November 21, 2024
5

Heathy Attachment: ಮಕ್ಕಳೊಂದಿಗೆ ಆರೋಗ್ಯಕರ ಬಾಂಧವ್ಯ ಬೆಳೆಸಲು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು

ಪೋಷಕರು ಮಕ್ಕಳ ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ತಾಳ್ಮೆ, ತ್ಯಾಗ, ಸ್ಥೈರ್ಯದೊಂದಿಗೆ ಮುಂದುವರಿಯಬೇಕು. ಅಂತೆಯೇ ಮಕ್ಕಳನ್ನು ಕೀಳರಿಮೆಯಿಂದ ನೋಡುವುದು, ಬೇರೆ ಮಕ್ಕಳೊಂದಿಗೆ ಹೋಲಿಸುವುದು ಮೊದಲಾದ ಅಂಶಗಳು ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸಬಹುದು ಎಂದು ಮನಶ್ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.

ಹೆತ್ತವರೊಂದಿಗೆ (Parents) ಮಕ್ಕಳ ಬಾಂಧವ್ಯ (Attachment) ಅತ್ಯಂತ ಪವಿತ್ರವಾದುದು ಹಾಗೂ ಬೆಲೆ ಕಟ್ಟಲಾಗದೇ ಇರುವ ಸಂಬಂಧವಾಗಿದೆ. ಮಕ್ಕಳ ಮುಂದಿನ ಭವಿಷ್ಯದಲ್ಲಿ ಈ ಸಂಬಂಧ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪೋಷಕರು ಮಕ್ಕಳ (Children) ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ತಾಳ್ಮೆ, ತ್ಯಾಗ, ಸ್ಥೈರ್ಯದೊಂದಿಗೆ ಮುಂದುವರಿಯಬೇಕು. ಅಂತೆಯೇ ಮಕ್ಕಳನ್ನು ಕೀಳರಿಮೆಯಿಂದ ನೋಡುವುದು, ಬೇರೆ ಮಕ್ಕಳೊಂದಿಗೆ ಹೋಲಿಸುವುದು ಮೊದಲಾದ ಅಂಶಗಳು ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸಬಹುದು. ಅತ್ಯುತ್ತಮ ಮಾತಾಪಿತರು ಎಂದೆನಿಸಿಕೊಳ್ಳಲು ಯಾವುದೇ ಪುಸ್ತಕಗಳೋ (Books) ಅಥವಾ ಮಾರ್ಗಸೂಚಿಗಳು ಇರುವುದಿಲ್ಲ. ಮಕ್ಕಳೊಂದಿಗೆ ಸಾಧ್ಯವಾದಷ್ಟು ಸಮಯ ಬೆರೆಯುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಹೀಗೆ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಏರ್ಪಡಿಸಿಕೊಂಡು ಸ್ನೇಹಿತರಾಗಿರಬಹುದು (Friends) ಎಂದು  ಮನಶ್ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. 

ಪೋಷಕರ ತೀಕ್ಷ್ಣ ನಡವಳಿಕೆಗಳು
ಮಗುವನ್ನು ಆಗಾಗ್ಗೆ ದೂಷಿಸುವುದು, ಇತರ ಮಕ್ಕಳೊಂದಿಗೆ ಹೋಲಿಸುವುದು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಇದರಿಂದ ಸ್ವಯಂ ಸಂದೇಹ, ಆತ್ಮಸ್ಥೈರ್ಯದಲ್ಲಿ ಕೊರತೆ ಮೊದಲಾದ ಸಮಸ್ಯೆಗಳು ಅವರನ್ನು ಕಾಡಬಹುದು. ಇನ್ನು ಪೋಷಕರ ಆಗ್ರಹಗಳನ್ನು ಮಕ್ಕಳು ತಲುಪದೇ ಇದ್ದರೆ ಒಂದು ರೀತಿಯ ಕೀಳರಿಮೆ ಅವರನ್ನು ಕಾಡಬಹುದು

