“ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ”||ಯುಗ ಯುಗಾದಿ ಕಳೆದರು||
-ವರಕವಿ ದ.ರಾ.ಬೇಂದ್ರೆ
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಯುಗಾದಿ ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.
- ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ.
- ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
- ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ 0-13.20 ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು.
- ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15 ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ.
- ರವಿಚಂದ್ರರ ಗತಿಯನ್ನವಲಂಬಿಸಿ, 11 ರಿಂದ 13 ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಶಾಲಿವಾಹನ ಶಕೆಯ ಪ್ರಾರಂಭ
ಶಾಲಿವಾಹನ ಹೆಸರಿನ ಕುಂಭಾರನ ಮಗನು ಮಣ್ಣಿನ ಸೈನ್ಯವನ್ನು ಸಿದ್ಧ ಮಾಡಿದನು. ಅದರ ಮೇಲೆ ರು ಸಿಂಪಡಿಸಿದನು ಮತ್ತು ಸೈನಿಕರನ್ನು ಜೀವಂತ ಮಾಡಿದನು. ಅವರ ಸಹಾಯದಿಂದ ಪ್ರಭಾವಿ ಶತ್ರುಗಳನ್ನು ಪರಾಭವಗೊಳಿಸಿದನು. ಈ ಗೆಲುವಿಗಾಗಿ ‘ಶಾಲಿವಾಹನ ಪ್ರಾರಂಭವಾಯಿತು’ ಎಂದು ಹೇಳಲಾಗುತ್ತದೆ. ಈ ಕಾಲದಲ್ಲಿ ಜನರು ಚೇತನಾ ಹೀನ, ಪೌರುಷ ಹೀನರಾಗಿದ್ದರು. ಮಣ್ಣಿನ ಪುತ್ಥಳಿಗಳಂತೆ ! ಶಾಲಿವಾಹನನು ಅದರ ಮೇಲೆ ಚೈತನ್ಯ ಸುರಿದನು. ಅವರಲ್ಲಿನ ಹೀನದೀನತೆ ತೆಗೆದು ಅವರನ್ನು ಸಮರ್ಥರನ್ನಾಗಿಸಿದನು. ಈ ದಿನದಂದು ಪುರುಷಾರ್ಥಿ ಮತ್ತು ಪರಾಕ್ರಮಿ ವೀರರಾಗಲು ಪ್ರತಿಜ್ಞೆ ಮಾಡಬೇಕಿರುತ್ತದೆ.
ಹಬ್ಬದ ಆಚರಣೆಯ ವಿಧಾನ
- ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ.
- ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.
ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು.
- ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
- ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು.
- ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇತ್ತು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ.
ಅಂದಿನ ವಿಶೇಷ ತಿನಿಸು
- ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. *ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
- ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.
ಬೇವು-ಬೆಲ್ಲ
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
- ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
- ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| – ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಚೈತ್ರ ಶುಕ್ಲ ಪ್ರತಿಪದೆಯೇ ಏಕೆ ?
ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ.’ ಜನವರಿ 1 ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧವಾಗಿ, ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ನೈಸರ್ಗಿಕ ಕಾರಣ
ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯ ವಸಂತ-ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (10:35) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಸುಂದರವಾಗಿ ಕಾಣುತ್ತವೆ. ಇದು ಈ ದಿನ ವರ್ಷಾರಂಭ ಮಾಡುವ ಹಿಂದಿನ ನೈಸರ್ಗಿಕ ಕಾರಣವಾಗಿದೆ.
ಐತಿಹಾಸಿಕ ಕಾರಣ
ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು; ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು. ಅಲ್ಲದೇ ಇದೇ ದಿನ ಶಕರು ಹೂಣರನ್ನು ಸೋಲಿಸಿ ವಿಜಯವನ್ನು ಪಡೆದರು.
ಆಧ್ಯಾತ್ಮಿಕ ಕಾರಣ
ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಇದು ಈ ದಿನ ವರ್ಷಾರಂಭ ಮಾಡುವ ಹಿಂದಿನ ಆಧ್ಯಾತ್ಮಿಕ ಕಾರಣವಾಗಿದೆ.
ಜನವರಿ 1 ಅಲ್ಲ; ಯುಗಾದಿ ಪಾಡ್ಯವೇ ಪೃಥ್ವಿಯ ನಿಜವಾದ ವರ್ಷಾರಂಭದ ದಿನ
ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸ ವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲ ಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ 31 ರಂದು ರಾತ್ರಿ 12 ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸ ವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು. ಡಿಸೆಂಬರ್ 31 ರಂದು ರಾತ್ರಿ 12 ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯಾಸ್ತದ ನಂತರ ಪ್ರಾರಂಭವಾಗುವ ತಮೋಗುಣಿ ರಾತ್ರಿಯೊಂದಿಗೆ ಮಾಡಬಹುದು.
ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕರವಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ 1 ರಂದು ಹೊಸ ವರ್ಷಾರಂಭವನ್ನು ಆಚರಿಸದೇ, ಯುಗಾದಿ ಪಾಡ್ಯದಂದೇ ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.
ಬ್ರಹ್ಮಧ್ವಜದ ಮೇಲಿನ ತಾಮ್ರದ ಕಲಶದ ಮಹತ್ವ
ಬ್ರಹ್ಮಧ್ವಜದ ಮೇಲೆ ತಾಮ್ರದ ಕಲಶವನ್ನು ಮಗುಚಿ ಹಾಕುತ್ತಾರೆ. ಸದ್ಯ ಕೆಲವು ಜನರು ಸ್ಟೀಲಿನ ಅಥವಾ ತಾಮ್ರದ ಲೋಟ ಅಥವಾ ಮಡಿಕೆಯ ಆಕಾರದಂತಹ ಪಾತ್ರೆಗಳನ್ನು ಬ್ರಹ್ಮಧ್ವಜದ ಮೇಲಿಡುವುದು ಕಂಡುಬರುತ್ತದೆ. ‘ತಾಮ್ರದ ಕಲಶವನ್ನು ಬ್ರಹ್ಮಧ್ವಜದ ಮೇಲೆ ಮಗುಚಿ ಹಾಕಬೇಕು ಎಂದು ಧರ್ಮಶಾಸ್ತ್ರವು ಏಕೆ ಹೇಳುತ್ತದೆ, ಎಂಬುದನ್ನು ತಿಳಿದುಕೊಳ್ಳಲು ಅದರ ಹಿಂದಿರುವ ಅಧ್ಯಾತ್ಮಶಾಸ್ತ್ರದ ವಿವೇಚನೆಯನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಿಂದ ನಮ್ಮ ಸಂಸ್ಕೃತಿಯ ಶ್ರೇಷ್ಠತೆ ಹಾಗೂ ಪ್ರತಿಯೊಂದು ಕೃತಿಯನ್ನು ಧರ್ಮಶಾಸ್ತ್ರಕ್ಕನುಸಾರ ಏಕೆ ಮಾಡಬೇಕು ಎಂಬುದು ಗಮನಕ್ಕೆ ಬರಬಹುದು !
ಬ್ರಹ್ಮಧ್ವಜದ ಮೇಲಿನ ಕಲಶವನ್ನು ಏಕೆ ಮಗುಚಿಡುತ್ತಾರೆ ?
ಕಲಶದ ಮುಖವನ್ನು ಭೂಮಿಯ ಕಡೆಗೆ ಇಡುವುದರಿಂದ ತಾಮ್ರದ ಕಲಶದ ಟೊಳ್ಳಿನಿಂದ ಪ್ರಕ್ಷೇಪಿತಗೊಳ್ಳುವ ಲಹರಿಗಳಿಂದಾಗಿ ಕಲಶದಲ್ಲಿರುವ ಬೇವಿನ ಎಲೆ ಮತ್ತು ರೇಷ್ಮೆವಸ್ತ್ರ (ಬ್ರಹ್ಮಧ್ವಜದ ಮೇಲಿನ ರೇಷ್ಮೆವಸ್ತ್ರ)ಗಳು ಸಾತ್ತ್ವಿಕ ಲಹರಿಗಳಿಂದ ಭರಿತಗೊಳ್ಳುತ್ತವೆ. ಭೂಮಿಯ ಆಕರ್ಷಣಾ ಶಕ್ತಿಯಿಂದಾಗಿ ಈ ಪರಿವರ್ತನೆಯಾದ ಸಗುಣ ಶಕ್ತಿಯ ಪ್ರವಾಹವು ಭೂಮಿಯ ದಿಶೆಯತ್ತ ಸಂಕ್ರಮಿತಗೊಳ್ಳಲು ಮತ್ತು ಅದರಿಂದ ಭೂಮಿಯ ಮೇಲೆ ಸೂಕ್ಷ್ಮ- ಆಚ್ಛಾದನೆಯಾಗಲು ಸಹಾಯವಾಗುತ್ತದೆ. ಕಲಶವನ್ನು ಮಗುಚಿಡದೇ ನೆಟ್ಟಗೆ ಇಟ್ಟರೆ, ಸಂಪೂರ್ಣವಾಗಿ ಊರ್ಧ್ವ ದಿಕ್ಕಿನತ್ತ ಲಹರಿಗಳು ಪ್ರಕ್ಷೇಪಿತಗೊಳ್ಳುವುದರಿಂದ ಭೂಮಿಯ ಸಮೀಪದಲ್ಲಿನ ಕನಿಷ್ಠ ಹಾಗೂ ಮಧ್ಯಮ ಸ್ತರದ ಶುದ್ಧೀಕರಣವಾಗದಿರುವುದರಿಂದ ವಾಯು ಮಂಡಲದಲ್ಲಿನ ಕೇವಲ ನಿರ್ದಿಷ್ಠ ಊರ್ಧ್ವ ಪಟ್ಟಿಯ ಶುದ್ಧೀಕರಣವಾಗಲು ಸಹಾಯವಾಗುತ್ತದೆ. ತದ್ವಿರುದ್ಧ ತಾಮ್ರದ ಕಲಶದ ಮುಖವನ್ನು ಭೂಮಿಯ ಕಡೆಗೆ ಮಗುಚಿಟ್ಟರೆ ಅದರಿಂದ ಭೂಮಿಯ ಸಮೀಪದ ಮತ್ತು ಮಧ್ಯಮ ಪಟ್ಟಿಯ ವಾಯುಮಂಡಲಕ್ಕೆ, ಅದರ ಜೊತೆಗೆ ಊರ್ಧ್ವಮಂಡಲಕ್ಕೆ ಈ ಲಹರಿಗಳ ಲಾಭವಾಗಲು ಸಹಾಯವಾಗುತ್ತದೆ.
ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದು .
ಬ್ರಹ್ಮಧ್ವಜದ ಮೇಲಿರುವ ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಉಚ್ಚ ತತ್ತ್ವಗಳಿಗೆ ಸಂಬಂಧಿಸಿರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದರಿಂದ ಈ ಕಲಶದಿಂದ ಪ್ರಕ್ಷೇಪಿತಗೊಳ್ಳುವ ಸಾತ್ತ್ವಿಕ ಲಹರಿಗಳಿಂದಾಗಿ ಕಹಿಬೇವಿನ ಎಲೆಗಳಲ್ಲಿನ ಬಣ್ಣದ ಕಣಗಳು ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಎಲೆಗಳ ಬಣ್ಣದ ಕಣಗಳ ಮೂಲಕ ರಜೋಗುಣ ವಿರುವ ಶಿವ ಮತ್ತು ಶಕ್ತಿ ಲಹರಿಗಳು ವಾಯು ಮಂಡಲದಲ್ಲಿ ಪರಿಣಾಮಕಾರಿಯಾಗಿ ಪ್ರಕ್ಷೇಪಣೆ ಯಾಗಲು ಆರಂಭವಾಗುತ್ತವೆ.
ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಲಹರಿಗಳಿಂದಾಗಿ ಕಹಿಬೇವಿನ ಎಲೆ ಮತ್ತು ರೇಷ್ಮೆ ವಸ್ತ್ರ ಇವುಗಳಿಂದ ಪರಿಣಾಮಕಾರಿಯಾಗಿ ಗ್ರಹಣ ಮತ್ತು ಪ್ರಕ್ಷೇಪಣೆಯಾಗುವುದು
ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಕಾರ್ಯನಿರತ ಲಹರಿಗಳು ಕಹಿಬೇವಿನ ಎಲೆಗಳ ಮಟ್ಟಕ್ಕೆ ಸಗುಣ ಲಹರಿಗಳಾಗಿ ಪರಿವರ್ತನೆಯಾಗುತ್ತವೆ. ಅನಂತರ ಈ ಲಹರಿಗಳು ರೇಷ್ಮೆವಸ್ತ್ರದ ಮೂಲಕ ಪರಿಣಾಮಕಾರಿ ಆಕರ್ಷಣೆಯಾಗಿ ಅವುಗಳು ಆವಶ್ಯಕತೆಯಂತೆ ಅಧೋದಿಕ್ಕಿನಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ.
ಕಹಿಬೇವಿನ ಎಲೆ, ಕಲಶ ಮತ್ತು ರೇಷ್ಮೆವಸ್ತ್ರ ಈ ಮೂರರಿಂದ ನಿರ್ಮಾಣವಾಗುವ ಲಹರಿಗಳಿಂದಾಗುವ ಲಾಭ
ಕಹಿ ಬೇವಿನ ಎಲೆಗಳಿಂದ ಪ್ರಕ್ಷೇಪಿತವಾಗುವ ಶಿವ-ಶಕ್ತಿಗಳಿಗೆ ಸಂಬಂಧಿಸಿದ ಕಾರ್ಯನಿರತ ರಜೋಗುಣಿ ಲಹರಿಗಳಿಂದಾಗಿ ಅಷ್ಟದಿಕ್ಕುಗಳ ವಾಯುಮಂಡಲ ಮತ್ತು ತಾಮ್ರದ ಕಲಶದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದಾಗಿ ಊರ್ಧ್ವದಿಶೆಯ ವಾಯುಮಂಡಲ ಮತ್ತು ರೇಷ್ಮೆ ವಸ್ತ್ರದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಅಧೋದಿಕ್ಕಿನ ವಾಯು ಮಂಡಲ ಶುದ್ಧ ಮತ್ತು ಚೈತನ್ಯ ಮಯವಾಗಲು ಸಹಾಯವಾಗುತ್ತದೆ.
ಕಲಶದ ಮುಖವು ಭೂಮಿಯ ಕಡೆಗೆ ಇದ್ದೂ ಊರ್ಧ್ವ ದಿಕ್ಕಿನ ವಾಯುಮಂಡಲವು ಶುದ್ಧವಾಗುವುದು
ಬ್ರಹ್ಮಧ್ವಜದೊಳಗಿನ ಘಟಕಗಳಿಗೆ ದೇವತ್ವವು ಪ್ರಾಪ್ತಿಯಾಗಿದ್ದರಿಂದ ತಾಮ್ರದ ಕಲಶದ ಟೊಳ್ಳಿನಲ್ಲಿ ಘನೀಕೃತವಾದ ನಾದಲಹರಿಗಳು ಕಾರ್ಯ ನಿರತವಾಗುತ್ತವೆ. ಈ ನಾದಲಹರಿಯಲ್ಲಿ ವಾಯು ಮತ್ತು ಆಕಾಶ ಈ ಎರಡು ಉಚ್ಚ ತತ್ತ್ವಗಳು ಸಮಾವೇಶಗೊಂಡಿದ್ದರಿಂದ ಲಹರಿಗಳ ಪ್ರಕ್ಷೇಪಣೆಯಿಂದಾಗಿ ಊರ್ಧ್ವ ದಿಶೆಯ ವಾಯುಮಂಡಲವು ಶುದ್ಧವಾಗುತ್ತದೆ.
ಕಲಶದ ಮೇಲೆಸ್ವಸ್ತಿಕವನ್ನು ಏಕೆ ಬಿಡಿಸುತ್ತಾರೆ ?
ಸ್ವಸ್ತಿಕ ಇದು ಶುಭಚಿಹ್ನೆಯಾಗಿದೆ. ಸ್ವಸ್ತಿಕದಿಂದ ಸಾತ್ತ್ವ್ವಿಕ ಸ್ಪಂದನಗಳು ಹೊರ ಬೀಳುತ್ತವೆ ಮತ್ತು ಅದರಲ್ಲಿನ ಚೈತನ್ಯದಿಂದಾಗಿ ವಾತಾವರಣದಲ್ಲಿನ ಕಪ್ಪು ಆವರಣವು ದೂರವಾಗಲು ಸಹಾಯವಾಗುತ್ತದೆ. ಹಾಗಾಗಿ ಕಲಶದ ಮೇಲೆ ಕುಂಕುಮದಿಂದ ಸ್ವಸ್ತಿಕ ಬಿಡಿಸಬೇಕು.
(ಸಂಗ್ರಹಿತ )
-ಭಂಡಾರಿ ವಾರ್ತೆ
Channagide, hosa vishaya tilidukonde