
ಕರಾವಳಿ ಪ್ರದೇಶ ಮತ್ತು ಮಲೆನಾಡು ಎಂದ ಕೂಡಲೇ ನಮಗೆ ನೆನಪಾಗುವುದು ಕಡಲುತೀರ,ಸಾಹಿತ್ಯ, ರುಚಿಕರವಾದ ಊಟ, ಮಲೆನಾಡ ತಪ್ಪಲು ಆದರೆ ಅದಕ್ಕೂ ಮೀರಿದ ಒಂದು ವಿಶೇಷತೆ ಎಂದರೆ ಅದು ಯಕ್ಷಗಾನ. ತಂಪಾದ ಇಳಿಸಂಜೆಯಲ್ಲಿ ಚಂಡೆ ಮದ್ದಾಳೆಯ ನಡುವೆ ಭಾಗವತರ ತಾಳ ಹಾಡುಗಾರಿಕೆಗೆ ಅನುಗುಣವಾಗಿ ವೇಷಭೂಷಣ ಧರಿಸಿ ಪಾತ್ರಧಾರಿಗಳು ಅಭಿನಯ ಮತ್ತು ಮಾತುಗಾರಿಕೆ ಮೂಲಕ ಕಥೆ ಹೇಳುತ್ತಾ ಶುರುವಾಗುವ ಯಕ್ಷಗಾನ ನೋಡಲೆಂದೆ ಜನರು ದಂಡು ಸೇರುತ್ತಾರೆ .

ಯಕ್ಷಗಾನ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖ್ಯವಾದದ್ದು.ಆನೇಕ ಪ್ರದೇಶಗಳಲ್ಲಿ ಈ ಕಲೆ ಮನೆ ಮಾತಾಗಿದೆ. ತನ್ನ ಕಲೆಯ ಸೊಗಡಿನಿಂದಲೇ ವಿಶ್ವದೆಲ್ಲೆಡೆ ತನ್ನ ಛಾಪು ಮೂಡಿಸಿದೆ.ಈ ಕಲೆಗೆ ನಗರವಾಸಿಗಳೂ ಸಹ ಅಭಿಮಾನಿಗಳಾಗಿದ್ದು ಈ ಕಲೆಯ ಶಕ್ತಿಯೇ ಸರಿ.ಯಕ್ಷಗಾನ ಎಂದರೆ ಸಾಕು ದೂರದ ಊರುಗಳಿಗೂ ತೆರಳಿ ಅದನ್ನು ವೀಕ್ಷಿಸುವ ಅಭಿಮಾನಿ ವರ್ಗವನ್ನು ನಾವು ಇಂದಿಗೂ ಕಾಣಲು ಸಾಧ್ಯ. ಈ ಕಲೆಯು ಕರಾವಳಿಯ ಅದ್ಭುತ ಕಲೆಗಳಲ್ಲಿ ಒಂದಾಗಿದ್ದು ಅದನ್ನು ನೋಡುವುದೇ ಒಂದು ಸೊಬಗು.ಪುರಾಣದ ಕಥೆಯನ್ನು ಎಳೆಎಳೆಯಾಗಿ ತಮ್ಮದೇ ರೀತಿಯಲ್ಲಿ ಅಭಿನಯದ ಮೂಲಕ ತಿಳಿಸುವುದು ಎಂತಹವರನ್ನು ಸಹ ಮೋಡಿ ಮಾಡುತ್ತದೆ. ಸಮಾಜಮುಖಿ ಚಿಂತನೆಗಳನ್ನು ಯಕ್ಷಗಾನದಲ್ಲಿ ನೋಡಬಹುದು

ಸಾಣ೯ದೇವನ “ಸಂಗೀತ ರತ್ನಾಕರ”ದಲ್ಲಿ ಯಕ್ಷಗಾನ ಕುರಿತು ಉಲ್ಲೇಖವಿದ್ದು ಇದನ್ನು ಜಕ್ಕ ಎಂದು ವರ್ಣಿಸಲಾಗಿದೆ ಮುಂದೆ “ಯಕ್ಷಲಗಾನ”ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯವಾಗಿದೆ. ಗಂಧರ್ವ ಗ್ರಾಮ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ಧತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪ ತಳೆದು ಯಕ್ಷಗಾನವಾಯಿತು ಎಂಬುದು ಶಿವರಾಮಕಾರಂತರ “ಯಕ್ಷಗಾನ ಬಯಲಾಟ”ಎಂಬ ಸಂಶೋಧನಾ ಗ್ರಂಥದಲ್ಲಿ ನಾವು ಕಾಣಬಹುದು. ಇದು ಮೊದಲು ಬಯಲಾಟದ ರೂಪದಲ್ಲಿದ್ದು 15ನೇ ಶತಮಾನದ ವೇಳೆಗೆ ಯಕ್ಷಗಾನ ಸ್ವರೂಪ ಪಡೆಯಿತು ಎಂದು ಹೇಳಲಾಗುತ್ತದೆ.ಅಷ್ಟೇ ಅಲ್ಲದೆ ಕೆಲವು ವಿದ್ವಾಂಸರ ಪ್ರಕಾರ ಯಕ್ಷಗಾನ 15 ನೇ ಶತಮಾನದಲ್ಲಿ ರೂಪುಗೊಂಡು 17 ಶತಮಾನದಲ್ಲಿ ಬೆಳೆದು 19ನೇ ಶತಮಾನದಲ್ಲಿ ಪರಿಪೂರ್ಣತೆಯನ್ನು ಹೊಂದಿತು.ಕರ್ನಾಟಕ ದಲ್ಲಿ ಕೆಳದಿ ಸಂಸ್ಥಾನ ಮತ್ತು ಮೈಸೂರು ಅರಸರು ಮತ್ತು ತಂಜಾವೂರಿನ ಅರಸರ ಕಾಲದಲ್ಲಿ ಈ ಕಲೆಗೆ ಹೆಚ್ಚು ದೊರೆಯಿತು ಎಂಬುದಾಗಿ ಇತಿಹಾಸಿದ ಪುಟದಲ್ಲಿ ನಮಗೆ ತಿಳಿದು ಬರುತ್ತದೆ.

