January 18, 2025
WhatsApp Image 2021-12-19 at 14.12.29

ಹದಿಹರೆಯವು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬದಲಾವಣೆ ಅಥವಾ ಸ್ಥಿತ್ಯಂತರ ಹೊಂದುವ ಕಾಲ. ಇದು ಒಬ್ಬ ವ್ಯಕ್ತಿಯ ಜೀವನದಲ್ಲಿ ಸುಮಾರು 10 ರಿಂದ 19 ವಯಸ್ಸಿನ ಅವಧಿಯಲ್ಲಿ ಆಗುವ ಬದಲಾವಣೆ.

ಈ ಅವಧಿಯಲ್ಲಿ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ಉಂಟಾಗುತ್ತದೆ. ಅಲ್ಲದೆ ಮುಂದಿನ ಭವಿಷ್ಯ ಜೀವನಕ್ಕೆ ಭದ್ರ ಅಡಿಪಾಯ ನಿರ್ಮಿಸುವಂತಹ ನಿರ್ಣಾಯಕ ಅವಧಿಯಾಗಿದೆ. ಈ ಅವಧಿಯು ಜೀವನದ ಪ್ರಭಾವಿ ಕಾಲವಾಗಿದೆ. ಭವಿಷ್ಯ ಜೀವನದಲ್ಲಿ ಆರೋಗ್ಯವಂತ, ಜವಾಬ್ದಾರಿಯುತ ಪಾಲಕತ್ವವನ್ನು ಒಳಗೊಂಡಂತೆ, ಹೆಚ್ಚಿನ ಜವಾಬ್ದಾರಿಯನ್ನು ಹೊರುವುದಕ್ಕೆ ಸಿದ್ದ ಪಡಿಸುವಂತಹ ಕಾಲವಾಗಿದೆ. ಒಂದು ಸಮಾಜದ ಭವಿಷ್ಯ ಆ ಸಮಾಜದ ಹದಿಹರೆಯದವರ ಮೇಲೆ ಅವಲಂಬಿಸಿದೆ. ಅಲ್ಲದೆ ಹದಿಹರೆಯದವರು ಸಮಾಜದ ಮಾನವ ಸಂಪನ್ಮೂಲದ ಬಹುದೊಡ್ಡ ಅಂಶ ವಾಗಿದ್ದಾರೆ.

ಹದಿಹರೆಯವು ಹೆಣ್ಣು ಮಕ್ಕಳಲ್ಲಿ 10 ನೇ ವರ್ಷದಿಂದ ಪ್ರಾರಂಭವಾಗಿ 16 ವರ್ಷದವರೆಗೆ ಹಾಗೂ ಗಂಡು ಮಕ್ಕಳಲ್ಲಿ 13ನೇ ವರ್ಷದಿಂದ ಪ್ರಾರಂಭವಾಗಿ 17ನೇ ವರ್ಷದವರೆಗೆ ಬದಲಾವಣೆ ಕಾಣುತ್ತವೆ

ಹದಿಹರೆಯದ ತಲ್ಲಣಗಳು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ ಬೇರೆ ಬೇರೆ ರೀತಿಯಲ್ಲಿ ಕಾಣಬಹುದು ಮುಖ್ಯವಾಗಿ
1) ಮಾನಸಿಕ ಬದಲಾವಣೆಗಳು

  •  ವಿರುದ್ಧ ಲಿಂಗದತ್ತ ಆಕರ್ಷಣೆ
  • ಲೈಂಗಿಕತೆಯಲ್ಲಿ ಆಸಕ್ತಿ
  • ಲೈಂಗಿಕ ಕನಸುಗಳು ಬರುವುದು
  • ಭಾವನೆಗಳು ತೀವ್ರ ವಾಗಿ ಭಾವೋದ್ವೇಗಕ್ಕೆ ಒಳಗಾಗುವುದು
  • ಮನಸ್ಸು ಚಂಚಲ ವಾಗಿರುವುದು /ಮಾನಸಿಕ ತೊಳಲಾಟ
  • ಹಟಮಾರಿತನ ಬೇಗ ಸಿಟ್ಟು ಅವಸರದ ನಿರ್ಣಯ
  • ಜನನೇಂದ್ರಿಯ ಮತ್ತು ಲೈಂಗಿಕತೆ ಬಗ್ಗೆ ಕುತೂಹಲ ಮತ್ತು ಪ್ರಶ್ನೆಗಳ ಉದ್ಬವ

