September 20, 2024
   “ಹೆಣ್ಣು ಸಮಾಜದ ಕಣ್ಣು”  ಎಷ್ಟು ಚೆನ್ನಾಗಿದೆ ಈ ಮಾತು,ಇದು ಕೇವಲ ಬಾಯಿಮಾತಾಗಿದೆಯೇ ಹೊರತು ಕೃತಿಗಿಳಿದಿಲ್ಲ ಎನ್ನುವುದು ವಿಪರ್ಯಾಸ. ಹೆಣ್ಣೆಂದರೆ ಕೇವಲ ನಾಲ್ಕು ಗೋಡೆಯ ಮಧ್ಯೆ ಜೀವಿಸುವವಳು ಎಂದು ಅಂದುಕೊಂಡಿದ್ದಾರೆ ಇಂದಿನವರು..ನಮ್ಮ ಪೂರ್ವಜರು ಕೂಡಾ ಹಾಗೇ ಮಾಡಿದ್ದರು.ಮನುಸ್ಮೃತಿಯಲ್ಲಿ ಮನು ಹೀಗಂದಿದ್ದಾನೆ “ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರಾ ದೇವತಾ” ಎಂಬುದಾಗಿ,ಅದೇ ಮನು ಹೀಗೂ ಹೇಳಿದ್ದಾನೆ “ಪಿತಾ ರಕ್ಷಂತಿ ಕೌಮಾರೆ,ಭ್ರಾತ ರಕ್ಷಂತಿ ಯೌವನೆ,ರಕ್ಷಂತಿ ಪುತ್ರ ಸ್ತವಿರೆ” ಎಂಬುದಾಗಿ. ಅಂದರೆ ಬಾಲ್ಯದಲ್ಲಿ ತಂದೆಯಿಂದ,ಯೌವ್ವನದಲ್ಲಿ ಪತಿಯಿಂದ ಮತ್ತು ಮುಪ್ಪಿನಲ್ಲಿ ಮಗನಿಂದ ರಕ್ಷಿಸಲ್ಪಡುವವಳು ಎಂದರ್ಥ.ಅಂದಿನ ಮನು ಕೂಡಾ ಹೆಣ್ಣಿಗೆ ಚೌಕಟ್ಟನ್ನು ನಿರ್ಮಿಸಿದ್ದ ಎಂಬುದು ವಿಪರ್ಯಾಸ ಅಲ್ಲವೇ?!
       ಇಂದಿನ ಆಧುನಿಕ ಯುಗದಲ್ಲಿ ಕೂಡಾ ಹೆಣ್ಣು ಶೋಷಿತಳೇ ಯಾಕೆಂದರೆ ಈಗಲೂ ರಾಜಸ್ತಾನ, ಹರಿಯಾಣಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದಾರೆ.ಹೆಣ್ಣು ಶಿಶುವಿನ ಹತ್ಯೆ ಆಧುನಿಕ ಯುಗದಲ್ಲೂ ಮಾಡುತ್ತಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ.ಮಗು ಹೆಣ್ಣೆ, ಗಂಡಾ ಎಂದು ಮೊದಲೇ ತಿಳಿದುಕೊಂಡು ಅಬಾರ್ಷನ್, ಹಸಿರು ಮದ್ದುಗಳಿಂದ ಹುಟ್ಟಬೇಕಾದ ಪುಟ್ಟ ಕಂದಮ್ಮನನ್ನು ಕೊಲ್ಲುವರು..ಹೆಣ್ಣೆಂದರೆ ತಾತ್ಸಾರವೇ ಇವರಿಗೆ ಹೆಣ್ಣನ್ನು ತೀರಾ ಕೆಳಮಟ್ಟಕ್ಕೆ ತಳ್ಳಿ ಬಿಟ್ಟಿದ್ದಾರೆ..
      ಬಾಲ್ಯದಲ್ಲೇ ಸಾವನ್ನು ಜಯಿಸಿ ಬಂದರೆ ಬೆಳೆದಂತೆ ಅದಕ್ಕಿಂತ ಹೆಚ್ಚಿನ ತೊಂದರೆಯನ್ನು ಹೆಣ್ಣು ಅನುಭವಿಸುತ್ತಾಳೆ..ಮನೆಯವರಿಂದಲೇ ನೋವನ್ನು ಅನುಭವಿಸುತ್ತಾಳೆ. ವಿದ್ಯೆ ನೀಡುವುದರಲ್ಲಿಯೂ ಕಟ್ಟುಪಾಡು..ಬಾಲ್ಯದಲ್ಲೇ ವಿವಾಹ..ಆಟವಾಡೋ ವಯಸ್ಸಿಗೆ ಮಗುವನ್ನು ಹೆರಬೇಕಾದ ಅನಿವಾರ್ಯತೆ… ಮದುವೆಯಾಗದಿದ್ದಲ್ಲಿ ದೇವಸ್ಥಾನಕ್ಕೆ ಬಸವಿ ಬಿಡುವಂಥ ನೀಚ ನಂಬಿಕೆಗಳು, ಕೆಲಸಕ್ಕೆ ಸೇರಿದಳೆಂದರೆ ಮೂರು ಬಿಟ್ಟವಳೆಂಬ ಹಣೆಪಟ್ಟಿ  ಅಲ್ಲೂ ಮೇಲಿನ ಅಧಿಕಾರಿಗಳಿಂದ ಲೈಂಗಿಕ ಕಿರುಕುಳ, ಬೀದಿ ಕಾಮಣ್ಣರುಗಳಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳುವಷ್ಟರಲಿ ಜೀವನವೇ ಸಾಕೆನಿಸಿಬಿಡುತ್ತದೆ. ಪುಟ್ಟ ಮಕ್ಕಳನ್ನು ಬಿಡದ ರಾಕ್ಷಸ ಮನದ ಕಾಮುಕರನ್ನು ನೆನೆಸಿಕೊಂಡಾಗ ನಡುಬೀದಿಯಲ್ಲಿ ನಿಲ್ಲಿಸಿ, ಕಲ್ಲು ಹೊಡೆಯಬೇಕೆನಿಸುತ್ತದೆ.
ಉಪಸಂಹಾರ
      ಹೆಣ್ಣಿಂದಲೇ ಜನಿಸಲ್ಪಡುವ ನಾವು ಯಾಕೆ ಆಕೆಯನ್ನು ಗೌರವಿಸಲು ಹಿಂಜರಿಯಬೇಕು, ಹುಟ್ಟುವಾಗಲೇ ಕಂದಮ್ಮನನ್ನು ಸಾಯಿಸದಿರಿ ನನ್ನ ಹುಟ್ಟು ಕೂಡಾ ಹೆಣ್ಣಿಂದಲೇ ಆಗಿರುವುದು ಎಂಬುದನ್ನು ನೆನಪಿಡಿ…ಕ್ಷಣಿಕ ಸುಖದ ಆಸೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಸಗದಿರಿ..ಹೆತ್ತ ತಾಯಿ ಕೂಡಾ ಹೆಣ್ಣು ಎಂದು ಮರೆಯದಿರಿ ಸಹನಾಮಯಿ, ವಾತ್ಸಲ್ಯಮೂರ್ತಿ, ಕರುಣಾಮಯಿ ಹೆಣ್ಣು…”ಒಲಿದರೆ ನಾರಿ, ಮುನಿದರೆ ಮಾರಿ” ಆಗುವಂತೆ ಮಾಡದಿರಿ. ಹೆಣ್ಣು ಮಾತೆಯೂ ಆಗಬಲ್ಲಳು ದಮನ ಮಾಡೋ ದುರ್ಗೆಯು ಆಗುತ್ತಾಳೆ. ಹಾಗಾಗಿ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದರೆ ಸಮಾಜದ ಸ್ವಾಸ್ಥವು ಚೆನ್ನಾಗಿರುತ್ತದೆ.
ನಾಗಶ್ರೀ ಭಂಡಾರಿ, ಮೂಡುಬಿದಿರೆ

0 thoughts on “ಹೆಣ್ಣು ಶಿಶು ಮತ್ತು ಲೈಂಗಿಕ ದುರ್ಬಳಕೆ

  1. ಹೌದು ಇದು ಸತ್ಯ. ನಮ್ಮ ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಹೆಣ್ಣನ್ನು ಕಾಣುವ ರೀತಿ ಬದಲಾಗಿಲ್ಲ. ಸರ್ಕಾರದ ಯೋಜನೆಗಳು ಕೆಲವು ಕಡೆ ನೆಪ
    ಮಾತ್ರಕ್ಕೆ ಆಗಿದೆ ಹಾಗು ಅಧಿಕಾರಸ್ಥರ ಮನೋಭಾವನೆಯೂ ಇದಕ್ಕೆ ಕಾರಣ.

  2. Good article… ಪ್ರತಿಯೊಬ್ಬ ಹೆಣ್ಣು ತನ್ನ ಮಗನಲ್ಲಿ ಬಾಲ್ಯದಿಂದಲೇ ಹೆಣ್ಮಕ್ಕಳ ಬಗ್ಗೆ ಗೌರವ ಭಾವನೆಗಳನ್ನು ತುಂಬಿ.. ಬೆಳೆಸುವ ಬಗ್ಗೆ ಕಾಳಜಿವಹಿಸಿದಲ್ಲಿ,….ಸಮಾಜದ ಸ್ವ್ಯಾಸ್ಥ್ಯ. ಸ್ವಲ್ಪ ಮಟ್ಟಿಗೆ ಕಾಪಾಡಿಕೊಳ್ಳಲು …ಸಾಧ್ಯ

Leave a Reply

Your email address will not be published. Required fields are marked *