ಭಂಡಾರಿವಾರ್ತೆಯ ಕ್ಯಾಪ್ಟನ್,ಭಂಡಾರಿ ಸಮಾಜದ ಹಿರಿಯ ತಲೆಮಾರಿನ ಸ್ವಯಂ ಸೇವಕ,ಭಂಡಾರಿ ಯುವ ಸಮೂಹದ ಸೋಜಿಗ “ಶ್ರೀ ಪ್ರಕಾಶ್ ಭಂಡಾರಿ ಕಟ್ಲಾ” ರವರಿಗೆ ಆಗಸ್ಟ್ 28 ರ ಮಂಗಳವಾರ ಹುಟ್ಟು ಹಬ್ಬದ ಸಂಭ್ರಮ.
ಭಂಡಾರಿ ಸಮಾಜದ ಏಳಿಗೆಗಾಗಿ,ಸಂಘಟನೆಗಾಗಿ ಸದಾ ಹೊಸ ಹೊಸ ಕನಸುಗಳನ್ನು ಕಾಣುತ್ತಾ,ಹೊಸ ಹೊಸ ಯೋಜನೆಗಳನ್ನು ಹುಟ್ಟು ಹಾಕುತ್ತಾ,ಸದಾ ಚಟುವಟಿಕೆಯಿಂದಿದ್ದು ಯುವಕರನ್ನು ನಾಚಿಸುವಂತೆ ಕ್ರಿಯಾಶೀಲರಾಗಿರುವ ಪ್ರಕಾಶ್ ಭಂಡಾರಿ ಕಟ್ಲಾರವರಿಗೆ ಈಗಿನ್ನೂ “ಸ್ವೀಟ್ ಸಿಕ್ಸ್ಟೀವನ್”.
ಕಳೆದ ವರ್ಷ ಇವರ ಅರವತ್ತನೇ ಹುಟ್ಟು ಹಬ್ಬದ ದಿನದಂದು ಭಂಡಾರಿ ಸಮಾಜಕ್ಕೆ “ಭಂಡಾರಿವಾರ್ತೆ” ಅಂತರ್ಜಾಲ ಪತ್ರಿಕೆಯನ್ನು ಉಡುಗೊರೆಯಾಗಿ ನೀಡಿದ್ದರು.ಭಂಡಾರಿ ಸಮಾಜದ ಸುದ್ದಿಗಳು ಅತೀ ಶೀಘ್ರವಾಗಿ ಭಂಡಾರಿ ಕುಟುಂಬದ ಮನೆಮನೆಗೆ ತಲುಪಬೇಕು,ಭಂಡಾರಿ ಕುಟುಂಬದ ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸಬೇಕು ಎಂಬ ಮೂಲ ಉದ್ದೇಶದೊಂದಿಗೆ ಆರಂಭಿಸಿದ ಭಂಡಾರಿವಾರ್ತೆ ಒಂದು ವರ್ಷದಲ್ಲಿ ವ್ಯಾಪಿಸಿರುವ ಕಾರ್ಯವ್ಯಾಪ್ತಿ ಎಂಥವರನ್ನೂ ಆಶ್ಚರ್ಯಚಕಿತರನ್ನಾಗಿಸಿರುವುದು ಅವರ ಸಂಘಟನಾ ಚತುರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಭಂಡಾರಿ ಕುಟುಂಬಸ್ಥರ ಮನೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಒದಗಿಸಿಕೊಡಲು ಆರಂಭಿಸಿದ “ಭಂಡಾರಿ ಉದ್ಯೋಗ” ಯೋಜನೆ ಮತ್ತು ಭಂಡಾರಿ ಕುಟುಂಬದ ಅವಿವಾಹಿತ ಯುವಕ ಯುವತಿಯರಿಗೆ ಸೂಕ್ತ ವಧು ವರರ ಅನ್ವೇಷಣೆಗಾಗಿ ಆರಂಭಿಸಲಾಗಿರುವ “ಭಂಡಾರಿ ವಿವಾಹ” ಯೋಜನೆ ಇವುಗಳ ಜೊತೆಗೆ ಭಂಡಾರಿ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ,ಭಂಡಾರಿ ಬಂಧುಗಳ ಆರೋಗ್ಯಕ್ಕಾಗಿ,ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವ ಭಂಡಾರಿ ಬಂಧುಗಳ ಕ್ಷೇಮಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರಲು “ಭಂಡಾರಿ ವಿಕಾಸ ಟ್ರಸ್ಟ್” ಸ್ಥಾಪಿಸಿ ಭಂಡಾರಿ ಸಮಾಜದ ಸರ್ವತೋಮುಖ ಬೆಳವಣಿಗೆಯ ಕನಸು ಕಾಣುತ್ತಿದ್ದಾರೆ.