ನಿಯಂತ್ರಿತವಲ್ಲದ ಭಾವನೆಗಳು
ಪೋಷಕರು ತಮ್ಮ ಭಾವನೆಗಳನ್ನು ಸ್ವಯಂ ನಿಯಂತ್ರಿಸದೇ ಇದ್ದಲ್ಲಿ ಅಂದರೆ ಕೋಪ, ಬೇಸರ ಮೊದಲಾ ಭಾವನೆಗಳನ್ನು ಮಕ್ಕಳೆದುರಿಗೆ ತೀವ್ರವಾಗಿ ವ್ಯಕ್ತಪಡಿಸಿದಾಗ ಅವರು ಕೂಡ ಅದನ್ನೇ ಕಲಿತುಕೊಳ್ಳುತ್ತಾರೆ.

ಅತಿಯಾದ ಹಂಚಿಕೆ
ಪೋಷಕರು ಮಕ್ಕಳಿಗೆ ಅತಿಯಾದ ಜವಾಬ್ದಾರಿಗಳನ್ನು ವಹಿಸಿದಾಗ, ಅವರು ಕೂಡ ವಯಸ್ಸಿಗೂ ಮೀರಿದ ಜವಬ್ದಾರಿಗಳನ್ನು ಹೊರಬೇಕಾಗುತ್ತದೆ. ಇದರಿಂದ ಒಮ್ಮೊಮ್ಮೆ ನಿಂದನೀಯ ಪರಿಸ್ಥಿತಿಗಳನ್ನು ಮಕ್ಕಳು ಎದುರಿಸಬೇಕಾಗಬಹುದು.

ನಿರಂತರ ಹೋಲಿಕೆ
ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವುದು ಸರ್ವೇ ಸಾಮಾನ್ಯವಾಗಿದೆ. ತಮ್ಮ ಮಕ್ಕಳು ಎಷ್ಟೇ ಒಳ್ಳೆಯ ಅಂಕ ತೆಗೆದಿರಲಿ ಹಾಗೂ ನಡವಳಿಕೆಯಲ್ಲಿ ಎಷ್ಟೇ ಒಳ್ಳೆಯತನವನ್ನು ತೋರಿದರೂ ಪೋಷಕರು ಆ ಅಂಶಗಳನ್ನು ತಮ್ಮ ನೆರೆ ಹೊರೆಯ ಮಕ್ಕಳೊಂದಿಗೆ ಹೋಲಿಸುತ್ತಾರೆ. ಇದರಿಂದ ಮಗುವು ಸ್ವಯಂ-ನಂಬಿಕೆ ಹಾಗೂ ಅತೃಪ್ತಿಯಿಂದ ಬಳಲುತ್ತದೆ.

ನಂಬಿಕೆಯ ಉಲ್ಲಂಘನೆ
ಪೋಷಕರು ತಮ್ಮ ಎಲ್ಲೆಗಳನ್ನು ಮೀರಿ ತಮ್ಮ ಮಕ್ಕಳ ಮೇಲೆ ಗೂಢಚಾರಿಕೆ ನಡೆಸುತ್ತಾರೆ, ಇದರಿಂದ ಮಕ್ಕಳಲ್ಲಿ ವಿಶ್ವಾಸ ಹಾಗೂ ನಂಬಿಕೆಯ ಸಮಸ್ಯೆಗಳು ತಲೆದೋರಬಹುದು. ಮಕ್ಕಳ ಮೊಬೈಲ್ ಫೋನ್ ಪರಿಶೀಲಿಸುವುದು, ಅವರ ಡೈರಿಗಳ ಪರಿಶೀಲನೆ ಹೀಗೆ ಪೋಷಕರು ಅತಿಯಾದ ಗೂಢಚಾರಿಕೆ ನಡೆಸುವುದು ಮಕ್ಕಳ ಮೃದು ಮನಸ್ಸಿನ ಮೇಲೆ ಮಾಸದ ಗಾಯವನ್ನುಂಟು ಮಾಡುತ್ತದೆ.

ಪೋಷಕರು ಇಂತಹ ಸವಾಲುಗಳನ್ನು ಹೇಗೆ ಎದುರಿಸಬಹುದು?

ತಾಳ್ಮೆಯಿಂದ ಮಕ್ಕಳೊಂದಿಗೆ ವರ್ತಿಸಿ
ಮಗುವು ತನ್ನ ಸಮಸ್ಯೆಗಳನ್ನು ಪೋಷಕರೊಂದಿಗೆ ಹಂಚಿಕೊಂಡಾಗ ಅದನ್ನು ತಾಳ್ಮೆಯಿಂದ ಆಲಿಸಿ ಹಾಗೂ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ವಹಿಸಿಕೊಳ್ಳಿ.

ಗ್ಯಾಜೆಟ್ ಹಾಗೂ ಮೊಬೈಲ್‌ಗಳ ಅತಿಯಾದ ಬಳಕೆ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌ಗಳಿಗೆ ಅತಿಯಾಗಿ ಅಂಟಿಕೊಳ್ಳುವುದು ಸಾಮಾನ್ಯವಾದ ವಿಷಯವೇ ಆಗಿದೆ. ಆದರೆ ಒಮ್ಮೊಮ್ಮೆ ಪೋಷಕರು ಮಕ್ಕಳ ಅತಿಯಾದ ಫೋನ್ ಬಳಕೆಯಿಂದ ವಿಷಣ್ಣನಾಗಿರುವುದು ನಿಜ. ಮಕ್ಕಳಲ್ಲಿ ಶಿಸ್ತು ಬೆಳೆಸುವ ವಿಷಯದಲ್ಲಿ ಪ್ರೀತಿ ಇರಲಿ ಅವರಿಗೆ ಶಿಸ್ತು ಎಂಬುದು ಮಾನಸಿಕ ಹಿಂಸೆಯಾಗಿ ಮೂಡದಿರಲಿ. ಮೊಬೈಲ್ ಬಳಕೆಗೆ ಸಮಯ ಹೊಂದಿಸಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಅವರ ಆಟ ಪಾಠಗಳಲ್ಲಿ ನೀವೂ ತೊಡಗಿಸಿಕೊಳ್ಳಿ ಇದರಿಂದ ಬೇರೆ ಕಡೆಗೆ ಅವರ ಮನಸ್ಸು ಆಕರ್ಷಿತಗೊಳ್ಳುವುದಿಲ್ಲ.

ಉದ್ಯೋಗದಲ್ಲಿರುವ ಪೋಷಕರು
ಬೆಳೆಯುವ ಮಕ್ಕಳು ಪೋಷಕರಿಂದ ಪ್ರೀತಿ, ವಿಶ್ವಾಸ ಹಾಗೂ ಸುರಕ್ಷತೆಯನ್ನು ಬಯಸುತ್ತಾರೆ. ಉದ್ಯೋಗ ನಿರತ ಪೋಷಕರು ಮಕ್ಕಳೊಂದಿಗೆ ಕಳೆಯುವ ಸಮಯ ಬಹಳ ಕಡಿಮೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಇದರಿಂದ ಮಕ್ಕಳು ಹಾಗೂ ಪೋಷಕರ ನಡುವಿನ ಅಂತರಗಳು ಅತಿಯಾಗುತ್ತಿವೆ ಎಂದಾಗಿದೆ. ಮಕ್ಕಳೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದುವುದು ಅತಿ ಮುಖ್ಯವಾಗಿದೆ. ಅವರೊಂದಿಗೆ ಸಮಯ ಕಳೆಯುವುದು, ಅವರೊಂದಿಗೆ ಮಾತನಾಡುವುದು ಇವೇ ಮೊದಲಾದ ಚಟುವಟಿಕೆಗಳನ್ನು ಉದ್ಯೋಗದಲ್ಲಿರುವ ಮಾತಾ ಪಿತರು ಮಾಡಬೇಕಾಗುತ್ತದೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ನ್ 18

Leave a Reply

Your email address will not be published. Required fields are marked *