January 18, 2025

       

        ಮಳೆ ಮನಸ್ಸಿಗೆ ಎಷ್ಟು ಮುದ ಕೊಡುತ್ತದೆಯೋ ಅದೇ ರೀತಿ ಮಳೆಗಾಲ ಬಂತಂದರೆ ಸಾಕು ಜ್ವರ, ಶೀತ, ಕೆಮ್ಮು ಹೀಗೆ ರೋಗಗಳ ಹಾವಳಿಯೇ ಶುರುವಾಗಿಬಿಡುತ್ತೆ. ಅದರಲ್ಲೂ ಮಕ್ಕಳು, ವೃದ್ದರು ಬಹುಬೇಗ ಕಾಯಿಲೆಗೊಳಗಾಗುತ್ತಾರೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ಈ ಬಾಧೆಯಿಂದ ತಪ್ಪಿಸಿಕೊಳ್ಳೋದು ತುಸು ಕಷ್ಟ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಆಹಾರ ಪದಾರ್ಥಗಳ ಸೇವನೆಯಲ್ಲಿ ಎಚ್ಚರಿಕೆ ವಹಿಸಿಕೊಳ್ಳೋದು ಬಹಳ ಅಗತ್ಯ. ಆಹಾರ ಪದಾರ್ಥಗಳು, ಸ್ವಚ್ಚತೆ ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸೋದರಿಂದ ಮಳೆಗಾಲದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.

ಕರಿದ ತಿಂಡಿ
      ಮಳೆಗಾಲಕ್ಕೂ ಕರಿದ ತಿಂಡಿಗಳಿಗೂ ಅದೇನೋ ನಂಟು. ಜಿಟಿ ಜಿಟಿ ಮಳೆಗೆ ಎಣ್ಣೆಯಲ್ಲಿ ಕರಿದ ಬೋಂಡಾ, ಬಜ್ಜಿ ಮುಂದಿಟ್ಟರೆ ಯಾರೂ ಕೂಡ ಬೇಡ ಅನ್ನಲು ಸಾಧ್ಯವಿಲ್ಲ. ಆದರೆ ಈ ಕರಿದ ತಿಂಡಿಗಳೇ ನಮ್ಮ ಆರೋಗ್ಯ ಕೆಡೋದಕ್ಕೆ ಮುಖ್ಯ ಕಾರಣ. ಅದಕ್ಕಾಗಿಯೇ ಮಳೆಗಾಲದಲ್ಲಿ ಎಣ್ಣೆಯಿಂದ ಕರಿದ ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರೋದೆ ಉತ್ತಮ.

ಆಹಾರ ಪದಾರ್ಥಗಳ ಸ್ವಚ್ಚತೆ
      ಮಳೆಗಾಲದಲ್ಲಿ ವೈರಲ್ ಫೀವರ್, ಅಲರ್ಜಿ, ಅಂಟು ರೋಗಗಳ ಸಮಸ್ಯೆ ಹೆಚ್ಚು ಕಿರಿಕಿರಿಯನ್ನು ಉಂಟುಮಾಡುತ್ತವೆ. ಮಳೆಗಾಲದಲ್ಲಿ ಹುಳ, ಹುಪ್ಪಟೆಗಳ ಉಪದ್ರವ ಹೆಚ್ಚಾಗಿರುವುದರಿಂದ ಮನೆಯಲ್ಲಿ ಬೆಳೆಸಿದ ತರಕಾರಿಗಳಾಗಲೀ, ಅಥವಾ ಮಾರುಕಟ್ಟೆಯಿಂದ ಖರೀದಿಸಿ ತಂದ ತರಕಾರಿಯಾಗಲೀ ಚೆನ್ನಾಗಿ ತೊಳೆದು ಬಳಸುವುದು ಉತ್ತಮ. ಒಂದೆರಡು ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು ಅಥವಾ ಉಪ್ಪು ನೀರಿನಲ್ಲಿ ಸ್ವಲ್ಪ ಕಾಲ ನೆನೆಸಿಟ್ಟು ಬಳಸಿದರೆ ಇನ್ನೂ ಉತ್ತಮ .

ಬೇಯಿಸಿದ ಆಹಾರ
       ಮಳೆಗಾಲದಲ್ಲಿ ಹಸಿ ಆಹಾರಕ್ಕಿಂತ ಚೆನ್ನಾಗಿ ಬೇಯಿಸಿದ ಆಹಾರ ಸೇವನೆ ಆರೋಗ್ಯಕ್ಕೆ ಹಿತ. ಈ ಸಮಯದಲ್ಲಿ ಬ್ಯಾಕ್ಟೀರಿಯಾಗಳ ತೊಂದರೆಯೂ ಹೆಚ್ಚಾಗಿ ಇರೋದರಿಂದ ಕುದಿಸಿ ಆರಿಸಿದ ನೀರು, ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವುದು ಒಳ್ಳೆಯದು. ಜಂಕ್ ಫುಡ್ ಸೇರಿದಂತೆ ರಸ್ತೆ ಬದಿ ಮಾರಾಟ ಮಾಡುವ ತಿಂಡಿ ತಿನಿಸುಗಳಿಂದ ದೂರವಿದ್ದರೆ ರೋಗ ಬಾಧೆಯಿಂದ ಖಂಡಿತಾ ದೂರವಿರಬಹುದು.

ನೀರಿನ ಬಳಕೆ
       ನಾವು ಆರೋಗ್ಯವಾಗಿರಲು ಶುದ್ಧವಾದ ಆಹಾರದ ಜೊತೆಗೆ ಶುದ್ಧ ನೀರಿನ ಅಗತ್ಯವೂ ಇದೆ. ಶುದ್ಧವಾದ ನೀರಿನ ಜೊತೆಗೆ ಕುದಿಸಿ ಆರಿಸಿದ ನೀರನ್ನು ಆದಷ್ಟು ಕುಡಿಯುವುದರಿಂದ ನಮ್ಮ ದೇಹವನ್ನು ಇನ್ನಷ್ಟು ಆರೋಗ್ಯಯುತವಾಗಿ ಕಾಪಾಡಿಕೊಳ್ಳಬಹುದು. ರೋಗ ಬಾಧೆಯಿಂದ ದೂರವಿರಲು ಕುಡಿಯುವ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ ಬಳಸಿದರೆ ಉತ್ತಮ. ಜೊತೆಗೆ ಟೀ ಸೇವನೆಯ ಅಭ್ಯಾಸವಿದ್ದವರು ಒಂದು ಸಣ್ಣ ತುಂಡು ಶುಂಠಿಯನ್ನು ಬಳಸಿಕೊಂಡರೆ ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತವನ್ನು ನೀಡುತ್ತದೆ.

ಪರಿಸರದ ಸ್ವಚ್ಚತೆ
      ಮಳೆಗಾಲದಲ್ಲಿ ನಮ್ಮ ಸ್ವಚ್ಚತೆ, ದೇಹದ ಆರೋಗ್ಯದ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯತ್ತ ಗಮನಹರಿಸೋದು ಕೂಡ ಬಹಳಷ್ಟು ಮುಖ್ಯ. ಈ ಸಮಯದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳ ಹಾವಳಿ ಹೆಚ್ಚಾಗಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೀಗೆ ನೀರು ಸಂಗ್ರಹವಾದ ಜಾಗದಲ್ಲಿ ಸೊಳ್ಳೆಗಳು ಹಾಗೂ ವೈರಾಣುಗಳು ಸಂತಾನೋತ್ಪತ್ತಿ ಹೆಚ್ಚಾಗುವುದರಿಂದ ಇದರ ಬಗ್ಗೆಯೂ ಕಾಳಜಿ ವಹಿಸೋದು ಮುಖ್ಯ.

       ಮಳೆಗಾಲ ಮನಸ್ಸಿಗೆ ಎಷ್ಟು ಮುದ ನೀಡುತ್ತದೆಯೋ ಆರೋಗ್ಯಕ್ಕೆ ಅಷ್ಟೇ ಬಾಧೆ ನೀಡುತ್ತದೆ. ಹೀಗಾಗಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗರೂಕತೆ ಅತೀ ಅಗತ್ಯ. ಸರಿಯಾದ ಆಹಾರ ಕ್ರಮವನ್ನು ರೂಢಿಸಿಕೊಂಡಲ್ಲಿ ಮಳೆಗಾಲದಲ್ಲಿ ಕಾಡುವ ಕಾಯಿಲೆಗಳಿಂದ ಖಂಡಿತಾ ದೂರವಿರಬಹುದು.

 

✍: ದಿವ್ಯ ಉಜಿರೆ

 

1 thought on “ಹಿತವಾಗಲಿ ಮಳೆಗಾಲ: ಬೇಡ ಆರೋಗ್ಯದ ನಿರ್ಲಕ್ಷ್ಯ….

Leave a Reply

Your email address will not be published. Required fields are marked *