ಕಟ್ಲಾ ಸಂಜೀವ ಭಂಡಾರಿ ಮತ್ತು ಕದ್ರಿ ವಾರಿಜಾಕ್ಷಿ ಭಂಡಾರಿ ದಂಪತಿಯ ಐದು ಜನ ಮಕ್ಕಳಲ್ಲಿ ಹಿರಿಯ ಮಗನಾಗಿರುವ ಇವರು ಮೊದಲಿನಿಂದಲೂ ಕ್ರಿಯಾಶೀಲ ವ್ಯಕ್ತಿ.ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ತಂದೆ ಶ್ರೀ ಕಟ್ಲಾ ಸಂಜೀವ ಭಂಡಾರಿಯವರೊಂದಿಗೆ ಸರಿಸಮನಾಗಿ ದುಡಿದವರು.ಇವತ್ತಿನ ಕಚ್ಚೂರುವಾಣಿಯ ಮೂಲ ಇವರು 1991 ರಲ್ಲಿ ಪ್ರಾರಂಭಿಸಿದ ಶ್ರೀ ನಾಗೇಶ್ವರ ಭಂಡಾರಿ ವಾರ್ತಾ ಸಂಚಯ.1995 ರಲ್ಲಿ ಭಂಡಾರಿ ಸ್ವಯಂ ಸೇವಕ ಸಂಘವನ್ನು ಹುಟ್ಟು ಹಾಕಿದ್ದು ಸಹಾ ಪ್ರಕಾಶ್ ಭಂಡಾರಿ ಕಟ್ಲಾರ ಸಾಧನೆಯೇ.ಇವತ್ತಿನ ಭಂಡಾರಿ ಬಂಧುಗಳ ಪ್ರತಿಷ್ಟಿತ ಹಣಕಾಸು ಸಂಸ್ಥೆ ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು 1995 ರಲ್ಲಿ ಹುಟ್ಟು ಹಾಕಿ,ಅದರ ಸಂಸ್ಥಾಪಕ ಅಧ್ಯಕ್ಷರಾಗಿದ್ದವರು.
ನಾಲ್ಕು ದಶಕಗಳಿಂದಲೂ ಭಂಡಾರಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶ್ರೀ ಪ್ರಕಾಶ್ ಭಂಡಾರಿಯವರ ಹುಟ್ಟು ಹಬ್ಬದ ಈ ಸುಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿ,ಮಗ ಶ್ರೀ ವಿಪಿನ್ ಭಂಡಾರಿ,ಸೊಸೆ ಶ್ರೀಮತಿ ಅರುಣಾ ವಿಪಿನ್ ಭಂಡಾರಿ,ಮೊಮ್ಮಗಳು ಬೇಬಿ ಭಾವಿನಿ ಭಂಡಾರಿ,ಕಿರಿಯ ಮಗ ಶ್ರೀ ವಿಖ್ಯಾತ್ ಭಂಡಾರಿ, ಕದ್ರಿ ಮತ್ತು ಕಟ್ಲಾ ಭಂಡಾರಿ ಕುಟುಂಬಸ್ಥರು,ಸ್ನೇಹಿತರು, ಆತ್ಮೀಯರು,ಹಿತೈಷಿಗಳು ಮತ್ತು ಬಂಧುಗಳು ಶುಭ ಹಾರೈಸುತ್ತಿದ್ದಾರೆ.
ಪ್ರಕಾಶಣ್ಣನವರಿಗೆ “ಭಂಡಾರಿವಾರ್ತೆ ತಂಡ” ವಿಶೇಷವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ,ಇನ್ನಷ್ಟು ಸಮಾಜಮುಖಿ ಸೇವೆಗಳನ್ನು ಮಾಡಲು ಅಗಾಧ ಶಕ್ತಿ ಚೈತನ್ಯವನ್ನು ನೀಡಿ ಶ್ರೀ ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ.
-ಭಂಡಾರಿವಾರ್ತೆ ತಂಡ.