September 20, 2024

ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧಾಕೂಟದಲ್ಲಿ ನಮ್ಮ ಭಂಡಾರಿ ಕುಟುಂಬದ ಹೆಮ್ಮೆಯ ಪುತ್ರ ಅಜೆಕಾರು ಕೊಂಬಗುಡ್ಡೆಯ ಶ್ರೀ ಅಶ್ವಥ್ ಭಂಡಾರಿಯವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

2001 ರ ಮಾರ್ಚ್ 21 ರಂದು ಅಜೆಕಾರು ಕೊಂಬಗುಡ್ಡೆಯ ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ಸುರೇಖಾ ನವೀನ್ ಭಂಡಾರಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಜೆಕಾರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಪ್ರೌಢ ಶಿಕ್ಷಣವನ್ನು ಅಜೆಕಾರಿನ ಜ್ಯೋತಿ ಪ್ರೌಢಶಾಲೆಯಲ್ಲಿ ಪೂರೈಸಿ,ಪ್ರಸ್ತುತ ಪದವಿ ಪೂರ್ವ ಶಿಕ್ಷಣವನ್ನು ಜ್ಯೋತಿ ಪದವಿ ಪೂರ್ವ ಕಾಲೇಜ್, ಅಜೆಕಾರು ಇಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಹೈಸ್ಕೂಲು ದಿನಗಳಲ್ಲಿಯೇ ಹ್ಯಾಂಡ್ ಬಾಲ್ ಆಟದೆಡೆಗೆ ಆಕರ್ಷಿತರಾದ ಇವರು ದೈಹಿಕ ಶಿಕ್ಷಕರಾದ ಶ್ರೀ ಚೇತನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಮತ್ತು ಜ್ಯೋತಿ ವಿದ್ಯಾಸಂಸ್ಥೆಯ ಮುಖ್ಯಸ್ಥರ ಪ್ರೋತ್ಸಾಹದಿಂದ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿದರು.ಪರಿಣಾಮ 2015 ರಲ್ಲಿ ಚಿಕ್ಕಮಗಳೂರಿನಲ್ಲಿ ಜರುಗಿದ ವಿಭಾಗೀಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧಾಕೂಟದಲ್ಲಿ ಉಡುಪಿ ಜಿಲ್ಲಾ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ ಮೈಸೂರು ವಿಭಾಗದಲ್ಲಿ ತಂಡ ದ್ವಿತೀಯ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

2016 ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿದ ರಾಜ್ಯ ಮಟ್ಟದ ಹ್ಯಾಂಡ್ ಬಾಲ್  ಕ್ರೀಡಾಕೂಟದಲ್ಲಿ ಜ್ಯೋತಿ ಕಾಲೇಜ್ ತಂಡ ಪ್ರಥಮ ಸ್ಥಾನ ಗಳಿಸುವಲ್ಲಿ ಅಶ್ವಥ್ ಕೊಡುಗೆ ಗಮನಾರ್ಹವಾಗಿತ್ತು. 2017 ರಲ್ಲಿ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಬಾಚಿಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು. ಹೀಗೆ ಒಂದೊಂದೇ ಮೆಟ್ಟಿಲು ಏರಿ ಈಗ ಹ್ಯಾಂಡ್ ಬಾಲ್ ರಾಷ್ಟ್ರ ಮಟ್ಟದ ತಂಡದಲ್ಲಿ ಸ್ಥಾನ ಗಳಿಸಿರುವ ಶ್ರೀ ಅಶ್ವಥ್ ಭಂಡಾರಿಯವರ ಈ ಸಾಧನೆ ನಮ್ಮ ಭಂಡಾರಿ ಯುವಕರಿಗೆ ಆದರ್ಶಪ್ರಾಯವಾಗಿದೆ.

ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆ ಇರುವ ಆಟಗಾರರಾಗಿರುವ ಇವರು ರಾಷ್ಟ್ರ ಮಟ್ಟದ ತಂಡದಲ್ಲಿ ಅತ್ಯುತ್ತಮ ಸಾಧನೆ ಮಾಡಲಿ,ತನ್ಮೂಲಕ ಕ್ರೀಡಾಲೋಕದಲ್ಲಿ ಭಂಡಾರಿ ನಕ್ಷತ್ರವೊಂದು ಮಿನುಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃದಯಪೂರ್ವಕವಾಗಿ ಶುಭ ಹಾರೈಸುತ್ತದೆ.

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *