January 18, 2025
lakman karavali

ಇಂದಿಗೆ ಸರಿಯಾಗಿ ಇಪ್ಪತ್ತೆರಡು ವರ್ಷಗಳ ಹಿಂದೆ ಅಕ್ಟೋಬರ್ 21, 1996 ರ ಸೋಮವಾರದ ದಿನದಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಅಪರಾಹ್ನ 11:48 ರ ಧನುರ್ ಲಗ್ನದ ಸುಮಹೂರ್ತದಲ್ಲಿ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ

ಶ್ರೀ ಲಕ್ಷ್ಮಣ್ ಮತ್ತು ಶ್ರೀಮತಿ ಸುಮತಿ

ಯವರಿಗೆ 2018, ಅಕ್ಟೋಬರ್ 21 ರ ಭಾನುವಾರ ಇಪ್ಪತ್ತೆರಡನೆಯ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ.


ಈ ಇಪ್ಪತ್ತೆರಡು ವರ್ಷಗಳಲ್ಲಿ ಲಕ್ಷ್ಮಣ್ ಬೆಂಗಳೂರಿನಲ್ಲಿ “ಕರಾವಳಿ ಇಂಟರ್ನೆಟ್ ಮತ್ತು ಕೇಬಲ್‌ ನೆಟ್ವರ್ಕ್ಸ್” ಎಂಬ ಉದ್ದಿಮೆ ಆರಂಭಿಸಿ, ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿ, ನೂರಾರು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿ, ಭಂಡಾರಿ ಸಮಾಜದ ಬಂಧುಗಳಿಗೆ ಆಪತ್ಕಾಲದಲ್ಲಿ ನೆರವಾಗಿ, ಧಾರ್ಮಿಕ ಉದ್ದೇಶಗಳಿಗಾಗಿ ಹೇರಳವಾಗಿ ದೇಣಿಗೆಯನ್ನು ನೀಡುತ್ತಾ, ಸಮಾಜ ಬಾಂಧವರಲ್ಲಿ “ಲಕ್ಷ್ಮಣ್ ಕರಾವಳಿ” ಎಂದೇ ಹೆಸರುವಾಸಿಯಾಗಿದ್ದಾರೆ.


 ಶ್ರೀಮತಿ ಸುಮತಿಯವರು ವೃತ್ತಿಯಲ್ಲಿ ಸರಕಾರಿ ವೈದ್ಯೆ. ಪ್ರಸ್ತುತ ವೈಟ್ ಫೀಲ್ಡ್ ಸಿದ್ದಾಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ವೈದ್ಯೆಯೊಬ್ಬರು ವರ್ಗಾವಣೆಯಾಗಿ ಹೋಗುವಾಗ ಸಾರ್ವಜನಿಕರು ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುವುದು, ಅವರ ಸೇವಾ ಮನೋಭಾವವನ್ನು ಮನಗಂಡ ಆಟೋ ಡ್ರೈವರ್ ಗಳು ಅವರಿಗೆ ಸನ್ಮಾನ ಮಾಡಿ ಬೀಳ್ಕೊಡುವುದನ್ನು ನೀವೆಲ್ಲಾದರೂ ನೋಡಿದ್ದೀರಾ? ಅಂತಹ ಗೌರವಕ್ಕೆ ಶ್ರೀಮತಿ ಸುಮತಿಯವರು ಪಾತ್ರರಾಗಿ ಡಾಕ್ಟರ್ ಸುಮತಿ ಲಕ್ಷ್ಮಣ್ ಎಂದು ಹೆಸರುವಾಸಿಯಾಗಿದ್ದಾರೆ.

ಉಡುಪಿಯ ಕಾಡಬೆಟ್ಟು ವೆಂಕಪ್ಪ ಭಂಡಾರಿ ಮತ್ತು ಗಿರಿಜಾ ವೆಂಕಪ್ಪ ಭಂಡಾರಿಯವರ ಮಗನಾದ ಶ್ರೀ ಲಕ್ಷ್ಮಣ್ ಕರಾವಳಿಯವರು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ನ ಮಹಾದೇವಪ್ಪ.ಹೆಚ್. ಮತ್ತು ರಾಜಮ್ಮ  ಮಹಾದೇವಪ್ಪ ದಂಪತಿಯ ಮಗಳಾದ ಡಾಕ್ಟರ್ ಶ್ರೀಮತಿ ಸುಮತಿ ಲಕ್ಷ್ಮಣ್ ಕರಾವಳಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಶ್ರೀ ಹರ್ಷಿತ್ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ MBBS ವ್ಯಾಸಂಗ ಮಾಡುತ್ತಿದ್ದರೆ, ಕಿರಿಯ ಮಗ ಶ್ರೀ ಆದಿತ್ಯ PUC ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ.

“ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ” ಎಂಬಂತೆ ಶ್ರೀ ಲಕ್ಷ್ಮಣ ಕರಾವಳಿ ದಂಪತಿಯು ತಮ್ಮ ಪೂರ್ವ ಜನ್ಮದ ಫಲದಿಂದ, ತಮ್ಮ ಋಣಕ್ಕೆ ಒದಗಿಬಂದ ಸಕಲವನ್ನೂ ಸುಕೃತ ಫಲವೆಂದು ಭಾವಿಸಿಕೊಂಡು ತಮ್ಮ ದಾಂಪತ್ಯ ಜೀವನದ ಇಪ್ಪತ್ತೆರಡು ವಸಂತಗಳನ್ನು ಪೂರೈಸಿ ಇಪ್ಪತ್ತಮೂರನೇ ವಸಂತಕ್ಕೆ ಕಾಲಿಡುತ್ತಿರುವ ಈ ಅಮೃತಘಳಿಗೆಯಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *