ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದು ಅತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ
ಅಬ್ಬಾ ಎಂತಹ ಮಾತುಗಳಿವು. ಡಿ. ವಿ. ಜಿ ಯವರ ಈ ಕಗ್ಗ ನಗುವಿನ ಪ್ರಾಮುಖ್ಯತೆಯನ್ನು ಸಾರುವುದಷ್ಟೇ ಅಲ್ಲದೆ ಹಾಸ್ಯವನ್ನೇ ಒಂದು ಧರ್ಮ ಎನ್ನುವ ಮೂಲಕ ಉತ್ತುಂಗ ದರ್ಜೆಯನ್ನು ನೀಡಿದೆ. ಹಾಸ್ಯ ರಸ ನಿಜಕ್ಕೂ ನವರಸಗಳಲ್ಲಿಯೇ ಶ್ರೇಷ್ಠ ರಸ. ನಗು ಮನುಷ್ಯನ ಮೂಲಭೂತ ಗುಣಗಳಲ್ಲಿ ಒಂದು. ತನ್ನನ್ನೇ ಹಾಸ್ಯದ ವಸ್ತುವನ್ನಾಗಿ ಮಾಡಿಕೊಂಡು ಇನ್ನೊಬ್ಬರನ್ನು ನಗಿಸುವ ವ್ಯಕ್ತಿಯ ಬಗ್ಗೆ ನಿಜವಾಗಿಯೂ ಅಭಿಮಾನ ಉಂಟಾಗುತ್ತದೆ. ಅಂತಹ ಹಾಸ್ಯಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುವ ನಮ್ಮ ಸಮಾಜದ ವಿಶೇಷ ಪ್ರತಿಭೆ ಪ್ರಜ್ವಲ್ ಭಂಡಾರಿ ಕೌಡೂರು.
ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೌಡೂರು ಗ್ರಾಮದ ದೊಡ್ಡಮನೆ ನಿವಾಸಿಗಳಾದ ಶ್ರೀ ಗೋವಿಂದ ಭಂಡಾರಿ ಮತ್ತು ಶ್ರೀಮತಿ ರತಿ ಭಂಡಾರಿ ದಂಪತಿಗಳ ಪುತ್ರ. ಇವರ ಹಾಸ್ಯಭರಿತ ವಿಡಿಯೋಗಳು ಹಾಸ್ಯ ಲೋಕದಲ್ಲಿ ತೇಲುವಂತೆ ಮಾಡುತ್ತದೆ ಈಗಾಗಲೇ ಇವರ ಹಾಸ್ಯಭರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವರು ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ವೃತ್ತಿಪರ ( ಐ. ಟಿ. ಐ) ಕೋರ್ಸ್ ಮುಗಿಸಿ ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಉದ್ಯೋಗಿಯಾಗಿದ್ದುಕೊಂಡು ಬಿಡುವಿನ ಅವಧಿಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಸೃಜನಶೀಲತೆಯನ್ನು ಮೆರೆಯುತ್ತಾರೆ.ಸ್ವತಃ ತಾವೇ ಸಾಹಿತ್ಯ(script) ಬರೆದು 300 ಹಾಸ್ಯಭರಿತ ವಿಡಿಯೋಗಳನ್ನು ಮಾಡಿದ್ದು, 200 ವಿಡಿಯೋಗಳು ಟ್ರೊಲ್ ಆಗಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಹಾಸ್ಯದ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿರುವ ಇವರು ತನ್ನ ತಾಯಿಯನ್ನೂ ಹಾಸ್ಯಪಾತ್ರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ತಾಯಿ ರತಿ ಭಂಡಾರಿಯವರು ಕೂಡಾ ತಮ್ಮ ಇಳಿ ವಯಸ್ಸಿನಲ್ಲೂ ಹಾಸ್ಯ ಪಾತ್ರವನ್ನು ಬಹಳ ಉತ್ತಮವಾಗಿ ನಿರ್ವಹಿಸುತ್ತಾ ಮಗನಿಗೆ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಿದಾಗ ನಿಜವಾಗಿಯೂ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ.
ತಾನು ಬೆಳೆದು ಇತರರಿಗೆ ಬೆಳೆಯಲು ಅವಕಾಶ ನೀಡುವವನೇ ನಿಜವಾದ ನಾಯಕ ಎಂಬ ಮಾತಿನಂತೆ ನೆರೆಯ ಮಕ್ಕಳಿಗೂ ಅಭಿನಯಿಸಲು ಅವಕಾಶ ನೀಡುವ ಪ್ರಜ್ವಲ್ ಭಂಡಾರಿ ಅಪ್ರತಿಮ ಕಲಾವಿದ ಎಂದರೆ ತಪ್ಪಾಗಲಾರದು.
ಇವರು ರಂಗ ಕಲಾವಿದರು ರಂಗನಪಲ್ಕೆ ನಾಟಕ ತಂಡದಲ್ಲಿ ಸುಮಾರು 10ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಅಭಿನಯಿಸಿ ಶಹಾಭಾಸ್ ಎನಿಸಿಕೊಂಡಿದ್ದಾರೆ . ಇವರ ಅದ್ಭುತ ಅಭಿನಯವನ್ನು ವೀಕ್ಷಿಸಿದ ನೆರೆಯ ಊರಿನ ನಾಟಕ ತಂಡಗಳು ತಮ್ಮ ತಂಡದೊಂದಿಗೆ ಅಭಿನಯಿಸಲು ಅವಕಾಶವನ್ನು ಮಾಡಿಕೊಟ್ಟಿರುವುದು ಇವರ ಅಭಿನಯಕ್ಕೆ ಸಿಕ್ಕ ಗೌರವ.
ದೈಜಿವರ್ಲ್ಡ್ ಚಾನಲ್ ನ ಕಾಮಿಡಿ ರಾಜ ಮತ್ತು ಕಾಮಿಡಿ ರಾಣಿಯ ಮೊದಲ ಹಂತ ದ ಆಡಿಷನ್ ನಲ್ಲಿ ಅಭಿನಯದ ಮೂಲಕ ಛಾಪು ಮೂಡಿಸಿ ಎರಡನೇ ಹಂತದ ಆಡಿಷನ್ ಗೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರ.ಒಬ್ಬ ಕಲಾವಿದನಿಗೆ ಬೇಕಾಗಿರುವುದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಲಾಪ್ರೇಮಿಗಳು. ಆದ್ದರಿಂದ ನಮ್ಮ ಸಮಾಜದ ಈ ಅಪರೂಪದ ಪ್ರತಿಭೆಯನ್ನು ಪ್ರೋತ್ಸಾಹಿಸೋಣ.ಹೆಸರೇ ಸೂಚಿಸುವಂತೆ ಅವರ ಪ್ರತಿಭೆ ಇನ್ನಷ್ಟು ಪ್ರಜ್ವಲಿಸಲಿ. ಗೆಲುವಿನ ಹಾದಿಯಲ್ಲಿ ಸಾಗುತ್ತಿರುವ ನಿಮ್ಮ ಹೆಸರು ಉನ್ನತ ಶಿಖರದ ಮೇಲೆ ರಾರಾಜಿಸುವಂತಾಗಲು ಶ್ರೀ ಕಚ್ಚೂರು ನಾಗೇಶ್ವರ ದೇವರ ಅನುಗ್ರಹವಿರಲಿ.
-ವರದಿ : ಸುಪ್ರಿಯಾ ಕಾರ್ಕಳ ಬೈಲೂರು