January 18, 2025
BV-NEW-JPG

ಹೆಣ್ಣುಮಕ್ಕಳು ಋತುಮತಿಯಾಗುವ ಸರಾಸರಿ ವಯಸ್ಸೆಷ್ಟು? ಆಗ ಆಕೆಯನ್ನು ಪೋಷಕರು ಹೇಗೆ ನೋಡಿಕೊಳ್ಳಬೇಕು?

ಮೊನ್ನೆ ಮೊನ್ನೆಯಷ್ಟೇ ಫ್ರಾಕ್ ಹಾಕಿಕೊಂಡು ಎಲ್ಲರೊಂದಿಗೂ ಆಡಿಕೊಂಡು ಇದ್ದ ಮಗಳು ಋತುಮತಿಯಾದಾಗ ಅಥವಾ ಮೊದಲ ಬಾರಿಗೆ ಪಿರಿಯಡ್ಸ್ ಆದಾಗ ಕೆಲವು ಪೋಷಕರಿಗೆ, ಹಾಗೂ ಸ್ವತಹ ಆ ಹೆಣ್ಣು ಮಗುವಿಗೆ ಆತಂಕವಾಗುವುದು ಸಹಜ. ಆದರೆ ಈ ಸಮಯದಲ್ಲಿ ಮಗಳ ಬಳಿ ಶಾಂತವಾಗಿ ಪ್ರತಿಕ್ರಿಯಿಸಬೇಕಾಗಿರುವುದು ಪೋಷಕರ ಕರ್ತವ್ಯ. ಅವರ ಮನದಲ್ಲಿ ಆಗುವ ಗೊಂದಲಗಳನ್ನು ದೂರಮಾಡಿ, ಅವರಿಗೆ ಆತ್ಮವಿಶ್ವಾಸವನ್ನು ತುಂಬ ಬೇಕಾಗುತ್ತದೆ.

ಋತುಮತಿಯಾಗುವ ಸಹಜ ವಯಸ್ಸೆಷ್ಟು?:

ತಜ್ಞರ ಪ್ರಕಾರ, ಇದೇ ವಯಸ್ಸಿಗೆ ಋತುಮತಿಯಾಗಬೇಕು ಎಂಬುದು ಇಲ್ಲ. ಆದರೆ ಹಿಂದೆ 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು. ಈಗ 12-13 ವರ್ಷಕ್ಕೆ ಋತುಮತಿಯಾಗುತ್ತಾರೆ. ಇನ್ನು ಕೆಲವರು ಬಹಳ ಚಿಕ್ಕ ವಯಸ್ಸಿಗೆ ಆಗುತ್ತಾರೆ. ಅದು ಈಗಿರುವ ಜೀವನಶೈಲಿಯ ಪರಿಣಾಮ ಆಗಿರುತ್ತದೆ. ಬಹಳ ಚಿಕ್ಕ ವಯಸ್ಸಿಗೆ ಋತುಮತಿಯಾದರೆ ಅದು ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುತ್ತದೆ. ಅಂತಹಾ ಹೆಣ್ಣು ಮಗುವಿಗೆ ಅಮ್ಮನ ಪ್ರೀತಿ,ಶಿಕ್ಷಕರ ಅಥವಾ ಒಳ್ಳೆಯ ಹದಿಹರೆಯದ ಮಾಹಿತಿಯನ್ನು ನೀಡುವ ಸಲಹೆಗಾರರ ಮಾರ್ಗದರ್ಶನ ಬೇಕಾಗುತ್ತದೆ.

  • ಹುಡುಗಿಯರು 15- 16 ವರ್ಷದೊಳಗೆ ಋತುಮತಿ ಆಗದಿದ್ದರೆ ಹೆಚ್ಚಿನ ಪರೀಕ್ಷೆಗಳಿಗೆ ವೈದ್ಯರನ್ನು ಸಂಪರ್ಕಿಸಬೇಕು.
  •  ಹೆಚ್ಚು ರಕ್ತಸ್ರಾವ ಅಂದರೆ ದಿನಕ್ಕೆ ನಾಲ್ಕೈದು ಬಾರಿ ಬಟ್ಟೆ ಬದಲಾಯಿಸಬೇಕಾದರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಬೇಕು.
  •  ರಕ್ತ ಸ್ರಾವ ಮೊದಲ ದಿನ ಸ್ವಲ್ಪ ಇದ್ದು ಎರಡನೇ, ಮೂರನೇ ದಿನ ಹೆಚ್ಚು ಇದ್ದು ನಾಲ್ಕು ಐದು ದಿನಗಳಿಗೆ ಕಡಿಮೆ ಆಗುತ್ತಾ ಬಂದು ಆರು ಏಳನೇ ದಿನ ಪೂರ್ತಿ ನಿಲ್ಲುತ್ತದೆ. ಹೀಗೆ ಆಗದೆ ಏಳು, ಎಂಟು, ಒಂಭತ್ತನೇ ದಿನ ಕೂಡ ರಕ್ತ ಸ್ರಾವ ಆಗುತ್ತಿದ್ದರೆ ಖಂಡಿತವಾಗಿ ವೈದ್ಯರನ್ನು ಸಂಪರ್ಕಿಸಬೇಕು.
  •  ತುಂಬಾ ಕಡಿಮೆ ರಕ್ತ ಸ್ರಾವ ಅಂದರೆ ಕಾಣುವುದಕ್ಕೆ ಮಾತ್ರ ಆಗುತ್ತಿದೆ ಎಂದರೆ ಕೂಡ ವೈದ್ಯರನ್ನು ಸಂಪರ್ಕಿಸಬೇಕು.
  •  ಹೆಚ್ಚು ಬಿಳಿ ಸ್ರಾವ ಆಗುತ್ತಿದ್ದರೆ ಹಾಗೂ ಹೆಚ್ಚು ಕೆಟ್ಟ ವಾಸನೆ ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
  •  ರಕ್ತ ಸ್ರಾವ ಆಗುವಂತಹ ಯೋನಿಯಲ್ಲಿ ಹೆಚ್ಚು ತುರಿಕೆ ಆಗುತ್ತಿದ್ದರೆ ಮೂತ್ರ ವಿಸರ್ಜನೆ ಸಮಯದಲ್ಲಿ ನೋವು ಉರಿ ಉಂಟಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
  •  ಋತುಸ್ರಾವ ಅಥವಾ ಮುಟ್ಟು ಇದು ತಿಂಗಳಿಗೆ ಒಮ್ಮೆ ಆಗುವ ಪ್ರಕ್ರಿಯೆ. ತಿಂಗಳು ಅಂದರೆ ಮೂವತೇ ದಿನಕ್ಕೆ ಆಗಬೇಕು ಎಂದೇನಿಲ್ಲ 23ನೇ ದಿನದಿಂದ 40 ದಿನದ ಒಳಗಡೆ ಯಾವ ದಿನ ಬೇಕಾದರೂ ಆಗಬಹುದು. ಪ್ರತಿ ತಿಂಗಳು ಒಂದೇ ತಾರೀಕು ಆಗದಿದ್ದರೆ ಗಾಬರಿ ಆಗಬೇಕಾಗಿಲ್ಲ. ದಿನಾಂಕ ಏರುಪೇರು ನಾವು ಸೇವಿಸುವ ಆಹಾರವನ್ನು ನಮ್ಮ ಓಡಾಟವನ್ನು ಅವಲಂಬಿಸಿರುತ್ತದೆ.
  •  ಹೆಣ್ಣು ಮಕ್ಕಳು ಪ್ರತಿ ತಿಂಗಳು ಮುಟ್ಟು ಅಥವಾ ರಕ್ತ ಸ್ರಾವ ಆಗುವುದರಿಂದ ಅವರು ಒಳ್ಳೆಯ ಆಹಾರ ಸೇವನೆ ಮಾಡುವುದು ಅಗತ್ಯ. ಅಂದರೆ ಮೊಳಕೆ ಕಾಳುಗಳು, ಹಸಿ ತರಕಾರಿ ಸಲಾಡ್, ಮೊಟ್ಟೆ, ಮೀನು, ಮಾಂಸ. ಎಳ್ಳು, ಬೆಲ್ಲ, ಹರಿವೆ, ಬಸಳೆ , ನುಗ್ಗೆ ಸೊಪ್ಪು, ಹಾಲು ಇತ್ಯಾದಿ ಸೇವನೆ ಒಳ್ಳೆಯದು.

ವಯಸ್ಸಿನ ವ್ಯತ್ಯಾಸವಾಗಲೂ ಕಾರಣವಾಗುವ ಅಂಶಗಳು:

ಮೊದಲ ಬಾರಿಗೆ ಪಿರಿಯಡ್ಸ್ ಆದಾಗ ವಯಸ್ಸಿನ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ತಾಯಂದಿರು ಪಿರಿಯಡ್ಸ್ ಆದ ವಯಸ್ಸಿಗೂ ಅವರ ಹೆಣ್ಣುಮಕ್ಕಳು ಪಿರಿಯಡ್ಸ್ ಆಗುವ ವಯಸ್ಸಿಗೂ ಸಂಬಂಧ ಇದೆ. ಅಧಿಕ ತೂಕ ಹೊಂದಿರುವ ಹುಡುಗಿಯರು ಕಡಿಮೆ ತೂಕದ ಹುಡುಗಿಯರಿಗಿಂತ ಮುಂಚೆಯೇ ಪಿರಿಯಡ್ಸ್ ಆಗುತ್ತಾರೆ. ವ್ಯಾಯಾಮ ಮಾಡದವರಿಗಿಂತ, ಹೆಚ್ಚು ದೈಹಿಕ ಚಟುವಟಿಕೆಯನ್ನು ಮಾಡುವ ಹುಡುಗಿಯರು, ಕಡಿಮೆ ಜಂಕ್ ಫುಡ್ ತಿನ್ನುವವರು ಸ್ವಲ್ಪ ಸಮಯದ ನಂತರ ಪಿರಿಯಡ್ಸ್ ಆಗುತ್ತಾರೆ. ಕೆಲವು ಅಧ್ಯಯನಗಳು ಪ್ರಾಣಿ ಪ್ರೋಟೀನ್ ಮತ್ತು ಹಾಲಿನ ಸೇವನೆಯು ಬಹಳ ಬೇಗ ಪಿರಿಯಡ್ಸ್ ಆಗಲು ಕಾರಣವಾಗಬಹುದು ಎನ್ನುತ್ತದೆ. ಕೆಲವು ಅಧ್ಯಯನಗಳಲ್ಲಿ ನಗರಗಳಲ್ಲಿನ ಬಾಲಕಿಯರು ಗ್ರಾಮೀಣ ಪ್ರದೇಶದ ಹುಡುಗಿಯರಿಗಿಂತ ಬೇಗ ಋತುಮತಿ ಆಗುತ್ತಾರೆ.

​ಮುಟ್ಟಿನ ನೈರ್ಮಲ್ಯಕ್ಕಾಗಿ ಸಲಹೆಗಳು:

ಮುಟ್ಟಿನ ಬಗ್ಗೆ ಗ್ರಾಮೀಣ ಭಾಗ ಅಥವಾ ನಗರ ಪ್ರದೇಶಗಳಲ್ಲಿ, ಒಟ್ಟಾರೆ ಭಾರತದ ಬಹುಪಾಲು ಭಾಗದಲ್ಲಿ ಮುಕ್ತವಾಗಿ ಮಾತನಾಡುವ ಹಾಗಿಲ್ಲ. 71% ಭಾರತೀಯ ಹುಡುಗಿಯರು ತಾವು ಮೊದಲು ಪಿರಿಯಡ್ಸ್ ಆಗುವವರೆಗೆ ಮುಟ್ಟಿನ ಬಗ್ಗೆ ತಿಳಿದಿರುವುದಿಲ್ಲ. ಜ್ಞಾನದ ಕೊರತೆಯಿಂದಾಗಿ ಋತುಸ್ರಾವವು ವಿವಿಧ ಮಾನಸಿಕ ಮತ್ತು ಧಾರ್ಮಿಕ ಅಡೆತಡೆಗಳಿಂದ ತುಂಬಿದೆ . ಋತುಚಕ್ರದ ಸಮಯದಲ್ಲಿ ನಿಜವಾಗಿ ಏನಾಗುತ್ತದೆ ಎಂದು ಹೆಚ್ಚಿನ ಹೆಣ್ಣು ಮಕ್ಕಳಿಗೆ ತಿಳಿದಿಲ್ಲ.ಮೊದಲ ಮುಟ್ಟು ಆಗುವುದಕ್ಕೆ ಮುಂಚೆಯೇ ಹೆಣ್ಣು ಮಕ್ಕಳ ಸ್ತನಗಳು ನೋವು ಉಂಟಾಗುತ್ತದೆ ಎಂಬುದನ್ನು ಅವರಿಗೆ ಹೇಳಬೇಕಾಗುತ್ತದೆ. ಇಲ್ಲದಿದ್ದಲ್ಲಿ ಸ್ತನ ನೋವಾದಾಗ ಅವರು ಗಾಬರಿ ಆಗುತ್ತಾರೆ. ಮುಟ್ಟಿನ ಸಮಯದ ನೈರ್ಮಲ್ಯವು ಹೆಣ್ಣುಮಕ್ಕಳ ಜೀವನದ ಅತ್ಯಂತ ಪ್ರಮುಖ ಮತ್ತು ಅನಿವಾರ್ಯ ಭಾಗವಾಗಿದೆ. ಮುಟ್ಟಿನ ಸಮಯದಲ್ಲಿ ಅಸಮರ್ಪಕ ನೈರ್ಮಲ್ಯವು ಯೋನಿ ತುರಿಕೆಯಿಂದ ಪ್ರಾರಂಭ ಆಗಿ ವಿವಿಧ ಸೋಂಕುಗಳಿಗೆ ಹಾಗೂ ಗರ್ಭ ಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು.

ಅದಕ್ಕಾಗಿ ಪೋಷಕರು ಅದರಲ್ಲೂ ತಾಯಿಯಾದವಳು ಹೆಣ್ಣುಮಕ್ಕಳು ಋತುಮತಿ ಆಗುವ ಮೊದಲು ಅದರ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿ ಮತ್ತು ಅದರ ಬಗ್ಗೆ ಕೇವಲ ಒಂದು ಬಾರಿ ಅಲ್ಲ, ಆಗಾಗ್ಗೆ ಮಾತನಾಡಿ. ಮುಟ್ಟು ಎಂದರೇನು, ಅದು ಯಾವಾಗ ಪ್ರಾರಂಭವಾಗುತ್ತದೆ, ಅದು ನೋವುಂಟು ಮಾಡುತ್ತದೆಯಾ, ಅದು ಎಷ್ಟು ಕಾಲ ಇರುತ್ತದೆ, ಮುಟ್ಟಿನ ನೈರ್ಮಲ್ಯದ ವಿಧಾನಗಳು, ಒಳ ಉಡುಪುಗಳನ್ನು ಸ್ವಚ್ಛ ಮಾಡುವ ವಿಧಾನದ ಕುರಿತು, ರಕ್ತ ಸ್ರಾವದ ಸಮಯದಲ್ಲಿ ಆ ಜಾಗವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕಾದ ಅಗತ್ಯತೆಯನ್ನು ಅವರಿಗೆ ಪ್ರಾಯೋಗಿಕ ಸಲಹೆ ನೀಡಿ. ಮುಟ್ಟಿನ ಉತ್ಪನ್ನಗಳನ್ನು ಸೂಕ್ತವಾಗಿ ಮತ್ತು ಆರೋಗ್ಯಕರವಾಗಿ ಬದಲಾಯಿಸುವ ಬಗ್ಗೆ ಅವರಿಗೆ ತಿಳಿಸಿ ಕೊಡಬೇಕಾಗುತ್ತದೆ.

ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರು ಉತ್ತಮವಾದ ಮತ್ತು ಸ್ವಚ್ಛವಾಗಿ ಇರುವ ಹತ್ತಿ ಬಟ್ಟೆ, ಪ್ಯಾಡ್, ಟ್ಯಾಂಪ್ಯೂ ಅಥವಾ ಕಪ್ ಅನ್ನು ಬಳಸಬೇಕು. ಜೊತೆಗೆ ಸರಿಯಾಗಿ ವಿಲೇವಾರಿ ಮಾಡಬೇಕು. ಅಂದರೆ ಬಳಸಿದ ಪ್ಯಾಡ್ ಅಥವಾ ಬಟ್ಟೆಯನು ಎಲ್ಲೆಂದರಲ್ಲಿ ಬಿಸಾಡಬಾರದು. ಮುಟ್ಟಿನ ಅವಧಿ ಮುಗಿಯುವವರೆಗೆ ಸಾಕಷ್ಟು ಬಾರಿ ಸೋಪು ಮತ್ತು ನೀರನ್ನು ತೊಳೆಯಲು ಬಳಸಬೇಕು.

ಮುಟ್ಟು ಎಂಬುದು ಆರೋಗ್ಯವಂತ ಹೆಣ್ಣಿಗೆ ಆಗುವ ಸಹಜ ಕ್ರಿಯೆ. ಇದು ಶಾಪವು ಅಲ್ಲ ಶಿಕ್ಷೆಯೂ ಅಲ್ಲ. ಹೆಣ್ಣು ಮಗುವಿಗೆ ಈ ಬಗ್ಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿಗಳನ್ನು ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.

✍️ ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *