ಬಾಡಿರುವ ಮೊಗದಲ್ಲಿ… ಕಳೆಯಿರದ ಕಣ್ಣಿನಲ್ಲಿ… ಸಿರಿವಂತಿಕೆಯ ಕಾಣುವಾಸೆ. ಸರಿ.. ಹಣೆ ಬರೆಹ ಚೆನ್ನಾಗಿದ್ರೆ ಎಲ್ಲವೂ ಒಳ್ಳೆದಾಗುತ್ತೆ ಎಂದು ಸುಮ್ಮನಾದಳು . ಚೆನ್ನಾಗಿ ಓದಿ ಉನ್ನತ ಉದ್ಯೋಗ ಹಿಡಿದು ಬಡತನವನ್ನು ನೀಗಿಸಬೇಕೆಂಬ ಆಸೆ ನಂದಿನಿಯದ್ದು. ಆದ್ರೆ ಬಡತನದ ಭಾರ ಅವಳ ಆಸೆಗಳಿಗೆ ತಣ್ಣೀರೆರಚಿತು.
ತಂದೆಯನ್ನು ಕಳೆದುಕೊಂಡಿದ್ದ ನಂದಿನಿಯದು ಅಮ್ಮ ಮತ್ತು ಇಬ್ಬರು ತಮ್ಮಂದಿರಿರುವ ಚಿಕ್ಕ ಕುಟುಂಬ. ಕಾಲಿಲ್ಲದಿದ್ದರೂ ತೀರಾ ಹೊರೆಯಾಗದೆ ಜೀವನವೆಂಬ ತೇರಿಗೆ ಹೆಗಲು ಕೊಡುತ್ತಿದ್ದ ಅಮ್ಮ ಇದ್ದಕ್ಕಿದ್ದಂತೆ ಚಿರ ನಿದ್ರೆಗೆ ಜಾರಿ ಬಿಟ್ಟರು.
ನಂದಿನಿ ತನ್ನ ಜೀವನದ ಸರ್ವಸ್ವವನ್ನು ಕಳೆದುಕೊಂಡು ಕುಸಿದು ಹೋದಳು.ಹತ್ತರ ಹರೆಯದಲ್ಲೆ ಕುಟುಂಬವೆಂಬ ಬಂಡಿಗೆ ಕಡೆಗೀಲು ಆದಳು. ಜೀವನವೇ ಬೇಡ ಎಂದಾಗ ಜೀವನಕ್ಕೊಂದು ಚೈತನ್ಯ ತುಂಬುತ್ತಿದ್ದ ತಮ್ಮಂದಿರು. ತಮ್ಮಂದಿರ ಭವ್ಯ ಭವಿಷ್ಯದ ಕನಸನ್ನು ಹೊತ್ತ ನಂದಿನಿ ಶ್ರೀಮಂತರ ಮನೆಯ ಕಸ ಮುಸುರೆ ತೊಳೆದು ಸಂಪಾದಿಸಿದ ಹಣದಿಂದ, ತಮ್ಮಂದಿರಲ್ಲಿ ಒಳ್ಳೆಯ ಭರವಸೆಯನ್ನಿಟ್ಟು ಪಕ್ಕದ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದಳು. ಆದರೆ ಅವಳಿಗಿಂತ ವೇಗವಾಗಿ ಅವಳ ಹಿರಿಯ ತಮ್ಮ ಶಾಲೆಯಿಂದ ತಪ್ಪಿಸಿಕೊಂಡು ಮನೆಗೆ ಸೇರುತ್ತಿದ್ದ. ಓದಿನಲ್ಲಿ ಆಸಕ್ತಿ ಇದ್ದ ಕಿರಿಯ ತಮ್ಮನ ಮೇಲೆ ಅಪಾರ ನಂಬಿಕೆಯನ್ನು ಇರಿಸಿ, ತನ್ನ ಆಸೆಯನ್ನು ಕಿರಿಯ ತಮ್ಮನಾದ್ರೂ ನೆರವೇರಿಸುವುದರ ಮೂಲಕ ತನ್ನ ಬಡತನ ನೀಗಬಹುದು ಎಂಬ ಕಟ್ಟಕಡೆಯ ಆಸೆ ಅವಳಿಗೆ. ಏನೇನೋ ಪ್ರಯತ್ನ ಮಾಡಿ ಕಂಡ ಕಂಡವರಲ್ಲಿ ಕಾಡಿ, ಬೇಡಿ ಸಾಲ ಮಾಡಿ ಅಂತೂ ಇಂತೂ ಎಂಜಿನಿಯರಿಂಗ್ ಓದಿಸಿ ನಿಟ್ಟುಸಿರು ಬಿಟ್ಟಳು.
ಪರವಾಗಿಲ್ಲ ತಮ್ಮನಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದೆ ಎಂಬ ಸಮಾಧಾನ ಒಂದು ಕಡೆಯಾದರೆ, “ಅಕ್ಕಾ ನೀನು ಮದುವೆ ಮಾಡ್ಕೋ ಬೇಗ ಎಂಬ ತಮ್ಮಂದಿರ ತಗಾದೆ. ಪಾಪ ನಂದಿನಿಗೆ ಗೊತ್ತೆ ಇಲ್ಲ, ತಮ್ಮಂದಿರು ತನ್ನ ಮದುವೆಗೆ ಒತ್ತಾಯಿಸುತ್ತಿರುವುದು ಅವರ ಮದುವೆಗೆ ಸುಗಮವಾಗಲಿ ಅಂತ. ಬಡತನವನ್ನು ಹೇರಳವಾಗಿ ಆಸ್ತಿಯಾಗಿ ಹೊಂದಿದ್ದ ನಂದಿನಿಗೆ ಶ್ರೀಮಂತನ ಮಗ ವರಿಸಲು ಸಾಧ್ಯವೇ? ಹಣದ ಮುಂದೆ ಹೃದಯ ಶ್ರೀಮಂತಿಕೆಗೆ ಬೆಲೆ ಇರದ ಸಮಾಜದಲ್ಲಿ ನಂದಿನಿಗೂ ಒಂದು ಕಡು ಬಡತನದ ವರ ಸಿಕ್ಕಿದ. ಇನ್ನೇನು ತನ್ನ ಸಂಸಾರಿಕ ಜೀವನದಲ್ಲಾದರೂ ನೆಮ್ಮದಿ ಸಿಗುತ್ತೆ ಎನ್ನುವಷ್ಟರಲ್ಲಿ ಅವಳ ಗಂಡ ಆಕಸ್ಮಿಕ ಅವಘಡದಲ್ಲಿ ಇಹಲೋಕ ತ್ಯಜಿಸಿದ. ಬಡತನ ಬಿಟ್ಟು ಬಿಡದೆ ಭೂತದಂತೆ ಕಾಡುತ್ತಿತ್ತು. ನೀರಿಲ್ಲದ ಕೆರೆಗೆ ಬಾಯಾರಿದ ಕರು ಹೋದ ಹಾಗೆ, ತಾಯಿಯಿಲ್ಲದ ತವರಿಗೆ ಹೋಗಿ ಪುನಹ ಕಷ್ಟಗಳ ಸರಪಳಿಯೊಳಗೆ ಬಂಧಿಯಾದಳು. ಎದೆಯಾಳದಲ್ಲಿ ನೋವಿನ ಬೆಂಕಿ ಕಿಡಿಗಳು ಜ್ವಾಲಾಮುಖಿಗಳಾಗಿ ಹೊತ್ತಿ ಉರಿಯುತ್ತಿದ್ದವು.
ಅತ್ತ ಹಿರಿಯ ತಮ್ಮ ಕುಡಿತದ ದಾಸನಾಗಿದ್ದ. ಇತ್ತ ಎಂಜಿನಿಯರ್ ಪದವೀಧರನಾದ ಕಿರಿಯ ತಮ್ಮ ಊರಿನ ಪುಂಡ ಪೋಕರಿಗಳ ಸಹವಾಸ ಮಾಡಿ ಕೆಟ್ಟ ಹೆಸರು ತಂದುದಲ್ಲದೆ ಮನೆಗೆ ಸಂಪೂರ್ಣ ನಿರುಪಯುಕ್ತನಾದ. “ಮನೆಗೆ ಮಾರಿಯಾದರು ಪರವಾಗಿಲ್ಲ ನನ್ನ ತಮ್ಮಂದಿರಿಗೆ ಒಳ್ಳೆ ಬುದ್ಧಿ ಕೊಡು ದೇವ” ಅಂತ ಸಿಕ್ಕ ದೇವರಿಗೆಲ್ಲ ತೆಂಗಿನಕಾಯಿ ಒಡೆದು, ಹರಕೆ ಹೊತ್ತು ನಂದಿನಿ ಗೊಗರೆದಳು. ದೇವರಿಗೆ ಅವಳ ಗೋಗರೆತ ಕೇಳಲಿಲ್ಲವೇನೋ? ತಮ್ಮಂದಿರು ಸರಿ ದಾರಿಗೆ ಬರಲಿಲ್ಲ. ದೇವರು ನನ್ನನ್ನು ಯಾಕೆ ಈ ರೀತಿ ಪರೀಕ್ಷಿಸುತ್ತಿದ್ದಾನೆ? ಎಂದು ತಮ್ಮನ ಚಿಂತೆಯಲ್ಲಿ ಕೊರಗುತ್ತಿರುವಾಗ ತಮ್ಮಂದಿರು ಸ್ವಲ್ಪವೂ ಅಕ್ಕನ ಮೇಲೆ ಕರುಣೆ ತೋರಿಸದೆ, “ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯದಿಗಳು” ಎಂಬ ಮಾತಿನಂತೆ ಇದ್ದ ಅಲ್ಪ ಆಸ್ತಿ ಪಾಲಾಗಬೇಕೆಂದು ಹಠ ಹಿಡಿದುದರಿಂದ ಅವರ ಆಸೆಯಂತೆ ಆಸ್ತಿ ಹಂಚಿಕೆಗೆ ಒಪ್ಪಿಗೆ ನೀಡಿದಳು. ತನ್ನವರೆಂದು ಭಾವಿಸಿದ್ದ ತಮ್ಮಂದಿರು ಅವರವರ ಪಾಡು ನೋಡಿಕೊಂಡರು. ಜೀವನದಾಸರೆಯಾಗಿದ್ದ ಅವ್ವ, ಸಂಸಾರಕ್ಕೆ ಜೋಡಿಯಾಗಿದ್ದ ಗಂಡನನ್ನು ಕಳೆದುಕೊಂಡು, ಎದೆಯಾಳದ ನೋವನ್ನು ಅದುಮಿಟ್ಟು ಕಷ್ಟಗಳ ಬಲೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾ ತನ್ನ ಬದುಕಿಗೆ ಅಂತಿಮ ವಿದಾಯವಿಟ್ಟಳು.
ಸುಪ್ರಿಯಾ ಪ್ರಕಾಶ್ ಭಂಡಾರಿ