 

2) ಭಾವನಾತ್ಮಕ ಬದಲಾವಣೆಗಳು

  • ಅನ್ವೇಷಣಾ ಮನೋಭಾವ
  • ದ್ವಂದ್ವ ಮನಸ್ಸು /ಡೋಲಾಯಮಾನ
  • ವಿಭಿನ್ನ ನಡವಳಿಕೆಗಳ ವ್ಯಕ್ತಿತ್ವ (ಪ್ರದರ್ಶನ)
  • ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ
  • ಸ್ವಂತ ಆಸಕ್ತಿ / ನಿರ್ಧಾರಗಳನ್ನು ಬದಲಾಯಿಸುವುದು
  • ಭಾವನೆಗಳ ಅಸ್ಥಿರತೆ ( Emotional Instability) ಹಗಲುಗನಸು, ಮಂಕುತನ, ರೇಗುವುದು, ಖುಷಿಯಾಗಿರುವುದು, ಜಗಳಗಂಟಿತನ
  • ಅನುಭವ ಗಳಿಸಿದಂತೆ ದ್ವಂದ್ವದಿಂದ ಪ್ರಭುತ್ವದ ಕಡೆಗೆ ಬದಲಾವಣೆ
  •  ಪರಿಸ್ಥಿತಿಗೆ ಅಥವಾ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಲು ಪ್ರಯತ್ನ ಮಾಡುವುದು

3) ಸಾಮಾಜಿಕ ಬದಲಾವಣೆಗಳು

  •  ಸ್ನೇಹಿತರ/ ಸಮವಯಸ್ಕರ ಭಾವನೆಗಳಿಗೆ ಪ್ರಭಾವಕ್ಕೆ ಒಳಗಾಗುತ್ತಾರೆ (ದೃಷ್ಟಿಕೋನ, ಮಾತು, ಆಸಕ್ತಿ, ಹೊರನೋಟ ಮತ್ತು ನಡವಳಿಕೆಗಳ ಮೇಲೆ ಪ್ರಭಾವ)
  • ಸಾಮಾಜಿಕ ಒತ್ತಡಗಳು/ ಹಿರಿಯರಿಂದ ಒತ್ತಡಗಳು
  •  ಅಶ್ಲೀಲ ಸಾಹಿತ್ಯ, ಮಾದ್ಯಮಗಳಿಂದ ಪ್ರಭಾವಿತರಾಗುವುದು
  •  ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಗೆ ಮಾರುಹೋಗುವುದು ಬೇಜವಾಬ್ದಾರಿಯುತ             ( ಅನೈತಿಕ, ಅಕ್ರಮ) ಲೈಂಗಿಕ ಸಂಬಂಧಗಳು.
  •  ಮುನ್ನುಗ್ಗುವಿಕೆ, ಮುಖಂಡತ್ವ

ತಮ್ಮನ್ನು ನೋಡಿದರೆ ಎಲ್ಲರಿಗೂ ಇಷ್ಟವಾಗಬೇಕು ಆ ರೀತಿಯಲ್ಲಿ ನಾವು ಇರಬೇಕು ಎಂದು ಬಯಸುವುದು ಮಾನವನ ಸಹಜವಾದ ಪ್ರವೃತ್ತಿಯಾಗಿದೆ. ವಿಶೇಷವಾಗಿ ಹದಿಹರೆಯದ ವಯಸ್ಸಿನವರು ಎಲ್ಲರ ಗಮನ ತಮ್ಮ ಕಡೆಗೆ ಬೀರುವಂತಿರಬೇಕು ಎಂಬ ಹಂಬಲವನ್ನು ಹೊಂದಿರುತ್ತಾರೆ.ಹದಿಹರೆಯ ಎಂಬುದು ಜೀವನದ ಒಂದು ಮುಖ್ಯ ಘಟ್ಟ..‌ಇದು ಯಶಸ್ವಿಯಾಗಿ ನಡೆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಅಭಿವೃದ್ಧಿಗೆ ನಾಂದಿಯಾಗುತ್ತದೆ..ಈ ಸಮಯದಲ್ಲಿ ಹೆಣ್ಣು ಆಗಲಿ ಗಂಡು ಮಕ್ಕಳೇ ಆಗಿರಲಿ ಇಬ್ಬರಿಗೂ ನಾವೇ ಸರಿ ಎಂಬ ಧೋರಣೆ ಇರುತ್ತದೆ.
ಹೆಚ್ಚಿನ ಸ್ನೇಹಿತರು ದೊರೆಯದಿದ್ದಾಗಲೂ ಕೆಲವರು ಒತ್ತಡದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇದು ಪ್ರತಿಯೊಬ್ಬರ ಅನುಭವವಾಗಿರುತ್ತದೆ. ಇಂತಹ ಒತ್ತಡದ . ಸಮಸ್ಯೆಗಳಿಗೊಳಗಾದಾಗ ಅಂತರಿಕ ಹಾಗೂ ಬಾಹ್ಯವಾಗಿ ತುಂಬಾ ಬದಲಾವಣೆಗಳನ್ನು ನೋಡುತ್ತೇವೆ. ಮಕ್ಕಳ ಬೆಳವಣಿಗೆಯಲ್ಲಿ ಒತ್ತಡದ ಸಮಸ್ಯೆ ಪ್ರಮುಖವಾದ ಪಾತ್ರ ವಹಿಸುತ್ತದೆ. ವಿಶೇಷವಾಗಿ ಹದಿಹರೆಯದ ವಯಸ್ಸಿನವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ಮಾಧ್ಯಮಗಳ ಅಬ್ಬರದ ಇಂದಿನ ಕಾಲದಲ್ಲಿ ಒತ್ತಡದ ಸಮಸ್ಯೆಗಳು ಹದಿಹರೆಯದವರನ್ನು ದಾರಿ ತಪ್ಪಿಸುವ ಅಪಾಯವೂ ಹೆಚ್ಚಾಗುತ್ತಿದೆ.

ಒತ್ತಡದ ಸಮಸ್ಯೆಗಳಿಂದಾಗುವ ಕೆಲ ಸಕಾರಾತ್ಮಕ, ಹಾಗೂ ನಕಾರಾತ್ಮಕ ಪರಿಣಾಮಗಳು:

  •  ಒತ್ತಡದ ಸಮಸ್ಯೆಗಳು ಮಕ್ಕಳ ಸಾಮಾಜಿಕ ನಡವಳಿಕೆಗಳನ್ನು ನಿರ್ದೇಶಿಸುತ್ತದೆ ಮಕ್ಕಳ ಭಾವನಾತ್ಮಕ ಅಭಿವೃದ್ಧಿಗಳ ಮೇಲೆ ಪರಿಣಾಮ ಬೀರುತ್ತದೆ.
  •  ಸ್ವಯಂ ಅನುಮಾನಕ್ಕೆ ಕಾರಣವಾಗಬಹುದು ಭೀತಿ, ಮಾನಸಿಕ ಖಿನ್ನತೆಯಂತಹ ಮಾನಸಿಕ ಅಸ್ವಸ್ಥತೆಯನ್ನು ಮೂಡಿಸಬಹುದು
  •  ಹೊಸ ಕೌಶಲ್ಯ ಅಥವಾ ಪುಸ್ತಕ, ಸಂಗೀತ, ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವು ನೀಡಬಹುದು
  •  ಹದಿಹರೆಯದ ವಯಸ್ಸಿನಲ್ಲಿ ತರಗತಿಗಳಿಗೆ ಚಕ್ಕರ್, ಕಳ್ಳತನ, ವಂಚನೆ, ಮದ್ಯ, ಮಾದಕ ವಸ್ತುಗಳ ಚಟಕ್ಕೆ ಉತ್ತೇಜಿಸಬಹುದು
  •  ಹದಿಹರೆಯದ ವಯಸ್ಸಿನವರಲಿ ಭಾವಾನಾತ್ಮಕ, ಮಾನಸಿಕ ,ದೈಹಿಕ ಹಾಗೂ ಬೌದ್ಧಿಕವಾಗಿ ತುಂಬಾ ವ್ಯತ್ಯಾಸವಾಗುತ್ತದೆ. ಈ ಹಂತದಲ್ಲಿ ಸ್ನೇಹಿತರು ಹೆಚ್ಚಿಗೆ ಇಲ್ಲ ಅನ್ನಿಸಿದರೆ ಸ್ವಾಭಾವಿಕವಾಗಿ ಒತ್ತಡಗಳಿಗೆ ಒಳಗಾಗುತ್ತಾರೆ.

ಹದಿಹರೆಯದವರು ಒತ್ತಡಕ್ಕೊಳಗಾಗುವ ಕೆಲ ಸಂದರ್ಭಗಳು

  • ಶಾಲೆಗಳಲ್ಲಿ ತರಗತಿಗೆ ತಪ್ಪಿಸಿ ‌ಸಿಕ್ಕಿಹಾಕಿಕೊಂಡಾಗ
  •  ಪಠ್ಯ ಪ್ರವಚನ ಸಂದರ್ಭದಲ್ಲಿ ಮೋಸ ಮಾಡಿದಾಗ
  •  ಬೇರೊಬ್ಬರ ಕೆಲಸವನ್ನು ನಕಲು ಮಾಡಿದಾಗ
  • ಒಂದೇ ರೀತಿಯ ಉಡುಪುಗಳನ್ನು ಧರಿಸಿದಾಗ
  •  ಮದ್ಯ ,ತಂಬಾಕು ಮತ್ತಿತರ ಮಾದಕ ವಸ್ತುಗಳನ್ನು ಸೇವಿಸಿದಾಗ
  •  ಲೈಂಗಿಕ ಕ್ರಿಯೆ ನಡೆಸಿದಾಗ

ಹದಿಹರೆಯದವರ ಕರ್ತವ್ಯಗಳು:

  •  ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು
  •  ಜೀವನದಲ್ಲಿ ಏನಾದರೂ ಸಾಧಿಸಲು ಗುರಿ ಇಟ್ಟು ಕೊಳ್ಳಬೇಕು
  •  ಮಾದಕವಸ್ತುಗಳು ಮತ್ತು ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು.
  •  ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಾವೇ ಕಾರಣ ಎಂದು ತಿಳಿದುಕೊಳ್ಳಬೇಕು.
  •  ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.
  •  ಆರೋಗ್ಯ ಮತ್ತು ವೈಯುಕ್ತಿಕ ಸ್ವಚ್ಛತೆ ಕಡೆ ಗಮನ ಕೊಡಬೇಕು.
  •  ತಮ್ಮಲ್ಲಿ ನಂಬಿಕೆ ಮತ್ತು ಕರ್ತವ್ಯ ಪ್ರಜ್ಞೆ ರೂಢಿಸಿಕೊಳ್ಳಬೇಕು.

ಹದಿಹರೆಯದವರ ಬಗ್ಗೆ ಪೋಷಕರ ಪಾತ್ರ:

  • ಭಯವಿಲ್ಲದೆ ಮುಕ್ತವಾಗಿ ಮಾತನಾಡಬೇಕು. ಮುಕ್ತವಾಗಿ ಮಾತನಾಡಲು ಪ್ರಾಮಾಣಿಕ ರೀತಿಯಲ್ಲಿ ಪ್ರೋತ್ಸಾಹಿಸಬೇಕು. ಸಂಪರ್ಕ ನಡೆಸಲು ಕೆಟ್ಟ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳದಂತೆ ಮಕ್ಕಳಿಗೆ ದೃಢವಾಗಿ ಕಲಿಸಬೇಕು.
  •  ನಿಮ್ಮ ಮಕ್ಕಳು ಆನ್ ಲೈನ್ ನಲ್ಲಿ ಯಾವ ರೀತಿ ಸಂವಾದಿಸಿರುತ್ತಾರೆ ಎಂಬುದರ ಬಗ್ಗೆ ಗಮನ ನೀಡಬೇಕು. ಸುರಕ್ಷಿತ ಇಂಟರ್ ನೆಂಟ್ ಮತ್ತುಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಮಕ್ಕಳಲ್ಲಿ ಆತ್ಮಸ್ಥೆರ್ಯ ಮೂಡಿಸಬೇಕು
  •  ಅಹಿತಕರ ಅಥವಾ ಅಪಾಯಕಾರಿ ಪರಿಸ್ಥಿತಿಗಳಿಂದ ಹೊರಬರುವ ಮಾರ್ಗಗಳನ್ನು ಮಕ್ಕಳಿಗೆ ತಿಳಿಸಬೇಕು
  •  ತಮ್ಮ ಪ್ರೌಢಾವಸ್ಥೆ ಮಕ್ಕಳ ಪಾಲಿಗೆ ವಿಶೇಷ. ಈ ಸಮಯದಲ್ಲಿ ಮಕ್ಕಳಲ್ಲಿ ಒಂದು ರೀತಿಯಲ್ಲಿ ಗೊಂದಲವಿರುತ್ತದೆ. ಸ್ವತಂತ್ರತೆ ಬಯಸುತ್ತಾರೆ, ಅದೇ ಸಂದರ್ಭದಲ್ಲಿ ಪೋಷಕರ ನೆರವನ್ನು ಕೂಡ ಕೇಳುತ್ತಾರೆ.
  •  ಹದಿಹರೆಯದ ಮಕ್ಕಳಲ್ಲಿ ಪೋಷಕರು ಆತ್ಮೀಯತೆ, ಪ್ರೀತಿ ತೋರಬೇಕು. ಪ್ರತಿಯೊಂದು ವಿಷಯದಲ್ಲೂ ಮಕ್ಕಳಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಬಾರದು ಇದು ಮಕ್ಕಳಲ್ಲಿ ಹಟಮಾರಿ ಬೆಳೆಸಬಹುದು.
  • ಹದಿಹರೆಯದವರು ಎನು ತಪ್ಪು ಮಾಡಿದರೂ ಅಥವಾ ಬೇರೆಯವರು ಇವರಿಗೆ ಎನಾದರೂ ಕೆಟ್ಟ ಅಶ್ಲೀಲ ವರ್ತಿಸಿದರೆ ತಂದೆ ತಾಯಿಯಲ್ಲಿ ಬಂದು ಹೇಳುವಂತೆ ಮಕ್ಕಳಲ್ಲಿ ಪ್ರೋತ್ಸಾಹಿಸಬೇಕು.