ಮನರಂಜನೆಯ ಮೂಲವಾಗಿ ಬೆಳೆದ ಯಕ್ಷಗಾನ ಇಂದು ಸಂಸ್ಕೃತಿಯ ಭಾಗವಾಗಿದೆ. ಈ ಕಲೆಯಲ್ಲಿ ಮುಖ್ಯವಾಗಿರುವುದು ಮಾತುಗಾರಿಕೆ, ಕುಣಿತ ಮತ್ತು ಹಿಮ್ಮೇಳ. ಯಕ್ಷಗಾನದಲ್ಲಿ ಪ್ರಮುಖವಾಗಿ ಎಲ್ಲರನ್ನೂ ಆಕರ್ಷಿಸುವುದು ಸ್ರ್ತಿ ಪಾತ್ರ ಮತ್ತು ಹಾಸ್ಯಪಾತ್ರ.ಈ ಕಲೆಯಲ್ಲಿ ಎರಡು ರೀತಿಯ ಪ್ರಕಾಲಗಳಿದ್ದು ಅದನ್ನು ಮೂಡಲಪಾಯ ಮತ್ತು ಪಡುವಲಪಾಯ ಎಂದು ವಿಂಗಡಿಸಲಾಗಿದೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವುದು ಮೂಡಲಪಾಯ. ಮಲೆನಾಡು ಮತ್ತು ಕಲಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಇದರಲ್ಲಿ ಎರಡು ವಿಧಗಳಿವೆ ಅದನ್ನು ತೆಂಕುತಿಟ್ಟು ಮತ್ತು ಬಡಗತಿಟ್ಟು ಎಂದು ಕರೆಯಲಾಗುತ್ತದೆ.

ತೆಂಕುತಿಟ್ಟು ಶೈಲಿ ಯಕ್ಷಗಾನವು ಉಡುಪಿಯಿಂದ ದಕ್ಷಿಣಕ್ಕೆ ಇರುವ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ. ಇದರಲ್ಲಿ ಮುಖ್ಯವಾಗಿ ಹಿಮ್ಮೇಳದ ಕುರಿತು ಹೇಳುತ್ತಾರೆ. ಭಾಗವತರು ಇಲ್ಲಿ ಜಾಗಟೆ ಬಳಸುತ್ತಾರೆ ಮತ್ತು ಚಂಡೆಯನ್ನು ಭಾಗವತನ ಎಡಭಾಗದಲ್ಲಿ ನಿಂತು ಬಾರಿಸುವುದು ಈ ಶೈಲಿಯ ವಿಶೇಷವಾಗಿದೆ. ಬಡಗತಿಟ್ಟು ಯಕ್ಷಗಾನ ಉಡುಪಿಯಿಂದ ಉತ್ತರಕ್ಕೆ ಇರುವ ಪ್ರದೇಶದಲ್ಲಿ ಪ್ರಸಿದ್ಧಿ ಹೊಂದಿದೆ.ಈ ಶೈಲಿಯಲ್ಲಿ ನೃತ್ಯ ಮತ್ತು ಆಂಗಿಕ ಅಭಿನಯ ಪ್ರಧಾನವಾಗಿದ್ದು ಇದರಲ್ಲಿ ಚೆಂಡೆ,ಮದ್ದಲೆಗಳನ್ನು ಕಾಣಬಹುದು.


ಮೊದಲು ಹಳ್ಳಿಗಳಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಲೆ ಇಂದು ಒಂದು ಉದ್ಯಮವಾಗಿ ಬೆಳೆದಿದೆ.ಇಂದು ಹಲವಾರು ಯಕ್ಷಗಾನ ಮೇಳಗಳಿದ್ದು,ಯಕ್ಷಗಾನ ಕಲೆಯನ್ನು ಪಸರಿಸುವ ಕಾರ್ಯಮಾಡುತ್ತಿದೆ.ಈ ಕಲೆಯೂ ಆನೇಕ ಕಲಾವಿದರ ಜೀವನಕ್ಕೆ ದಾರಿಯಾಗಿದೆ. ಯಕ್ಷಗಾನವು ವಿಶ್ವದೆಲ್ಲೆಡೆ ಹರಡಲಿ ಎಂಬುದೇ ಕಲಾಭಿಮಾನಿಗಳ ಆಕಾಂಕ್ಷೆಯಾಗಿದೆ…..

ಗ್ರೀಷ್ಮಾ
ತೃತೀಯ ಪತ್ರಿಕೋದ್ಯಮ
ವಿ.ವಿ ಕಾಲೇಜು ಮಂಗಳೂರು