಗಳು.ಅವರನ್ನು ಕಲಾರಸಿಕರು ಮಾತಿನ ಮಲ್ಲ, ನಟರತ್ನಾಕರ,ಕಲಾ ಗಜ ಸಿಂಹ ಮುಂತಾದ ಬಿರುದು ಬಾವಲಿಗಳನ್ನು ನೀಡಿ ಗೌರವಿಸಿ ಸಂಭ್ರಮಿಸಿದ್ದರು.


ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯನವರು ಬೆಂಗಳೂರಿನ ಪ್ರತಿಷ್ಠಿತ ಬಿಜಿಎಸ್ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೆ ಮೇ 2,2019 ರ ಗುರುವಾರ ಬೆಳಗಿನ ಜಾವ ಪತ್ನಿ ಶಾಂತಮ್ಮ ಮತ್ತು ಮಗ ಬಾಬು ಹಿರಣ್ಣಯ್ಯ ಅವರನ್ನು ಆಗಲಿ ತಮ್ಮ ಇಹಲೋಕ ಯಾತ್ರೆಯನ್ನು ಪೂರೈಸಿದ್ದಾರೆ.
ವೃತ್ತಿ ರಂಗಭೂಮಿಯ ದ್ರೋಣ, ಮಾತಿನ ಮಲ್ಲ, ನಟರತ್ನಾಕರ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರ ಸಾವು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ.ರಂಗಭೂಮಿಯ ಆಯಾಮವನ್ನೇ ಬದಲಿಸಿ, ತನ್ನದೇ ಆದ ಶೈಲಿಯನ್ನು ರೂಪಿಸಿ ಕಲಾ ರಸಿಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಸಂಪಾದಿಸಿ ಇಂದು ನಮ್ಮನ್ನೆಲ್ಲ ಅಗಲಿ ನಾಟಕ ರಂಗದಲ್ಲಿ ಶೂನ್ಯವನ್ನು ಸೃಷ್ಟಿಸಿದ ನರಸಿಂಹ ಮೂರ್ತಿ ಅಲಿಯಾಸ್ ಮಾಸ್ಟರ್ ಹಿರಣ್ಣಯ್ಯನವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಅವರ ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಭಗವಂತನಲ್ಲಿ ಪ್ರಾರ್ಥಿಸುತ್ತದೆ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಮಾತು ನಿಲ್ಲಿಸಿ ಚಿರಮೌನ ತಾಳಿದ ರಂಗಭೂಮಿಯ ಹಿರಿಯಣ್ಣ ಮಾಸ್ಟರ್ ಹಿರಣ್ಣಯ್ಯ

  1. ಹಿರಣ್ಣಯ್ಯ ಎಂದರೆ ನೆನಪಾಗುವುದೇ ಅವರ ಲಂಚಾವತಾರ ಹಾಗೂ ಮಾತಿನ ಶೈಲಿ. ಕೆಲವು ಪದಗಳನ್ನು ವಿಡಂಬನೆ ಮಾಡುವ ಶೈಲಿ ಹಿರಣ್ಣಯ್ಯ ನವರಿಗೆ ಬಿಟ್ಟರೆ ಬೇರೆಯವರಿಗೆ ಬರುತ್ತಿರಲಿಲ್ಲ ಎಂದರೆ ತಪ್ಪಾಗಲಾರದು. ಯಾವಾಗಲೂ ನೆನಪಾಗುವುದು ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆ ಮತ್ತು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ. ಯಾವ ಊರಿಗೆ ಹೋಗಲಿ ಸರ್ಕಾರಿ ಆಸ್ಪತ್ರೆ ಮತ್ತು ಹಾಲಿನ ಸಹಕಾರ ಸಂಘಗಳನ್ನು ನೋಡಿದಾಗ ಹಿರಣ್ಣಯ್ಯ ನವರು ನೆನಪಾಗುತ್ತಾರೆ.

    ಸವಿವರ ಲೇಖನ, ಓದಲು ಪ್ರಾರಂಭಿಸಿದಾಗಲೇ ಅಂದು ಕೊಂಡೆ ಇದು ಭಾಸ್ಕರ್ ಭಂಡಾರಿ ಯವರ ಲೇಖನ ಎಂದು. ಉತ್ತಮ ಪದ ಸಂಪದ.

    ಬಹಳ ದಿನದ ಮೇಲೆ ಭಾಸ್ಕರ್ ರವರು ಬಿಡುವು ಮಾಡಿಕೊಂಡು ಮತ್ತೆ ಪತ್ರಿಕೆಗೆ ಲೇಖನ ಬರೆದಿದ್ದಾರೆ. ಹೀಗೆ ಬರೆಯುತ್ತಿರಲಿ

Leave a Reply

Your email address will not be published. Required fields are marked *