ಹದಿಹರೆಯದವರ ನಡವಳಿಕೆಯನ್ನು ರೂಪಿಸುವ ನಿರ್ಣಾಯಕ ಪಾತ್ರ ಕುಟುಂಬದ ಮೇಲಿದೆ. ಹೆತ್ತವರು ಮತ್ತು ಕುಟುಂಬದ ಹಿರಿಯರು, ಸುರಕ್ಷಿತ, ಸದೃಡ ಮತ್ತು ಉತ್ತೇಜಕ ವಾತಾವರಣವನ್ನು ಹದಿಹರೆಯದವರು ಬೆಳೆಯುವ ಹಂತದಲ್ಲಿ ರೂಪಿಸಬೇಕು. ಕುಟುಂಬದ ಸದಸ್ಯರಿಗೆ ಈ ಬಗ್ಗೆ ಮಾಹಿತಿ ಮತ್ತು ಶಿಕ್ಷಣ ನೀಡುವ ಅವಶ್ಯಕತೆ ಇದೆ.

ತಂದೆ-ತಾಯಂದಿರು ಹಾಗೂ ಕುಟುಂಬದ ಸದಸ್ಯರು ಸ್ಪಷ್ಟವಾದ ಹಾಗೂ ಉತ್ತೇಜನ ನೀಡುವಂತಹ ಭಾವನೆಗಳಿಂದ ಹದಿಹರೆಯದವರಲ್ಲಿ ಪರಸ್ಪರ ಕಲೆತು ಮಾತನಾಡಿ, ಅವರ ಅನುಮಾನಗಳನ್ನು ಪರಿಹರಿಸಿ ಸರಿಯಾದ ಮಾಹಿತಿ ನೀಡುವುದರಿಂದ ಅವರಲ್ಲಿ ನಂಬಿಕೆ ಹಾಗೂ ಸೌಹಾರ್ದ ಸಂಬಂಧ ಬೆಳೆಯಲು ಸಹಾಯವಾಗುತ್ತದೆ

ಹದಿಹರೆಯದವರ ಬಗ್ಗೆ ಶಿಕ್ಷಕರ ಪಾತ್ರ:

ಹದಿಹರೆಯದ ಮಕ್ಕಳಲ್ಲಿ ಮುಖ್ಯ ಪಾತ್ರ ವಹಿಸುವವರು ಶಿಕ್ಷಕರು. ಏಕೆಂದರೆ ಕೆಲವು ಮನೆಗಳಲ್ಲಿ ಮಕ್ಕಳ ಮಾತು, ಸಮಸ್ಯೆ ಕೇಳುವ ಸ್ಥಿತಿಯಲ್ಲಿ ಪೋಷಕರು ಇರುವುದಿಲ್ಲ. ಹೀಗಿರುವಾಗ ಇಂತಹ ಮಕ್ಕಳು ದಾರಿ ತಪ್ಪುವ ಉದಾಹರಣೆ: ಅಪಾಯಕಾರಿ ವಸ್ತುಗಳಾದ ಮಾದಕ ವಸ್ತುಗಳ ಸೇವನೆ,ಮದ್ಯ ಸೇವನೆ, ಬೀಡಿ ಸಿಗರೇಟು ಸೇವನೆ,ಅತೀ ವೇಗವಾಗಿ ವಾಹನ ಚಾಲನೆ, ಅಪಾಯಕಾರಿ ನಡತೆಗಳಾದ ಲೈಂಗಿಕ ಕ್ರಿಯೆಯ ಪ್ರಯೋಗ, ಹದಿಹರೆಯದಲ್ಲಿ ಗರ್ಭಧಾರಣೆ, ಸಂತಾನೋತ್ಪತ್ತಿ ಮಾರ್ಗದ ಸೋಂಕು, ಲೈಂಗಿಕ ಮಾರ್ಗದ ಸೋಂಕು ಮುಂತಾದವುಗಳಲ್ಲಿ ತೊಡಗುವ ( ತುತ್ತಾಗುವ) ಸಾದ್ಯತೆ ಇದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಬರೀ ಬೋಧನೆಯಲ್ಲಿ ತೊಡಗಿಕೊಂಡರೆ ಸಾಕಾಗುವುದಿಲ್ಲ.. ಹದಿಹರೆಯದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡಬೇಕಾಗುತ್ತದೆ.

  •  ಹದಿಹರೆಯದ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಮನಬಿಚ್ಚಿ ಮಾತನಾಡಬೇಕು.
  •  ಹದಿಹರೆಯದಲ್ಲಿ ವಿದ್ಯಾರ್ಥಿಗಳು ಅತ್ಯಂತ ಕುತೂಹಲಿಗಳು ಪ್ರಯೋಗಶೀಲರು ಆಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಸಂಬದ್ಧವಾದ ಮಾಹಿತಿ ಸಮೂಹ ಮಾಧ್ಯಮಗಳಿಂದ ಹಾಗೂ ಜೊತೆಗಾರ ಸ್ನೇಹಿತರಿಂದ ದೊರೆತು ಈ ಅಪೂರ್ಣ ಮಾಹಿತಿಯಿಂದ ಅವರುಗಳು ಅಪಾಯವನ್ನು ಹೊಂದುವ ಸ್ಥಿತಿಯಲ್ಲಿ ಇರುತ್ತಾರೆ ಆದ್ದರಿಂದ ಪ್ರೌಢ ಹಂತದ ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಕುರಿತು ಜೀವನ ಕೌಶಲ್ಯದ ಕುರಿತು ಈ ವಿಷಯದ ನುರಿತ ತರಬೇತಿದಾರರಿಂದ ಮಾಹಿತಿ ನೀಡಬೇಕು.
  •  ಹದಿಹರೆಯದ ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ನೀಡಬೇಕು.
  •  ಸಾಮಾಜಿಕ ನಡತೆ ಬಗ್ಗೆ, ಹದಿಹರೆಯದ ಆರೋಗ್ಯ ಬಗ್ಗೆ ಕೂಡ ಮಾಹಿತಿ ನೀಡಬೇಕು.
  •  ಹದಿಹರೆಯದ ಮಕ್ಕಳಲ್ಲಿ ಅಗತ್ಯವಾಗಿ ಬೇಕಾಗುವ ಪೌಷ್ಟಿಕ ಆಹಾರದ ಬಗ್ಗೆಯೂ ಮಾಹಿತಿ ನೀಡಬೇಕು

ಶಿಕ್ಷಣ ಇಲಾಖೆಯ ಪಾತ್ರ :

  •  ಶಿಕ್ಷಣ ಇಲಾಖೆಯು ಹದಿಹರೆಯದ ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ಮತ್ತು ಕಾರ್ಯಗಾರವನ್ನು ನಡೆಸಬೇಕು.
  •  ಹದಿಹರೆಯದ ತಲ್ಲಣಗಳ ಬಗ್ಗೆ ನುರಿತ ತರಬೇತಿ ದಾರರಿಂದ ಮಕ್ಕಳಿಗೆ ಮಾಹಿತಿ ನೀಡಲು ಶಾಲಾ ಕಾಲೇಜುಗಳಲ್ಲಿ ಅವಕಾಶ ನೀಡಬೇಕು.

ಪೋಲೀಸ್ ಇಲಾಖೆಯ ಪಾತ್ರ:

  •  ಹದಿಹರೆಯದ ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುವ ಸ್ಥಿತ್ಯಂತರದ ಅವಧಿಯಲ್ಲಿ ದೇಹದಲ್ಲಾಗುವ ಮತ್ತು ಲೈಂಗಿಕ ಬದಲಾವಣೆಗಳ ಕಾರಣವಾಗಿ ಹದಿಹರೆಯದವರ ಮನಸ್ಸಿನಲ್ಲಿ ಆತಂಕ ಮತ್ತು ಭಯ ಉಂಟಾಗಬಹುದು. ಹದಿಹರೆಯದ ಕಾಲವೆನ್ನುವುದು ತನ್ನ ದೇಹ ತನ್ನ ಶಕ್ತಿ ಸಾಮರ್ಥ್ಯಗಳ ಬಗ್ಗೆ ಕುತೂಹಲ ಸಂಶೋಧನೆ ಮತ್ತು ಸಾಧನೆಗಳ ಕಾಲವಾಗಿರುತ್ತದೆ. ಕೆಲವೊಮ್ಮೆ ಇದು ಗಲಿಬಿಲಿ ತಳಮಳಕ್ಕೆ ಕಾರಣವಾಗಿ ಅಪಾಯಕಾರಿ ಕೃತ್ಯಕ್ಕೆ ಪ್ರಚೋದಿಸಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರು ಇತರ ಅಪರಾಧಿಗಳಿಗೆ ವಿಧಿಸುವಂತಹ ಶಿಕ್ಷೆ. ಮಾತನಾಡುವ ಭಾಷೆ ಮೇಲೆ ಹಿಡಿತ ಇಟ್ಟು ಸೌಜನ್ಯಯುತವಾಗಿ ವರ್ತಿಸಬೇಕಾಗುತ್ತದೆ. ಇಲ್ಲದಿದ್ದರೆ ಇಂತಹ ಮಕ್ಕಳು ಶಾಶ್ವತ ಅಪರಾಧಿಗಳಾಗಿ ಪರಿವರ್ತನೆ ಆಗುವಂತಹ ಅಪಾಯ ಇರುತ್ತದೆ..

ಮಾದ್ಯಮಗಳ ಪಾತ್ರ:

  •  ಹದಿಹರೆಯದ ಮಕ್ಕಳಲ್ಲಿ ತಪ್ಪು ಗಳು ಆದಾಗ ವಯಸ್ಕರ ವಿಷಯದಲ್ಲಿ ಹೇಳುವಂತೆ ಮತ್ತು ಸಮೂಹ ಮಾಧ್ಯಮದಲ್ಲಿ ಪ್ರಸಾರ ಮಾಡುವಂತೆ ಆ ಮಕ್ಕಳ ಛಾಯಾಚಿತ್ರ ಪ್ರದರ್ಶನ ಮಾಡಬಾರದು. ಹಾಗೂ ಗೌಪ್ಯತೆಯನ್ನು ಕಾಪಾಡಬೇಕು ಇಲ್ಲದಿದ್ದರೆ ಇದು ಸಮಾಜದಲ್ಲಿ ಸ್ವಸ್ಥ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ…. ಅಲ್ಲದೆ ಮಕ್ಕಳ ಮುಂದಿನ ಭವಿಷ್ಯಕ್ಕೆ ಹಾನಿಯಾಗಬಹುದು.

ಹದಿಹರೆಯದ ತಲ್ಲಣಗಳನ್ನು ನಾವೆಲ್ಲರೂ ದಾಟಿ ಮುಂದೆ ಬಂದಿದ್ದೇವೆ. ಹದಿಹರೆಯದ ಮಾನಸಿಕ ಒತ್ತಡ,ಗಲಿಬಿಲಿ,ನಾಚಿಕೆ, ಹಟಮಾರಿ ಮುಂತಾದ ವಿವಿಧ ತಲ್ಲಣಗಳು ನಮಗೆ ಗೊತ್ತೇ ಇದೆ…. ಹಾಗಾಗಿ ಸಮ ಸಮಾಜದ ಅಭಿವೃದ್ಧಿಗೆ ಮುಂದಿನ ಸದೃಢ ಸಮಾಜಕ್ಕಾಗಿ ಇಂದಿನ ಹದಿಹರೆಯದ ಮಕ್ಕಳಲ್ಲಿ ಶಾಂತಿ,ಸಮಾಧಾನ, ಧೈರ್ಯ, ಕೆಟ್ಟ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು, ಅಶ್ಲೀಲ ಸಾಹಿತ್ಯ ,ಅಶ್ಲೀಲ ಚಿತ್ರ ವೀಕ್ಷಣೆ ಮಾಡದಂತೆ ಅವರನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸಬೇಕು.

ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ

 

 

Leave a Reply

Your email address will not be published. Required fields are marked *